ಬೆಲೆ ಏರಿಕೆ ನಡುವೆ ಗ್ಯಾಸ್ ಸರಬರಾಜು ಬಂದ್, ನಾಳೆಯಿಂದ ಎಲ್ಲಾ ಹೊಟೆಲ್ ಬಂದ್ ಆತಂಕ

Published : Mar 09, 2026, 09:29 PM IST
gas cylinder supply

ಸಾರಾಂಶ

ಬೆಲೆ ಏರಿಕೆ ನಡುವೆ ಗ್ಯಾಸ್ ಸರಬರಾಜು ಬಂದ್, ನಾಳೆಯಿಂದ ಎಲ್ಲಾ ಹೊಟೆಲ್ ಬಂದ್ ಆತಂಕ, ಏಕಾಏಕಿ ಗ್ಯಾಸ್ ಸರಬಾರದು ನಿಂತಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ. ಅನಿವಾರ್ಯವಾಗಿ ಬಂದ್ ಮಾಡಬೇಕಾದ ಪರಿಸ್ಥಿತಿ ಎಂದು ಹೊಟೆಲ್ ಮಾಲೀಕರ ಸಂಘ ಎಚ್ಚಿರಿಸಿದೆ.

ಬೆಂಗಳೂರು (ಮಾ.09) ಹೊಟೆಲ್ ಮಾಲೀಕರ ಸಂಘದ ಎಚ್ಚರಿಕೆಗೆ ಜನತೆ ಆತಂಕಗೊಂಡಿದ್ದಾರೆ. ಮಧ್ಯಪ್ರಾಚ್ಯಗಳ ಯುದ್ಧದಿಂದ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದರ ಬೆನ್ನಲ್ಲೇ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ದಿಢೀರ್ ಏರಿಕೆಯಾಗಿದ್ದು ಮಾತ್ರವಲ್ಲ, ಪೂರೈಕೆ ಸ್ಥಗಿತಗೊಂಡಿದೆ. ಇತ್ತ ಹೊಟೆಲ್ ಮಾಲೀಕರು ಕಂಗಾಲಾಗಿದ್ದರೆ. ಗ್ಯಾಸ್ ಸರಬರಾಜು ಬಂದ್ ಆಗಿರುವ ಕಾರಣ ಹೊಟೆಲ್‌ನಲ್ಲಿ ಯಾವುದೇ ಅಡುಗೆ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅನಿವಾರ್ಯವಾಗಿ ನಾಳೆಯಿಂದ (ಮಾ.10) ಹೊಟೆಲ್ ಬಂದ್ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಹೊಟೆಲ್ ಮಾಲೀಕರ ಸಂಘ ಎಚ್ಚರಿಕೆ ನೀಡಿದೆ.

ಸಿಲಿಂಡರ್ ಪೂರೈಕೆ ಆಗದಿದ್ದರೆ ಹೊಟೆಲ್ ಬಂದ್

ಹೋಟೆಲ್ ಅಸೋಸಿಯೇಷನ್ ನ ಜಂಟಿ ಕಾರ್ಯದರ್ಶಿ ಕೃಷ್ಣರಾಜ್ ಈ ಕುರಿತು ಮಹತ್ವದ ಎಚ್ಚರಿಕೆ ನೀಡಿದ್ದಾರೆ. ಇದು ನಮ್ಮ ನಿರ್ಧಾರ ಅಲ್ಲ ಸರ್ಕಾರ ನಮ್ಮ ಮೇಲೆ ಹಾಕುತ್ತಿರುವ ಒತ್ತಡ ಎಂದಿದ್ದಾರೆ. ಮೊದಲೇ ನಮಗೆ ಮುನ್ಸೂಚನೆ ನೀಡಿದ್ರೆ ಈ ರೀತಿಯ ಪರಿಸ್ಥಿತಿ ಎದುರಿಸುವ ಪ್ರಮೇಯವೇ ಇರುತ್ತಿರಲಿಲ್ಲ. ನಾವು ಬಂದ್ ಮಾಡೋದಕ್ಕೆ ನಿರ್ಧಾರ ತೆಗೆದುಕೊಂಡಿಲ್ಲ. ನಮಗೆ ಸಿಲಿಂಡರ್ ಪೂರೈಕೆಯಾಗುತ್ತಿಲ್ಲ. ನಾಳೆ ಮಧ್ಯಾಹ್ನಕ್ಕೆ ಆಗುವಷ್ಟು ಸಿಲಿಂಡರ್ ಮಾತ್ರ ನಮ್ಮ ಹತ್ರ ಇದೆ. ಅಷ್ಟರೊಳಗೆ ಸರ್ಕಾರ ಪೂರೈಕೆ ಮಾಡದಿದ್ರೆ ಎಲ್ಲಾ ಹೋಟೆಲ್ ಗಳು ಬಂದ್ ಮಾಡಲಾಗುತ್ತೆ ಎಂದು ಕೃಷ್ಣರಾಜ್ ಹೇಳಿದ್ದಾರೆ. 15 ದಿನಗಳ ಮೊದಲೇ ಒಂದು ಸೂಚನೆ ನೀಡಬೇಕಿತ್ತು . ದಿಢೀರ್ ಪೂರೈಕೆ ಸ್ಥಗಿತಗೊಂಡರೆ ನಾವು ಬಂದ್ ಮಾಡದೇ ಬೇರೆ ದಾರಿ ಇಲ್ಲ ಎಂದಿದ್ದಾರೆ. ಹೊಟೆಲ್ ಮಾಲೀಕರ ಸಂಘ ಯಾವುದೇ ಬಂದ್‌ಗೆ ಕರೆ ಕೊಟ್ಟಿಲ್ಲ. ಆದರೆ ಆಹಾರ, ತಿನಿಸುಗಳು ಇಲ್ಲದಿದ್ದರೆ ಬಂದ್ ಮಾಡಲೇಬೇಕು ಎಂದಿದ್ದಾರೆ. ಕೂಡಲೇ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಕೃಷ್ಣರಾಜ್ ಆಗ್ರಹಿಸಿದ್ದಾರೆ.

