ನಮ್ಮ ಮೆಟ್ರೋದಲ್ಲಿ ಗನ್ ತೋರಿಸಿ ರೀಲ್ಸ್ ಮಾಡಿದ ಯುವಕನಿಗೆ ದಂಡ ಹಾಕಿದ್ದೆಷ್ಟು? ಪೊಲೀಸರು ಮಾಡಿದ್ದೇನು?

Published : Mar 09, 2026, 08:41 PM IST
Namma Metro Toy Gun Frank

ಸಾರಾಂಶ

ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ರೀಲ್ಸ್ ಮಾಡಲು ಯುವಕನೊಬ್ಬ ಆಟಿಕೆ ಗನ್ ಬಳಸಿ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದ್ದನು. ಸಹ ಪ್ರಯಾಣಿಕರ ದೂರಿನ ಮೇರೆಗೆ ಮೆಟ್ರೋ ಸಿಬ್ಬಂದಿ ಹಾಗೂ ಪೊಲೀಸರು ಆತನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದರು. ಯುವಕನಿಗೆ ದಂಡ ವಿಧಿಸಿದ್ದೆಷ್ಟು? ಇಲ್ಲಿದೆ ವಿವರ..

ಬೆಂಗಳೂರು (ಮಾ.09): ಸಿಲಿಕಾನ್ ಸಿಟಿ ಬೆಂಗಳೂರಿನ ಜೀವನಾಡಿ ಆಗಿರುವ ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಯುವಕನೊಬ್ಬ ರೀಲ್ಸ್ ಮಾಡಿ ಜನರನ್ನು ಭಯಪಡಿಸುವ ಹುಚ್ಚಿಗೆ ಬಿದ್ದು ಆಟಿಕೆ ಗನ್ ಇಟ್ಟುಕೊಂಡು ಹೋಗಿದ್ದನು. ಆದರೆ, ಈ ಗನ್ ನೋಡಿ ಜನರು ಬುದ್ಧಿ ಹೇಳಲು ಮುಂದಾಗಿದ್ದು, ಆತ ಇದು ಪಟಾಕಿ ಹೊಡೆಯುವ ದೀಪಾವಳಿ ಗನ್ ಎಂದು ಹೇಳಿದ್ದಾನೆ. ಈತನ ತಮಾಷೆಗೆ ಜನರು ಸಾಥ್ ಕೊಡದೇ ಹಲ್ಲೆ ಮಾಡಲು ಮುಂದಾಗಿದ್ದು, ಮುಂದಿನ ಠಾಣೆಯಲ್ಲಿ ಆತನನ್ನು ಮೆಟ್ರೋ ಸಿಬ್ಬಂದಿ ವಶಕ್ಕೆ ಪಡೆದು, ಪೊಲೀಸರಿಗೊಪ್ಪಿಸಿದ್ದರು. ನಂತರ ಪೊಲೀಸರು ಎಚ್ಚರಿಕೆ ಕೊಟ್ಟು ಮೆಟ್ರೋ ನಿಯಮಾವಳಿಯಂತೆ ದಂಡವನ್ನು ಕಟ್ಟಿದ್ದಾನೆ. ಹಾಗಾದರೆ, ದಂಡ ಎಷ್ಟು ಎಂಬ ವಿವರ ಇಲ್ಲಿದೆ ನೋಡಿ.

ಇಂದಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಯುವಜನತೆ ಎಂತಹ ಸಾಹಸಕ್ಕೂ ಕೈಹಾಕುತ್ತಿದ್ದಾರೆ. ಕೆಲವೊಮ್ಮೆ ಈ ಸಾಹಸಗಳು ತಮಾಷೆಯಾಗಿದ್ದರೆ, ಇನ್ನು ಕೆಲವೊಮ್ಮೆ ಸಾರ್ವಜನಿಕರಲ್ಲಿ ಆತಂಕ ಮೂಡಿಸುತ್ತವೆ. ಇಂತಹದ್ದೇ ಒಂದು ಘಟನೆ ಬೆಂಗಳೂರಿನ 'ನಮ್ಮ ಮೆಟ್ರೋ'ದಲ್ಲಿ ನಡೆದಿದ್ದು, ಆಟಿಕೆ ಗನ್ ಹಿಡಿದು ಪ್ರಯಾಣಿಕರನ್ನು ಬೆದರಿಸಲು ಅಥವಾ ಪ್ರಾಂಕ್ ಮಾಡಲು ಹೋದ ಯುವಕ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಪಾಂಡಿಚೇರಿ ಮೂಲದ ಅರ್ಜುನ್ ಎಂಬ ಯುವಕ ಈ ಕೃತ್ಯ ಎಸಗಿದವನು.

