
ಸಿಂಧನೂರು (ಮಾ.22) : ಜೆಡಿಎಸ್ ಶಾಸಕ ವೆಂಕಟರಾವ್ ನಾಡಗೌಡ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಒಂದು ತಾಸಿಗೂ ಅಧಿಕ ಚರ್ಚೆ ನಡೆಸಿದ್ದು, ಜೆಡಿಎಸ್ ಶಾಸಕರ ಈ ನಡೆ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ.
ಮಸ್ಕಿ ಉಪಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡು ಶನಿವಾರ ರಾತ್ರಿ ಸಿಂಧನೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ಯಡಿಯೂರಪ್ಪ ವಾಸ್ತವ್ಯ ಹೂಡಿದ್ದರು. ಭಾನುವಾರ ಬೆಳಗ್ಗೆ ಇಲ್ಲಿಗೆ ಆಗಮಿಸಿದ ಶಾಸಕ ವೆಂಕಟರಾವ್ ನಾಡಗೌಡ, ಯಡಿಯೂರಪ್ಪ ಅವರನ್ನು ಭೇಟಿಯಾಗಿ ಶಾಲು ಹೊದಿಸಿ ಸನ್ಮಾನಿಸಿದರು. ನಂತರ ಯಡಿಯೂರಪ್ಪ, ವಿಜಯೇಂದ್ರ ಹಾಗೂ ಪ್ರತಾಪ್‌ಗೌಡ ಪಾಟೀಲ್ ಅವರ ಜತೆಯಲ್ಲಿ ಸುಮಾರು ಒಂದು ತಾಸು ಚರ್ಚೆ ನಡೆಸಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.
'ಮೇ 2ರ ನಂತ್ರ ಸಿಎಂ ಬದಲಾವಣೆ, ಉ.ಕರ್ನಾಟಕದ ಹಿಂದೂಪರ ವ್ಯಕ್ತಿ ಮುಂದಿನ ಸಿಎಂ' ...
ಸಿಎಂ ಭೇಟಿ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ನಾಡಗೌಡ, ಮುಖ್ಯಮಂತ್ರಿಗಳು ಸಿಂಧನೂರಿಗೆ ಬಂದ ಕಾರಣಕ್ಕೆ ಅವರನ್ನು ಗೌರವಿಸಿದ್ದು, ಸಿಂಧನೂರು ತಾಲೂಕು ಜನತೆಯ ಬಹುನಿರೀಕ್ಷಿತ ಯೋಜನೆಯಾಗಿರುವ ಬೈಪಾಸ್ ರಸ್ತೆ ನಿರ್ಮಾಣ ಮಾಡುವ ಬಗ್ಗೆ ರಾಜ್ಯ ಸರ್ಕಾರ ಹೆಚ್ಚಿನ ಗಮನ ಹರಿಸಬೇಕೆಂದು ಮನವಿ ಮಾಡಿದ್ದೇನೆ. ಇದು ಬಿಟ್ಟರೇ ಬೇರೆ ಯಾವುದೇ ಉದ್ದೇಶವಿಲ್ಲವೆಂದು ಸ್ಪಷ್ಟಪಡಿಸಿದರು.