ಇಂದು ಕೊಪ್ಪಳ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ಚಾಲನೆ| ತೇರೆಳೆಯುವ ಅಂತಾರಾಷ್ಟ್ರೀಯ ಕ್ರೀಡಾಪಟು ಮಾಲತಿ ಹೊಳ್ಳ| ಮಹಾರಥೋತ್ಸವಕ್ಕೆ ಆಗಮಿಸುವ ಲಕ್ಷ ಲಕ್ಷ ಭಕ್ತರಿಗೂ ಮಹಾದಾಸೋಹದಲ್ಲಿ ಪ್ರಸಾದದ ವ್ಯವಸ್ಥೆ| ವಾಸು ದಿಕ್ಷೀತ್ ಹಾಗೂ ತಂಡದವರಿಂದ ಗಾನಸುನಾದ ಸಂಗೀತ ಕಾರ್ಯಕ್ರಮ|
ಸೋಮರಡ್ಡಿ ಅಳವಂಡಿ
ಕೊಪ್ಪಳ(ಜ.12): ದಕ್ಷಿಣ ಭಾರತದ ಕುಂಭಮೇಳ ಖ್ಯಾತಿಯ ನಗರದ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು ನಗರ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು ರಾಜ್ಯದ ವಿವಿಧೆಡೆಯಿಂದ ಭಕ್ತರು ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮಹಾ ರಥೋತ್ಸವ ಜ. 12ರಂದು ಸಂಜೆ 5.45ಕ್ಕೆ ಜರುಗಲಿದ್ದು ಮಠದ ಆವರಣದಲ್ಲಿ ಸ್ವರ್ಗವೇ ಧರೆಗಿಳಿಯುವಂತೆ ಸಿಂಗಾರಕೊಂಡಿದೆ. ಮಹಾರಥೋತ್ಸವನ್ನು ಸಿಂಗರಿಸಿದ್ದು ಕಂಗೊಳಿಸುತ್ತಿದೆ. ಮಹಾರಥೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದು ತೇರು ಎಳೆಯುವ ಮೈದಾನವನ್ನು ಶುಚಿಗೊಳಿಸಿ ಕನಿಷ್ಠ ಧೂಳು ಆವರಿಸದಂತೆ ನೋಡಿಕೊಳ್ಳಲಾಗಿದೆ. ನೂತನವಾಗಿ ನಿರ್ಮಾಣಗೊಂಡ ಸಿಮೆಂಟ್ ರಸ್ತೆಯನ್ನು ಸಂಪೂರ್ಣ ತೊಳೆಯಲಾಗಿದೆ.
ಮಾಳತಿ ಹೊಳ್ಳ ಚಾಲನೆ:
ಜಾತ್ರೆ ಎಂದರೆ ಕೇವಲ ಸ್ವಾಮೀಜಿಗಳಿಂದಲೇ ಅಥವಾ ಜನಪ್ರತಿನಿಧಿಗಳಿಂದ ರಥೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಆದರೆ, ಗವಿಸಿದ್ಧೇಶ್ವರ ಶ್ರೀಗಳು ಇದಕ್ಕೊಂದು ಹೊಸ ಭಾಷ್ಯ ಬರೆದಿದ್ದು ಸಾಮಾನ್ಯರಿಂದ ಹಿಡಿದು ಸಾಧಕರ ಕೈಗೆ ರಥಕ್ಕೆ ಚಾಲನೆ ನೀಡುವ ಬಾವುಟ ನೀಡುವ ಸಂಪ್ರದಾಯ ಶುರು ಮಾಡಿದ್ದಾರೆ. ಹೀಗಾಗಿ, ಈ ಬಾರಿ ಏಕಲವ್ಯ, ಅರ್ಜುನ, ಪದ್ಮಶ್ರೀ ಪುರಸ್ಕೃತ ಅಂತಾರಾಷ್ಟ್ರೀಯ ಕ್ರೀಡಾಪಟು ಡಾ. ಮಾಲತಿ ಹೊಳ್ಳ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಈ ಮೂಲಕ ಗವಿಮಠ ಜಾತ್ರೆಯ ತೇರಿಗೆ ವಿಕಲಚೇತನರು ಮತ್ತು ಕ್ರೀಡಾಪಟುವೂ ಚಾಲನೆ ನೀಡಿದಂತೆ ಆಗುತ್ತದೆ. ಕೈಲಾಸ ಮಂಟಪದಲ್ಲಿ ಸಂಜೆ 6 ಗಂಟೆಗೆ ಅನುಭಾವಿಗಳ ಅಮೃತ ಚಿಂತನಾಗೋಷ್ಠಿ ನಡೆಯಲಿದೆ. ಚಿತ್ತರಗಿಯ ಗುರುಮಹಾಂತ ಶ್ರೀ, ಬುಕ್ಕಸಾಗರ ಕರಿಸಿದ್ಧೇಶ್ವರಮಠದ ಕರಿಸಿದ್ಧೇಶ್ವರ ಶ್ರೀ, ಹೊಸಳ್ಳಿಯ ಬೂದೀಶ್ವರ ಶ್ರೀ, ಮಹಾಲಿಂಗಪುರದ ಸಹಜಾನಂದ ಶ್ರೀ ಸಾನ್ನಿಧ್ಯ ವಹಿಸುವರು.