ಕೇಂದ್ರ ಸರ್ಕಾರ 70 ದಿನ ಗ್ಯಾಸ್ ಇದೆ ಅಂತಾ ಹೇಳಿದ್ದರು. ಆದರೆ ಇ ಇಂದಿನಿಂದ ಏಕಾಏಕಿ ಗ್ಯಾಸ್ ಸಿಲಿಂಡರ್ ಸರಬರಾಜು ಬಂದ್ ಆಗಿದೆ. ಹೋಟೆಲ್ ಗಳನ್ನು ಅವಲಂಬಿಸಿ ಅನೇಕರು ಇದ್ದಾರೆ. ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಸಚಿವರ ಗಮನಕ್ಕೆ ತರುವ ಕೆಲಸ ಮಾಡಿದ್ದೇವೆ ಎಂದು ಹೊಟೆಲ್ ಮಾಲೀಕರ ಸಂಘ ಹೇಳಿದೆ. ಇಂದು ಬೆಳಗ್ಗೆಯಿಂದಲೇ ಸರಬರಾಜು ಬಂದ್ ಆಗಿದೆ. ಹೋಟೆಲ್ ಗಳಲ್ಲಿ ದಿನನಿತ್ಯಕ್ಕೆ ಬೇಕಾಗುವ ಗ್ಯಾಸ್ ಖರೀದಿ ಮಾಡಲಾಗುತ್ತೆ. ಈಗ ಸ್ಟಾಕ್ ಕೂಡ ಇಲ್ಲಾ. ಕೆಲ ಹೋಟೆಲ್ ಗಳಲ್ಲಿ ನಾಳೆ ಮಧ್ಯಾಹ್ನದ ವರೆಗೆ ಗ್ಯಾಸ್ ಸ್ಟಾಕ್ ಇದೆ. ಬೆಂಗಳೂರು ಒಂದರಲ್ಲಿ ಮಾತ್ರ ಅಲ್ಲಾ ತಮಿಳುನಾಡಿನಲ್ಲೂ ಕೂಡ ಇದೇ ಸಮಸ್ಯೆ. ರಾಜ್ಯ ಸರ್ಕಾರದ ಬಳಿ ಕೇಳಿದ್ರೆ ಕೇಂದ್ರ ಸರ್ಕಾರ ಅಂತಾ ಹೇಳ್ತಾರೆ. ಅದ್ರೆ ಗ್ಯಾಸ್ ಸಿಲಿಂಡರ್ ನಲ್ಲಿ ರಾಜ್ಯ ಸರ್ಕಾರದ್ದು ಪಾಲಿದೆ. ರಾಜ್ಯ ಸರ್ಕಾರ ಇದಕ್ಕೆ ಒಂದು ಪರಿಹಾರ ಕೊಡಬೇಕು ಎಂದು ಸಂಘ ಆಗ್ರಹಿಸಿದೆ.

ಹೋಟೆಲ್ ಕ್ಲೋಸ್ ಆದ್ರೆ ಎಲ್ಲರಿಗೂ ಸಮಸ್ಯೆಯಾಗಲಿದೆ. ಹೋಟೆಲ್ ಮಾಲೀಕರಿಗೆ ಸಮಸ್ಯೆ ಗ್ರಾಹಕರಿಗೆ ಸಮಸ್ಯೆಯಾಗಲಿದೆ. ರೈತರಿಂದ ತರಕಾರಿ ಖರೀದಿ ಮಾಡುತ್ತೇವೆ. ಏಕಾಏಕಿ ಗ್ಯಾಸ್ ಸಿಲಿಂಡರ್ ನಿಲ್ಲಿಸಿದ್ರೆ, ಉದ್ಯಮ ಮುಳುಗಿಹೋಗುತ್ತೆ ಎಂದಿದ್ದಾರೆ.

PREV
Read more Articles on
click me!

Recommended Stories

ಮಸೀದಿ ಮುಂದೆ ಪಟಾಕಿ ಹೊಡೆದ್ರೆ, ಮೆರವಣಿಗೆ ಮಾಡಿದ್ರೆ, ಗ್ರಹಚಾರ ಬಿಡಿಸ್ತೀನಿ!: ಟಿ.ನರಸೀಪುರ ಇನ್ಸ್‌ಪೆಕ್ಟರ್
Yettinahole Water Project: 11 ವರ್ಷ ಬಳಿಕ ಎತ್ತಿನಹೊಳೆ ಯೋಜನೆಗೆ ಟ್ರಯಲ್ ರನ್! ಅಕ್ಟೋಬರ್‌ನಲ್ಲಿ ತುಮಕೂರಿಗೆ ನೀರು