ಜೇಬಿನಲ್ಲಿ ಗನ್ ನೋಡಿ ಗಾಬರಿಗೊಂದ ಜನ

ಫೆಬ್ರವರಿ 6ರಂದು ಅರ್ಜುನ್ ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದಿಂದ ನಮ್ಮ ಮೆಟ್ರೋ ಹತ್ತಿದ್ದನು. ಈ ವೇಳೆ ಆತ ತನ್ನ ಜೇಬಿನಲ್ಲಿ ಒಂದು ಗನ್ ಮಾದರಿಯ ವಸ್ತುವನ್ನು ಇಟ್ಟುಕೊಂಡಿದ್ದನು. ಇದು ನಿಜವಾದ ಗನ್ ಎಂದು ಭಾವಿಸಿದ ಸಹ ಪ್ರಯಾಣಿಕರು ಕೆಲಕಾಲ ಬೆಚ್ಚಿಬಿದ್ದಿದ್ದರು. ಗನ್ ಹಿಡಿದುಕೊಂಡು ಪ್ರಾಂಕ್ ವಿಡಿಯೋ ಮಾಡುವ ಉದ್ದೇಶದಿಂದ ಅರ್ಜುನ್ ಈ ರೀತಿ ಮಾಡಿದ್ದ ಎನ್ನಲಾಗಿದೆ. ನಮ್ಮ ಮೆಟ್ರೋದಲ್ಲಿ ಬಿಗಿ ಭದ್ರತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಯುವಕನೊಬ್ಬನ ಜೇಬಿನಲ್ಲಿ ಗನ್ ಕಂಡಾಗ ಪ್ರಯಾಣಿಕರು ಸಹಜವಾಗಿಯೇ ಗಾಬರಿಗೊಂಡಿದ್ದಾರೆ. ಗನ್ ಕಂಡ ಕೆಲವು ಪ್ರಯಾಣಿಕರು ಆತನ ವರ್ತನೆಯನ್ನು ಕಂಡು ಕೋಪಗೊಂಡು ತಕ್ಷಣವೇ ಮೆಟ್ರೋ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜನದಟ್ಟಣೆ ಇರುವ ಮೆಟ್ರೋದಲ್ಲಿ ಇಂತಹ ಕೃತ್ಯಗಳು ಯಾವುದೇ ಕ್ಷಣದಲ್ಲಿ ಭೀತಿ (Panic) ಸೃಷ್ಟಿಸಬಹುದು ಎಂಬುದು ಪ್ರಯಾಣಿಕರ ದೂರಾಗಿತ್ತು.

ಪೊಲೀಸ್ ವಿಚಾರಣೆ ಮತ್ತು ದಂಡ:

ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಬಿಎಂಆರ್‌ಸಿಎಲ್ (BMRCL) ಅಧಿಕಾರಿಗಳು ಅರ್ಜುನ್‌ನನ್ನು ವಶಕ್ಕೆ ಪಡೆದರು. ಆತನ ಬಳಿ ಇದ್ದ ವಸ್ತುವನ್ನು ಪರಿಶೀಲಿಸಿದಾಗ ಅದು ಕೇವಲ ಪ್ಲಾಸ್ಟಿಕ್‌ನ ಆಟಿಕೆ ಗನ್ ಎಂಬುದು ದೃಢಪಟ್ಟಿದೆ. ಪೊಲೀಸರು ಆತನನ್ನು ವಿಚಾರಣೆ ನಡೆಸಿದಾಗ, 'ಕೇವಲ ಪ್ರಾಂಕ್ ವಿಡಿಯೋ ಮತ್ತು ಮೋಜಿನ ಉದ್ದೇಶಕ್ಕಾಗಿ ಹೀಗೆ ಮಾಡಿದೆ' ಎಂದು ಆತ ಒಪ್ಪಿಕೊಂಡಿದ್ದಾನೆ. ಅರ್ಜುನ್‌ನಿಂದ ಲಿಖಿತ ಕ್ಷಮಾಪಣಾ ಪತ್ರವನ್ನು ಬರೆಸಿಕೊಂಡ ಪೊಲೀಸರು, ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ವಿವೇಚನಾರಹಿತ ವರ್ತನೆ ತೋರದಂತೆ ಕಠಿಣ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಇತ್ತ ಮೆಟ್ರೋ ನಿಯಮಗಳನ್ನು ಉಲ್ಲಂಘಿಸಿ ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪದ ಮೇಲೆ ಬಿಎಂಆರ್‌ಸಿಎಲ್ ಆತನಿಗೆ 400 ರೂಪಾಯಿ ದಂಡ ವಿಧಿಸಿದೆ.

ಯುವಜನತೆಗೆ ಎಚ್ಚರಿಕೆ:

ಇತ್ತೀಚೆಗೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಂಕ್ ಹೆಸರಿನಲ್ಲಿ ಜನರಿಗೆ ಕಿರಿಕಿರಿ ಉಂಟುಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ವಿಡಿಯೋ ವೈರಲ್ ಆಗಬೇಕು ಎಂಬ ಹಪಾಹಪಿಯಿಂದ ಮಾಡುವ ಇಂತಹ ಕೆಲಸಗಳು ಕೆಲವೊಮ್ಮೆ ದೊಡ್ಡ ಅನಾಹುತಕ್ಕೆ ನಾಂದಿ ಹಾಡಬಹುದು. ಮೆಟ್ರೋದಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಇಂತಹ ಚೇಷ್ಟೆಗಳನ್ನು ಮಾಡುವುದು ಕಾನೂನುಬಾಹಿರವಾಗಿದ್ದು, ಜೈಲು ಶಿಕ್ಷೆಗೂ ಗುರಿಯಾಗಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

PREV
Read more Articles on
click me!

Recommended Stories

ದಾವಣಗೆರೆ ಟಿಕೆಟ್ ಕೇಳಲು ಹೋಗಿ, ಚಾಮರಾಜಪೇಟೆ ಕ್ಷೇತ್ರವನ್ನೇ ಬಿಟ್ಟುಕೊಡುವುದಾಗಿ ಹೇಳಿದ ಸಚಿವ ಜಮೀರ್ ಅಹಮದ್!
ಇರಾನ್-ಇಸ್ರೇಲ್ ಯುದ್ಧದ ಎಫೆಕ್ಟ್: ಕಾರವಾರಕ್ಕೆ ಬರ್ತಿದ್ದ ಡಾಂಬರ್ ಕೂಡ ಬಂದ್; ಸರ್ಕಾರಕ್ಕೆ ಕೋಟಿ ಕೋಟಿ ನಷ್ಟ!