Gadag: ಅಪಾಯದಂಚಿನ ಮಾರ್ಗ: ಜೀವ ಪಣಕ್ಕಿಟ್ಟು ಸಾಗುವ 1 ಕಿ.ಮೀ ರಸ್ತೆ ಪಯಣ, ಆಟೋಗಷ್ಟೇ ದಾರಿ

Published : May 30, 2026, 08:02 AM IST
Road

ಸಾರಾಂಶ

2019ರಿಂದ ಮಲಪ್ರಭಾ ಮತ್ತು ಬೆಣ್ಣಿಹಳ್ಳ ಪ್ರವಾಹದಿಂದಾಗಿ ಹೊಳೆಆಲೂರು-ಅಮರಗೋಳ ಸಂಪರ್ಕ ರಸ್ತೆ ತೀವ್ರವಾಗಿ ಹದಗೆಟ್ಟಿದೆ. ಸುಮಾರು 1 ಕಿ.ಮೀ ರಸ್ತೆಯು ಬಿರುಕು ಬಿಟ್ಟು ಕುಸಿಯುವ ಹಂತದಲ್ಲಿದ್ದು, ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಜೀವ ಭಯದಿಂದ ಸಂಚರಿಸುವಂತಾಗಿದೆ. ಇದಕ್ಕೆ ಶಾಶ್ವತ ಪರಿಹಾರವಾಗಿ ತಡೆಗೋಡೆ ಅಥವಾ ಸೇತುವೆ ನಿರ್ಮಿಸಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ಸಂಜೀವಕುಮಾರ ಹಿರೇಮಠ

ಕನ್ನಡಪ್ರಭ ವಾರ್ತೆ ಹೊಳೆಆಲೂರು:  2019ರಿಂದ ಮಲಪ್ರಭಾ ಮತ್ತು ಬೆಣ್ಣಿಹಳ್ಳ ಪ್ರವಾಹಕ್ಕೆ ಪ್ರತಿವರ್ಷ ರಸ್ತೆಗಳು ಸಂಪೂರ್ಣ ಹಾಳಾಗುತ್ತಾ ಬರುತ್ತಿದ್ದು, ಅಮರಗೋಳದ 1 ಕಿಮೀ ರಸ್ತೆ ಬಿರುಕು ಬಿಟ್ಟು ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸುವ ಪರಿಸ್ಥಿತಿ ಎದುರಾಗಿದೆ.

ಹೊಳೆಆಲೂರಿನಿಂದ ಅಮರಗೋಳ, ಹೊಳೆಹಡಗಲಿ, ಬಸರಕೋಡ, ಬಿ.ಎಸ್. ಬೇಲೇರಿ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆ ಇದಾಗಿದ್ದು, ಹೊಳೆಆಲೂರು ಹಾಗೂ ಅಮರಗೋಳ ನಡುವೆ 1 ಕಿಮೀ ರಸ್ತೆ ಪಕ್ಕ ಮಲಪ್ರಭಾ ನದಿ ನೀರು ಹರಿಯುತ್ತಿದ್ದು, 2019ರಿಂದ 3- 4 ಬಾರಿ ತಡೆ ಕಟ್ಟಿ ಮಣ್ಣು ಹಾಕಿದರೂ ಪ್ರಯೋಜನವಾಗಿಲ್ಲ. ಅರ್ಧ ರಸ್ತೆ ಮಾತ್ರ ಉಳಿದುಕೊಂಡಿದ್ದು, ಪ್ರಯಾಣಿಕರಿಗೆ ಜೀವ ಕಂಟಕವಾಗಿದೆ.

ಈಗ ದೊಡ್ಡ ಸೇತುವೆ ಆಗಿದೆ ಸರಿ, ಮೊದಲು ಸಣ್ಣ ಸೇತುವೆ ಇದ್ದ ಸಂದರ್ಭದಲ್ಲಿ ಮುಳುಗಡೆ ಆದರೆ 10ರಿಂದ 15 ಕಿಮೀ ವ್ಯತ್ಯಾಸವಾಗಬಹುದು ಅಷ್ಟೇ. ಬಿಟ್ಟರೆ ಹೊಳೆಆಲೂರಿನಿಂದ ರೈತರಿಗೆ ಬೇಲೂರು(ಜಾಲಿಹಾಳ) ಸಂತೆಗೆ, ನೈನಾಪುರ, ಮಣ್ಣೀರಿ, ಬಾದಾಮಿ ತಾಲೂಕಿನ ಅನೇಕ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ.

ಈ ಮಾರ್ಗದಲ್ಲಿ ಬರುವ ಗ್ರಾಮಗಳಿಗೆ ಬಸ್ ಸಂಚಾರ ಇಲ್ಲ. ಒಂದು ಆಟೋ ಹೋಗುವಷ್ಟು ಮಾತ್ರ ರಸ್ತೆ ಉಳಿದಿದ್ದು, ಅದು ರಸ್ತೆ ಬುಡದ ಮಣ್ಣು ಹಸಿಯಾಗಿದ್ದು, ಟಾರು ರಸ್ತೆ ಸಹ ಬಿರುಕು ಬಿಡುತ್ತಿದೆ. ಪ್ರಯಾಣಿಕರು ತುಂಬಿದ ವಾಹನ, ವಸ್ತುಗಳು ಲೋಡ್ ಆದ ವಾಹನದ ಚಾಲಕರು, ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸುವ ಸ್ಥಿತಿ ಇದೆ. ಮಲಪ್ರಭಾ ನದಿ ಸ್ವಲ್ಪ ಏರಿಕೆಯಾಗಿ ಬಂದರೂ ಇಲ್ಲಿಯ ರಸ್ತೆ ಸಂಪೂರ್ಣ ಕುಸಿದು ಬಿದ್ದು, ನದಿ ಸೇರುವ ಸ್ಥಿತಿಯಲ್ಲಿದೆ.

ವಿದ್ಯಾರ್ಥಿಗಳಿಗೆ ಸಮಸ್ಯೆ

ಹೊಳೆಆಲೂರಿಗೆ ಶಿಕ್ಷಣಕ್ಕೆ ಎಲ್ಕೆಜಿಯಿಂದ ಪ್ರಾಥಮಿಕ, ಪ್ರೌಢ, ಪದವಿಪೂರ್ವ, ಪದವಿ, ಡಿಪ್ಲೊಮಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಪಾಡು ನೋಡುವಂತಿಲ್ಲ. ಬಸ್ ವ್ಯವಸ್ಥೆ ಇಲ್ಲದೆ, ಗ್ರಾಮಗಳಲ್ಲಿ ಆಟೋ ಹಿಡಿದು ಬರಬೇಕು. ಇಲ್ಲವಾದರೆ ನಡೆದು ಬರಬೇಕು. ಆಟೋಗಳಲ್ಲಿ ಬಂದ ವಿದ್ಯಾರ್ಥಿಗಳು 1 ಕಿಮೀ ರಸ್ತೆಯಲ್ಲಿ ಭಯದಿಂದ ಸಂಚರಿಸಬೇಕಿದೆ.

ಶಾಶ್ವತ ಪರಿಹಾರ ಅವಶ್ಯ:

2019ರಿಂದ ಇಲ್ಲಿಯವರೆಗೆ 3- 4 ಬಾರಿ ಕಿತ್ತ ರಸ್ತೆ ಹಾಗೆ 3- 4 ಬಾರಿ ಮಣ್ಣು ಹಾಕಲಾಗಿದೆ. ಆದರೂ ರಸ್ತೆ ಕೊರೆತ ಹೆಚ್ಚಾಗಿದ್ದು, ನಾಲ್ಕೈದು ಗ್ರಾಮಗಳ ಜನರು, ವಿದ್ಯಾರ್ಥಿಗಳು, ರೈತರ ಪಾಡು ಹೇಳಲಾಗದು. ಅದೇ ಪರಿಸ್ಥಿತಿ ನಡುವೆಯೇ ಪ್ರಯಾಣಿಸುತ್ತಾರೆ. ಆದ್ದರಿಂದ ಅಧಿಕಾರಿಗಳು, ಜನಪ್ರತಿನಿಧಿಗಳು ಶೀಘ್ರ ವ್ಯವಸ್ಥಿತ ಕಾಮಗಾರಿ ಕೈಗೊಂಡು ಸುರಕ್ಷಿತ ಸೇತುವೆ ಇಲ್ಲವೇ ತಡೆಗೋಡೆ ನಿರ್ಮಾಣ ಮಾಡಬೇಕಿದೆ.

