
ಧಾರವಾಡ: ಗಣೇಶೋತ್ಸವದ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ 5 ಹಂತಗಳಲ್ಲಿ ಮದ್ಯ ಮಾರಾಟ, ಸಾಗಾಟ ಹಾಗೂ ಮದ್ಯ ಸೇವನೆಯನ್ನು ನಿಷೇಧಿಸಿ ಹು-ಧಾ ನಗರ ಪೊಲೀಸ್ ಆಯುಕ್ತ ಹಾಗೂ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಭೂಷಣ್ ಬೊರಸೆ ಆದೇಶ ಹೊರಡಿಸಿದ್ದಾರೆ.
ಗಣೇಶ ಹಬ್ಬದ ಆಚರಣೆ ಸೆ.14ರಿಂದ 25ರ ವರೆಗೆ ನಡೆಯಲಿದ್ದು, ಈ ಅವಧಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ, ವಿಸರ್ಜನೆ ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕಾನೂನು ಮತ್ತು ಸುವ್ಯವಸ್ಥೆ ಹಿನ್ನೆಲೆಗೆ ಧಕ್ಕೆ ಉಂಟು ಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಿಷೇಧ ಹೇರಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸೆ.13ರ ರಾತ್ರಿ 11.59 ರಿಂದ ಸೆ.15ರ ಬೆಳಗ್ಗೆ 6ರ ವರೆಗೆ, ಸೆ.17ರ ರಾತ್ರಿ 11.59ರಿಂದ ಸೆ. 19ರ ಬೆಳಗ್ಗೆ 6ರ ವರೆಗೆ, ಸೆ.19ರ ರಾತ್ರಿ 11.59ರಿಂದ ಸೆ.21ರ ಬೆಳಗ್ಗೆ 6ರ ವರೆಗೆ, ಸೆ. 21ರ ರಾತ್ರಿ 11.59ರಿಂದ ಸೆ.23ರ ಬೆಳಗ್ಗೆ 6ರ ವರೆಗೆ, ಸೆ.24ರ ರಾತ್ರಿ 11.59ರಿಂದ ಸೆ. 26ರ ಬೆಳಗ್ಗೆ 6ರ ವರೆಗೆ ಮದ್ಯ ಮಾರಾಟ, ಸಾಗಾಟ ಹಾಗೂ ಸೇವನೆ ನಿಷೇಧಿಸಲಾಗಿದೆ.
ರಾಣಿ ಚೆನ್ನಮ್ಮ ಮೈದಾನ ಗಣೇಶೋತ್ಸವ ಮಂಡಳಿ ವತಿಯಿಂದ ಸೆ. 14ರಿಂದ 16ರ ವರೆಗೆ ಮೂರು ದಿನಗಳ ಕಾಲ ಭಕ್ತಿ, ಸಂಭ್ರಮ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ಗಣೇಶೋತ್ಸವ ಆಚರಿಸಲಾಗುವುದು ಎಂದು ಉತ್ಸವ ಮಹಾಮಂಡಳದ ಅಧ್ಯಕ್ಷ ಸಂಜಯ ಬಡಸ್ಕರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗಣೇಶೋತ್ಸವವನ್ನು ಕೇವಲ ಧಾರ್ಮಿಕ ಆಚರಣೆಗೆ ಸೀಮಿತಗೊಳಿಸದೆ, ಸಂಸ್ಕೃತಿ, ಪರಂಪರೆ ಹಾಗೂ ಸಾಮಾಜಿಕ ಸಾಮರಸ್ಯವನ್ನು ಪ್ರತಿಬಿಂಬಿಸುವ ಮಾದರಿ ಉತ್ಸವವನ್ನಾಗಿ ರೂಪಿಸುವುದು ಮಂಡಳಿಯ ಆಶಯವಾಗಿದೆ ಎಂದರು.
ಕಳೆದ ವರ್ಷ ಗಣೇಶೋತ್ಸವ ಹಾಗೂ ವಿಸರ್ಜನಾ ಮೆರವಣಿಗೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 300ಕ್ಕೂ ಅಧಿಕ ಕಲಾವಿದರು ವಿವಿಧ ಸಾಂಸ್ಕೃತಿಕ ಮೇಳಗಳಲ್ಲಿ ಪಾಲ್ಗೊಂಡು ಮೆರವಣಿಗೆಗೆ ಮೆರುಗು ತಂದಿದ್ದರು. ಡಿಜೆ ಬಳಸದೆ ಇದ್ದರೂ ಜನರ ಉತ್ಸಾಹ ಮತ್ತು ಸಂಭ್ರಮಕ್ಕೆ ಯಾವುದೇ ಕೊರತೆಯಾಗಿರಲಿಲ್ಲ ಎಂದು ಹೇಳಿದರು.
