
ಮನೆಯಲ್ಲಿ ಕಪಾಟು ತುಂಬಿಕೊಂಡಿರುವ ಹಳೆಯ ಬಟ್ಟೆಗಳು, ಬಳಸದೆ ಮೂಲೆಯಲ್ಲಿ ಬಿದ್ದಿರುವ ಡ್ರೆಸ್‌ಗಳು, ಹರಿದ ಬಟ್ಟೆಗಳು ಇವುಗಳನ್ನು ಏನು ಮಾಡಬೇಕು ಎಂಬುದು ಬಹುತೇಕರಿಗೆ ದೊಡ್ಡ ಪ್ರಶ್ನೆ. ಕೆಲವರು ಕಸದೊಂದಿಗೆ ಎಸೆದರೆ, ಇನ್ನೂ ಕೆಲವರು ದಾನ ಮಾಡುತ್ತಾರೆ. ಆದರೆ ಹಳೆಯ ಬಟ್ಟೆಗಳನ್ನು ಕಸವೆಂದು ನೋಡದೆ, ಅವುಗಳಿಂದಲೇ ಪರಿಸರ ಉಳಿಸುವ ಜೊತೆಗೆ ಹಣ ಗಳಿಸುವ ಅವಕಾಶವೊಂದು ಬೆಂಗಳೂರಿನಲ್ಲಿ ಸಿಕ್ಕಿದೆ. ಬೆಂಗಳೂರಿನ NoKasa ಎಂಬ ಸ್ಟಾರ್ಟ್‌ಅಪ್ ಹಳೆಯ ಬಟ್ಟೆಗಳನ್ನು ಮನೆ ಬಾಗಿಲಿಗೇ ಬಂದು ಸಂಗ್ರಹಿಸಿ, ಅವುಗಳನ್ನು ಮರುಬಳಕೆ, ಮರುಸಂಸ್ಕರಣೆ ಹಾಗೂ ಅಪ್‌ಸೈಕ್ಲಿಂಗ್ ಮಾಡುವ ಕೆಲಸ ಮಾಡುತ್ತಿದೆ. ಇದರ ವಿಶೇಷವೆಂದರೆ, ಬಳಕೆದಾರರು ತಮ್ಮ ಹಳೆಯ ಬಟ್ಟೆಗಳನ್ನು ನೀಡುವ ಮೂಲಕ ಕ್ಯಾಶ್‌ಬ್ಯಾಕ್ ಕೂಡ ಪಡೆಯಬಹುದು.
NoKasaನಲ್ಲಿ ಹಳೆಯ ಬಟ್ಟೆಗಳನ್ನು ಮಾರಾಟ ಮಾಡಬಹುದು ಅಥವಾ ದಾನ ಮಾಡಬಹುದು. ಬಟ್ಟೆಗಳನ್ನು ಮಾರಾಟ ಮಾಡಲು ನೀಡಿದರೆ ಪ್ರತಿ ಕೆಜಿಗೆ ಸುಮಾರು ₹20ವರೆಗೆ ಕ್ಯಾಶ್‌ಬ್ಯಾಕ್ ನೀಡಲಾಗುತ್ತದೆ. ಮನೆ ಬಾಗಿಲಿನಿಂದ ಬಟ್ಟೆ ಸಂಗ್ರಹಿಸುವ ಸೇವೆಗೆ ₹50 ಶುಲ್ಕವಿದ್ದು, ಬಟ್ಟೆಗಳನ್ನು ದಾನ ಮಾಡುವವರಿಗೆ ಈ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ ಎಂದು ವರದಿಗಳು ತಿಳಿಸಿವೆ. ಅಂದರೆ ಕಪಾಟಿನನಲ್ಲಿರುವ ಹಳೆಯ ಬಟ್ಟೆಗಳನ್ನು ಹೊರಹಾಕುವುದರ ಜೊತೆಗೆ, ಅವುಗಳಿಂದ ಸ್ವಲ್ಪ ಹಣವನ್ನೂ ಪಡೆಯಬಹುದು.
