ಲಕ್ಕುಂಡಿ ಗ್ರಾ. ಪಂಚಾಯಿತಿಯಲ್ಲಿ ದಿಢೀರ್ ಬದಲಾವಣೆ; ಆಡಳಿತಾಧಿಕಾರಿ, PDO ವರ್ಗಾವಣೆ

Published : Aug 13, 2026, 07:48 AM IST
Lakkundi

ಸಾರಾಂಶ

ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಮೂಲ ಸೌಲಭ್ಯಗಳ ವೈಫಲ್ಯವನ್ನು ಖಂಡಿಸಿ ಗ್ರಾಮಸ್ಥರು ನಡೆಸಿದ ಪ್ರತಿಭಟನೆ ಯಶಸ್ವಿಯಾಗಿದೆ. ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಆಡಳಿತಾಧಿಕಾರಿ ಹಾಗೂ ಪಿಡಿಒ ಅವರನ್ನು ವರ್ಗಾವಣೆಗೊಳಿಸಿದ್ದಾರೆ.

ಗದಗ: ತಾಲೂಕಿನ ಲಕ್ಕುಂಡಿ ಗ್ರಾಮಕ್ಕೆ ಮೂಲ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವಲ್ಲಿ ಆಡಳಿತಾಧಿಕಾರಿಗಳು ಮತ್ತು ಪಿಡಿಒ ಅವರ ವೈಫಲ್ಯ ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆ ಆಡಳಿತಾಧಿಕಾರಿಯ ಕರ್ತವ್ಯ ಬಿಡುಗಡೆ ಹಾಗೂ ಪಿಡಿಒ ಅವರ ವರ್ಗಾವಣೆಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಎಸ್. ಜನಗಿ ಆದೇಶಿಸಿದರು.

ಈ ಕುರಿತು ಕಳೆದ ಎರಡು ದಿನಗಳಿಂದ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತ ಆಡಳಿತಾಧಿಕಾರಿಗಳ ಬದಲಾವಣೆಗೆ ಪಟ್ಟು ಹಿಡಿದಿದ್ದರು. ತಾಪಂ ಇಒ ಡಾ. ಎಚ್.ಎಸ್. ಜನಗಿ ಅವರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಸಮಸ್ಯೆಗಳನ್ನು ಆಲಿಸಿದರು.

ಆಡಳಿತ ನಡೆಸುವ ವಿಫಲತೆ

ಅಸಮರ್ಪಕ ಕುಡಿಯುವ ನೀರು, ಅವೈಜ್ಞಾನಿಕ ಜೆಜೆಎಂ ಕಾಮಗಾರಿ, ರಸ್ತೆಗಳ ಅಸ್ವಚ್ಛತೆ, ಬೀದಿದೀಪ, ರಾಜಬೀದಿ ದುರಸ್ತಿ, ಸಿಬ್ಬಂದಿಯ ವಿಳಂಬ ವೇತನ ಸೇರಿದಂತೆ ಹತ್ತು ಹಲವು ಸಮಸ್ಯೆಗಳ ಬಗ್ಗೆ ಆಡಳಿತ ನಡೆಸುವ ವಿಫಲತೆಯನ್ನು ಎತ್ತಿ ತೋರಿಸಿದಾಗ ಮನವೊಲಿಕೆಗೆ ಆಗಮಿಸಿದ್ದ ಅಧಿಕಾರಿಗಳು ತಕ್ಷಣವೇ ಆಡಳಿತಾಧಿಕಾರಿ ಶರಣು ಗೋಗೇರಿ ಅವರಿಂದ ಕರ್ತವ್ಯ ಬಿಡುಗಡೆಯ ಪತ್ರ ಹಾಗೂ ಪಿಡಿಒ ಅಮೀರನಾಯಕ ಅವರಿಂದ ವರ್ಗಾವಣೆ ಮನವಿ ಪತ್ರವನ್ನು ಪಡೆದರು.

ನಂತರ ಮಾತನಾಡಿದ ಅವರು, ಜಿಪಂ ಹಾಗೂ ತಾಪಂನಲ್ಲಿ ಕುಡಿಯುವ ನೀರು ಹಾಗೂ ರಸ್ತೆ ಅಭಿವೃದ್ಧಿ ಸೇರಿದಂತೆ ಅಧಿಕ ಅನುದಾನವಿದ್ದು, ಅವುಗಳನ್ನು ಸಮರ್ಪಕ ಬಳಕೆ ಮಾಡುವುದರೊಂದಿಗೆ ಐತಿಹಾಸಿಕ ಲಕ್ಕುಂಡಿ ಗ್ರಾಮದ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುವುದು ಎಂದರು.

6 ತಿಂಗಳಿಂದ ಗ್ರಾಮದ ಅಭಿವೃದ್ಧಿ ಹಿನ್ನಡೆ

ಪ್ರತಿಭಟನೆಯ ನೇತೃತ್ವ ವಹಿಸಿದ್ದ ತಾಪಂ ಮಾಜಿ ಅಧ್ಯಕ್ಷ ಎಂ.ಎನ್. ಉಮಚಗಿ, ತಾಪಂ ಮಾಜಿ ಸದಸ್ಯ ಮಹೇಶ ಮುಸ್ಕಿನಭಾವಿ ಹಾಗೂ ನಜೀರಅಹ್ಮದ ಕಿರಿಟಗೇರಿ ಮಾತನಾಡಿ, ಕಳೆದ 6 ತಿಂಗಳಿಂದ ಗ್ರಾಮದ ಅಭಿವೃದ್ಧಿ ಹಿನ್ನಡೆ ಹಾಗೂ ಇಬ್ಬರು ಅಧಿಕಾರಿಗಳ ಸಮನ್ವಯ ಕೊರತೆ ಕುರಿತು ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಹಲವಾರು ಸಲ ಗ್ರಾಮದ ಹಲವಾರು ಸಮಸ್ಯೆಗಳ ಕುರಿತು ಹಿರಿಯ ಅಧಿಕಾರಿಗಳಿಗೂ ಸಹ ತಿಳಿಸಿದರೂ ಕಾಳಜಿ ವಹಿಸಿರಲಿಲ್ಲ. ಆದ್ದರಿಂದ ಆಡಳಿತ ಅಧಿಕಾರಿಗಳನ್ನು ಬದಲಾವಣೆ ಮಾಡಬೇಕೆಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಸ್ಥಳಕ್ಕೆ ಆಗಮಿಸಿದ ತಾಪಂ ಅಧಿಕಾರಿಗಳು ಪರಿಸ್ಥಿತಿಯ ಗಂಭಿರತೆಯನ್ನು ಅರಿತು ಇಬ್ಬರು ಅಧಿಕಾರಿಗಳನ್ನು ಹಿಂಪಡೆದು ನೂತನ ಅಧಿಕಾರಿಗಳನ್ನು ನೇಮಕ ಮಾಡುವ ಭರವಸೆ ನೀಡಿದ್ದಾರೆ. ಲಕ್ಕುಂಡಿ ಗ್ರಾಮದ ಅಭಿವೃದ್ಧಿಗೆ ಬಗ್ಗೆ ವಿಶೇಷ ಕಾಳಜಿ ವಹಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದರು.

ಶಿವಪ್ಪ ಸಜ್ಜನರ, ಗ್ರಾಪಂ ಮಾಜಿ ಸದಸ್ಯ ಬಿ.ಬಿ. ಮಾಡಲಗೇರಿ, ಮರಿಯಪ್ಪ ವಡ್ಡರ, ಕಳಕೇಶ ಟೆಂಗಿನಕಾಯಿ, ಚಂದ್ರಗೌಡ ಪಾಟೀಲ, ಚನ್ನಪ್ಪ ಹುಬ್ಬಳ್ಳಿ, ಬಸವರಾಜ ಮುಳ್ಳಾಳ, ಬಸವರಾಜ ಕವಲೂರು, ಪ್ರವೀಣ ಕಲಾಲ, ವಿನಾಯಕ ಡಿಗ್ಗಾವಿ, ಮಂಜುನಾಥ ತಡಹಾಳ, ಬಸವರಾಜ ಕುಂಬಾರ, ವೀರಣ್ಣ ಅರಹುಣಶಿ, ಶಿವಪ್ಪ ಭಜಂತ್ರಿ, ರವಿ ಕವಲೂರು ಇತರರು ಇದ್ದರು.

ಇದನ್ನೂ ಓದಿ: ಗ್ರಾಮವನ್ನು ದೇವಸ್ಥಾನಕ್ಕೆ ದಾನ ನೀಡಿದ ಮಾಹಿತಿ ವಿಜಯನಗರ ಕಾಲದ ಶಾಸನ ಕಂಪ್ಲಿಯಲ್ಲಿ ಪತ್ತೆ

PREV
Read more Articles on
click me!

Recommended Stories

ಸಕಲೇಶಪುರ - ಸುಬ್ರಹ್ಮಣ್ಯ ರೋಡ್‌: ವಂದೇ ಭಾರತ್ ರೈಲಿನ ಪರೀಕ್ಷಾರ್ಥ ಸಂಚಾರ ಯಶಸ್ವಿ
organ donation registration ಅಂಗಾಂಗ ದಾನ ನೋಂದಣೀಲಿ ರಾಜ್ಯಕ್ಕೆ ಧಾರವಾಡ ನಂಬರ್ ಒನ್!