ಆನೆ ಧ್ರುವನಿಗಾದ ಗತಿ ಮೇನಕಾ, ಪದ್ಮಾರಿಗೂ ಆಗಬಾರ್ದು! ಮಠ-ಮಂದಿರಗಳಲ್ಲಿ ಸಾಕಿರುವ ಆನೆಗಳ ಬಿಡುಗಡೆಗೆ ಹೋರಾಟ

Kannadaprabha News   | Kannada Prabha
Published : Nov 17, 2026, 05:41 AM IST
Save elephonts campaign

ಸಾರಾಂಶ

Save Elephant campaign: ಕರ್ನಾಟಕದ ಮಠಗಳಲ್ಲಿ ಬಂಧಿಯಾದ ಆನೆಗಳ ಬಿಡುಗಡೆಗಾಗಿ 'ಸೇವ್ ಎಲಿಫೆಂಟ್' ನ ಗೋರೂರು ಗೋವಿಂದ್ ಹೋರಾಟ ನಡೆಸುತ್ತಿದ್ದಾರೆ. ಅಂಕನೂರು ಮಠದ ಆನೆ ಧ್ರುವ ಇತ್ತೀಚೆಗೆ ಸಾವನ್ನಪ್ಪಿದ್ದು, ಇತರ ಆನೆಗಳ ರಕ್ಷಣೆಗಾಗಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಮಲ್ಲಿಕಾರ್ಜುನ ಸಿದ್ದಣ್ಣವರ

ಹುಬ್ಬಳ್ಳಿ (ನ.17): 34 ವರ್ಷದ ಆನೆ ಧ್ರುವನಿಗಾದ ಗತಿ ಮೇನಕಾ, ಪದ್ಮಾರಿಗೂ ಆಗಬಾರದು! ಕರ್ನಾಟಕದ ಮಠ, ಮಂದಿರಗಳಲ್ಲಿ ಇರುವ ಆನೆಗಳ ಬಿಡುಗಡೆಗಾಗಿ ಹೋರಾಟ ಮಾಡುತ್ತಿರುವ ‘ಸೇವ್‌ ಎಲಿಫೆಂಟ್‌’ನ ಗೋರೂರು ಗೋವಿಂದ್ ಅವರ ಕಳಕಳಿಯ ಮಾತಿದು.

ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಅಂಕನೂರು ಕರಿಸಿದ್ದೇಶ್ವರ ಮಠದ 34 ವರ್ಷದ ಧ್ರುವ ಎನ್ನುವ ಗಂಡು ಆನೆ ಕಟ್ಟಿದಲ್ಲೇ ಕಟ್ಟಿ ಹಾಕಿದ್ದರಿಂದ ಅದರ ಒಂದು ಕಾಲು ತಿರುಪಾಗಿತ್ತು, ಇನ್ನೊಂದು ಕಾಲಿನಲ್ಲಿ ಸರಪಳಿ ಸಿಕ್ಕಿಕೊಂಡು ಗಂಭೀರ ಗಾಯವಾಗಿತ್ತು. ಕೊನೆಗೂ ಅದೇ ನೋವಿನಲ್ಲಿ ಅದು ಇದೇ ನ.12ರಂದು ಕೊನೆಯುಸಿರೆಳೆದಿದೆ.

