ಮೈದುಂಬಿ ಹರಿಯುತ್ತಿರುವ ಡೋಣಿ ನದಿ: ರೈತರಲ್ಲಿ ಹರ್ಷ

By Web DeskFirst Published Sep 27, 2019, 9:23 AM IST
Highlights

ಭಾರೀ ಮಳೆಗೆ ಮೈದುಂಬಿದ ಡೋಣಿ ನದಿ| ಕೆಳಮಟ್ಟದ ಸೇತುವೆ ಜಲಾವೃತ| ವಾಹ​ನ​ಗಳ ಸಂಚಾರ ಪೂರ್ಣ ಸ್ಥಗಿತ| ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯ ವಿವಿಧೆಡೆ ಸುರಿದ ಮಳೆಯಿಂದ ಡೋಣಿ ನದಿ ನೀರಿನ ಪ್ರಮಾಣ ಹೆಚ್ಚಳ| ನೀರಿನ ಪ್ರಮಾಣ ಸಂಪೂರ್ಣ ಏರಿಕೆ ಕಂಡಿದ್ದರಿಂದ ಕೆಳಮಟ್ಟದ ಸೇತುವೆ ಮುಳುಗಿ ಸ್ಥಗಿತಗೊಂಡ ವಾಹನ ಸಂಚಾರ| ತುಂಬಿ ಹರಿಯುತ್ತಿರುವ ಸೋಗಲಿ ಹಳ್ಳ| 

ತಾಳಿಕೋಟೆ(ಸೆ.27) ವಿಜ​ಯ​ಪುರ ಜಿಲ್ಲೆಯ ವಿವಿಧಡೆ ಬುಧವಾರ ರಾತ್ರಿ ಸುರಿದ ಭಾರೀ ಮಳೆಗೆ ಡೋಣಿ ನದಿ ಮೈದುಂಬಿ ಹರಿಯುತ್ತಿದ್ದು, ಹಡಗಿನಾಳ ಗ್ರಾಮದ ಮೂಲಕ ತೆರಳುವ ಡೋಣಿ ನದಿ ಮುಖ್ಯ ರಸ್ತೆಗೆ ಅಡ್ಡಲಾಗಿ ನಿರ್ಮಿಸಲಾದ ಕೆಳಮಟ್ಟದ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ.

ಇಂದ​ರಿಂದಾಗಿ ಪುನ​ರ್ವ​ಸತಿ ಹಡ​ಗಿ​ನ​ಹಾಳ ಗ್ರಾಮ- ಅರ​ನಾಳ, ಕಲ​ದೇ​ವ​ನ​ಹಳ್ಳಿ, ಶಿವ​ಪೂರದಿಂದ ಗ್ರಾಮ​ಸ್ಥರು ಮುದ್ದೇ​ಬಿ​ಹಾಳ, ಬಾಗ​ಲ​ಕೋಟೆ ನಗ​ರ​ಗ​ಳಿಗೆ ಹೋಗುವ ಸಂಪರ್ಕ ರಸ್ತೆ ಇದಾ​ಗಿ​ತ್ತು. ಈಗ ಇದು ಸ್ಥಗಿ​ತ​ವಾ​ಗಿ​ದ್ದ​ರಿಂದ 15 ಕಿಮೀ ಸುತ್ತು​ವ​ರಿದು ತಮ್ಮ ತಮ್ಮ ಗ್ರಾಮ​ಗ​ಳಿಗೆ ಹಾಗೂ ಗ್ರಾಮ​ಗ​ಳಿಂದ ನಗ​ರ​ಗ​ಳಿಗೆ ಹೋಗು​ವಂತಹ ಸ್ಥಿತಿ ನಿರ್ಮಾ​ಣ​ವಾ​ಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕಡಿಮೆಯಾಗುತ್ತ ಬಂದಿದ್ದರಿಂದ ಡೋಣಿ ನದಿ ಬತ್ತಿ ಹೋಗಿತ್ತು. ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯ ವಿವಿಧೆಡೆ ಸುರಿದ ಮಳೆಯಿಂದ ಡೋಣಿ ನದಿ ನೀರಿನ ಪ್ರಮಾಣ ಹೆಚ್ಚುತ್ತಿದೆ. ಗುರುವಾರ ಬೆಳಗಿನ ಹೊತ್ತಿಗೆ ಸೇತುವೆ ಮೇಲೆ ನೀರು ಹರಿಯುತ್ತಿದ್ದರೂ ಬಸ್‌, ಟ್ರ್ಯಾಕ್ಟರ್‌, ಟಂಟಂಗಳಂತಹ ವಾಹನಗಳು ಸಂಚರಿಸುತ್ತಿದ್ದವು. ಮಧ್ಯಾಹ್ನ 12 ಗಂಟೆ ನಂತರ ನೀರಿನ ಪ್ರಮಾಣ ಸಂಪೂರ್ಣ ಏರಿಕೆ ಕಂಡಿದ್ದರಿಂದ ಕೆಳಮಟ್ಟದ ಸೇತುವೆ ಮುಳುಗಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.