ಭಾರತದಲ್ಲಿ ಪ್ರತಿವರ್ಷ ಸುಮಾರು 7.1ರಿಂದ 7.8 ಮಿಲಿಯನ್ ಟನ್‌ಗಳಷ್ಟು ಟೆಕ್ಸ್‌ಟೈಲ್ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಬಳಸಿದ ಬಟ್ಟೆಗಳಲ್ಲಿ ಬಹುಪಾಲು ಸೂಕ್ತ ರೀತಿಯಲ್ಲಿ ಸಂಸ್ಕರಣೆಯಾಗದೆ ಲ್ಯಾಂಡ್‌ಫಿಲ್‌ಗಳಿಗೆ ಸೇರುವ ಸಮಸ್ಯೆಯಿದೆ. ಇದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ NoKasa ಆರಂಭವಾಗಿದೆ. ಈ ಸ್ಟಾರ್ಟ್‌ಅಪ್ ಅನ್ನು ಹಾಸ್ಟೆಲ್ ಸ್ನೇಹಿತರಾದ ಪ್ರಸಾದ್ ಲಿಂಗವಾರ್ ಮತ್ತು ನಚಿಕೇತ್ ಆಚಾರ್ಯ ಆರಂಭಿಸಿದ್ದಾರೆ. 2024ರಲ್ಲಿ ಆರಂಭವಾದ NoKasa, ಆರಂಭದಲ್ಲಿ ವಸತಿ ಸಮುಚ್ಚಯಗಳಲ್ಲಿ ಸ್ಮಾರ್ಟ್ ಬಿನ್‌ಗಳ ಮೂಲಕ ಹಳೆಯ ಬಟ್ಟೆಗಳನ್ನು ಸಂಗ್ರಹಿಸುತ್ತಿತ್ತು. ಬಳಿಕ ಮನೆ ಬಾಗಿಲಿಗೆ ತೆರಳಿ ಬಟ್ಟೆ ಸಂಗ್ರಹಿಸುವ ಸೇವೆಯನ್ನೂ ಆರಂಭಿಸಿತು.
ನೀವು ನೀಡಿದ ಹಳೆಯ ಬಟ್ಟೆಗಳು ನೇರವಾಗಿ ಕಸದ ರಾಶಿಗೆ ಹೋಗುವುದಿಲ್ಲ. ಬೆಂಗಳೂರಿನ ಕಗ್ಗದಾಸಪುರದಲ್ಲಿರುವ ಗೋದಾಮಿನಲ್ಲಿ ಬಟ್ಟೆಗಳನ್ನು ಗುಣಮಟ್ಟದ ಆಧಾರದ ಮೇಲೆ ವಿಂಗಡಿಸಲಾಗುತ್ತದೆ. ಧರಿಸಲು ಯೋಗ್ಯವಾಗಿರುವ ಬಟ್ಟೆಗಳನ್ನು ಮರುಮಾರಾಟ ಅಥವಾ ಥ್ರಿಫ್ಟ್ ಮಾರುಕಟ್ಟೆಗೆ ಕಳುಹಿಸಲಾಗುತ್ತದೆ. ಹೆಚ್ಚು ಹಾಳಾಗಿರುವ ಬಟ್ಟೆಗಳನ್ನು ರಿಸೈಕ್ಲಿಂಗ್ ಮತ್ತು ಅಪ್‌ಸೈಕ್ಲಿಂಗ್‌ಗೆ ಬಳಸಲಾಗುತ್ತದೆ. ಕೆಲವು ಬಟ್ಟೆಗಳಿಂದ ಬ್ಯಾಗ್‌ಗಳು, ರಗ್‌ಗಳು ಹಾಗೂ ಮನೆಯ ಅಲಂಕಾರಿಕ ವಸ್ತುಗಳನ್ನೂ ತಯಾರಿಸಲಾಗುತ್ತದೆ.
