ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಶಕ್ತಿ ಯೋಜನೆ ಜಾರಿಯಾದ ಒಂದು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಬರೋಬ್ಬರಿ 46.67 ಲಕ್ಷ ಮಹಿಳೆಯರು ಶೂನ್ಯ ದರದ ಟಿಕೆಟ್ ಪಡೆದು ಪ್ರಯಾಣ ಮಾಡಿದ್ದಾರೆ.
ಹಾವೇರಿ (ಜು.30) : ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಶಕ್ತಿ ಯೋಜನೆ ಜಾರಿಯಾದ ಒಂದು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಬರೋಬ್ಬರಿ 46.67 ಲಕ್ಷ ಮಹಿಳೆಯರು ಶೂನ್ಯ ದರದ ಟಿಕೆಟ್ ಪಡೆದು ಪ್ರಯಾಣ ಮಾಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಎಡಬಿಡದೇ ಮಳೆ ಸುರಿಯುತ್ತಿರುವುದರಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ಸ್ವಲ್ಪ ಮಟ್ಟಿಗೆ ತಗ್ಗಿದೆ. ಯಾತ್ರಾ ಸ್ಥಳಗಳಲ್ಲಿ ದಟ್ಟಣೆಯೂ ಇಳಿಕೆಯಾಗಿದೆ.
undefined
ಜೂ. 11ರಂದು ಶಕ್ತಿ ಯೋಜನೆ ಜಾರಿಗೆ ಬಂದ ಮೊದಲ ದಿನದಿಂದಲೇ ಮಹಿಳಾ ಪ್ರಯಾಣಿಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ದಿನ ಕಳೆದಂತೆ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಕೇವಲ 1 ತಿಂಗಳಲ್ಲಿ 46,67,151 ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು, ಇದರ ಟಿಕೆಟ್ ಮೌಲ್ಯ 12.58 ಕೋಟಿ ರು. ಆಗಿದೆ.
ಗೃಹಲಕ್ಷ್ಮೀ ಜಾರಿಯಾಗುತ್ತಿದ್ದಂತೆ ಮಹಿಳಾ ಪ್ರಯಾಣಿಕರ ಸಂಖ್ಯೆ ಕುಸಿತ!
ವಾಯವ್ಯ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಯಲ್ಲಿ ಹಾವೇರಿ, ರಾಣಿಬೆನ್ನೂರ, ಹಿರೇಕೆರೂರ, ಬ್ಯಾಡಗಿ, ಸವಣೂರ, ಹಾನಗಲ್ಲ ಸೇರಿ ಒಟ್ಟು 6 ಡಿಪೋಗಳಿವೆ. ನಿತ್ಯವೂ 600ಕ್ಕೂ ಅಧಿಕ ಮಾರ್ಗಗಳಲ್ಲಿ ನೂರಾರು ಬಸ್‌ಗಳು ಸಂಚಾರ ಮಾಡುತ್ತಿದ್ದು, ಟ್ರಿಪ್‌ಗಳನ್ನೂ ಹೆಚ್ಚಿಸಲಾಗಿದೆ.
ಹುಬ್ಬಳ್ಳಿ, ದಾವಣಗೆರೆ ಸೇರಿ ಸುತ್ತಲಿನ ಪಟ್ಟಣ, ನಗರಗಳಿಗೆ ನಿತ್ಯವೂ ಕೆಲಸ-ಕಾರ್ಯಗಳಿಗೆ ತೆರಳಲು ರೈಲು, ಖಾಸಗಿ ಬಸ್, ಆಟೋರಿಕ್ಷಾ, ಟಂಟಂ, ಟೆಂಪೋ ಸೇರಿ ಇತರ ವಾಹನಗಳನ್ನು ಅವಲಂಬಿಸುತ್ತಿದ್ದ ಸಾವಿರಾರು ಮಹಿಳೆಯರು ಶಕ್ತಿ ಯೋಜನೆ ಜಾರಿಯಾದ ದಿನದಿಂದ ಸಾರಿಗೆ ಬಸ್‌ಗಳತ್ತ ಮುಖ ಮಾಡಿದ್ದಾರೆ.
ಸರ್ಕಾರಿ ನೌಕರರು, ಖಾಸಗಿ ಕಂಪನಿಗಳ ಉದ್ಯೋಗಿಗಳು, ಗಾಮೆಂರ್‍ಟ್ ಸೇರಿ ವಿವಿಧ ಕ್ಷೇತ್ರಗಳ ಅಸಂಘಟಿತ ಕಾರ್ಮಿಕರು, ಕಾಲೇಜು ವಿದ್ಯಾರ್ಥಿಗಳು, ವ್ಯಾಪಾರ-ವಹಿವಾಟು ಮಾಡುವವರು ಸಾರಿಗೆ ಬಸ್‌ಗಳನ್ನೇ ಹತ್ತುತ್ತಿದ್ದಾರೆ. ಗ್ರಾಮೀಣ ಸಾರಿಗೆ ಜತೆಗೆ ಎಕ್ಸ್‌ಪ್ರೆಸ್‌ಗಳಲ್ಲಿಯೂ ಮಹಿಳಾ ಪ್ರಯಾಣಿಕರ ಸಂಖ್ಯೆ ಮೂರುಪಟ್ಟು ಹೆಚ್ಚಿದೆ. ಅದರಲ್ಲೂ ಧಾರ್ಮಿಕ ಕ್ಷೇತ್ರಗಳಿಗೆ ತೆರಳುವವರ ಸಂಖ್ಯೆಯೇ ಹೆಚ್ಚಾಗುತ್ತಿದೆ.
