
ದಾಂಡೇಲಿ: ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಇವರ ಪ್ರಯತ್ನದ ಫಲವಾಗಿ ಫೆ.7ರಂದು ಶನಿವಾರ ಸಂಜೆ 4 ಗಂಟೆಗೆ ದಾಂಡೇಲಿ-ಅಳ್ನಾವರ ರೈಲು ಪುನಾರಂಭದ ಘೋಷಣೆ ಮಾಡಿರುವುದು ಜನರಿಗೆ ಸಂತಸ ತಂದಿದೆ ಎಂದು ಮಾಜಿ ಶಾಸಕ ಸುನಿಲ ಹೆಗಡೆ ಹೆಳಿದರು. ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಪ್ರಯಾಣಿಕರ ರೈಲು ಈಗ ಮತ್ತೆ ಪ್ರಾರಂಭವಾಗುತ್ತಿದೆ. ಇದರಿಂದ ದಾಂಡೇಲಿಯ ಪ್ರವಾಸೋದ್ಯಮಕ್ಕೆ ಮತ್ತು ಜನತೆಗೆ ಸಂತಸ ತಂದಿದೆ. ಇದರಿಂದ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ. ಫೆ.7ರ 4.30ಕ್ಕೆ ಸಚಿವ ವಿ ಸೋಮಣ್ಣ ಪುನರಾರಂಭಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಹಾಸನ: ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರನ್ನು ನವ ದೆಹಲಿಯಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು, ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರು ಹಾಗೂ ಮಾಜಿ ಸಚಿವ ಮತ್ತು ಶಾಸಕರಾದ ಎಚ್.ಡಿ. ರೇವಣ್ಣ ಅವರು ಭೇಟಿ ಮಾಡಿ, ಹಾಸನ ಜಿಲ್ಲೆಯ ರೈಲ್ವೆ ಯೋಜನೆಗಳ ಬಗ್ಗೆ ಮನವಿ ಮಾಡಿದರು.
ದುದ್ದ ಮೇಲ್ಸೇತುವೆ ಮತ್ತು ಅಂಡರ್‌ಪಾಸ್ ಯೋಜನೆಗೆ 150 ಕೋಟಿ ರು, ಮೊಸಳೆಹೊಸಳ್ಳಿ ಬಳಿ ಮೇಲ್ಸೇತುವೆ ಮತ್ತು ನೂತನ ಫ್ಲಾಟ್‌ಫಾರಂ 120 ಕೋಟಿ ರು, ಮೊಸಳೆ ಹೊಸಳ್ಳಿಯಲ್ಲಿ ಎಲ್ಲ ರೈಲುಗಳ ನಿಲುಗಡೆ, ಚನ್ನರಾಯಪಟ್ಟಣ, ಹೊಳೆನರಸೀಪುರ, ಅರಕಲಗೂಡು, ಕುಶಾಲನಗರ ನಡುವೆ ಹೊಸ ರೈಲು ಮಾರ್ಗಕ್ಕೆ ಸರ್ವೆಗೆ ಈಗಾಗಲೇ ಅನುಮೋದನೆ ಸಿಕ್ಕಿದ್ದು, ಕೂಡಲೇ ಸರ್ವೆ ಕಾರ್ಯ ಆರಂಭಿಸಿ ನುತನ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು. ಈ ಎಲ್ಲ ಬೇಡಿಕೆಗಳಿಗೆ ಕೇಂದ್ರ ರೈಲ್ವೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು.
ಆಳಂದ: ಜನರ ಬಹುದಿನಗಳ ಬೇಡಿಕೆ ಹಾಗೂ ಒತ್ತಾಯವಾಗಿರುವ ಕಲಬುರ್ಗಿ-ಲಾತೂರ್ ನಡುವಿನ ರೈಲು ಮಾರ್ಗದಲ್ಲಿ ಆಳಂದ್ ತಾಲೂಕಿನಲ್ಲಿ ರೈಲ್ವೆ ಮಾರ್ಗ ಹಾಗೂ ಸ್ಪೇಷನ್ ನಿರ್ಮಾಣ ಕಾಮಗಾರಿ ಮಾಡುವಂತೆ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಹಾಗೂ ರಾಜ್ಯ ಇನ್ನೋರ್ವ ಕೇಂದ್ರ ಸಚಿವ ಎಚ್.ಡಿ.ಕುಮಾರ ಸ್ವಾಮಿ ಅವರಿಗೆ ಕಲಬುರ್ಗಿ ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಮಹೇಶ್ವರಿ ಎಸ್. ವಾಲಿ ಅವರು ಬುಧವಾರ ನವದೆಹಲಿಯಲ್ಲಿ ಪ್ರತ್ಯೇಕ ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ್ದಾರೆ.
ಈಗಾಗಲೇ ರೈಲ್ವೇ ಮಾರ್ಗ ನಿರ್ಮಾಣಕ್ಕೆ ಸಮೀಕ್ಷೆ ಆಗಿದೆ. ಸರ್ವೆ ಪರಿಷ್ಕರಣೆ ಪೂರ್ಣಗೊಳಿಸಿ ಮುಂದಿನ ಕ್ರಮ ಜರುಗಿಸಿ ಕಾಮಗಾರಿ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಸಚಿವರ ಸಮಯವನ್ನು ಕೊಟ್ಟು, ತಾಲೂಕಿನ ಜನರ ಅಭಿಪ್ರಾಯವನ್ನು ಶಾಂತಚಿತ್ತದಿಂದ ಆಲಿಸಿದ್ದಕ್ಕೆ ಮಹೇಶ್ವರಿ ವಾಲಿ ಅವರು ವಿ. ಸೋಮಣ್ಣ ಅವರಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಮನವಿಯು ಕಲಬುರ್ಗಿ-ಲಾತೂರ್ ನಡುವಿನ ಹೊಸ ರೈಲು ಮಾರ್ಗದ ಸರ್ವೇ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಸ್ಥಳೀಯ ಮಟ್ಟದ ಬೇಡಿಕೆಗಳನ್ನು ಇನ್ನಷ್ಟು ಬಲಪಡಿಸುವ ನಿರೀಕ್ಷೆಯನ್ನು ಹುಟ್ಟುಹಾಕಿದೆ.ಈ ಮಾರ್ಗದಲ್ಲಿ ಆಳಂದ್‍ನಲ್ಲಿ ಸ್ಟೇಷನ್ ಇದ್ದರೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವುದರ ಜೊತೆಗೆ ಆರ್ಥಿಕ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂಬುದು ಸ್ಥಳೀಯರ ಹಿಂದಿನಿಂದಲೂ ರೈಲ್ವೆ ಮಾರ್ಗದ ಬೇಡಿಕೆಯನಿಡುತ್ತ ಬಂದಿದ್ದಾರೆ.