NoKasa ಪ್ರಕಾರ, ಕಳೆದ ಅವಧಿಯಲ್ಲಿ 20 ಟನ್‌ಗೂ ಹೆಚ್ಚು ಬಟ್ಟೆಗಳನ್ನು ಸಂಗ್ರಹಿಸಲಾಗಿದ್ದು, ಸುಮಾರು 60,000ರಿಂದ 70,000 ಉಡುಪುಗಳನ್ನು ಲ್ಯಾಂಡ್‌ಫಿಲ್‌ಗೆ ಸೇರುವುದರಿಂದ ತಪ್ಪಿಸಲಾಗಿದೆ. ಅವುಗಳಲ್ಲಿ ದೊಡ್ಡ ಪ್ರಮಾಣದ ಬಟ್ಟೆಗಳನ್ನು ಮರುಬಳಕೆ ಮಾಡಲಾಗಿದ್ದು, ಉಳಿದವುಗಳನ್ನು ರಿಸೈಕ್ಲಿಂಗ್, ಅಪ್‌ಸೈಕ್ಲಿಂಗ್ ಅಥವಾ ಡೌನ್‌ಸೈಕ್ಲಿಂಗ್‌ಗೆ ಕಳುಹಿಸಲಾಗಿದೆ.
ಹಳೆಯ ಬಟ್ಟೆಗಳನ್ನು ಕೇವಲ ಸಂಗ್ರಹಿಸುವುದಷ್ಟೇ ಅಲ್ಲದೆ, ಅವುಗಳನ್ನು ತೊಳೆದು, ರಿಪೇರಿ ಮಾಡಿ, ಡೈಯಿಂಗ್ ಮಾಡುವ ರಿಫರ್ಬಿಷ್‌ಮೆಂಟ್ ಸೆಂಟರ್ ಆರಂಭಿಸುವ ಯೋಜನೆಯೂ ಸಂಸ್ಥೆ ಹೊಂದಿದೆ. ಜೊತೆಗೆ ಕೈಗೆಟುಕುವ ಬೆಲೆಯಲ್ಲಿ ಮರುಬಳಕೆಯ ಬಟ್ಟೆಗಳನ್ನು ಮಾರಾಟ ಮಾಡುವ ಆನ್‌ಲೈನ್ ಥ್ರಿಫ್ಟ್ ಪ್ಲಾಟ್‌ಫಾರ್ಮ್‌ಗೂ ಮುಂದಿನ ದಿನಗಳಲ್ಲಿ ವಿಸ್ತರಿಸುವ ಯೋಜನೆ ಇದೆ.
ಹಳೆಯ ಬಟ್ಟೆಗಳನ್ನು ಕಸದ ಬುಟ್ಟಿಗೆ ಎಸೆಯುವ ಬದಲು ಅವುಗಳಿಗೆ ಮತ್ತೊಂದು ಜೀವನ ನೀಡಬಹುದು ಎಂಬುದನ್ನು NoKasa ಮಾದರಿ ತೋರಿಸುತ್ತಿದೆ. ಒಂದು ಕಡೆ ಮನೆ ಕಪಾಟಿನಲ್ಲಿ ಜಾಗ ಖಾಲಿಯಾಗುತ್ತದೆ, ಮತ್ತೊಂದೆಡೆ ಹಳೆಯ ಬಟ್ಟೆಗಳಿಂದ ಆದಾಯವೂ ಸಿಗುತ್ತದೆ. ಮುಖ್ಯವಾಗಿ, ಬಟ್ಟೆಗಳು ಲ್ಯಾಂಡ್‌ಫಿಲ್ ಸೇರುವುದನ್ನು ತಡೆಯುವ ಮೂಲಕ ಪರಿಸರಕ್ಕೂ ನೆರವಾಗುತ್ತದೆ.