ಈ ಮೊದಲು ಪ್ರಯಾಣಿಕರು ಇಲ್ಲದೆ ಸಂಚರಿಸುತ್ತಿದ್ದ ಬಸ್‌ಗಳಲ್ಲೂ ಇದೀಗ ಪ್ರಯಾಣಿಕರು ತುಂಬಿ ತುಳುಕುತ್ತಿದ್ದಾರೆ. ಜಿಲ್ಲೆಯಲ್ಲಿರುವ ಕೆಎಸ್‌ಆರ್‌ಟಿಸಿಯ ಆರು ಡಿಪೋಗಳಲ್ಲಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ರಾಣಿಬೆನ್ನೂರ ಸಾರಿಗೆ ಘಟಕದ ವ್ಯಾಪ್ತಿಯಲ್ಲಿ ಅತಿ ಹೆಚ್ಚು 9.51ಲಕ್ಷ ಮಹಿಳೆಯರು ಪ್ರಯಾಣಿಸಿದರೆ, ಸವಣೂರಿನಲ್ಲಿ ಅತಿ ಕಡಿಮೆ 5.45ಲಕ್ಷ ಮಹಿಳಾ ಪ್ರಯಾಣಿಕರು ಸಂಚರಿಸಿದ್ದಾರೆ.
ಸಾರಿಗೆ ಬಸ್‌ಗಳಲ್ಲಿ ದಿನೇ ದಿನೇ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಸ್‌ಗಳಿಗೂ ಬೇಡಿಕೆ ಹೆಚ್ಚಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚುವರಿ ಬಸ್‌ಗಳ ಸಂಚಾರಕ್ಕೆ ಇಲ್ಲದಂತಾಗಿದೆ. ಒಂದೆಡೆ ಬಸ್‌ಗಳ ಕೊರತೆ ಜತೆಗೆ ಸಿಬ್ಬಂದಿ ಕೊರತೆಯೂ ಇರುವ ಕಾರಣ ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ಬಸ್‌ಗಳನ್ನು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದು ಸಾರಿಗೆ ಸಂಸ್ಥೆ ಅಧಿಕಾರಿಗಳ ಅಭಿಪ್ರಾಯವಾಗಿದೆ.
ಶಕ್ತಿ ಯೋಜನೆ ಎಫೆಕ್ಟ್, ಬಸ್ ದರ ಏರಿಕೆ ಮಾಡಿ ಕೆಎಸ್ ಆರ್‌ಟಿಸಿ ಆದೇಶ
ರಾಜ್ಯ ಸರ್ಕಾರ ಘೋಷಿಸಿರುವ ಶಕ್ತಿ ಯೋಜನೆಯಿಂದ ನಮ್ಮಂಥ ಅನೇಕ ಮಹಿಳೆಯರಿಗೆ ಅನುಕೂಲವಾಗಿದೆ. ನಾವು ಸಹ ಒಂದು ವಾರ ಧರ್ಮಸ್ಥಳ, ಉಡುಪಿ ಮುಂತಾದ ಕಡೆ ಪುಣ್ಯಕ್ಷೇತ್ರ ಪ್ರವಾಸ ಮಾಡಿ ಬಂದಿದ್ದೇವೆ. ಈ ಯೋಜನೆ ಹೀಗೇ ಮುಂದುವರಿಯಬೇಕು.
ಅನಸೂಯಾ ಜಿ.ಕೆ., ಹಾವೇರಿ
ಹಾವೇರಿ ವಿಭಾಗ ವ್ಯಾಪ್ತಿಯ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಮೊದಲಿದ್ದ ಎಲ್ಲ ಮಾರ್ಗಗಳಲ್ಲಿಯೂ ಬಸ್‌ಗಳು ಎಂದಿನಂತೆ ಸಂಚರಿಸುತ್ತಿವೆ. 1 ತಿಂಗಳಲ್ಲಿ 46.67 ಲಕ್ಷ ಮಹಿಳೆಯರು ಶಕ್ತಿ ಯೋಜನೆ ಅಡಿಯಲ್ಲಿ ಉಚಿತವಾಗಿ ಪ್ರಯಾಣ ಮಾಡಿದ್ದಾರೆ.
ಶಶಿಧರ ವಿ.ಎಂ., ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ
ಶಕ್ತಿ ಯೋಜನೆ ಆರಂಭಕ್ಕೂ ಮುನ್ನ ಜಿಲ್ಲೆಯಲ್ಲಿ ಪ್ರತಿ ದಿನ 1.89 ಪ್ರಯಾಣಿಕರು ಬಸ್‌ನಲ್ಲಿ ಸಂಚರಿಸುತ್ತಿದ್ದರೆ, ಶಕ್ತಿ ಯೋಜನೆ ಜಾರಿಯಾದ ಬಳಿಕ ಇದು 2.68 ಲಕ್ಷಕ್ಕೆ ಏರಿದೆ. ಅಂದರೆ, ಸುಮಾರು 80 ಸಾವಿರ ಪ್ರಯಾಣಿಕರ ಸಂಚಾರ ಹೆಚ್ಚಳವಾಗಿದೆ. ಇದರಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆಯೇ ನಿತ್ಯ 1.63 ಲಕ್ಷ ಆಗಿದ್ದು, ಒಟ್ಟು ಪ್ರಯಾಣಿಕರಲ್ಲಿ ಶೇ.61ರಷ್ಟುಮಹಿಳೆಯರಾಗಿದ್ದಾರೆ. ಶಕ್ತಿ ಯೋಜನೆಗಿಂತ ಮುನ್ನ ಜಿಲ್ಲೆಯಲ್ಲಿ 55 ಲಕ್ಷ ರು. ಆದಾಯವಿದ್ದರೆ, ಅದೀಗ 77.12 ಲಕ್ಷಕ್ಕೆ ಏರಿಕೆಯಾಗಿದೆ.