Holiday: ಸಾಲು ಸಾಲು ರಜೆ: ಊರಿನತ್ತ ಹೊರಟ ಬೆಂಗಳೂರಿನ ಜನರು, ಖಾಸಗಿ ಬಸ್‌ಗಳ ಸುಲಿಗೆ

Published : Sep 12, 2026, 05:49 AM IST
Bengaluru

ಸಾರಾಂಶ

ಗೌರಿ-ಗಣೇಶ ಹಬ್ಬದ ಪ್ರಯುಕ್ತ ಸಾಲು ಸಾಲು ರಜೆ ಇದ್ದ ಕಾರಣ, ಬೆಂಗಳೂರಿನಿಂದ ಊರುಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿ ಬಸ್ ನಿಲ್ದಾಣಗಳಲ್ಲಿ ಜನದಟ್ಟಣೆ ಉಂಟಾಗಿತ್ತು. ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್ಸಾರ್ಟಿಸಿ ಹೆಚ್ಚುವರಿ ಬಸ್‌ಗಳನ್ನು ಓಡಿಸಿದರೂ, ಖಾಸಗಿ ಬಸ್‌ಗಳು ದುಪ್ಪಟ್ಟು ದರ ವಸೂಲಿ ಮಾಡಿ ಪ್ರಯಾಣಿಕರಿಗೆ ಹೊರೆಯಾದವು.

ಬೆಂಗಳೂರು: ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ಬೆಂಗಳೂರಿನಿಂದ ತಮ್ಮ ಊರುಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣಗಳು ಜನದಟ್ಟಣೆಯಿಂದ ಕೂಡಿತ್ತು.

ಸೆ.12 ಎರಡನೇ ಶನಿವಾರ ಸರ್ಕಾರಿ ರಜೆ, ಸೆ.13 ಭಾನುವಾರ. ಹಾಗೆಯೇ, ಸೆ.14ರಂದು ಗೌರಿ-ಗಣೇಶ ಹಬ್ಬ ಇರುವ ಕಾರಣ 3 ದಿನ ರಜೆ ಸಿಗುತ್ತಿದೆ. ಹೀಗೆ ಸಾಲಾಗಿ ರಜೆಯಿರುವ ಕಾರಣ ಊರು ಬಿಡುತ್ತಿರುವವರ ಸಂರ್ಖಯೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿತ್ತು. ಶುಕ್ರವಾರ ಸಂಜೆ 5 ಗಂಟೆಯಿಂದಲೇ ಜನರು ಕೆಎಸ್ಸಾರ್ಟಿಸಿಯ ಮೆಜೆಸ್ಟಿಕ್‌ ಬಸ್‌ ನಿಲ್ದಾಣ, ಮೈಸೂರು ರಸ್ತೆ ಸ್ಯಾಟಲೈಟ್‌ ಬಸ್‌ ನಿಲ್ದಾಣ, ಶಾಂತಿನಗರ ಬಸ್ ನಿಲ್ದಾಣಗಳತ್ತ ಬಂದರು. ಅದರಿಂದ ಬಸ್‌ ನಿಲ್ದಾಣಗಳಲ್ಲಿ ಜನದಟ್ಟಣೆಯಿಂದ ತುಂಬಿತ್ತು.

2400 ಹೆಚ್ಚುವರಿ ಬಸ್‌ಗಳ ಕಾರ್ಯಾಚರಣೆ

ಪ್ರಯಾಣಿಕರ ಒತ್ತಡ ನಿವಾರಿಸಲು ಕೆಎಸ್ಸಾರ್ಟಿಸಿ 2400 ಹೆಚ್ಚುವರಿ ಬಸ್‌ಗಳ ಕಾರ್ಯಾಚರಣೆ ಮಾಡಿತ್ತು. ಜತೆಗೆ ಬಿಎಂಟಿಸಿ ಸಹ ವಿವಿಧ ನಗರಗಳಿಗೆ ಸೇವೆ ಒದಗಿಸಿದೆ.

ಸಂಜೆಯಿಂದಲೇ ನಗರದ ವಿವಿಧೆಡೆಗಳಿಂದ ಬಸ್‌ ನಿಲ್ದಾಣಗಳತ್ತ ಬರುವ ಜನರ ಸಂಖ್ಯೆ ಹೆಚ್ಚಿತ್ತು. ಬಸ್‌ ನಿಲ್ದಾಣ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ಸಂಚಾರ ಹೆಚ್ಚಾಗಿ ದಟ್ಟಣೆ ಜಾಸ್ತಿಯಾಗಿತ್ತು. ಬಸ್‌ ನಿಲ್ದಾಣಗಳಲ್ಲಿ ಗೊಂದಲ ವಾತಾವರಣ ಇದ್ದ ಕಾರಣ ಮುಂಗಡ ಟಿಕೆಟ್‌ ಕಾಯ್ದಿರಿಸಿದ್ದವರು ತಮ್ಮ ಬಸ್‌ಗಳನ್ನು ಹುಡುಕಲು ಹರಸಾಹಸ ಪಟ್ಟರು.

