
ಗಂಗಾವತಿ (ಆ.09): ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ವೇಳೆ ಒಟ್ಟು 24,988 ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಕ್ಷೇತ್ರದಲ್ಲಿ ಒಟ್ಟು 2,10,373 ಮತದಾರರಿದ್ದು, ಜೂನ್ 30, 2023ರಿಂದ ಆಗಸ್ಟ್ 9, 2026ರವರೆಗೆ ನಡೆದ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ವಿವಿಧ ಕಾರಣಗಳಿಂದ ಹಲವು ಮತದಾರರ ಹೆಸರುಗಳು ಪಟ್ಟಿಯಿಂದ ಹೊರಬಿದ್ದಿವೆ. ಗಂಗಾವತಿ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟು 235 ಮತಗಟ್ಟೆಗಳಿದ್ದು, ಬಿಎಲ್‌ಒಗಳು ಮನೆ ಮನೆಗೆ ತೆರಳಿ 2,10,373 ಮತದಾರರಿಗೆ ಎನ್ಯೂಮರೇಷನ್ ಫಾರಂಗಳನ್ನು ವಿತರಿಸಿ ಮಾಹಿತಿ ಸಂಗ್ರಹಿಸಿದ್ದಾರೆ.
24,988 ಮತದಾರರ ಹೆಸರು ಖೋತಾ
ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಒಟ್ಟು 24,988 ಮತದಾರರ ಹೆಸರುಗಳು ಡಿಲೀಟ್ ಆಗಿವೆ. ಇದರಲ್ಲಿ 5,346 ಮತದಾರರು ಮನೆಗಳಲ್ಲಿ ಲಭ್ಯವಿರದ ಕಾರಣ ಗೈರು ಎಂದು ಗುರುತಿಸಲಾಗಿದೆ. 11,028 ಮತದಾರರು ಬೇರೆ ಸ್ಥಳಗಳಿಗೆ ಸ್ಥಳಾಂತರಗೊಂಡಿರುವುದು ಪತ್ತೆಯಾಗಿದೆ. ಇದೇ ವೇಳೆ 4,122 ಮತದಾರರು ಮೃತಪಟ್ಟಿರುವುದು ದೃಢಪಟ್ಟಿದ್ದು, 4,491 ಮತದಾರರ ಹೆಸರುಗಳು ಎರಡು ಕಡೆ ಮತದಾರರ ಪಟ್ಟಿಯಲ್ಲಿ ಇರುವುದರಿಂದ ಅವುಗಳನ್ನು ರದ್ದುಗೊಳಿಸಲಾಗಿದೆ.
2002ರ ದಾಖಲೆಗಾಗಿ ಮತದಾರರ ಪರದಾಟ
ಮತದಾರರ ಪಟ್ಟಿ ಪರಿಷ್ಕರಣೆಯ ಸಂದರ್ಭದಲ್ಲಿ 2002ರ ಮತದಾರರ ಪಟ್ಟಿ ಅಥವಾ ಗುರುತಿನ ಚೀಟಿಗೆ ಸಂಬಂಧಿಸಿದ ದಾಖಲೆಗಳ ಕೊರತೆ ಕೆಲ ಮತದಾರರಿಗೆ ತೊಂದರೆ ತಂದಿದೆ. 2002ರಲ್ಲಿ ತಮ್ಮ ಮೂಲ ಸ್ಥಳದಲ್ಲಿ ಮತ ಚಲಾಯಿಸಿದ್ದ ಬಗ್ಗೆ ದಾಖಲೆ ಅಥವಾ ಗುರುತಿನ ಚೀಟಿ ಲಭ್ಯವಾಗದ ಹಿನ್ನೆಲೆಯಲ್ಲಿ ಕೆಲವರು ತಮ್ಮ ಹಳೆಯ ಗ್ರಾಮಗಳಿಗೆ ತೆರಳಿ ದಾಖಲೆಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಕೆಲವರಿಗೆ ಅಗತ್ಯ ದಾಖಲೆಗಳು ಸಿಗದ ಕಾರಣ, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಮುಂದುವರಿಸಲು ಅಥವಾ ಮರುಸೇರ್ಪಡೆಗೊಳಿಸಲು ಪರದಾಡುವಂತಾಗಿದೆ.
ಅ.17ರೊಳಗೆ ಬಿಎಲ್‌ಒಗಳನ್ನು ಸಂಪರ್ಕಿಸಿ
ಮತದಾರರ ಪಟ್ಟಿ ಪರಿಷ್ಕರಣೆಯ ವೇಳೆ ಬಿಎಲ್‌ಒಗಳಿಂದ ನೀಡಲಾದ ಫಾರಂಗಳನ್ನು ಪಡೆದುಕೊಂಡಿದ್ದರೂ, ಅಗತ್ಯ ದಾಖಲೆಗಳನ್ನು ಸಲ್ಲಿಸದೆ ಮನೆಯಲ್ಲಿ ಇಟ್ಟುಕೊಂಡಿರುವ ಮತದಾರರು ಅಕ್ಟೋಬರ್ 17ರೊಳಗಾಗಿ ಸಂಬಂಧಪಟ್ಟ ಬಿಎಲ್‌ಒಗಳನ್ನು ಭೇಟಿ ಮಾಡುವಂತೆ ಮತದಾರರ ನೋಂದಣಾಧಿಕಾರಿಗಳು ಸೂಚಿಸಿದ್ದಾರೆ. ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಮುಂದುವರಿದಿದೆಯೇ ಎಂಬುದನ್ನು ಪರಿಶೀಲಿಸಿಕೊಂಡು, ಅಗತ್ಯ ದಾಖಲೆಗಳು ಮತ್ತು ಮಾಹಿತಿಯನ್ನು ನಿಗದಿತ ಅವಧಿಯೊಳಗೆ ಸಲ್ಲಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ.
ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪರಿಷ್ಕರಣೆ ನಡೆದಿದ್ದು, ಈ ಕಾರ್ಯವನ್ನು ಅ.17 ರವರಿಗೆ ವಿಸ್ತರಿಸಲಾಗಿದೆ. ಮತದಾರರ ಪಟ್ಟಿಯಿಂದ ಕೈ ತಪ್ಪಿದವರು ದಾಖಲಾತಿಗಳೊಂದಿಗೆ ಬಿಎಲ್ಒಗಳನ್ನು ಭೇಟಿಯಾಗಿ ಸೇರ್ಪಡೆ ಮಾಡಿಕೊಳ್ಳಬಹುದು.
-ರವಿಕುಮಾರ, ಶಿರಸ್ತೆದಾರರು, ಚುನಾವಣೆ ವಿಭಾಗ, ಗಂಗಾವತಿ