ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಕೆಳಹಂತದಲ್ಲಿ ವಿಮಾನ ಹಾರಾಟ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಆತಂಕ ಮೂಡಿರುವುದನ್ನು ಗಮನಿಸಿದ ಜಿಲ್ಲಾ ಆಡಳಿತ, ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಯಾವುದೇ ಭಯಪಡಬೇಕಾದ ಅವಶ್ಯಕತೆ ಇಲ್ಲ ಎಂದು ತಿಳಿಸಿದೆ.
ಜಿಲ್ಲಾ ಆಡಳಿತ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಈ ವಿಮಾನ ಹಾರಾಟವು ಖನಿಜ ಅನ್ವೇಷಣೆಗೆ ಸಂಬಂಧಿಸಿದ ವೈಜ್ಞಾನಿಕ ಸಮೀಕ್ಷೆಯ ಭಾಗವಾಗಿದೆ. ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆ (Geological Survey of India) ವತಿಯಿಂದ ‘ನ್ಯಾಶನಲ್ ಏರೋ ಜಿಯೋಫಿಸಿಕಲ್ ಮ್ಯಾಪಿಂಗ್ ಪ್ರೋಗ್ರಾಂ’ ಅಡಿಯಲ್ಲಿ ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಈ ಸಮೀಕ್ಷಾ ಕಾರ್ಯ ನಡೆಯುತ್ತಿದೆ.
ಈ ಯೋಜನೆಯ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ವಿಶೇಷ ವೈಜ್ಞಾನಿಕ ಉಪಕರಣಗಳನ್ನು ಅಳವಡಿಸಿಕೊಂಡ ವಿಮಾನಗಳು ಕಡಿಮೆ ಎತ್ತರದಲ್ಲಿ ಹಾರಾಟ ನಡೆಸುತ್ತಿವೆ. ಭೂಗರ್ಭದಲ್ಲಿರುವ ಖನಿಜ ಸಂಪತ್ತಿನ ವಿವರಗಳನ್ನು ಸಂಗ್ರಹಿಸುವುದು ಈ ಸಮೀಕ್ಷೆಯ ಪ್ರಮುಖ ಉದ್ದೇಶವಾಗಿದೆ.
ಸಮೀಕ್ಷೆಯಿಂದ ಸಂಗ್ರಹಿಸಲ್ಪಡುವ ಮಾಹಿತಿಯನ್ನು ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳು ಖನಿಜ ಅನ್ವೇಷಣೆಗೆ ಬಳಸಿಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತದೆ. ಜೊತೆಗೆ, ಈ ಮಾಹಿತಿಯನ್ನು ‘ನ್ಯಾಶನಲ್ ಜಿಯೋಸೈನ್ಸ್ ಡೇಟಾ ರೆಪೊಸಿಟರಿ’ ಮೂಲಕ ಸಾರ್ವಜನಿಕರಿಗೂ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ.
ಹೀಗಾಗಿ, ಜಿಲ್ಲೆಯಲ್ಲಿ ನಡೆಯುತ್ತಿರುವ ಈ ಕೆಳಹಂತದ ವಿಮಾನ ಹಾರಾಟವು ಸಂಪೂರ್ಣವಾಗಿ ವೈಜ್ಞಾನಿಕ ಸಮೀಕ್ಷೆಗೆ ಸಂಬಂಧಿಸಿದ್ದು, ಇದರಿಂದ ಯಾವುದೇ ಅಪಾಯ ಅಥವಾ ಆತಂಕಕ್ಕೆ ಕಾರಣವಿಲ್ಲ ಎಂದು ಜಿಲ್ಲಾ ಆಡಳಿತ ಸ್ಪಷ್ಟಪಡಿಸಿದೆ. ಸಾರ್ವಜನಿಕರು ಈ ಬಗ್ಗೆ ಅನಗತ್ಯ ಭಯಕ್ಕೆ ಒಳಗಾಗದೆ ಸಹಕರಿಸುವಂತೆ ಮನವಿ ಮಾಡಲಾಗಿದೆ.