
ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಸುಗಳ ಕಳ್ಳತನ ಪ್ರಕರಣ ಮತ್ತೆ ಜನರಿಗೆ ತಲೆನೋವಾಗಿದೆ. ಗದ್ದೆಯನ್ನು ಉಳುಮೆ ಮಾಡಲು ಪ್ರೀತಿಯಿಂದ ಸಾಕಿದ್ದ ಎತ್ತು, ಹೋರಿಗಳನ್ನು ಕಳ್ಳರು ಕಳ್ಳತನ ಮಾಡುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಇದೇ ರೀತಿ ಮೂಡಿಗೆರೆ ತಾಲೂಕಿನ ಸಂಪ್ಲಿ ಗ್ರಾಮದಲ್ಲಿ ರೈತನ ಜೋಡೆತ್ತುಗಳನ್ನು ಕಳ್ಳರು ರಾತ್ರೋರಾತ್ರಿ ಕದ್ದೊಯ್ದ ಘಟನೆ ಆತಂಕ ಮೂಡಿಸಿದೆ. ಬೇಸಾಯದ ಅವಿಭಾಜ್ಯ ಅಂಗವಾಗಿದ್ದ ಎತ್ತುಗಳನ್ನು ಕಳೆದುಕೊಂಡ ರೈತ ಕುಟುಂಬ ಈಗ ಸಂಕಷ್ಟಗೆ ಸಿಲುಕಿದೆ.
ಸಂಪ್ಲಿ ಗ್ರಾಮದ ನಿವಾಸಿ ರೈತ ಚಿನ್ನೇಗೌಡರಿಗೆ ಸೇರಿದ ಎರಡು ಜೋಡೆತ್ತುಗಳನ್ನು ಮನೆಯಿಂದ ಪಕ್ಕದಲ್ಲಿರುವ ಸ್ಥಳದಲ್ಲಿ ಕಟ್ಟಲಾಗಿತ್ತು. ಕೊಟ್ಟಿಗೆ ದುರಸ್ತಿ ಕಾಮಗಾರಿಗಳು ನಡೆಯುತ್ತಿದ್ದ ಹಿನ್ನೆಲೆ, ತಾತ್ಕಾಲಿಕವಾಗಿ ಹೊರಗೆ ಕಟ್ಟಿದ್ದ ಈ ಎತ್ತುಗಳನ್ನು ದುಷ್ಕರ್ಮಿಗಳು ತಡರಾತ್ರಿ ಕದ್ದೊಯ್ದಿದ್ದಾರೆ. ರಾತ್ರಿ ಸುಮಾರು 11 ಗಂಟೆಯಿಂದ ಬೆಳಗ್ಗೆ 5 ಗಂಟೆಯೊಳಗೆ ಈ ಕಳ್ಳತನ ನಡೆದಿರುವುದಾಗಿ ಅಂದಾಜಿಸಲಾಗಿದೆ.
ಕಳ್ಳರು ಎತ್ತುಗಳನ್ನು ಹಗ್ಗ ಸಮೇತವಾಗಿ ತೆಗೆದುಕೊಂಡು ಹೋಗಿದ್ದು, ಸುಮಾರು 15 ವರ್ಷಗಳಿಂದ ಸಾಕಿಕೊಂಡು ಬಂದ ಈ ಎತ್ತುಗಳು ರೈತನಿಗೆ ಬೇಸಾಯದ ಪ್ರಮುಖ ಆಧಾರವಾಗಿದ್ದವು, ಅವುಗಳನ್ನು ಕಳೆದುಕೊಂಡಿರುವುದರಿಂದ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಕುಟುಂಬದ ಸದಸ್ಯರು ಕಣ್ಣೀರು ಹಾಕುತ್ತಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರೆ. ಗ್ರಾಮದಲ್ಲಿ ದನಗಳ್ಳರ ಹಾವಳಿ ಹೆಚ್ಚುತ್ತಿರುವ ಬಗ್ಗೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದು, ಕೆಲವರು ಗೋಹತ್ಯೆಗಾಗಿ ದನ ಕಳ್ಳತನ ನಡೆಯುತ್ತಿದೆ ಎಂಬ ಆರೋಪವನ್ನು ಕೂಡ ಮಾಡಿದ್ದಾರೆ.
ಗ್ರಾಮದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿ ಕಳ್ಳರನ್ನು ಪತ್ತೆಹಚ್ಚಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ದನ ಕಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಶೀಘ್ರ ಬಂಧಿಸಿ ನ್ಯಾಯ ಒದಗಿಸಬೇಕೆಂದು ರೈತರು ಹಾಗೂ ಗ್ರಾಮಸ್ಥರು ಪೊಲೀಸರನ್ನು ಆಗ್ರಹಿಸಿದ್ದಾರೆ.