ಭಕ್ತರಿಗೆ ಪ್ರಸಾದ:
ಮಹಾರಥೋತ್ಸವಕ್ಕೆ ಆಗಮಿಸುವ ಲಕ್ಷ ಲಕ್ಷ ಭಕ್ತರಿಗೂ ಮಹಾದಾಸೋಹದಲ್ಲಿ ಪ್ರಸಾದ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಭಾರಿ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಭಕ್ತರು ಸಿಹಿತಿನಿಸು ಹಾಗೂ ಇತರ ಪದಾರ್ಥಗಳನ್ನು ಮಠದಲ್ಲಿ ಸಂಗ್ರಹಿಸಿದ್ದಾರೆ. ಇದಲ್ಲದೆ ಅಗತ್ಯ ಅಡುಗೆಯನ್ನು ನೂರಾರು ಬಾಣಸಿಗರು ಸಿದ್ಧಪಡಿಸಲು ಅಣಿಯಾಗಿದ್ದಾರೆ. ಜಾತ್ರೆಗೆ ಬರುವ ಲಕ್ಷ ಲಕ್ಷ ಭಕ್ತರಿಗೆ ಮಹಾಪ್ರಸಾದ ನೀಡಲಾಗುತ್ತದೆ. ಇದಕ್ಕಾಗಿ 5 ಎಕರೆ ವಿಸ್ತಾರ ಪ್ರದೇಶದಲ್ಲಿ ಮಹಾದಾಸೋಹಕ್ಕಾಗಿ ವಿಶೇಷ ಪೆಂಡಾಲ್ ಹಾಕಲಾಗಿದೆ. ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ. ಇದೆಲ್ಲಕ್ಕಿಂತ ಮಿಗಿಲಾಗಿ ವಿಕಲಚೇತನರ ಅನುಕೂಲಕ್ಕಾಗಿ ಅವರಿಗೆ ಪ್ರತ್ಯೇಕ ದಾರಿ ಮಾಡಿದ್ದು ಅವರು ತಮ್ಮ ತ್ರಿಚಕ್ರ ವಾಹನ ತೆಗೆದುಕೊಂಡೆ ಮಹಾದಾಸೋಹಕ್ಕೆ ಹೋಗಬಹುದಾಗಿದೆ. ವಯೋವೃದ್ಧರಿಗೂ ಪ್ರತ್ಯೇಕ ಸರದಿಯ ವ್ಯವಸ್ಥೆ ಇರುತ್ತದೆ.
ಬಿಗಿಭದ್ರತೆ:
ಮಹಾದಾಸೋಹಕ್ಕೆ ವಿಶೇಷ ಬಿಗಿಭದ್ರತೆ ಒದಗಿಸಲಾಗಿದೆ. ಅಲ್ಲಿಯೇ ಆಹಾರ ತಪಾಸಣೆಗೆ ಪ್ರತ್ಯೇಕ ಕೌಂಟರ್ ಆರೋಗ್ಯ ಇಲಾಖೆ ಸ್ಥಾಪಿಸಿದೆ. ತಯಾರಾಗುವ ಪ್ರತಿಯೊಂದು ಆಹಾರ ಪರಿಶೀಲನೆ ಮಾಡಲಾಗುತ್ತದೆ. ಇದೆಲ್ಲಕ್ಕಿಂತ ಮಿಗಿಲಾಗಿ ಇಡೀ ದಾಸೋಹ ಕ್ಯಾಮೆರಾ ಕಣ್ಗಾವಲಲ್ಲಿ ನಡೆಯುತ್ತದೆ. ಇದಕ್ಕಾಗಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.
ಜಾತ್ರೆಯಲ್ಲಿಂದು:
ಗಾನಸುನಾದ ಸಂಗೀತ ಕಾರ್ಯಕ್ರಮ ವಾಸು ದಿಕ್ಷೀತ್ ಹಾಗೂ ತಂಡದವರಿಂದ ನಡೆಯಲಿದೆ. ಪ್ರಕಾಶ ಹಾಗೂ ನೇತ್ರಾವತಿ ಹೆಮ್ಮಾಡಿ ಅವರಿಂದ ಜಾದು ಪ್ರದರ್ಶನ, ವಾದ್ಯವೈಭವ ಸಂಗೀತ ಕಾರ್ಯಕ್ರಮ ಸುಕನ್ಯಾರಾಮಗೋಪಾಲ ಹಾಗೂ ತಂಡದವರಿಂದ ನಡೆಯಲಿದೆ. ಮೈಸೂರಿನ ಕುಮಾರಿ ಖುಷಿಗೌಡ ಅವರಿಂದ ಯೋಗ ಪ್ರದರ್ಶನ ಇರುತ್ತದೆ.
ಪೊಲೀಸ್ ಬಿಗಿ ಭದ್ರತೆ
ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ಲಕ್ಷ ಲಕ್ಷ ಭಕ್ತರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ವಿಶೇಷ ಪಡೆಗಳು ಹಾಗೂ ಗೃಹರಕ್ಷಕ ದಳ ಸೇರಿದಂತೆ 2 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಈಗಾಗಲೇ ಕೊಪ್ಪಳದಲ್ಲಿ ಮುಕ್ಕಾಂ ಹೂಡಿದೆ. ಜೇಬುಗಳ್ಳರ ಮೇಲೆ ವಿಶೇಷ ನಿಗಾ ಇಡಲಾಗಿದ್ದು, ಜಾತ್ರೆಯ ಅವರಣದ ತುಂಬ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಗವಿಮಠದ ಆವರಣ ವಿದ್ಯುತ್ ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿದೆ. ಇದಕ್ಕಾಗಿ ಭಾರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಝಗಮಗಿಸುವ ದೀಪಗಳು ಸ್ವರ್ಗವೇ ಧರೆಗಿಳಿದಂತೆ ಭಾಷವಾಗುತ್ತಿದೆ.