
ಗಂಗಾವತಿ (ಮೇ.01): ನಗರದ ಬಿಜೆಪಿ ಯುವ ಮೋರ್ಚಾದ ಅದ್ಯಕ್ಷ ವೆಂಕಟೇಶ ಕುರಬರ ಕೊಲೆಗೆ ಕಾರಣರಾದ ಆರು ಅರೋಪಿಗಳಿಗೆ ನ್ಯಾಯಲಯ ಗಲ್ಲು ಶಿಕ್ಷೆ ನೀಡಿದ್ದ ಹಿನ್ನಲೆಯಲ್ಲಿ ಶುಕ್ರವಾರ ವೆಂಕಟೇಶ ನಿವಾಸಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಕುಟಂಬಕ್ಕೆ ನೆಮ್ಮದಿಯಿಂದ ಇರಲು ಧೈರ್ಯ ತುಂಬಿದರು.
ಕಳೆದ 7 ತಿಂಗಳ ಹಿಂದೆ ವೆಂಕಟೇಶನನ್ನು ಎಪಿಎಂಸಿ ರಸ್ತೆಯಲ್ಲಿ ಕೊಚ್ಚಿ ಹತ್ಯೆ ಮಾಡಿದ್ದರು. ಕೊಲೆ ಮಾಡಿದ ಹಂತಕರಿಗೆ ಇಲ್ಲಿಯ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಲಯ 6 ಜನ ಹಂತಕರಿಗೆ ಗಲ್ಲು ಶಿಕ್ಷೆ ಮತ್ತು ಪ್ರತಿ ಅರೋಪಿ 3 ಲಕ್ಷ ರು ದಂಡ ನೀಡುವಂತೆ ತೀರ್ಪು ನೀಡಿತ್ತು.
ಇದರಿಂದ ನಿಟ್ಟುಸಿರು ಬಿಟ್ಟ ವೆಂಕಟೇಶ ಕುಟಂಬಕ್ಕೆ ಡಿವೈಎಸ್ಪಿ ಜಾಯಪ್ಪ ನ್ಯಾಯಮಗೌಡರ್, ನಗರ ಪೊಲೀಸ್ ಠಾಣೆಯ ಪಿಐ ಪ್ರಕಾಶ ಮಾಳೆ ಅವರು ವೆಂಕಟೇಶ ಕುಟಂಬಕ್ಕೆ ಹಣ್ಣು ನೀಡಿ ಯಾವುದೇ ಕಾರಣಕ್ಕೆ ಅಧೈರ್ಯವಾಗ ಬೇಡಿ ನಿಮ್ಮ ಹಿಂದೆ ನಾವು ಇದ್ದೇವೆ ಎಂದು ಧೈರ್ಯ ತುಂಬಿದರು.
ಇದೇ ಸದರ್ಭದಲ್ಲಿ ವೆಂಕಟೇಶನ ತಂದೆ ಹಂಪಣ್ಣ, ತಾಯಿ ಶಂಕ್ರಮ್ಮ ಅವರು ನ್ಯಾಯಲಯ ಮತ್ತು ಪೊಲೀಸರ ದಿಟ್ಟತನದಿಂದ ನನ್ನ ಮಗ ವೆಂಕಟೇಶಗೆ ನ್ಯಾಯ ಸಿಕ್ಕಿದೆ ಎಂದು ದುಃಖದಿಂದ ನೋವು ವ್ಯಕ್ತ ಪಡಿಸಿದರು. ನ್ಯಾಯ ದೊರಕಿಸಿಕೊಟ್ಟಿದ್ದರಿಂದ ವೆಂಕಟೇಶನ ಕುಟಂಬದವರು ಡಿವೈಎಸ್ಪಿ ಜಾಯಪ್ಪ ನ್ಯಾಮಗೌಡರ್ ಮತ್ತು ಪಿಐ ಪ್ರಕಾಶ ಮಾಳೆ ಅವರಿಗೆ ಶಾಲು ಹೊದಿಸಿ ಗೌರವಿಸಿದರು.