ಗಂಗಾ ಕಲ್ಯಾಣ ಯೋಜನೆಯನ್ನು ಸರ್ಕಾರ ಆಧುನೀಕರಣಗೊಳಿಸಿದ್ದು, ಫಲಾನುಭವಿಗಳಿಗೆ ಈ ಸೌಲಭ್ಯವನ್ನು ಡೈರೆಕ್ಟ್ ಬೆನಿಫಿಟ್ ಟ್ರಾನ್ಸರ್ ಮಾಡಲಾಗುತ್ತಿದೆ ಎಂದು ಅಂಬೇಡ್ಕರ್ ಆದಿ ಜಾಂಭವ ತಾಂಡಾ ಭೋವಿ ಅಭಿವೃದ್ಧಿ ನಿಗಮಗಳ ಉಪ ಪ್ರಧಾನ ವ್ಯವಸ್ಥಾಪಕ ಮಂಜುನಾಥ್ ತಿಳಿಸಿದರು.
ತುಮಕೂರು : ಗಂಗಾ ಕಲ್ಯಾಣ ಯೋಜನೆಯನ್ನು ಸರ್ಕಾರ ಆಧುನೀಕರಣಗೊಳಿಸಿದ್ದು, ಫಲಾನುಭವಿಗಳಿಗೆ ಈ ಸೌಲಭ್ಯವನ್ನು ಡೈರೆಕ್ಟ್ ಬೆನಿಫಿಟ್ ಟ್ರಾನ್ಸರ್ ಮಾಡಲಾಗುತ್ತಿದೆ ಎಂದು ಅಂಬೇಡ್ಕರ್ ಆದಿ ಜಾಂಭವ ತಾಂಡಾ ಭೋವಿ ಅಭಿವೃದ್ಧಿ ನಿಗಮಗಳ ಉಪ ಪ್ರಧಾನ ವ್ಯವಸ್ಥಾಪಕ ಮಂಜುನಾಥ್ ತಿಳಿಸಿದರು. ಬಿ.ಎಚ್.ರಸ್ತೆಯ ಮುರುಘರಾಜೇಂದ್ರ ಸಭಾಭವನದಲ್ಲಿ ಅಂಬೇಡ್ಕರ್ ಆದಿ ಜಾಂಭವ ತಾಂಡಾ ಭೋವಿ ಅಭಿವೃದ್ಧಿ ನಿಗಮ ಆಶ್ರಯದಲ್ಲಿ ಫಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ನಡೆದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಜನಸಾಮಾನ್ಯರ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಹಲವು ನಿಗಮ ಮಂಡಳಿಗಳ ಮೂಲಕ ಜನಸಾಮಾನ್ಯರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದ್ದು, ಜಾತಿವಾರು ವಿಂಗಡಿಸಿರುವ ವಿವಿಧ ಅಭಿವೃದ್ಧಿ ನಿಗಮ ಮಂಡಳಿಗಳಲ್ಲಿ ವಿವಿಧ ರೀತಿಯ ಯೋಜನೆ ನೀಡಲಾಗುತ್ತಿದೆ ಎಂದರು.
ಅಭಿವೃದ್ಧಿ ನಿಗಮ ಮಂಡಳಿಗಳಲ್ಲಿ ನೀಡಲಾಗುವ ಯೋಜನೆಯು ರೈತ ಫಲಾನುಭವಿಗಳಿಗೆ ಮುಖ್ಯವಾಗಿದೆ. ಆದರೆ, ಯೋಜನೆಯನ್ನು ಸರ್ಕಾರ ಇಂದು ಆಧುನಿಕರಣಗೊಳಿಸಿ ಯೋಜನೆಯ ಫಲಾನುಭವಿಗಳಿಗೆ ಈ ಸೌಲಭ್ಯವನ್ನು ಡಿ ಬಿ ಟಿ (ಡೈರೆಕ್ಟ್ ಬೆನಿಫಿಟ್ ಟ್ರಾನ್ಸ$್ಫರ್) ಮೂಲಕ ನೀಡಲಾಗುತ್ತಿದೆ ಎಂದು ತಿಳಿಸಿದರು.