ಈ ಬಾರಿ ಸೆ. 14ರಂದು ಬೆಳಗ್ಗೆ 9 ಗಂಟೆಗೆ ಮೂರುಸಾವಿರ ಮಠದ ಆವರಣದಿಂದ ಗಣೇಶ ಮೂರ್ತಿಯ ಭವ್ಯ ಮೆರವಣಿಗೆ ಆರಂಭವಾಗಲಿದ್ದು, ರಾಣಿ ಚೆನ್ನಮ್ಮ ಮೈದಾನಕ್ಕೆ ಮೂರ್ತಿಯನ್ನು ಕರೆತಂದು ಮಧ್ಯಾಹ್ನ 12 ಗಂಟೆಗೆ ವಿಧಿ-ವಿಧಾನಗಳೊಂದಿಗೆ ಪ್ರತಿಷ್ಠಾಪಿಸಲಾಗುವುದು. ಸೆ. 14 ಮತ್ತು 15ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಭಕ್ತಿಪೂರ್ವಕ ಕಾರ್ಯಕ್ರಮಗಳು ನಡೆಯಲಿವೆ. ಭಕ್ತರಿಗೆ ನಿರಂತರ ಅನ್ನಸಂತರ್ಪಣೆಯನ್ನೂ ಆಯೋಜಿಸಲಾಗಿದೆ ಎಂದರು.
ಸೆ. 16ರಂದು ಮಧ್ಯಾಹ್ನ 12 ಗಂಟೆಗೆ ಗಣೇಶ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಲಾಗುವುದು. ಸಾರ್ವಜನಿಕ ಸಮಾರಂಭದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಕೇಂದ್ರೀಯ ಕಾರ್ಯದರ್ಶಿ ಗೋಪಾಲ್ ಜಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ. ಮೆರವಣಿಗೆಯಲ್ಲಿ ಕರ್ನಾಟಕದ ಸಾಂಸ್ಕೃತಿಕ ಪರಂಪರೆ ಹಾಗೂ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ವಿವಿಧ ಕಲಾ ಪ್ರದರ್ಶನ ಮತ್ತು ಸಾಂಸ್ಕೃತಿಕ ಮೇಳಗಳು ಪ್ರಮುಖ ಆಕರ್ಷಣೆಯಾಗಲಿವೆ. ಸಂಜೆ 5ರ ವೇಳೆಗೆ ಹೊಸೂರಿನ ಬಾವಿಯಲ್ಲಿ ಗಣೇಶ ಮೂರ್ತಿಯ ವಿಸರ್ಜನೆ ನಡೆಯಲಿದೆ ಎಂದರು.
ಹು-ಧಾ ಮಹಾನಗರ ಪಾಲಿಕೆಯಿಂದ ಉತ್ಸವಕ್ಕೆ ಅನುಮತಿ ದೊರೆತಿದ್ದು, ಉತ್ಸವದ ಯಶಸ್ವಿ ಆಯೋಜನೆಗೆ ಸ್ವಾಗತ ಸಮಿತಿ ಹಾಗೂ ಉತ್ಸವ ಸಮಿತಿ ರಚಿಸಲಾಗಿದೆ. ಮಹಾದೇವ ಕರಮರಿ, ನಂದಕುಮಾರ ಹಾಗೂ ಡಾ. ವಿ.ಎಸ್.ವಿ. ಪ್ರಸಾದ್ ಮಹಾಪೋಷಕರಾಗಿದ್ದು, 41 ಸದಸ್ಯರ ಉತ್ಸವ ಸಮಿತಿಗೆ ಉದ್ಯಮಿ ಗೌತಮ ಬಾಫಣಾ ಅಧ್ಯಕ್ಷರಾಗಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಹಾದೇವ ಕರಮರಿ, ಗೌತಮ ಬಾಫಣಾ, ರವಿ ದಂಡಿನ, ರಮೇಶ ಕದಂ ಸೇರಿ ಹಲವರಿದ್ದರು.