ಗದಗ: ರಸ್ತೆಯ ಮೇಲೆಯೇ ಶವ ಸಂಸ್ಕಾರ..!

By Kannadaprabha NewsFirst Published Jul 16, 2021, 11:39 AM IST
Highlights

* ಲಕ್ಷ್ಮೇಶ್ವರ ತಾಲೂಕಿನ ಬಹುತೇಕ ಗ್ರಾಮಗಳು ಎದುರಿಸುತ್ತಿರುವ ಸಮಸ್ಯೆ ಇದು
* ಸ್ಮಶಾನಗಳಿಗೆ ಹೋಗಲು ಸರಿಯಾದ ದಾರಿ ಇಲ್ಲ
* ಸ್ಮಶಾನದ ಜಾಗೆಯಲ್ಲಿ ಬೆಳೆದ ಮುಳ್ಳು ಕಂಠಿಗಳು 
 

ಅಶೋಕ ಸೊರಟೂರ

ಲಕ್ಷ್ಮೇಶ್ವರ(ಜು.16): ಸಮೀಪದ ಬಟ್ಟೂರ ಗ್ರಾಮದಲ್ಲಿ ಯಾರಾದರೂ ಸತ್ತರೆ ಅವರನ್ನು ರಸ್ತೆಯ ಮೇಲೆಯೇ ಅಂತ್ಯಸಂಸ್ಕಾರ ಮಾಡಲಾಗುತ್ತದೆ!.  ಗ್ರಾಮದಲ್ಲಿ ಗುರುವಾರ ವ್ಯಕ್ತಿಯೊಬ್ಬರು ಮೃತರಾಗಿದ್ದು, ಗೌರವಯುತ ಅಂತ್ಯಸಂಸ್ಕಾರ ಸಾಧ್ಯವಾಗಲಿಲ್ಲ. ಈ ಹಿಂದೆ ಇದ್ದ ಸ್ಮಶಾನಕ್ಕೆ ಈಗ ದಾರಿ ಇಲ್ಲದ್ದರಿಂದ ಗ್ರಾಮದಲ್ಲಿ ಯಾರಾದರೂ ಮೃತರಾದಲ್ಲಿ ಬಟ್ಟೂರ- ಪು.ಬಡ್ನಿ ಗ್ರಾಮದ ರಸ್ತೆಯ ಮೇಲೆ ಶವ ಸಂಸ್ಕಾರ ಮಾಡುವ ಪರಿಸ್ಥಿತಿ ಉಂಟಾಗಿದೆ.

ಈ ಗ್ರಾಮದಲ್ಲಿ ಮೊದಲು ಸ್ಮಶಾನ ಇತ್ತು. ಸಣ್ಣ ಹಳ್ಳವೊಂದನ್ನು ದಾಟಿ ಜನರು ಅಂತ್ಯಸಂಸ್ಕಾರಕ್ಕೆ ಹೋಗಬೇಕಿತ್ತು. ಮಳೆಗಾಲದಲ್ಲಿ ಸ್ವಲ್ಪ ನೀರಿರುತ್ತಿತ್ತು. ಉಳಿದ ಸಮಯದಲ್ಲಿ ಅಷ್ಟೊಂದು ನೀರಿನ ಹರಿವು ಇರುತ್ತಿರಲಿಲ್ಲ. ಆದರೂ ಜನರು ಅದನ್ನು ದಾಟಿ ಹೋಗುತ್ತಿದ್ದರು. ತೊಂದರೆ ಇರಲಿಲ್ಲ. ಇತ್ತೀಚಿಗೆ ಸಣ್ಣ ನೀರಾವರಿ ಇಲಾಖೆಯಿಂದ ಹಳ್ಳಕ್ಕೆ ಬಾಂಧಾರ ನಿರ್ಮಿಸಿದ್ದರಿಂದ ದಾರಿಯಲ್ಲಿ ಹಿನ್ನೀರು ನಿಲ್ಲುತ್ತಿರುವುದರಿಂದ ಅಲ್ಲಿಗೆ ಹೋಗಲು ಸಾಧ್ಯವಾಗುತ್ತಿಲ್ಲ.

