ವಾರ್ಡನ್‌ಗಳು ಮಕ್ಕಳ ಜೊತೆ ಬೆರೆಯುವ ಮೂಲಕ ಮಕ್ಕಳ ಭಾವನೆಗಳಿಗೆ ಸ್ಪಂದಿಸಬೇಕು ಮತ್ತು ಈ ಮೂಲಕ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವಂತಾಗಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣ ಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.
ತುಮಕೂರು : ಸಮಾಜಕಲ್ಯಾಣ ಮತ್ತು ಬಿಸಿಎಂ ಹಾಸ್ಟೆಲ್‌ಗಳಲ್ಲಿ ಮಕ್ಕಳಿಗೆ ಉತ್ತಮ ಪೌಷ್ಟಿಕ ಆಹಾರ ನೀಡಬೇಕು, ಹಾಸ್ಟೆಲ್ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು, ವಾರ್ಡನ್‌ಗಳು ಮಕ್ಕಳ ಜೊತೆ ಬೆರೆಯುವ ಮೂಲಕ ಮಕ್ಕಳ ಭಾವನೆಗಳಿಗೆ ಸ್ಪಂದಿಸಬೇಕು ಮತ್ತು ಈ ಮೂಲಕ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವಂತಾಗಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣ ಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಬಾಲನ್ಯಾಯ ಕಾಯ್ದೆ-2015, ಆರ್‌ಟಿಇ-2009, ದಿಂದ ಮಕ್ಕಳ ಸಂರಕ್ಷಣಾ ಕಾಯ್ದೆಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಲ್ಲಿ ಜಿಲ್ಲೆಯಲ್ಲಿ 2500 ಹೆಣ್ಣು ಮಕ್ಕಳಿದ್ದು, ಬಿಸಿಎಂ ಹಾಸ್ಟೆಲ್‌ಗಳಲ್ಲಿ 4100 ಹೆಣ್ಣು ಮಕ್ಕಳಿದ್ದಾರೆ. ಇಲ್ಲಿ ಕಡ್ಡಾಯವಾಗಿ ಮಹಿಳಾ ಮೇಲ್ವಿಚಾರಕಿಯನ್ನು ನೇಮಿಸಬೇಕು ಎಂದು ಸೂಚಿಸಿದ ಅವರು, ಮಕ್ಕಳಿಗೆ ಹಾಸ್ಟೆಲ್ ಆವರಣದ ಸುತ್ತಮುತ್ತ ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಪರಿಸರ ಕಾಪಾಡಿಕೊಳ್ಳುವ ಉತ್ತಮ ಚಟುವಟಿಕೆಗಳನ್ನು ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ಹೇಳಿ ಕೊಡಬೇಕು ಎಂದು ತಿಳಿಸಿದರು.
ಶಿಕ್ಷಣ ಇಲಾಖೆಯಿಂದ ನೀಡಲಾಗುವ ಮಧ್ಯಾಹ್ನ ಉತ್ತಮ ಗುಣಮಟ್ಟದ್ದಾಗಿರಬೇಕು. ಎಲ್ಲಿಯೂ ಕಳಪೆ ಆಹಾರ ಸೇವಿಸಿ ವಾಂತಿ, ಬೇದಿ ಉಂಟಾಗುವ ಪ್ರಕರಣಗಳು ಬರಬಾರದು. ಟೆಂಡರ್ ಕರೆದ ಪ್ರಕಾರವೇ ಗುಣಮಟ್ಟದ ಆಹಾರ ಸಾಮಗ್ರಿ ಪೂರೈಕೆಯಾಗಬೇಕು. ಉತ್ತಮ ನೀರು ಮತ್ತು ಸ್ವಚ್ಛತೆ ಶಾಲಾ ಆವರಣದಲ್ಲಿ ಕಾಪಾಡಿಕೊಳ್ಳಬೇಕು. ಶಾಲೆ ಬಿಟ್ಟಮಕ್ಕಳನ್ನು ಮರಳಿ ಶಾಲೆಗೆ ಕರೆ ತರುವ ಕೆಲಸ ಪರಿಣಾಮಕಾರಿಯಾಗಿ ಆಗಬೇಕು. ವಲಸೆ ಕಾರ್ಮಿಕರು ಹೆಚ್ಚಿರುವ ಕಡೆ ತೆರಳಿ ಅವರ ಶಾಲೆ ಬಿಟ್ಟಮಕ್ಕಳನ್ನು ಗುರುತಿಸಿ ಬಾಲ ಕಾರ್ಮಿಕ ಶಾಲೆ ಅಥವಾ ಅಂಗನವಾಡಿ ಶಾಲೆಗಳಿಗೆ ಸೇರಿಸಬೇಕು ಎಂದು ನಾಗಣ್ಣ ಗೌಡ ಸೂಚಿಸಿದರು.
ಮಕ್ಕಳ ಮೇಲೆ ದೌರ್ಜನ್ಯ ಎಸಗುವಂತಹ ಶಿಕ್ಷಕರನ್ನು ಗುರುತಿಸಿ, ಅವರೊಂದಿಗೆ ಸಮಾಲೋಚಿಸಬೇಕು. ಅವರು ಬದಲಾಗದಿದ್ದಲ್ಲಿ ಕಠಿಣ ಕ್ರಮಕೈಗೊಳ್ಳಬೇಕು. ಗಂಡು ಮಕ್ಕಳಿಗೂ ಸಹ ಪ್ರತಿ 6 ತಿಂಗಳಿಗೊಮ್ಮೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಡಿಡಿಪಿಐಗಳಿಗೆ ಸೂಚಿಸಿದರು.
ಅಪೌಷ್ಟಿಕ ತಾಯಿ-ಮಕ್ಕಳನ್ನು ಗುರುತಿಸಿ ಅವರಿಗೆ ಪೌಷ್ಟಿಕ ಆಹಾರ ನೀಡುವ ಕೆಲಸ ಸಿಡಿಪಿಓಗಳಿಂದ ಆಗಬೇಕು. ಇತ್ತೀಚಿನ ದಿನಗಳಲ್ಲಿ ಗುಟ್ಕಾ ತಿನ್ನುವುದು, ಮಾದಕ ವಸ್ತುಗಳ ಸೇವನೆ ಮತ್ತು ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಈ ಕುರಿತು ಆರೋಗ್ಯ ಇಲಾಖೆ ವತಿಯಿಂದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹೆಚ್ಚು ಹೆಚ್ಚು ರೂಪಿಸಬೇಕು. ಶಾಲಾ ಆವರಣದಿಂದ 100 ಮೀಟರ್‌ಗಿಂತ ಕಡಿಮೆ ಪ್ರದೇಶದಲ್ಲಿ ಮದ್ಯದಂಗಡಿಗಳು ಇದ್ದಲ್ಲಿ ಎತ್ತಂಗಡಿ ಮಾಡಬೇಕು. ಪಬ್, ಬಾರ್‌ಗಳಲ್ಲಿ ಮಕ್ಕಳನ್ನು ದುಡಿಸಬಾರದು. ಮೆಡಿಕಲ್ ಸ್ಟೋರ್‌ಗಳಲ್ಲಿ ದೊಡ್ಡವರು ಬಳಸುವ ವಸ್ತುಗಳು ಮಕ್ಕಳ ಕೈಗೆ ಸಿಗದಂತೆ ತಹಸೀಲ್ದಾರರು ಕ್ರಮ ವಹಿಸಬೇಕು. ಬಸ್‌ಗಳಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಮಕ್ಕಳ ಸಾಗಾಣಿಕೆ ಮಾಡಬಾರದು. ಶಾಲಾ ವಾಹನಗಳಿಗೆ ಬ್ರೇಕ್ ಲೈಟ್ ಇರುವ ವ್ಯವಸ್ಥೆ ಮಾಡಬೇಕು. ಅಂಗನವಾಡಿಗಳಲ್ಲಿ ಮಕ್ಕಳಿಗೆ ಆಟದ ವಸ್ತುಗಳನ್ನು ನೀಡಿ ಆರೋಗ್ಯಕರ ಬೆಳವಣಿಗೆಗೆ ಕಾರಣವಾಗಬೇಕು ಎಂದು ನಾಗಣ್ಣ ಗೌಡ ತಿಳಿಸಿದರು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಾತನಾಡಿ, ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷರು ನೀಡಿದ ಎಲ್ಲಾ ನಿರ್ದೇಶನಗಳನ್ನು ಪಾಲಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದು ತಿಳಿಸಿದರು.
ಜಿ.ಪಂ. ಸಿಇಓ ವಿದ್ಯಾಕುಮಾರಿ ಮಾತನಾಡಿ, ಅಧಿಕಾರಿಗಳು ಮಕ್ಕಳ ಜೊತೆ ಮಾನವೀಯ ಸ್ಪರ್ಶ ಹಾಗೂ ಅಂತಃಕರಣದಿಂದ ಬೆರೆಯಬೇಕಾಗುತ್ತದೆ. ಹೀಗಾದಲ್ಲಿ ಮಾತ್ರ ಸರ್ಕಾರಿ ನಿಲಯಗಳಲ್ಲಿ ಬೆಳೆಯುವ ಮಕ್ಕಳಿಗೆ ಉತ್ತಮ ಸಂಸ್ಕಾರ ದೊರೆಯಲು ಸಾಧ್ಯ ಎಂದು ತಿಳಿಸಿದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಮೂರ್ತಿ ಜಯಶಂಕರ್, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಉಪ ಕಾರ್ಯದರ್ಶಿ ನ್ಯಾಯಮೂರ್ತಿ ರಾಘವೇಂದ್ರ ಶೆಟ್ಟಿಗಾರ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ. ನೂರುನ್ನಿಸಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಬಾಲ್ಯವಿವಾಹದ ಬಗ್ಗೆ ಜಾಗೃತಿ ಮೂಡಿಸಿ
ಕಾರ್ಮಿಕ ಇಲಾಖೆಯ ವತಿಯಿಂದ ಯಾರಿಗೂ ಸುಳಿವು ನೀಡದಂತೆ ಗೌಪ್ಯವಾಗಿ ಸಿದ್ಧತೆ ನಡೆಸಿ ಬಾಲ ಕಾರ್ಮಿಕ ಪದ್ಧತಿ ಜಾರಿಯಲ್ಲಿರುವ ಸ್ಥಳಗಳಿಗೆ ತೆರಳಿ ದಾಳಿ ಮಾಡಬೇಕು. ಬಾಲ ಕಾರ್ಮಿಕ ಪದ್ಧತಿಯಿಂದ ರಕ್ಷಿಸಲ್ಪಟ್ಟಮಕ್ಕಳ ಹೆಸರಿನಲ್ಲಿ 35 ಸಾವಿರ ರು.ಗಳ ಠೇವಣಿ ಇಡಬೇಕು. ಗಡಿ ಪ್ರದೇಶಗಳಲ್ಲಿ ಬಾಲ್ಯವಿವಾಹ ಪ್ರಕರಣಗಳು ಹೆಚ್ಚಿದ್ದು, ಇಲ್ಲಿ ಹೆಚ್ಚು ಜಾಗೃತಿ ಮೂಡಿಸುವ ಕೆಲಸಗಳು ಆಗಬೇಕು. ಶಾಲೆಗಳಲ್ಲಿ ಮತ್ತು ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್ ಹಚ್ಚುವ ಮೂಲಕ ಬಾಲ್ಯವಿವಾಹ ನಿಷೇಧ ಕುರಿತು ಜಾಗೃತಿ ಮೂಡಿಸಬೇಕು. ತಹಸೀಲ್ದಾರ್ ಅಧ್ಯಕ್ಷತೆಯ ತಾಲೂಕು ಬಾಲ್ಯ ವಿವಾಹ ನಿಷೇಧ ಸಮಿತಿಯು ತಿಂಗಳಿಗೊಮ್ಮೆ ಸಭೆ ಸೇರಿ ಪರಿಸ್ಥಿತಿ ಅವಲೋಕಿಸಬೇಕು. ಸಭೆಯ ನಡಾವಳಿಯನ್ನು ಕಳುಹಿಸಿಕೊಡಬೇಕೆಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣ ಗೌಡ ಅವರು ಸೂಚಿಸಿದರು.