ಈ ಧ್ರುವ ಮತ್ತು ರಾಯಬಾಗ ತಾಲೂಕಿನ ಶೇಡಬಾಳದ ಶ್ರೀ ಶಾಂತಿಸಾಗರ ದಿಗಂಬರ ಜೈನ ಅನಂತ ಛತ್ರಾಶ್ರಮ ಮಠದ ಪದ್ಮಾ (30) ಮತ್ತು ಕಲಬುರಗಿ ಜಿಲ್ಲೆ ಕಡಗಂಚಿ ಸಾವಿರ ಸಂಸ್ಥಾನ ಮಠದ ಮೇನಕಾ (39) ಎನ್ನುವ ಹೆಣ್ಣಾನೆಗಳ ಸುರಕ್ಷತೆ ದೃಷ್ಟಿಯಿಂದ ಸಕ್ರೆಬೈಲು ಅಥವಾ ಬನ್ನೇರುಘಟ್ಟ ಅರಣ್ಯಕ್ಕೆ ಕೊಂಡೊಯ್ಯಬೇಕು ಎಂದು ಅರಣ್ಯ ಇಲಾಖೆಗೆ ದುಂಬಾಲು ಬಿದ್ದರೂ ಪ್ರಯೋಜನ ಆಗದೇ ಇದ್ದಾಗ ಬೆಂಗಳೂರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ ಗೋರೂರು ಗೋವಿಂದ್‌.

ಸುಮಾರು 1.5 ವರ್ಷಗಳಿಂದ ವಿಚಾರಣೆ ನಡೆಸಿದ ನ್ಯಾಯಾಲಯ ಡಿ.8ಕ್ಕೆ ತನ್ನ ಕೊನೆಯ ಮುದ್ದತ್ತು ನಿಗದಿ ಮಾಡಿದೆ. ಈ ಮಧ್ಯೆಯೇ ಧ್ರುವ ಮೃತಪಟ್ಟಿರುವುದು ಗೋರೂರು ಅವರಲ್ಲಿ ಆಘಾತ ಉಂಟು ಮಾಡಿದ್ದರಿಂದ ಪದ್ಮಾ ಮತ್ತು ಮೇನಕಾ ಅವರಿಗೂ ಇದೇ ಗತಿ ಆಗಬಾರದು ಅರಣ್ಯ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ಆವುಗಳನ್ನು ರಕ್ಷಿಸಬೇಕೆಂದು ಮನವಿ ಮಾಡಿದರು.

ಆನೆಗಳ ಬಿಡುಗಡೆಗಾಗಿ ಸೇವ್‌ ಎಲಿಫೆಂಟ್‌:

ಆನೆಗಳ ರಕ್ಷಣೆ ಕುರಿತ ತಮ್ಮ ಹೋರಾಟ (ಸೇವ್‌ ಎಲಿಫೆಂಟ್‌)ವನ್ನು ಕನ್ನಡಪ್ರಭ ಎದುರು ಎಳೆ ಎಳೆಯಾಗಿ ಬಿಚ್ಚಿಟ್ಟ ಗೋವಿಂದ್‌, ಬೆಂಗಳೂರು ನಿವಾಸಿಯಾದ ಇವರು ಕಳೆದ 3 ದಶಕಗಳಿಂದ ಈ ವನ್ಯಜೀವಿ ಆನೆಯ ರಕ್ಷಣೆಗಾಗಿ ಬಿಡುವಿಲ್ಲದ ಹೋರಾಟ ನಡೆಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಕಣ್ಣು ತೆರೆಯದೇ ಇದ್ದಾಗ ನ್ಯಾಯಾಲಯದ ಮೊರೆ ಹೋಗಿ ಆ ಮೂಕ ಪ್ರಾಣಿಗಳ ನ್ಯಾಯಯುತ ಸಹಜ ಬದುಕಿಗಾಗಿ ಪಣ ತೊಟ್ಟಿದ್ದಾರೆ.