ಮಳೆ​ಗಾದಲ್ಲೇ​ಕೆ ಸೇತುವೆ ಕಾಮ​ಗಾರಿ?:

ಕಳೆದ ವರ್ಷ ಈ ಕೆಳಮಟ್ಟದ ಸೇತುವೆಯ ಪಕ್ಕದಲ್ಲಿ 20 ಕೋಟಿ ವೆಚ್ಚದಲ್ಲಿ ಮೇಲ್ಮಟ್ಟದ ಸೇತುವೆ ನಿರ್ಮಾಣಕ್ಕೆ ಅಂದಿನ ಲೋಕೋಪಯೋಗಿ ಸಚಿವ ಎಚ್‌.ಸಿ.ಮಹಾದೇವಪ್ಪ ಚಾಲನೆ ನೀಡಿದ್ದರು. ಬೇಸಿಗೆ ಸಮಯದಲ್ಲಿ ಅಡಿಪಾಯ ದಾಟಿ ಮೇಲ್ಮಟ್ಟಕ್ಕೇರಬೇಕಿತ್ತು. ಆದರೆ ಕಾಮಗಾರಿ ಮಂದಗತಿಯಲ್ಲಿ ಸಾಗಿದ್ದರಿಂದ ಸದ್ಯ ಸೇತುವೆ ನಿರ್ಮಾಣಕ್ಕೆ ಅಡಿಪಾಯ ಮಾತ್ರ ಅಗೆಯಲಾಗಿದೆ. 

ಈಗ ಡೋಣಿ ನದಿ ಮೈದುಂಬಿ ಹರಿಯುತ್ತಿದ್ದರಿಂದ ಸೇತುವೆ ನಿರ್ಮಾಣಕ್ಕೆ ಅಗೆಯಲಾದ ಅಡಿಪಾಯಗಳ ಗುಂಡಿಗಳು ಮುಚ್ಚಿವೆ. ಬೇಸಿಗೆಯಲ್ಲಿ ನದಿಯೊಳಗೆ ಸೇತುವೆ ನಿರ್ಮಿಸ​ಬೇ​ಕಾದ ಗುತ್ತಿಗೆದಾರರು ಮಳೆಗಾಲದಲ್ಲಿ ಡೋಣಿ ನದಿ ನೀರು ಹರಿಯುತ್ತದೆ ಎಂಬುದು ಗೊತ್ತಿದ್ದರೂ ಕಾಮಗಾರಿ ಆರಂಭಿ​ಸಿ​ರು​ವುದು ಏಷ್ಟುಸರಿ ಎಂಬ ಪ್ರಶ್ನೆ ನಾಗರಿಕರದ್ದಾಗಿದೆ.

ರೈತರಲ್ಲಿ ಹರ್ಷ:

ಬರಗಾಲದಿಂದ ತತ್ತರಿಸಿಹೋಗಿದ್ದ ಈ ಭಾಗದ ರೈತರ ಮೊಗದಲ್ಲಿ ಈ ಎರಡ್ಮೂರು ದಿನಗಳು ಸುರಿದ ಮಳೆ ರೈತನ ಮೊಗದಲ್ಲಿ ಹರ್ಷವನ್ನುಂಟು ಮಾಡಿದೆ. ಈಗಾಗಲೇ ಈ ಭಾಗದ ರೈತರು ತಮ್ಮ ತಮ್ಮ ಜಮೀನುಗಳಲ್ಲಿ ತೊಗರಿ, ಹತ್ತಿ ಸೇರಿ ಇನ್ನಿತರ ಬೆಳೆಗಳನ್ನು ಬಿತ್ತಿದ್ದಾರೆ. ಬೆಳೆಯೂ ಸಹ ಮೋಣಕಾಲೆತ್ತ​ರಕ್ಕೆ ಬೆಳೆದು ನಿಂತಿತ್ತು. ವರಣನ ಕೃಪೆಗೆ ಕಾಯುತ್ತಿದ್ದ ರೈತರಿಗೆ ಈ ಮಳೆಯು ಸಂತಸ ಮೂಡಿಸಿದೆ.

ಸೋಗಲಿಹಳ್ಳದಲ್ಲಿ ಭಾರೀ ನೀರು:

ತಾಳಿ​ಕೋಟೆ ಪಟ್ಟಣದ ಹತ್ತಿರ ಹರಿಯುವ ಸೋಗಲಿ ಹಳ್ಳದಲ್ಲೂ ಭಾರಿ ಪ್ರಮಾಣದ ನೀರು ಹರಿಯತೊಡಗಿದೆ. ಮಳೆ ಇಲ್ಲದೇ ಬತ್ತಿಹೋಗಿದ್ದ ಸೋಗಲಿ ಹಳ್ಳವು ಎರಡ್ಮೂರು ದಿನ ತಾಲೂಕಿನಲ್ಲಿ ಸುರಿದ ಮಳೆಯಿಂದ ಭಾರಿ ಪ್ರಮಾಣದ ನೀರು ಹರಿಯತೊಡಗಿದೆ.
 

click me!