ವರದಿ : ಅನಿಲ ಎಸ್. ಅಲಮೇಲ
ಕುಷ್ಟಗಿ (ಅ.16): ತಾಲೂಕಿನ ತಾವರಗೇರಾ ಹೋಬಳಿ ವ್ಯಾಪ್ತಿಯ ನಾರಿನಾಳ ಗ್ರಾಮದ ಆದೇಶ ಇದ್ಲಾಪುರ ಅವರ ಸರ್ವೇ ನಂಬರ್ 38ರಲ್ಲಿ ಚಿನ್ನದ ನಿಕ್ಷೇಪ (Gold) ಪತ್ತೆಯಾಗಿದ್ದು, ಸುತ್ತಮುತ್ತಲಿನ ಜಮೀನುಗಳುಳ್ಳ ರೈತರಲ್ಲಿ (Farmers) ಸಂತಸ ಮನೆಮಾಡಿದೆ.
ಬಂಗಾರದ (Gold) ಅದಿರು ಪತ್ತೆಗಾಗಿ ಆಗಮಿಸಿದ ಸಮೀಕ್ಷಾ ತಂಡವು ನಾರಿನಾಳ ಗ್ರಾಮದ ಜಮೀನಿನಲ್ಲಿ (Land) ಕಳೆದ ಒಂದು ತಿಂಗಳಿಂದ ಭೂಮಾಲೀಕನಿಗೆ ತಿಂಗಳ ವಂತಿಕೆಯಾಗಿ 13 ಸಾವಿರ ರು. ನೀಡುತ್ತಾ, ಬಂಗಾರದ ಅದಿರು ಪತ್ತೆಗಾಗಿ ಸಂಶೋಧನಾ ಕಾರ್ಯವನ್ನು ಸದ್ದಿಲ್ಲದೇ ನಡೆಸಿದೆ. ಅದಿರು ಸಮೀಕ್ಷೆಗಾಗಿ ಪರಿಣಿತರ ತಂಡವು ಡಿಗ್ಗಿಂಗ್ (Digging) ನಡೆಸಿದೆ.
ನಾರಿನಾಳ ಗ್ರಾಮದ ರೈತ ಆದೇಶ ಅವರ ಜಮೀನಿನಲ್ಲಿ ಬಂಗಾರದ ಅದಿರು ಪತ್ತೆಗಾಗಿ ಕೇಂದ್ರ ಸರ್ಕಾರದ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾದ (geological survey of india) ವಿಜ್ಞಾನಿಗಳ (Scince) ತಂಡ ಹಗಲಿರುಳು ಪರಿಶೀಲನೆ ನಡೆಸುತ್ತಿದೆ. ಈಗಾಗಲೇ 113 ಮೀಟರ್‌ಗೂ ಹೆಚ್ಚು ಆಳಕ್ಕೆ ಭೂಮಿ ಕೊರೆಯಲಾಗಿದೆ. ಬಂಗಾರದ ಅಗಿರು ಪತ್ತೆಯಾಗಿದೆ ಎಂದು ತಂಡ ಮಾಹಿತಿ ನೀಡಿದೆ.
ಚಿನ್ನದ ಗಣಿ ಮುಚ್ಚಲು ಕಾರಣ ಕಾಂಗ್ರೆಸ್ : ಶೀಘ್ರ ಕೆಜಿಎಫ್ ಚಿನ್ನದ ಗಣಿ ಆರಂಭ
ಭೂಗರ್ಭದಲ್ಲಿನ ಬಹುತೇಕ ಖನಿಜಯುಕ್ತ ಕಲ್ಲುಗಳನ್ನು ಸಮೀಕ್ಷಾ ತಂಡವು ಈಗಾಗಲೇ ಸಂಗ್ರಹಿಸಿದೆ. ಜಿಲ್ಲೆಯ ಗಡಿ ಪ್ರದೇಶದಲ್ಲಿರುವ ಮ್ಯಾದರಡೊಕ್ಕಿ ಗ್ರಾಮದ ಜಮೀನಿನಲ್ಲಿ ಕಬ್ಬಿಣದ (Iron) ಅದಿರು ಇರುವುದು ಹಿಂದೆಯೇ ಪತ್ತೆಯಾಗಿದೆ. ಈಗ ಇದೇ ಭಾಗದ ನಾರಿನಾಳ ಗ್ರಾಮ ಸೇರಿದಂತೆ ತಾವರಗೇರಾ ಹೋಬಳಿ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಬಂಗಾರದ ಅದಿರು ಪತ್ತೆಯಾಗಿದೆ. ಈ ಭಾಗದ ಜಮೀನಿಗೆ ಚಿನ್ನದ ಬೆಲೆ ಬರಬಹುದು ಎಂಬುದು ರೈತರ ನಿರೀಕ್ಷೆ.