ಇದನ್ನೂ ಓದಿ: ಬೆಂಗಳೂರು-ಹುಬ್ಬಳ್ಳಿ ಸೂಪರ್ ಫಾಸ್ಟ್ ರೈಲನ್ನು ಕುಷ್ಟಗಿಯವರೆಗೆ ವಿಸ್ತರಿಸಲು ಹೆಚ್ಚಿದ ಒತ್ತಾಯ, ಪ್ರಯೋಜನವೇನು?

ಸುರಕ್ಷಿತ ಸೇತುವೆ ಇಲ್ಲವೇ ತಡೆಗೋಡೆ ನಿರ್ಮಾಣ ಮಾಡಿದರೆ ತುಂಬಾ ಅನುಕೂಲ ಆಗುತ್ತದೆ. ನಾವು ಆಟೋರಿಕ್ಷಾ ಓಡಿಸುತ್ತೇವೆ. ಆದರೆ ಬಸ್, ಟ್ರ್ಯಾಕ್ಟರ್, ರೈತರು ಕಾಳು ಕಡಿ ತುಂಬಿ ಸಂಚರಿಸಿದರೆ ಸಮಸ್ಯೆ ಆಗುತ್ತದೆ. ರಸ್ತೆ ಸಂಪೂರ್ಣ ಹಾಳಾದರೆ ಇಲ್ಲಿಯ ರೈತರಿಗೆ ನದಿಯಿಂದ ತುಂಬಾ ಸಮಸ್ಯೆ ಆಗುತ್ತದೆ. ನದಿಯಲ್ಲಿ ನಿತ್ಯ ಹರಿಯುವ ಸ್ವಲ್ಪ ನೀರು ರೈತರ ಜಮೀನಿನ ಮೇಲೆ ಹರಿಯುತ್ತದೆ ಎಂದು ಸ್ಥಳೀಯ ಆಟೋ ಚಾಲಕರು ಹೇಳುತ್ತಾರೆ.

ಇದನ್ನೂ ಓದಿ: ಉತ್ತರ ಕರ್ನಾಟಕ ರೈಲು ಅಭಿವೃದ್ಧಿ ಬಗ್ಗೆ ಮಹತ್ವದ ಸಭೆ, ಗದಗ-ಮುಂಬೈ ವಂದೇ ಭಾರತ್ ಎಕ್ಸಪ್ರೆಸ್‌ಗೆ ಡಿಮ್ಯಾಂಡ್

PREV
Read more Articles on
click me!

Recommended Stories

ಸಾಯಲೆತ್ನಿಸಿದ ಪತ್ನಿ ಬದುಕುಳಿದ್ರೂ ಪತಿ ಮೇಲೆ ಚಾರ್ಜ್‌ಶೀಟ್; ಇನ್ಸ್‌ಪೆಕ್ಟರ್‌ಗೆ ಹೈಕೋರ್ಟ್ ತರಾಟೆ, ಏನಿದು ಪ್ರಕರಣ?
ತಾಜಾ ಮಾವಿನ ಹಣ್ಣು ನೇರವಾಗಿ ರೈತರಿಂದ ನಿಮ್ಮ ಮನೆಗೆ! ಹಾಪ್‌ಕಾಮ್ಸ್-ಅಂಚೆ ಇಲಾಖೆ ಹೊಸ ಸೇವೆ ಆರಂಭ, ಆರ್ಡರ್ ಮಾಡುವ ಲಿಂಕ್ ಇಲ್ಲಿದೆ!