ಗಂಗಾ ಕಲ್ಯಾಣಯೋಜನೆಯು ಹಲವಾರು ವರ್ಷಗಳಿಂದ ಸಮಾಜಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿರುವ ವಿವಿಧ ಅಭಿವೃದ್ಧಿ ನಿಗಮಗಳಿಗೆ ಅನುಷ್ಠಾನ ಮಾಡುತ್ತಾ ಬಂದಿದೆ ಎಂದರು.
ಜಿಲ್ಲೆಯಲ್ಲಿ ಕೊಳವೆ ಬಾವಿ ಕೊರೆಯುವ ಗುತ್ತಿಗೆದಾರರು ಟೆಂಡರ್‌ನಲ್ಲಿ ಭಾಗವಹಿಸಬಹುದಾಗಿತ್ತು. ಅವರು ನಮೂದಿಸಿದ ದರಗಳನ್ನು ಪರಿಶೀಲಿಸಿ ಕಡಿಮೆ ಟೆಂಡರ್‌ಗಿರುವ ಗುತ್ತಿಗೆದಾರರಿಗೆ ಎಲ್ 1 ಬಿ ಗುತ್ತಿಗೆದಾರರು ಎಂದು ತೀರ್ಮಾನಿಸಿ ಅವರಿಗೆ ಕಾರ್ಯಾದೇಶ ನೀಡಿ ನಿಗಮ ಮಂಡಳಿಗಳಲ್ಲಿ ಆಯ್ಕೆಯಾದ ಫಲಾನುಭವಿಗಳ ಪಟ್ಟಿನೀಡಿ ಕೊಳವೆಬಾವಿಗಳನ್ನು ಕೊರೆಸಲಾಗುವುದು ಎಂದರು.
ಯಶಸ್ವಿಯಾದ ಕೊಳವೆಬಾವಿಗಳಿಗೆ ಮೋಟರ್ ಮತ್ತು ಪಂಪು ಇತರೆ ಸಾಮಗ್ರಿಗಳನ್ನು ಈ ಮಾರ್ಗವಾಗಿಯೇ ವಿತರಣೆ ಮಾಡಲಾಗುತ್ತಿತ್ತು. ಆದರೆ, ಈ ಪ್ರಕ್ರಿಯೆ ಬಗ್ಗೆ ಜನಪ್ರತಿನಿಧಿಗಳು ಹಾಗೂ ಫಲಾನುಭವಿಗಳಿಂದ ಅನೇಕ ದೂರುಗಳು ಬಂದ ಹಿನ್ನೆಲೆ ಹಾಗೂ ಮೋಟಾರ್ ಪಂಪು ವಿತರಣೆ ವಿಳಂಬ ಹಿನ್ನೆಲೆ ಸಮಸ್ಯೆ ಅರಿತ ಸರ್ಕಾರ 2022ರ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಡಿ ಬಿ ಟಿ ಯೋಜನೆ ಘೋಷಣೆ ಮಾಡಿತು ಎಂದರು.
ಡೈರೆಕ್ಟ್ ಬೆನಿಫಿಟ್ ಟ್ರಾನ್ಸ$್ಫರ್ ಪದ್ಧತಿಯ ಮೂಲಕ ಅನುಷ್ಠಾನ ಮಾಡಿ ಹೊಸ ತಂತ್ರಜ್ಞಾನದಿಂದ ಫಲಾನುಭವಿಗಳಿಗೆ ಗಂಗಾ ಕಲ್ಯಾಣ ಸೌಲಭ್ಯವಿತರಿಸಲು ಸರ್ಕಾರ ಈ ಆಧುನಿಕ ದಾರಿಯನ್ನು ಉಪಯೋಗಿಸಿದೆ ಎಂದರು.