ಕಲ್ಲು ಮಿಶ್ರಿತ ಈ ಭಾಗದ ಜಮೀನಿಗೆ ಭಾರಿ ಬೇಡಿಕೆ ಬರಬಹುದು ಎಂದು ರೈತರು ಅಂದಾಜಿಸಿದ್ದಾರೆ. 2017ರಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ಅಲ್ಫಾ ಜಿಯೋ ಇಂಡಿಯಾ ಲಿಮಿಟೆಡ್ ಎಂಬ ಖಾಸಗಿ ಸಂಸ್ಥೆಯು ಈ ಭಾಗದಲ್ಲಿ ಖನಿಜ ಸೇರಿದಂತೆ ಬೆಲೆ ಬಾಳುವ ತೈಲಗಳನ್ನು (Fuel) ಹೊಂದಿರುವ ಕುರಿತು ವೈಮಾನಿಕ ಸಮೀಕ್ಷೆ ಕೈಗೊಂಡಿತ್ತು.
ಸಮುದ್ರದಾಳದ ಕಸ ಸ್ವಚ್ಛಗೊಳಿಸುತ್ತಿದ್ದವರ ಕೈ ಸೇರಿತು ಚಿನ್ನದ ನಾಣ್ಯಗಳ ಖಜಾನೆ!
ಸ್ಥಳಕ್ಕೆ ತಹಸೀಲ್ದಾರ್ ಎಂ. ಸಿದ್ದೇಶ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡು, ಇಲ್ಲಿ ಇನ್ನೂ ಸರ್ವೇ ಕಾರ್ಯ ನಡೆಯುತ್ತಿದೆ. ಭೂಗರ್ಭದ ಖನಿಜಗಳನ್ನು ಸಂಗ್ರಹಿಸಿ, ಲ್ಯಾಬ್‌ಗೆ (lab) ಕಳುಹಿಸಿದ ಆನಂತರ ಅದರಲ್ಲಿರುವುದು ಏನು ಎನ್ನುವುದು ತಿಳಿಯಲಿದೆ ಎಂದರು.
ಕುಷ್ಟಗಿ ತಾಲೂಕಿನ ನಾರಿನಾಳ ಗ್ರಾಮದ ಕೆಲವು ಜಮೀನಿನಲ್ಲಿ ಬಂಗಾರದ ಪ್ರಮಾಣ ಎಷ್ಟುಇದೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಅಧಿಕಾರಿಗಳ ತಂಡ ಸಮೀಕ್ಷೆ ನಡೆಸುತ್ತಿದ್ದು, ತಂಡದ ಸಮೀಕ್ಷೆಯ ವರದಿ ಬಂದ ಆನಂತರ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.
ಮುತ್ತಪ್ಪ, ಹಿರಿಯ ವಿಜ್ಞಾನಿ, ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕೊಪ್ಪಳ
ನಾರಿನಾಳ ಗ್ರಾಮದ ಕೆಲವು ರೈತರ ಜಮೀನುಗಳಲ್ಲಿ ಬಂಗಾರ ಪತ್ತೆಯಾಗಿರುವ ಕುರಿತು ಸಮೀಕ್ಷೆ ನಡೆಯುತ್ತಿದೆ. ಸಮೀಕ್ಷೆ ವರದಿ ನೀಡಿದ ಬಳಿಕ ಸಂಪೂರ್ಣ ಮಾಹಿತಿ ನೀಡಲಾಗುವುದು.
ಎಂ. ಸಿದ್ದೇಶ್ ತಹಸೀಲ್ದಾರ್, ಕುಷ್ಟಗಿ