Chitradurga: ಫುಲ್ ಟ್ಯಾಂಕ್‌ ಪೆಟ್ರೋಲ್ ಬೆಳಗಾಗುವಷ್ಟರಲ್ಲಿ ಖಾಲಿ: ಮಿತಿಮೀರಿದ ಪೆಟ್ರೋಲ್‌ ಕದಿಯುವ ಗ್ಯಾಂಗ್‌ ಉಪಟಳ

By Sathish Kumar KH  |  First Published Jan 29, 2023, 6:20 PM IST

* ಚಿತ್ರದುರ್ಗದ ಬಿ.ವಿ.ಕೆ.ಎಸ್ ಬಡಾವಣೆಯಲ್ಲಿ ಪೆಟ್ರೋಲ್ ಕಳ್ಳರ ಹಾವಳಿ
* ರಾತ್ರಿ ವೇಳೆ ಮನೆಗೆ ನುಗ್ಗಿ ಕಳ್ಳತನ ಮಾಡ್ತಿರೋ ಖದೀಮರ ಗ್ಯಾಂಗ್
* ದುಬಾರಿ ಪೆಟ್ರೋಲ್‌ ಹಾಕಿಸಿಟ್ಟ ಗಾಡಿಗಳು ಬೆಳಗ್ಗೆ ಖಾಲಿ


ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಜ.29):  ಮನೆ ಮುಂದೆ ನಿಲ್ಲಿಸ್ತಿರೋ ವಾಹನಗಳನ್ನೆ ಟಾರ್ಗೆಟ್ ಮಾಡ್ತಿದ್ದಾರೆ ಖದೀಮ ಕಳ್ಳರು. ರಾತ್ರಿ ವೇಳೆ ಆಗಮಿಸಿ ವಾಹನಗಳ ಪೆಟ್ರೋಲ್ ಕದ್ದು ಪರಾರಿ ಆಗ್ತಿದ್ದಾರೆ ಚಾಲಾಕಿ ಚೋರರು. ಕಳ್ಳರು ಮಾಡ್ತಿರೋ ಖತರ್ನಾಕ್ ಕೆಲಸಕ್ಕೆ ಈ ಏರಿಯಾ ಜನರು ರೋಸಿ ಹೋಗಿದ್ದು ಪೊಲೀಸರ ಮೊರೆ ಹೋಗಿದ್ದಾರೆ. ಈ ಕುರಿತು ವರದಿ ಇಲ್ಲಿದೆ..

ರಾತ್ರಿ ವೇಳೆ ಆಗಮಿಸಿ ಸಲೀಸಾಗಿಯೇ ಪೆಟ್ರೋಲ್ ಕದ್ದು ಪರಾರಿ ಆಗ್ತಿರೋ ಚಾಲಾಕಿ ಕಳ್ಳನ ಕರಾಮತ್ತಿನ ಸಿಸಿಟಿವಿ ದೃಶ್ಯ. ನಿತ್ಯ ಚಿತ್ರದುರ್ಗ ನಗರದ ಬಿ.ವಿ.ಕೆ.ಎಸ್, ಧವಳಗಿರಿ ಬಡಾವಣೆಯ ಜನರು ಪೆಟ್ರೋಲ್ ಕಳ್ಳರ ಹಾವಳಿಗೆ ಬೇಸತ್ತು ಹೋಗಿದ್ದಾರೆ. ಕಷ್ಟ ಪಟ್ಟು ದುಡಿದು ತಮ್ಮ ದ್ವಿಚಕ್ರ ವಾಹನಗಳಿಗೆ ನೂರಾರು ರೂಪಾಯಿ ಪೆಟ್ರೋಲ್ ಹಾಕಿಸಿಕೊಂಡು ಬಂದು ಮನೆ ಮುಂದೆ ರಾತ್ರಿ ಸೇಫಾಗಿ ಇರುತ್ತೆ ಎಂದು ಮಲಗೋ ಜನರಿಗೆ ಖತರ್ನಾಕ್ ಕಳ್ಳರ ಗ್ಯಾಂಗ್ ನಿದ್ದೆಗೆಡಿಸಿದೆ. 

Latest Videos

undefined

ಐಪಿಎಸ್ ಅಧಿಕಾರಿಗೂ ತಟ್ಟಿದ ಕಳ್ಳನ ಕಾಟ: ಮದುವೆ ಸಮಾರಂಭದಲ್ಲಿ ದುಬಾರಿ ಗಿಫ್ಟ್ ಕದ್ದ ಖದೀಮ..!

