
ಬೆಂಗಳೂರು: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಪ್ರತಿ ತಿಂಗಳೂ 2 ಸಾವಿರ ರೂಪಾಯಿಗಳ ಹಣ ಸರಿಯಾಗಿ ಬರುತ್ತಿಲ್ಲ ಎನ್ನುವ ದೊಡ್ಡ ಆರೋಪವಿದೆ. ಕೆಲವೊಮ್ಮೆ 3-4 ತಿಂಗಳ ಹಣ ಒಟ್ಟಿಗೇ ಹಾಕುತ್ತಾರೆ, ಅದರಲ್ಲಿ ನಡುನಡುವೆ ಕೆಲವೊಂದು ತಿಂಗಳು ಮಿಸ್ ಆಗಿಬಿಡುತ್ತದೆ ಎಂದು ಕೆಲವರು, ಪ್ರತಿ ತಿಂಗಳು ಕೆಲವರಿಗೆ ಮಾತ್ರ ಹಣ ಬರುತ್ತೆ, ಪಕ್ಕದ ಮನೆಗೆ ಬಂದರೂ, ನಮಗೆ ಬಂದೇ ಇಲ್ಲ ಎಂದು ಮತ್ತೆ ಕೆಲವರು... ಹೀಗೆ ಮಹಿಳೆಯರ ಗೋಳೋಟ ನಡೆದೇ ಇದೆ.
ಅದರ ನಡುವೆಯೇ, ಇದೀಗ ಸರ್ಕಾರ ಗೃಹಲಕ್ಷ್ಮಿ (Gruhalakshmi Scheme) ಫಲಾನುಭವಿಗಳಿಗೆ ಗುಡ್ನ್ಯೂಸ್ ಕೊಟ್ಟಿದೆ. 33ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದೆ. ಈ ಕುರಿತು ಮಾಹಿತಿ ನೀಡಿರುವ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಅವರು, ಇನ್ನೊಂದು ವಾರದಲ್ಲಿ 33ನೇ ಕಂತಿನ 2000 ರೂ. ಹಣ ತಲುಪಲಿದೆ ಎಂದಿದ್ದಾರೆ. ಚಿಕ್ಕಬಳ್ಳಾಪುರದ ಜಿಲ್ಲಾ ಪಂಚಾಯತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಈ ವಿಷಯವನ್ನು ತಿಳಿಸಿದ್ದಾರೆ.
ಗ್ಯಾರೆಂಟಿ ಯೋಜನೆ ಆರಂಭವಾದಾಗಿನಿಂದ ಅರ್ಥಾತ್ ಕಳೆದ ಮೂರು ವರ್ಷದಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯ ಸರ್ಕಾರ 1,48,454 ಕೋಟಿ ರೂ. ಹಣವನ್ನು ನೀಡಿದೆ. ಗೃಹಲಕ್ಷ್ಮಿ ಯೋಜನೆಯ ಅಡಿ 1.24 ಕೋಟಿ ಮಹಿಳೆಯರಿಗೆ 76,951.13 ಕೋಟಿ ರೂ. ನೀಡಿದಂತಾಗಿದೆ. ಇದರ ಅರ್ಥ ಪ್ರತಿ ಮಹಿಳೆಗೆ 64 ಸಾವಿರ ಹಣ ತಲುಪಿದೆ. ಗೃಹಜ್ಯೋತಿ ಯೋಜನೆಯಲ್ಲಿ 1.67 ಕೋಟಿ ಮನೆಗಳು ಉಚಿತ ವಿದ್ಯುತ್ ಪಡೆಯುತ್ತಿದ್ದು ಇದಕ್ಕಾಗಿ 28,759 ಕೋಟಿ ಹಣವನ್ನು ಸರ್ಕಾರ ವ್ಯಯಿಸಿದೆ. ಇನ್ನೊಂದು ವಾರದಲ್ಲಿ 33ನೇ ಕಂತಿನ 2000 ರೂ. ಹಣ ತಲುಪುವ ಮೂಲಕ 66 ಸಾವಿರ ಹಣ ತಲುಪಿದಂತಾಗಲಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ರೇಷನ್ ಕಾರ್ಡ್ ಕುರಿತ ಮಾಹಿತಿ ನೀಡಿದ ದಿನೇಶ್ ಗೂಳಿಗೌಡ ಅವರು, ರಾಜ್ಯದಲ್ಲಿ 1.48 ಕೋಟಿ ಲಕ್ಷ ರೇಷನ್ ಕಾರ್ಡ್ ಫಲಾನುಭವಿಗಳು ಇದ್ದಾರೆ. ಇಲ್ಲಿಯವರೆಗೆ 4.5 ಕೋಟಿ ಸದಸ್ಯರಿಗೆ ಉಚಿತವಾಗಿ ಅಕ್ಕಿ ನೀಡಲಾಗಿದೆ. ಇದಕ್ಕಾಗಿ 19,845 ಕೋಟಿ ರೂ. ಹಣ ವೆಚ್ಚ ಮಾಡಲಾಗಿದೆ. ರಾಜ್ಯದ 24 ಸಾವಿರ ನ್ಯಾಯಬೆಲೆ ಅಂಗಡಿಗಳ ಮುಂದೆ ಸಿಎಂ, ಡಿಸಿಎಂ, ಜಿಲ್ಲಾ ಉಸ್ತುವಾರಿ ಸಚಿವರ ಫೋಟೋ ಜೊತೆಗೆ ಸಮಯ ಮತ್ತು ಸ್ಟಾಕ್ ಬೋರ್ಡ್ ಫಲಕ ಹಾಕಬೇಕು. ಈ ಸಂಬಂಧ ಶೀಘ್ರದಲ್ಲೇ ಸುತ್ತೋಲೆ ಬರಲಿದೆ. ಮುಂದಿನ ತಿಂಗಳ ವೇಳೆಗೆ ಇಂದಿರಾ ಕಿಟ್ ವಿತರಣೆ ಆಗಲಿದೆ ಎಂದು ಮಾಹಿತಿ ನೀಡಿದರು.