ಈವರೆಗೂ ನಿಗಮ ಮಂಡಳಿಗಳಲ್ಲಿ ಕೊಳವೆಬಾವಿ ಕೊರೆಯಲು ಕೊಳವೆಬಾವಿ ಏಜೆನ್ಸಿ ಹಾಗೂ ಪಂಪು ಮೋಟರ್ ಸರಬರಾಜು ಏಜೆನ್ಸಿಗಳಿಗೆ ನಿಗಮ ಮಂಡಳಿಗಳ ವ್ಯವಸ್ಥಾಪಕರೇ ಏಜೆನ್ಸಿಯನ್ನು ಆಯ್ಕೆ ಮಾಡಿ ಕೊಳವೆಬಾವಿಗಳನ್ನು ಕೊರೆಸುತ್ತಿದ್ದರು. ಆದರೆ, ಇದೀಗ ಸರ್ಕಾರದ ಆದೇಶದಂತೆ ಪಟ್ಟಿಮಾಡಿರುವ ಕೊಳವೆ ಬಾವಿಗಳ ಮೂಲಕ ಫಲಾನುಭವಿಗಳು ಏಜೆನ್ಸಿಗಳನ್ನು ಆಯ್ಕೆ ಮಾಡಿಕೊಂಡು ಗುತ್ತಿಗೆದಾರರನ್ನು ಗುರುತಿಸಿಕೊಂಡು ಸೌಲಭ್ಯವನ್ನು ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ ಎಂದರು.
ಫಲಾನುಭವಿಯು ತಮ್ಮ ಜಮೀನಿನಲ್ಲಿ ಜಿಯೊಲಜಿಸ್ಟ್ ಮೂಲಕ ಫಿಜಿಕಲ್ ಸರ್ವೇ ನಡೆಸಿ ತಾಲೂಕು ಅಭಿವೃದ್ಧಿ ಅಧಿಕಾರಿಗಳು ಬೋರ್ವೆಲ್‌ಏಜೆನ್ಸಿ ಮತ್ತು ಫಲಾನುಭವಿಗಳ ಸಮ್ಮುಖದಲ್ಲಿ ಫೋಟೋಗಳನ್ನು ತೆಗೆದು ನಿಗಮ ಮಂಡಳಿ ಗುರುತಿಸಿರುವ ಅಪ್ಲಿಕೇಶನ್ ನಲ್ಲಿಅಪ್ಲೋಡ್ ಮಾಡಬೇಕು ಎಂದರು.
ಜಿಯೋಲಜಿಸ್ಟ್ ಅವರು ಎಲ್ಲಿ ಪಾಯಿಂಟ್ ಮಾಡಿರುತ್ತಾರೋ ಅಲ್ಲಿ ಬೋರ್ವೆಲ್ ಕೊರೆಸಬೇಕು ಜಿಯೋ ಫಿಸಿಕಲ್ ಸರ್ವೆಗಳು ತಪ್ಪಾದಲ್ಲಿ ಫಲಾನುಭವಿಯ ಸೌಲಭ್ಯವು ರದ್ದಾಗುವುದು ಎಂದರು.
ಆದಿ ಜಾಂಬವ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಡಿ ಜೈರಾಮಯ್ಯ ಮಾತನಾಡಿ, ಸರ್ಕಾರದ ವಿನೂತನ ತಂತ್ರಜ್ಞಾನದಿಂದ ನಿಗಮ ಮಂಡಳಿಗಳ ಫಲಾನುಭವಿಗಳಿಗೆ ಡಿವಿಟಿ ಮೂಲಕ ಸೌಲಭ್ಯ ನೀಡಲು ಮುಂದಾಗಿದ್ದು, ಸರ್ಕಾರದ ಆದೇಶದಂತೆ ಫಲಾನುಭವಿಗಳು ಸದುಪಯೋಗ ಪಡೆದು ಅಭಿವೃದ್ಧಿ ಹೊಂದಬೇಕು ಎಂದು ತಿಳಿಸಿದರು.
ಕಾರ್ಯಗಾರದಲ್ಲಿದ್ದ ಫಲಾನುಭವಿಗಳು ಮತ್ತು ಅಧಿಕಾರಿಗಳೊಡನೆ ಡಿ ಬಿ ಟಿ ಕುರಿತ ವಿಷಯವಾಗಿ ಸಂವಾದ ನಡೆಯಿತು.
ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮಂಜುನಾಥ್ ವಿವಿಧ ತಾಲೂಕುಗಳ ಅಭಿವೃದ್ಧಿ ಅಧಿಕಾರಿಗಳು ಫಲಾನುಭವಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.