ರಾಣಿಬೆನ್ನೂರು: ಶವಸಂಸ್ಕಾರಕ್ಕೆ ಅಡ್ಡಿ, ಗ್ರಾಪಂ ಎದುರು ದಹನಕ್ಕೆ ಯತ್ನ

30 ಗ್ರಾಮಗಳಲ್ಲೂ..:

ತಾಲೂಕಿನ ಸುಮಾರು 30ಕ್ಕೂ ಹೆಚ್ಚು ಗ್ರಾಮಗಳಲ್ಲಿ ಹಿಂದೂ ರುದ್ರಭೂಮಿಗಳು ಇಲ್ಲದ್ದರಿಂದ ಯಾರಾದರೂ ಮೃತಪಟ್ಟರೆ ಶವ ಸಂಸ್ಕಾರವನ್ನು ರಸ್ತೆಯ ಅಕ್ಕಪಕ್ಕದಲ್ಲಿ ಅಥವಾ ಹಳ್ಳದ ದಂಡೆಗಳಲ್ಲಿ ಮುಳ್ಳು ಕಂಠಿಗಳ ಮಧ್ಯದಲ್ಲಿ ಮಾಡಲಾಗುತ್ತಿದೆ. ಹಿಂದೂಗಳ ರುದ್ರ ಭೂಮಿ ಇರುವ ಕೆಲವೇ ಗ್ರಾಮಗಳ ಸ್ಮಶಾನದ ಜಾಗೆಯಲ್ಲಿ ಮುಳ್ಳು ಕಂಠಿಗಳು ಬೆಳೆದಿದ್ದು ಶವ ಹೊತ್ತುಕೊಂಡು ಹೋಗಲು ಮತ್ತು ಮಣ್ಣು ಮಾಡಲು ಹರಸಾಹಸ ಪಡಬೇಕಾದ ಪರಿಸ್ಥಿತಿ ಇದೆ. ಕೆಲವು ಕಡೆಗಳಲ್ಲಿ ಸ್ಮಶಾನ ಭೂಮಿಗಳಿಗೆ ಹೋಗಲು ಸರಿಯಾದ ದಾರಿ ಇಲ್ಲ.

ಬಾಂದಾರದ ಹಿನ್ನೀರು ದಾರಿಯ ಮೇಲೆ ನಿಂತುಕೊಂಡಿದ್ದರಿಂದ ಅದನ್ನು ದಾಟಿಕೊಂಡು ಸ್ಮಶಾನಕ್ಕೆ ಹೋಗಲು ಆಗುತ್ತಿಲ್ಲ, ಆದ್ದರಿಂದ ರಸ್ತೆಯ ಪಕ್ಕದಲ್ಲಿಯೇ ಶವ ಸಂಸ್ಕಾರ ನಡೆಸುತ್ತೇವೆ ಎಂದು ಬಟ್ಟೂರ ಗ್ರಾಪಂ ಮಾಜಿ ಸದಸ್ಯ ಮಂಜುನಾಥ ಇಮ್ಮಡಿ ತಿಳಿಸಿದ್ದಾರೆ.  

ಗ್ರಾಮಕ್ಕೆ ಇಲ್ಲದಿರುವ ಕುರಿತು ಗ್ರಾಪಂ ಠರಾವು ಪಾಸ್‌ ಮಾಡಿ ಕಂದಾಯ ಇಲಾಖೆಗೆ ಕಳುಹಿಸಿದೆ. ಅಧಿಕಾರಿಗಳಿಂದ ಈ ವರೆಗೆ ಯಾವುದೆ ಉತ್ತರ ಬಂದಿಲ್ಲ ಎಂದು ಬಟ್ಟೂರು ಗ್ರಾಪಂ ಪಿಡಿಒ ಎಂ.ಆರ್‌. ಮಾದರ ಹೇಳಿದ್ದಾರೆ.  
 

click me!