ನಗರದ ವಿವಿಧೆಡೆಗಳಿಂದ ಪ್ರಯಾಣಿಕರು ಹೆಚ್ಚಾಗಿ ಖಾಸಗಿ ವಾಹನಗಳ ಮೂಲಕ ಬಸ್‌ ನಿಲ್ದಾಣಗಳತ್ತ ಬಂದ ಪರಿಣಾಮ ಮೆಜೆಸ್ಟಿಕ್‌, ಮಲ್ಲೇಶ್ವರ, ಯಶವಂತಪುರ, ಶಾಂತಿನಗರ, ಮೈಸೂರು ರಸ್ತೆ ಸೇರಿದಂತೆ ಮತ್ತಿತರ ಕಡೆಗಳಲ್ಲಿ ವಾಹನ ಸಂಚಾರ ನಿಧಾನಗತಿಯಲ್ಲಿ ಇತ್ತು. ತಡರಾತ್ರಿವರೆಗೆ ಬಸ್‌ಗಳು ನಗರದಿಂದ ಹೊರಗೆ ಹೊರಟಿದ್ದರಿಂದ ತುಮಕೂರು ರಸ್ತೆ, ಮೈಸೂರು ರಸ್ತೆ, ಕನಕಪುರ ರಸ್ತೆ, ಹೊಸೂರು ರಸ್ತೆ ಸೇರಿದಂತೆ ಬೆಂಗಳೂರಿನಿಂದ ಹೊರಗೆ ಹೋಗುವ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಓಡಾಟ ಕಷ್ಟಕರವಾಗಿತ್ತು.

ಸಾರಿಗೆ ಅಧಿಕಾರಿಗಳ ತಪಾಸಣೆ

ಖಾಸಗಿ ಬಸ್‌ಗಳ ಸುಲಿಗೆ ತಡೆಯಲು ಸಾರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಬೆಳಗ್ಗೆಯಿಂದಲೇ ಪ್ರಮುಖ ಬಸ್‌ ನಿಲ್ದಾಣಗಳಲ್ಲಿ ತಪಾಸಣೆ ನಡೆಸಿದರು. ಸಾರಿಗೆ ಇಲಾಖೆ ಅಧಿಕಾರಿಗಳು ಹೆಚ್ಚುವರಿ ಟಿಕೆಟ್‌ ದರ ವಸೂಲಿ ಬಗ್ಗೆ ಪರಿಶೀಲನೆ ನಡೆಸಿದರು. ಈ ವೇಳೆ ಹೆಚ್ಚಿನ ದರ ವಸೂಲಿ ಮಾಡುತ್ತಿದ್ದ ಬಸ್‌ ಮಾಲೀಕರಿಗೆ ಎಚ್ಚರಿಕೆ ನೀಡಿ, ದಂಡ ವಿಧಿಸಲಾಯಿತು. ಅಷ್ಟಾದರೂ ಬಸ್‌ ಮಾಲೀಕರು ರಾತ್ರಿ ವೇಳೆಗೆ ಹೆಚ್ಚುವರಿ ದರ ವಸೂಲಿಯನ್ನು ಬಿಟ್ಟಿರಲಿಲ್ಲ.

ಖಾಸಗಿ ಬಸ್‌ಗಳ ಸುಲಿಗೆ

ಕೆಎಸ್ಸಾರ್ಟಿಸಿ ಬಸ್‌ಗಳನ್ನು ಹೊರತುಪಡಿಸಿ ಖಾಸಗಿ ಬಸ್‌ಗಳಲ್ಲೂ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಸಾರಿಗೆ ಇಲಾಖೆ ಎಚ್ಚರಿಕೆ ನಡುವೆಯೂ ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಕಾರಣ ಖಾಸಗಿ ಬಸ್‌ಗಳ ಸುಲಿಗೆ ಜೋರಾಗಿತ್ತು. ಬೆಂಗಳೂರಿನಿಂದ ವಿವಿಧ ಕಡೆ ಹೊರಡುವ ಖಾಸಗಿ ಬಸ್‌ಗಳ ಪ್ರಯಾಣ ದರವನ್ನು ದುಪ್ಪಟ್ಟು ಹೆಚ್ಚಿಸಲಾಗಿತ್ತು. ಕೆಎಸ್ಸಾರ್ಟಿಸಿ ಬಸ್‌ ಸಿಗದವರು ಖಾಸಗಿ ಬಸ್‌ಗಳತ್ತ ಮುಖ ಮಾಡಿದರು. ಆದರೆ, ಬಸ್ ಪ್ರಯಾಣ ದರವನ್ನು ಕೇಳಿ ಅಘಾತಕ್ಕೊಳಗಾದರು. ಪ್ರಮುಖವಾಗಿ ಮಂಗಳೂರು, ಹುಬ್ಬಳ್ಳಿ, ಶಿವಮೊಗ್ಗ, ಬೆಳಗಾವಿ, ಬಳ್ಳಾರಿ, ದಾವಣಗೆರೆ ಕಡೆಗೆ ಹೋಗುವ ಬಸ್‌ಗಳ ದರ ಮಾಮೂಲಿಗಿಂತ ದುಪ್ಪಟ್ಟು ಹೆಚ್ಚಿತ್ತು.

PREV
Read more Articles on
click me!

Recommended Stories

15 ವರ್ಷಗಳಲ್ಲಿ 96 ಕಿ.ಮೀ ಬೆಳೆದ ನಮ್ಮ 'ದುಬಾರಿ' ಮೆಟ್ರೋ, ನಿರೀಕ್ಷಿತ ಮಟ್ಟಕ್ಕೆ ಮುಟ್ಟದ ಪ್ರಯಾಣಿಕರ ಸಂಖ್ಯೆ
ಬಾಯಲ್ಲಿ ಸಿಮ್ ಕಾರ್ಡ್ ಅಡಗಿಸಿ ಪ್ರಜ್ವಲ್‌ಗೆ ನೀಡಿದ್ದ ಡಿಜೆ ಹಳ್ಳಿ ಆರೋಪಿ!: ಫೋನ್‌ಗಾಗಿ 70 ಸಾವಿರ, ಸಿಮ್‌ಗೆ 30 ಸಾವಿರ ರೂ. ಲಂಚ!