ಈ ಧ್ರುವ ಆನೆಯ ದುಸ್ಥಿತಿಯ ಬಗ್ಗೆ ಯಾರಿಂದಲೋ ಕೇಳಿ ಸ್ವತಃ ಆ ಮಠಕ್ಕೆ ಭೇಟಿ ನೀಡಿ ಆನೆಯನ್ನು ಪರಿಶೀಲಿಸಿದ್ದರು. ಅದರ ಆರೈಕೆಯ ಬಗ್ಗೆ ತಿಳಿವಳಿಕೆ ಹೇಳಿದ್ದಾರೆ. ಅದಾವುದೂ ಫಲ ನೀಡದೇ ಇದ್ದಾಗ ಅರಣ್ಯ ಇಲಾಖೆಯ ಪಿಸಿಸಿಎಫ್‌ ಅವರಿಗೆ ಲಿಖಿತ ದೂರು ನೀಡಿ, ಅಲ್ಲಿ ಯಾವುದೇ ನಿಯಮ ಪಾಲನೆ ಆಗುತ್ತಿಲ್ಲ. ಆನೆ ನಿತ್ಯವೂ ಹಿಂಸೆ ಅನುಭವಿಸುತ್ತಿದೆ. ತಕ್ಷಣ ತಮ್ಮ ಸುಪರ್ದಿಗೆ ಪಡೆದು ಸಕ್ರೆಬೈಲಿಗೆ ಬಿಡಿ ಎಂದು ಮನವಿ ಮಾಡಿದರು. ಅಧಿಕಾರಿಗಳು ಸ್ಪಂದಿಸದೇ ಇದ್ದಾಗ 2025ರಲ್ಲಿ ಹೈಕೋರ್ಟಿನ ಮೊರೆ ಹೊಗಿದ್ದಾರೆ. ಅದರ ಜೊತೆ ಪದ್ಮಾ ಮತ್ತು ಮೇನಕಾ ಆನೆಗಳ ಬಿಡುಗಡೆಗೂ ಕೋರಿದ್ದಾರೆ.

18 ಆನೆಗಳು ಮುಕ್ತವಾಗಲಿ:

ಕರ್ನಾಟಕದಲ್ಲಿ ಸದ್ಯ 6013 ಆನೆಗಳಿವೆ. ಅತಿ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯ ನಮ್ಮದು. ಅದರಲ್ಲಿ 18 ಆನೆಗಳು ಮಠ, ಮಂದಿರಗಳಲ್ಲಿ ಬಂಧಿಯಾಗಿವೆ. ಅರಣ್ಯ ಇಲಾಖೆಯ ಒಪ್ಪಂದದ ಮೇರೆಗೆ ಅವುಗಳನ್ನು ಸಾಕುತ್ತಿದ್ದರೂ ಒಪ್ಪಂದದಂತೆ ಸಾಕುವ ನಿಯಮ ಪಾಲನೆ ಮಾಡುತ್ತಿಲ್ಲ. ಒಂದಿಲ್ಲಾ ಒಂದು ಹಿಂಸೆ ಅನುಭವಿಸುತ್ತಿವೆ. ತಕ್ಷಣ ಅವುಗಳು ಬಂಧಮುಕ್ತವಾಗಬೇಕು. ಈಗ 3 ಆನೆಗಳ ಬಿಡುಗಡೆಗಾಗಿ ನ್ಯಾಯಾಲಯದ ಮೆಟ್ಟಿಲೇರಿರುವೆ. ಆಯಾ ಆನೆಗಳು ಅನುಭವಿಸುತ್ತಿರುವ ಹಿಂಸೆಯನ್ನು ಮನದಟ್ಟು ಮಾಡಿರುವೆ. ನ್ಯಾಯಾಲಯದ ಮೇಲೆ ನನಗೆ ವಿಶ್ವಾಸವಿದೆ. ಒಂದು ಆನೆ ಈಗ ಮೃತಪಟ್ಟಿದೆ. ಪದ್ಮಾ, ಮೇನಕಾ ಬಿಡುಗಡೆ ಆಗುತ್ತಾರೆ. ಆ ತೀರ್ಪು ಇನ್ನುಳಿದ 16 ಆನೆಗಳಿಗೂ ಅನ್ವಯವಾಗಲಿದೆ ಎನ್ನುವ ವಿಶ್ವಾಸವನ್ನು ಹೋರಾಟಗಾರ ಗೋವಿಂದ ವ್ಯಕ್ತಪಡಿಸಿದರು.

