ಕಾಂಗ್ರೆಸ್ ನಾಯಕರು ಹಾಗೂ ನಮ್ಮ ಶಾಸಕರು ಕೂಡ ಮೈತ್ರಿ ಸರ್ಕಾರದ ಪತನಕ್ಕೆ ಸಹಕಾರ ನೀಡಿದ್ದಾರೆ. ನನಗೆ ಕೆಡಕು ಬಯಸಿದವರಿಗೂ ನಾನು ಒಳ್ಳೆಯದನ್ನೇ ಹಾರೈಸುತ್ತೇನೆ ಎಂದು ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಕೆ.ಆರ್.ಪೇಟೆ ತಾಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮದಲ್ಲಿ ಹೃದಯಘಾತದಿಂದ ನಿಧನರಾದ ಜೆಡಿಎಸ್ ತಾಲೂಕು ಅಧ್ಯಕ್ಷ ವೆಂಕಟಸುಬ್ಬೇಗೌಡರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಮಾತನಾಡಿದ್ದಾರೆ.
ಮಂಡ್ಯ(ಸೆ.27): ವೆಂಕಟಸುಬ್ಬೇಗೌಡರು ನಿಷ್ಠಾವಂತ ಜೆಡಿಎಸ್ ಪಕ್ಷದ ಕಾರ್ಯಕರ್ತರಾಗಿದ್ದರು. ಪದವೀಧರರಾಗಿದ್ದರೂ ಸರ್ಕಾರಿ ಕೆಲಸಕ್ಕೆ ಹೋಗದೇ ಜನಸಾಮಾನ್ಯರ ನೋವು ನಲಿವುಗಳಿಗೆ ಸ್ಪಂದಿಸಿ ಕೆಲಸ ಮಾಡಿ ಒಳ್ಳೆಯ ಹೆಸರುಗಳಿಸಿದ್ದರು. ಇಂತಹ ವ್ಯಕ್ತಿಗಳು ಇಂದಿನ ದಿನಮಾನದ ರಾಜಕಾರಣದಲ್ಲಿ ದೊರೆಯುವುದು ಕಷ್ಟವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಕೆ.ಆರ್.ಪೇಟೆ ತಾಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮದಲ್ಲಿ ಹೃದಯಘಾತದಿಂದ ನಿಧನರಾದ ಜೆಡಿಎಸ್ ತಾಲೂಕು ಅಧ್ಯಕ್ಷ ವೆಂಕಟಸುಬ್ಬೇಗೌಡರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಇಬ್ಬರು ಪುತ್ರಿಯರು, ಒರ್ವ ಪುತ್ರನಿಗೆ ಸಾಂತ್ವನ ಹೇಳಿ ಸಂತೈಸಿದರು. ವೆಂಕಟಸುಬ್ಬೇಗೌಡರು ಹಣ ಮಾಡಿಲ್ಲ. ಬದಲಾಗಿ ಒಳ್ಳೆಯ ಹೆಸರು ಮಾಡಿದ್ದಾರೆ. ಗೌಡರ ಕುಟುಂಬದ ಎಲ್ಲಾ ನೋವು ನಲಿವುಗಳಿಗೆ ಸ್ಪಂದಿಸಲು ನಾನಿದ್ದೇನೆ. ಒಬ್ಬ ಸಹೋದರನಾಗಿ ನನ್ನ ಕೈಲಾದ ಸಹಾಯ ಮಾಡುತ್ತೇನೆ ಎಂದರು.
undefined
ಕೆಡಕು ಬಯಸುವವರಿಗೆ ಒಳ್ಳೆಯದಾಗಲಿ:
ಪ್ರಸ್ತುತ ರಾಜಕಾರಣವು ದಿಕ್ಕುತಪ್ಪಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಬಿಜೆಪಿ ಹೈಜಾಕ್ ಮಾಡಿಕೊಂಡು ಮೈತ್ರಿ ಸರ್ಕಾರವನ್ನು ಪತನಗೊಳಿಸಿತು. ಈಗ ಆ ಪಕ್ಷ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ನಾಯಕರು ಹಾಗೂ ನಮ್ಮ ಶಾಸಕರು ಕೂಡ ಮೈತ್ರಿ ಸರ್ಕಾರದ ಪತನಕ್ಕೆ ಸಹಕಾರ ನೀಡಿದ್ದಾರೆ. ನನಗೆ ಕೆಡಕು ಬಯಸಿದವರಿಗೂ ನಾನು ಒಳ್ಳೆಯದನ್ನೇ ಹಾರೈಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್, ಜಿಪಂ ಸದಸ್ಯರಾದ ಜೆ.ಪ್ರೇಮಕುಮಾರಿ, ಮುಖಂಡರಾದ ಬಿ.ಎಲ್. ದೇವರಾಜು, ಎಚ್.ಟಿ.ಮಂಜು, ಹಾಸನ ಜಿಲ್ಲಾ ಪಂಚಾಯಿತಿ ಸದಸ್ಯ ಪುಟ್ಟಸ್ವಾಮಿಗೌಡ, ಬಸ್ ಕೃಷ್ಣೇಗೌಡ, ಅಕ್ಕಿಹೆಬ್ಬಾಳು ರಘು ಕೆ.ಎಸ್.ಸಂತೋಷ್ ಕುಮಾರ್, ಎಪಿಎಂಸಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್, ಜಾನಕೀರಾಂ, ಪುರಸಭೆ ಮಾಜಿ ಅಧ್ಯಕ್ಷ ಕೆ.ಟಿ.ಗಂಗಾಧರ, ಎಚ್.ಎಸ್.ರಾಜು, ಎಂ.ಪಿ.ಲೋಕೇಶ್ , ಕೆ.ಬಿ.ನಾಗೇಶ್ ಸೇರಿದಂತೆ ಸಾವಿರಾರು ಜನರು ಅಂತಿಮ ಯಾತ್ರೆಯಲ್ಲಿ ಭಾಗವಹಿಸಿದ್ದರು. ಮಧ್ಯಾಹ್ನ 2ಗಂಟೆಯ ವೇಳೆಗೆ ಗೌಡರ ಜಮೀನಿನಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.