* ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಪೊಲೀಸರ ಹಲ್ಲೆ
* ಕಪಾಳ, ಕೈಗೆ ಹೊಡೆದು ಪೊಲೀಸರ ದೌರ್ಜನ್ಯ
* ಬಿಜೆಪಿಗರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ
ಕಾರವಾರ(ಜು.16): ಕಾಂಗ್ರೆಸ್ ಕಾರ್ಯಕರ್ತರನ್ನು ಅನಗತ್ಯವಾಗಿ ಠಾಣೆಗೆ ಕರೆಯಿಸಿ ಹಲ್ಲೆ ಮಾಡಿರುವುದು ಸರಿಯಲ್ಲ. ಇದು ಪೊಲೀಸರ ದರ್ಪ ತೋರುತ್ತದೆ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ ಅಸಮಾಧಾನ ಹೊರಹಾಕಿದ್ದಾರೆ.
ನಗರಕ್ಕೆ ಗುರುವಾರ ಆಗಮಿಸಿ, ಹಲ್ಲೆಯ ಕುರಿತು ನಗರ ಪೊಲೀಸ್ ಠಾಣಾಧಿಕಾರಿ ಭೇಟಿಯಾಗಲು ತೆರಳಿದ ಸಂದರ್ಭದಲ್ಲಿ ಮಾಧ್ಯಮದವ ಜತೆಗೆ ಮಾತನಾಡಿ, ತಮ್ಮ ಪಕ್ಷದ ಕಾರ್ಯಕರ್ತ ಅಜಯ್ ಸಿಗ್ಲಿ ಎನ್ನುವವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಹಾಕಿದ್ದರು. ಈ ಬಗ್ಗೆ ವಿಚಾರಣೆಗೆ ಕರೆದ ಪೊಲೀಸರು ಅಜಯ್ ಕಪಾಳಕ್ಕೆ, ಕೈಗೆ ಹೊಡೆದು ದೌರ್ಜನ್ಯವೆಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
undefined
ಅಜಯ್ ಸಾಮಾಜಿಕ ಜಾಲತಾಣದಲ್ಲಿ ಯಾರ ಹೆಸರನ್ನೂ ಬಳಕೆ ಮಾಡಿಲ್ಲ. ಅವರ ಪೋಸ್ಟರ್‌ಗಳನ್ನು ಪರಿಶೀಲಿಸಲಿ. ಸರ್ಕಾರದ ಕಾರ್ಯಕ್ರಮ ಟೀಕಿಸಿದ್ದಾರೆ. ಪ್ರತಿಯೊಬ್ಬ ನಾಗರಿಕನಿಗೂ ಟೀಕಿಸುವ ಹಕ್ಕಿದೆ. ಸ್ಥಳೀಯ ಶಾಸಕರ ಒತ್ತಡದಿಂದ ಪೊಲೀಸರು ಈ ರೀತಿ ಮಾಡಿದ್ದಾರೆ. ಸರ್ಕಾರಿ ಅಧಿಕಾರಿಗಳು ಸಂವಿಧಾನಕ್ಕೆ, ರಾಷ್ಟ್ರಧ್ವಜಕ್ಕೆ ನಿಷ್ಠರಾಗಬೇಕು. ಶಾಸಕರಿಗೆ, ಸಂಸದರಿಗೆ ಅಲ್ಲ. ಕಾನೂನು ಬಾಹಿರ ಕೆಲಸ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ನಾವು ಅಡ್ಡಿ ಪಡಿಸುವುದಿಲ್ಲ. ಕಾನೂನು ಬಾಹಿರವಾಗಿ ನಡೆದುಕೊಂಡ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮವಾಗಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಮಾಜಿ ಶಾಸಕ ಸತೀಶ ಸೈಲ್ ಇದ್ದರು.
ಬಿಜೆಪಿಗೆ ಕಿಂಚಿತ್ತೂ ಬಡವರ ಕಾಳಜಿಯಿಲ್ಲ: ಬಿ.ಕೆ. ಹರಿಪ್ರಸಾದ್
ಬಿಜೆಪಿಗರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ
ಕಾಂಗ್ರೆಸ್ಸಿಗರ ತಟ್ಟೆಯಲ್ಲಿ ಸೊಳ್ಳೆ ಬಿದ್ದಿದೆ ಎನ್ನುವ ಬಿಜೆಪಿಗರ ತಟ್ಟೆಯಲ್ಲಿ ಹೆಗ್ಗಣ ಬಿದಿದ್ದೆ. ಅದನ್ನು ನೋಡಿಕೊಳ್ಳಲಿ ಎಂದು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ ವ್ಯಂಗ್ಯವಾಡಿದರು. ನಗರಕ್ಕೆ ಗುರುವಾರ ಆಗಮಿಸಿದ್ದ ವೇಳೆ ಮಾಧ್ಯಮದವ ಜತೆಗೆ ಮಾತನಾಡಿದ ಅವರು, ಬೇರೆಯವರ ಬಗ್ಗೆ ಟೀಕಿಸುವಾಗ ಮೊದಲು ತಮ್ಮ ಬಗ್ಗೆ ಯೋಜಿಸಬೇಕು. ಕಾಂಗ್ರೆಸ್ಸಿಗರು ಮ್ಯುಸಿಕಲ್ ಚೇರ್ ಆಡುತ್ತಿದ್ದಾರೆ ಎನ್ನುವ ಬಿಜೆಪಿಗರು ಚೇರಿಗಾಗಿ ಕಿತ್ತಾಡುತ್ತಿದ್ದಾರೆ. ದಿನ ಬೆಳಗಾದರೆ ಡೆಲ್ಲಿಗೆ ಹೋಗಿ ಬರುವುದು ಮಾಡುತ್ತಿದ್ದಾರೆ ಎಂದರು.
ಯಡಿಯೂರಪ್ಪ ಇವತ್ತು ಇರುತ್ತಾರೆ, ನಾಳೆ ಹೋಗುತ್ತಾರೆ ಎಂದು ಸ್ವಪಕ್ಷಿಯರೇ ಟೀಕೆ, ಟಿಪ್ಪಣೆ ಮಾಡುತ್ತಿದ್ದಾರೆ. ಯೋಗೇಶ್ವರ ಡೆಲ್ಲಿಗೆ ಹೋಗಿ ಪರೀಕ್ಷೆ ಬರೆದಿದ್ದೇನೆ, ರಿಸಲ್ಟ್‌ಗಾಗಿ ಕಾಯುತ್ತಿದ್ದೇವೆ ಎನ್ನುತ್ತಾರೆ, ಯತ್ನಾಳ್ ಸಿಎಂ ಬದಲಾವಣೆಗೆ ಡೇಟ್ ನೀಡಿದ್ದಾರೆ. ಇವರ ಒಳ ಜಗಳದಿಂದಾಗಿ ಕೋವಿಡ್ ಸೋಂಕು ಎದುರಿಸಲು ವಿಫರಾಗಿದ್ದಾರೆ. ರಾಜ್ಯದಲ್ಲಿ ಹಿಂದೆಂದೂ ನಡೆಯದ ಅನಾಹುತವಾಗಿದೆ ಎಂದು ಕಿಡಿಕಾರಿದರು. ಕೆಆರ್‌ಎಸ್ ಜಲಾಶಯದ ಕುರಿತಾಗಿ ಮಾಧ್ಯಮದವರು ಪ್ರಶ್ನಿಸಿದಾಗ, ಅಲ್ಲಿನ ಜನರು ನೋಡಿಕೊಳ್ಳುತ್ತಾರೆ ಎಂದಷ್ಟೆ ಹೇಳಿದರು.