ಪ್ರತಿನಿತ್ಯ ಕಳ್ಳರ ಕೈಚಳಕ ಪ್ರದರ್ಶನ: ಕಳೆದ ಒಂದು ತಿಂಗಳಿನಿಂದಲೂ ಒಂದಲ್ಲ ಒಂದು ಮನೆಯ ಮುಂದೆ ಪೆಟ್ರೋಲ್ ಕಳ್ಳರು ತಮ್ಮ ಚಾಲಾಕಿ ಬುದ್ದಿ ಉಪಯೋಗಿಸಿ ವಾಹನಗಳ ಪೆಟ್ರೋಲ್ ಕದ್ದು ಪರಾರಿ ಆಗ್ತಿದ್ದಾರೆ. ರಾತ್ರಿ ಬೈಕ್ ನ ಟ್ಯಾಂಕ್ ಫುಲ್ ಮಾಡಿಸಿಕೊಂಡು ಬಂದು ಬೆಳಗಾಗುವಷ್ಟರಲ್ಲಿ ಕಳ್ಳರು ಕದ್ದು ಪರಾರಿ ಅಗ್ತಿದ್ದಾರೆ. ಇದ್ರಿಂದಾಗಿ ನಿತ್ಯ ಏರಿಯಾದಲ್ಲಿ ಜನರು ವಾಹನಗಳನ್ನು ತಮ್ಮ ನಿವಾಸ ಬಳಿಯೂ ನಿಲ್ಲಿಸಿಕೊಳ್ಳಲಿಕ್ಕೆ ಭಯ ಪಡುವ ವಾತಾವರಣ ಸೃಷ್ಟಿ ಆಗಿದೆ. ಕೂಡಲೇ ಪೆಟ್ರೋಲ್ ಗ್ಯಾಂಗ್ ಕಳ್ಳರಿಗೆ ಎಡೆಮುರಿ ಕಟ್ಟಿ ಏರಿಯಾ ಜನರ ನೆಮ್ಮದಿ ಕಾಪಾಡಬೇಕಿದೆ ಎಂದು ಸ್ಥಳೀಯರು ಹೇಳುತ್ತಾರೆ.

ರಾತ್ರಿ ಬೀಟ್‌ ಬಾರದ ಪೊಲೀಸರು: ವಕೀಲರಾದ ಪ್ರತಾಪ್‌ ಜೋಗಿ ಅವರ ಮನೆಯ ಮುಂದೆ ನಿಲ್ಲಿಸೋ ವಾಹನಗಳಿಗೂ ಕಳ್ಳರು ತಮ್ಮ ಕೈ ಚಳಕ ತೋರಿದ್ದಾರೆ. ಈ ಬಗ್ಗೆ ಈಗಾಗಲೇ ಚಿತ್ರದುರ್ಗ ಕೋಟೆ ಪೊಲೀಸ್ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ‌. ಈ ಹಿಂದೆ ಏರಿಯಾಗಳಲ್ಲಿ ಪೊಲೀಸರು ರಾತ್ರಿ ವೇಳೆ ಬೀಟ್ ಬರುತ್ತಿದ್ದರು. ಆದರೆ, ಇತ್ತೀಚೆಗೆ ಪೊಲೀಸರು ಕೂಡ ರಾತ್ರಿ ವೇಳೆ ಏರಿಯಾಗಳಲ್ಲಿ ಬೀಟ್ ಮಾಡ್ತಿಲ್ಲ. ಹಾಗಾಗಿಯೇ ಕಳ್ಳರು ರಾತ್ರಿ ವೇಳೆ ಹಾಗೂ ಬೆಳಗಿನ ಜಾವ 4 ಗಂಟೆ ಸುಮಾರಿನಲ್ಲಿ ಕಳ್ಳತನ ಮಾಡಲು ಶುರು ಮಾಡಿದ್ದಾರೆ. 

Bengaluru: ಜಡ್ಜ್ ಮನೆಯನ್ನೂ ಬಿಡದ ಖದೀಮರು: 60ಕ್ಕೂ ಹೆಚ್ಚು ಬಾರಿ ಕಳ್ಳತನ ಮಾಡಿದ್ದ ಮನೆಗಳ್ಳರು ಅರೆಸ್ಟ್‌!

ಸಿಸಿಟಿವಿಯಲ್ಲಿ ಸೆರೆಯಾದರೂ ಬಂಧಿಸದ ಪೊಲೀಸರು: ನಮ್ಮ ಮನೆಯ ಬೈಕ್ ಗಳ ಪೆಟ್ರೋಲ್ ಕೂಡ ಕದ್ದಿದ್ದರಿಂದ ಕೂಡಲೇ ಎಚ್ಚೆತ್ತು ಸಿಸಿಟಿವಿ ಅಳವಡಿಸಲಾಯಿತು. ಅದರ ಪರಿಣಾಮವಾಗಿ ಕಳ್ಳರು ಪೆಟ್ರೋಲ್ ಕದಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರು ಮಾಹಿತಿ ನೀಡಲಾಗಿದೆ. ಕೂಡಲೇ ಅವರನ್ನು ಬಂಧಿಸಿ ಎಂದು ಒತ್ತಾಯಿಸಲಾಗಿದೆ ಎಂದು ವಕೀಲರಾದ ಪ್ರತಾಪ್‌ ಜೋಗಿ ಸುವರ್ಣ ನ್ಯೂಸ್‌ಗೆ ತಿಳಿಸಿದ್ದಾರೆ. 

ಒಟ್ಟಾರೆಯಾಗಿ ನಗರದ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಎರಡು ಬಡಾವಣೆಗಳಲ್ಲಿ ಕಳ್ಳರ ಹಾವಳಿ ಮಿತಿ ಮೀರಿದ್ದು ಇನ್ನಾದ್ರು ಪೊಲೀಸರು ಅಂತಹ ಖಧೀಮರಿಗೆ ಪಾಠ ಕಲಿಸುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.

click me!