ಆನೆ ಸಂಸ್ಕೃತಿಯ ಭಾಗವಲ್ಲ:

ಸನಾತನ ಧರ್ಮದ ಕೆಲವು ಮಠ, ಮಂದಿರಗಳು ಆನೆಗಳು ತಮ್ಮ ಸಂಸ್ಕೃತಿಯ ಭಾಗವೆಂದು ಭಾವಿಸಿವೆ. ಆದರೆ, ಸನಾತನ ಧರ್ಮದ ಆಧಾರ ಗ್ರಂಥಗಳು, ವೇದ, ಸ್ಮೃತಿ, ಪುರಾಣಗಳಲ್ಲಿ ಎಲ್ಲೂ ಇಂಥ ಉಲ್ಲೇಖ ಸಿಗುವುದಿಲ್ಲ. ಇದೊಂದು ತಪ್ಪು ಕಲ್ಪನೆ. ಬರೀ ಪ್ರತಿಷ್ಠೆ, ಅದ್ಧೂರಿ ಮೆರವಣಿಗೆ ಮಾಡಿಕೊಳ್ಳುವ ಹಿರಿಮೆಗಾಗಿ ಈ ಆನೆಗಳನ್ನು ಸಾಕುತ್ತ ಬರಲಾಗಿದೆ ಎಂದು ವಿಶ್ಲೇಷಿಸಿದ ಗೋವಿಂದ್‌, ಆನೆ ವನ್ಯಜೀವಿ, ಅದು ಅರಣ್ಯದಲ್ಲಿ ಇದ್ದರನೇ ಕ್ಷೇಮ. ಇಲ್ಲದೇ ಹೋದರೆ ಮೊನ್ನೆ ಶಿವಮೊಗ್ಗದಲ್ಲಿ ನಡೆದ ಘಟನೆಗಳು ಸಂಭವಿಸುತ್ತಲೇ ಇರುತ್ತವೆ ಎನ್ನುವ ಎಚ್ಚರಿಕೆ ನೀಡಿದರು.

ಸನಾತನ ಧರ್ಮದ ಬಹುದೊಡ್ಡ ಶ್ರದ್ಧಾ ಕೇಂದ್ರಗಳಾದ ಅಯೋಧ್ಯಾ, ಕಾಶಿ, ಕಂಚಿ, ಮಧುರಾ, ದ್ವಾರಕಾ, ಪುರಿಗಳಲ್ಲೇ ಆನೆಗಳು ಸಂಸ್ಕೃತಿಯ ಭಾಗವಾಗಿಲ್ಲ. ಹೀಗಿರುವಾಗ ಈ ಮಠ, ಮಂದಿರಗಳಿಗೇಕೆ ಈ ಆನೆಗಳ ವ್ಯಾಮೋಹ ಎಂದು ಪ್ರಶ್ನಿಸುವ ಗೋವಿಂದ್‌, ವನ್ಯಜೀವಿ ಆನೆ ಅರಣ್ಯದಲ್ಲಿ ಇರುವುದೇ ಕ್ಷೇಮ ಎನ್ನುತ್ತಾರೆ.

PREV
Read more Articles on
click me!

Recommended Stories

ಏಷ್ಯಾ ಪೆಸಿಫಿಕ್‌ನಲ್ಲೇ ಬೆಂಗಳೂರು ಟಾಪ್, ಆಫೀಸ್ ಸ್ಪೇಸ್ ಬೇಡಿಕೆಯಲ್ಲಿ ಸಿಲಿಕಾನ್ ಸಿಟಿ ಹೊಸ ದಾಖಲೆ
ಬೈಂದೂರಿಗೆ ಬಂದೇ ಬಿಡ್ತು ವಂದೇ ಭಾರತ್ ರೈಲು: ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದೇನು?