ಬಿಂಕದಕಟ್ಟಿಮೃಗಾಲಯಕ್ಕೆ ಶೀಘ್ರ ಜಿರಾಫೆ, ಜಿಬ್ರಾ, ಆನೆ ಆಗಮನ

By Kannadaprabha NewsFirst Published Jul 30, 2023, 8:59 AM IST
Highlights

ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯಂತ ಹೆಸರುವಾಸಿಯಾಗಿರುವ ಗದಗ ಝೂಗೆ (ಬಿಂಕದಕಟ್ಟಿಮೃಗಾಲಯಕ್ಕೆ) ಮುಂದಿನ ಜ. 26ಕ್ಕೆ ಹೊಸ ಅತಿಥಿಗಳಾಗಿ ಜಿರಾಫೆ ಹಾಗೂ ಜಿಬ್ರಾ, ಆನೆಗಳು ಆಗಮಿಸಲಿವೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ ಹೇಳಿದರು.

ಗದಗ (ಜು.30) :  ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯಂತ ಹೆಸರುವಾಸಿಯಾಗಿರುವ ಗದಗ ಝೂಗೆ (ಬಿಂಕದಕಟ್ಟಿಮೃಗಾಲಯಕ್ಕೆ) ಮುಂದಿನ ಜ. 26ಕ್ಕೆ ಹೊಸ ಅತಿಥಿಗಳಾಗಿ ಜಿರಾಫೆ ಹಾಗೂ ಜಿಬ್ರಾ, ಆನೆಗಳು ಆಗಮಿಸಲಿವೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ ಹೇಳಿದರು.

ಸಮೀ​ಪದ ಬಿಂಕದಕಟ್ಟಿಯ ಮೃಗಾಲಯದಲ್ಲಿ ಶನಿ​ವಾ​ರ ಅಂತಾರಾಷ್ಟ್ರೀಯ ಹುಲಿ ದಿನಾಚರಣೆ ಅಂಗವಾಗಿ ನೂತನವಾಗಿ ನಿರ್ಮಿಸಲಾದ ‘ಹುಲಿ ಪ್ರಾಣಿ ಮನೆ’ ಸೇರಿದಂತೆ ವಿವಿಧ ಪ್ರಾಣಿ ಮನೆಗಳನ್ನು ಉದ್ಘಾಟಿಸಿ ಮಾಧ್ಯ​ಮ ಪ್ರತಿನಿಧಿಗಳ ಜತೆಗೆ ಅವರು ಮಾತ​ನಾ​ಡಿ​ದ​ರು.

ಇಂದೋರ್‌ನಿಂದ ಬಿಂಕದಕಟ್ಟೆ ಮೃಗಾಲಯಕ್ಕೆ ಬಂದ ಶಿವ-ಗಂಗಾ ಸಿಂಹಗಳು

ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರೊಂದಿಗೆ ಗದಗ ಮೃಗಾಲಯದ ಕುರಿತು ವಿವರವಾಗಿ ಚರ್ಚಿಸಲಾಗಿದೆ. ಗದಗ ಮೃಗಾಲಯಕ್ಕೆ ಆನೆ ತರುವ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಆನೆ ಜೊತೆಗೆ ಅಗತ್ಯ ನಿರ್ವಹಣಾ ಅನುದಾನವನ್ನು ಸಹ ನೀಡುವುದಾಗಿ ಸಚಿವರು ಸಮ್ಮತಿ ನೀಡಿದ್ದಾರೆ. ಶೀಘ್ರವೇ ಗದಗ ಮೃಗಾಲಯಕ್ಕೆ ಆನೆಯು ಸಹ ಅತಿಥಿಯಾಗಿ ಆಗಮಿಸಲಿದೆ. ಜಿರಾಫೆ, ಜಿಬ್ರಾಗಳು ಆಗಮಿಸಲಿದ್ದು, ಈ ಪ್ರಾಣಿಗಳು ಮೃಗಾಲಯಕ್ಕೆ ಬರುವ ವೀಕ್ಷಕರ ಸಂಖ್ಯೆ ಇನ್ನೂ ಹೆಚ್ಚುವ ವಿಶ್ವಾಸವಿದೆ. ಮೃಗಾಲಯದಲ್ಲಿ ಈ ಅತಿಥಿಗಳ ಸ್ವಾಗತಕ್ಕಾಗಿ ಅಗತ್ಯವಿರುವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು.

ಝೂ ಮಾಸ್ಟರ್‌ ಪ್ಲಾನ್‌

ಜಿಲ್ಲೆಯ ಬಿಂಕದಕಟ್ಟಿಝೂ ಮಾಸ್ಟರ್‌ ಪ್ಲಾನ್‌ ಸಿದ್ಧವಾಗಿದ್ದು, 2024ರ ಆಗಸ್ಟ್‌ 15ರೊಳಗಾಗಿ ಅದನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಜಿಲ್ಲಾ ಪ್ರವಾಸೋದ್ಯಮ ಸಮಿತಿಯು ಗದಗ ಮೃಗಾಲಯದ ಅಭಿವೃದ್ಧಿಗೆ ಮುಂದಾಗಿದ್ದು ಅಧ್ಯಯನ ಸಹ ನಡೆಸಿದೆ. ಗದಗ ಜಿಲ್ಲೆಯು ಪ್ರವಾಸೋದ್ಯಮಕ್ಕೆ ಪೂರಕವಾಗಿದೆ. ಬಿಂಕದಕಟ್ಟಿಮೃಗಾಲಯದ ಹತ್ತಿರದಲ್ಲಿಯೇ ಅತ್ಯಾಧುನಿಕ ಸೌಲಭ್ಯಗಳುಳ್ಳ ಉತ್ತಮ ಕ್ಯಾಂಟಿನ್‌ ಮಾಡಲಾಗುವುದು ಎಂದರು.

ಭಾರತದಲ್ಲಿ ಶೇ. 60ರಷ್ಟುಹುಲಿಗಳು

ವಿಶ್ವದಲ್ಲಿ ಇರುವ ಹುಲಿಗಳ ಪ್ರಮಾಣದಲ್ಲಿ ಶೇ. 60ರಷ್ಟುಭಾರತ ದೇಶದಲ್ಲಿ ಇರುವುದು ಹೆಮ್ಮೆಯ ವಿಷಯ. ವಿಶ್ವದಲ್ಲಿ ಒಟ್ಟು 5578 ವಿವಿಧ ಜಾತಿಯ ಹುಲಿಗಳ ಸಂತತಿ ಇದ್ದು, ಈ ಪೈಕಿ ನಮ್ಮ ರಾಜ್ಯದಲ್ಲಿ 435 ಹುಲಿಗಳು ಇವೆ. ಕರ್ನಾಟಕ ಹಾಗೂ ಮಧ್ಯಪ್ರದೇಶ ರಾಜ್ಯಗಳಲ್ಲಿ ಹುಲಿಗಳ ಸಂತತಿ ಸರಿ ಪ್ರಮಾಣದಲ್ಲಿದೆ. 1973ರಲ್ಲಿ ಅಂದಿನ ಪ್ರಧಾನಿ ದಿ. ಇಂದಿರಾ ಗಾಂಧಿ ಅವರು ಹುಲಿ ಸಂರಕ್ಷಣೆಗೆ ಮುಂದಾಗಿ ಅನೇಕ ಕ್ರಮಗಳನ್ನು ಕೈಗೊಂಡಿದ್ದರ ಪರಿಣಾಮವಾಗಿ ಇಂದಿಗೂ ಹುಲಿ ಸಂತತಿ ದೇಶದಲ್ಲಿ ಹೇರಳವಾಗಿದೆ ಎಂದರು.

ಪ್ರವಾಸೋದ್ಯಮ ವರದಿ

ಹಿರಿಯ ಐಎಎಸ್‌ ಅಧಿಕಾರಿ ಮನೋಜ ಕುಮಾರ ಅವರ ನೇತೃತ್ವದಲ್ಲಿ ಗದಗ ಜಿಲ್ಲಾ ಸಮಗ್ರ ಪ್ರವಾಸೋದ್ಯಮ ಅಭಿವೃದ್ಧಿ ಸಮತಿಯನ್ನು ರಚಿಸಿ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸೂಚಿಸಲಾಗಿತ್ತು. ಅದರಂತೆ ಸಮಿತಿಯು ಆ. 8ರಂದು ಅಧ್ಯಯನದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಈ ಮೂಲಕ ಗದಗ ಜಿಲ್ಲಾ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅನುಕೂಲ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಲಕ್ಕುಂಡಿಯಲ್ಲಿ ಹುದುಗಿರುವ ದೇವಸ್ಥಾನಗಳನ್ನು ಗುರುತಿಸುವುದರ ಮೂಲಕ ಅವುಗಳನ್ನು ಅಭಿವೃದ್ಧಿ ಪಡಿಸಿ ಲಕ್ಕುಂಡಿಯ ಗತ ವೈಭವವನ್ನು ಪ್ರವಾಸಿಗರಿಗೆ ಪರಿಚಯಿಸಬೇಕು. ಹಂಪಿಯಷ್ಟೇ ಲಕ್ಕುಂಡಿಯು ಸಮೃದ್ಧ ಪ್ರದೇಶವಾಗಿದೆ ಎಂಬುದನ್ನು ಪ್ರವಾಸಿಗರಿಗೆ ಪರಿಚಯಿಸುವ ಚಿಂತನೆ ಇದೆ ಎಂದು ಸಚಿವ ಪಾಟೀಲ್‌ ಹೇಳಿದರು.

ಈ ಸಂದರ್ಭದಲ್ಲಿ ಶಿರಹಟ್ಟಿಶಾಸಕ ಡಾ. ಚಂದ್ರು ಲಮಾಣಿ, ಬಿಂಕದಕಟ್ಟಿಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್‌., ಜಿಲ್ಲಾ ಪೊಲೀಸ್‌ ಅಧೀಕ್ಷಕ ಬಿ.ಎಸ್‌. ನೇಮಗೌಡ, ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೇಯಿ, ಉಪವಿಭಾಗಾಧಿಕಾರಿ ಗಂಗಪ್ಪ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ವಿಭೂತಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶರಣು ಗೊಗೇರಿ, ವಾರ್ತಾಧಿಕಾರಿ ವಸಂತ ಮಡ್ಲೂರ ಇದ್ದರು.

 

ವನ್ಯ ಮೃಗಗಳಿಗೆ ಬದುಕುವ ಹಕ್ಕೇ ಇಲ್ಲ: ತಂತಿ ಬೇಲಿಗೆ ಸಿಲುಕಿ ನರಳಾಡಿದ ಚಿರತೆ

ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಹುಲಿ ದಿನಾಚರಣೆ ಅಂಗವಾಗಿ ಬಿಂಕದಕಟ್ಟಿಮೃಗಾಲಯದಲ್ಲಿ ಏರ್ಪಡಿಸಲಾದ ಚಿತ್ರಕಲಾ ಸ್ಪರ್ಧೆಯಲ್ಲಿ ವಿವಿಧ ಶಾಲೆಯ ಮಕ್ಕಳು ಆಸಕ್ತಿಯಿಂದ ಪಾಲ್ಗೊಂಡಿದ್ದರು.

click me!