* ರೋಗಿ ದಾಖಲಾಗುವ ವರೆಗೂ ಆಸ್ಪತ್ರೆಯಲ್ಲಿ ಇದ್ದು ನೋಡಿಕೊಂಡ ಶ್ರೀಗಳು
* ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಲಿರುವ ಗವಿಸಿದ್ಧೇಶ್ವರ ಸ್ವಾಮೀಜಿ
* ಸೋಂಕಿತರಿಗೆ ಮತ್ತು ಅಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಬಗೆ ಬಗೆಯ ತಿಂಡಿ
ಸೋಮರಡ್ಡಿ ಅಳವಂಡಿ
ಕೊಪ್ಪಳ(ಮೇ.14): ಕೋವಿಡ್ ಸಂಕಷ್ಟದಲ್ಲಿ ನೆರವಾಗಲು ಗವಿಮಠದ ಆವರದಲ್ಲಿನ ವೃದ್ಧಾಶ್ರಮ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಿರುವ ಗವಿಸಿದ್ಧೇಶ್ವರ ಶ್ರೀಗಳು ಗುರುವಾರ ಅಲ್ಲಿ ಸ್ವತಃ ಕಸಗೂಡಿಸುವ ಮೂಲಕ ಉಳಿದವರಿಗೆ ಪ್ರೇರಣೆಯಾದರು.
ಬೆಳಗ್ಗೆ 6ಕ್ಕೆ ಕೋವಿಡ್ ಆಸ್ಪತ್ರೆಗೆ ತೆರಳಿದ್ದ ಶ್ರೀಗಳು ಅಲ್ಲಿಯ ಸ್ವಚ್ಛತೆ, ಶೌಚಾಲಯ ಸ್ವಚ್ಛತೆ ಸೇರಿದಂತೆ ಎಲ್ಲವನ್ನು ನೋಡಿಕೊಂಡರು. ಕಸಬರಿಗೆ ಹಿಡಿದು ಆಸ್ಪತ್ರೆ ಸ್ವಚ್ಛ ಮಾಡಿದರು. ಆಕ್ಸಿಜನ್ ಪೂರೈಕೆಯಾಗುವ ಪೈಪ್‌ಲೈನ್ ಚೆಕ್ ಮಾಡಿದರು. ಕಸದ ತೊಟ್ಟಿಇಡುವುದರಿಂದ ಹಿಡಿದು, ಬೆಡ್‌ಗಳ ಮೇಲೆ ಹಾಕುವ ಬೆಡ್‌ಸೀಟ್‌ಗಳು ಹೇಗಿರಬೇಕು, ಅವುಗಳ ಸ್ವಚ್ಛತೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಅಲ್ಲಿನ ಸಿಬ್ಬಂದಿಗೆ ಮಾರ್ಗದರ್ಶನ ಮಾಡಿದರು.
ಬಗೆ ಬಗೆ ತಿಂಡಿ:
ದಾಖಲಾಗುವ ಸೋಂಕಿತರಿಗೆ ಮತ್ತು ಅಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಬಗೆ ಬಗೆ ತಿಂಡಿಯ ಮೆನು ಸಿದ್ಧವಾಗಿದೆ. ಇಡ್ಲಿಯಿಂದ ಪ್ರಾರಂಭವಾಗುವ ಉಪಾಹಾರ ವಾರಪೂರ್ತಿ ಬಗೆ ಬಗೆಯಾಗಿ ಇರಲಿದೆ. ಈಗಾಗಲೇ ಇದೆಲ್ಲವನ್ನು ಸಿದ್ಧ ಮಾಡಿರುವ ಶ್ರೀಗಳು ಆಯಾ ದಿನವೇ ಅದನ್ನು ಹೇಳುತ್ತಾರಂತೆ. ಕಷಾಯ, ಬಿಸಿನೀರು, ಚಹಾ, ಕಾಫಿ, ಕಾಲ ಕಾಲಕ್ಕೆ ಪೂರೈಕೆಯಾಗಲಿವೆ. ಇದಕ್ಕಾಗಿ ಪ್ರತ್ಯೇಕ ಸಿಬ್ಬಂದಿ ನಿಯೋಜನೆಯಾಗಿದೆ.
ಕೊಪ್ಪಳ ಗವಿಮಠದಿಂದ ಸುಸಜ್ಜಿತ ಕೋವಿಡ್ ಆಸ್ಪತ್ರೆ ಶುರು
ಇಲ್ಲಿ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯ ನಡೆಯಲಿದೆ. ಇದಕ್ಕಾಗಿ ಮೈಕ್, ಪ್ರತಿ ವಾರ್ಡ್‌ನಲ್ಲಿಯೂ ಧ್ವನಿವರ್ಧಕ ಅಳವಡಿಸಲಾಗಿದೆ. ವೈದ್ಯರು ನೀಡುವ ಸಲಹೆ, ಸಂಗೀತ ಮೊದಲಾದ ಧನಾತ್ಮಕ ಚಿಂತನೆ ಬಿತ್ತುವ ತಯಾರಿ ನಡೆದಿದೆ. ಆಗಾಗ ಗವಿಸಿದ್ಧೇಶ್ವರ ಶ್ರೀಗಳೇ ಆತ್ಮಸ್ಥೈರ್ಯ ತುಂಬಲಿದ್ದಾರೆ.
ದಾಖಲಾತಿ ಹೀಗೆ
ಶ್ರೀ ಗವಿಸಿದ್ಧೇಶ್ವರ ಕೋವಿಡ್ ಆಸ್ಪತ್ರೆಯಲ್ಲಿ ನೇರವಾಗಿ ಹೋಗಿ ದಾಖಲಾಗುವುದಕ್ಕೆ ಅವಕಾಶ ಇಲ್ಲ. ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಅಲ್ಲಿ ಅಗತ್ಯವೆನಿಸಿದರೆ ಆಕ್ಸಿಜನ್ ಬೆಡ್‌ಗಾಗಿ ಶಿಫಾರಸು ಪತ್ರದೊಂದಿಗೆ ಬರಬೇಕು. ಜಿಲ್ಲಾಸ್ಪತ್ರೆಯಿಂದ ಶಿಫಾರಸುಗೊಂಡ ರೋಗಿಗಳಿಗೆ ಮಾತ್ರ ಇಲ್ಲಿ ಪ್ರವೇಶ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona