‘ದಿನವಿಡಿ ಕುಡಿಯುವ ನೀರು’ ಕಾಮಗಾರಿ ಶೀಘ್ರ ಆರಂಭ

By Kannadaprabha News  |  First Published Dec 14, 2019, 9:32 AM IST

ದಿನವಿಡೀ ಕುಡಿಯುವ ನೀರು ಪೂರೈಸುವ ಯೋಜನೆಗೆ ಅನುಮೋದನೆ ದೊರೆತಿದ್ದು, ಕರಾರು ಪತ್ರಕ್ಕೂ ಸಹಿ ಹಾಕಲಾಗಿದೆ. ಕಾಮಗಾರಿ 8 ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ಶಾಸಕ ವೇದವ್ಯಾಸ ಕಾಮತ್‌ ತಿಳಿಸಿದ್ದಾರೆ.


ಮಂಗಳೂರು(ಡಿ.14): ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ 60 ವಾರ್ಡ್‌ಗಳ ಪ್ರತಿ ಮನೆಗೂ ಮುಂದಿನ 30 ವರ್ಷಗಳ ಅಗತ್ಯತೆ ಪರಿಗಣಿಸಿ ಎಡಿಬಿ ನೆರವಿನ 2ನೇ ಹಂತದ ಜಲಸಿರಿ ಯೋಜನೆಯಡಿ 792.42 ಕೋಟಿ ರು. ವೆಚ್ಚದಲ್ಲಿ ದಿನವಿಡೀ ಕುಡಿಯುವ ನೀರು ಪೂರೈಸುವ ಯೋಜನೆಗೆ ಅನುಮೋದನೆ ದೊರೆತಿದ್ದು, ಕರಾರು ಪತ್ರಕ್ಕೂ ಸಹಿ ಹಾಕಲಾಗಿದೆ. ಕಾಮಗಾರಿ 8 ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ಶಾಸಕ ವೇದವ್ಯಾಸ ಕಾಮತ್‌ ತಿಳಿಸಿದ್ದಾರೆ.

ಯೋಜನೆ ಅನುಷ್ಠಾನದ ಗುತ್ತಿಗೆಯನ್ನು ಸೂಯೆಜ್‌ ಕಂಪೆನಿ ಪಡೆದುಕೊಂಡಿದ್ದು, ಇನ್ನು ಆರೇಳು ತಿಂಗಳ ಕಾಲ ಭೌಗೋಳಿಕ ಸರ್ವೇ ನಡೆಸಲಿದೆ. ಅದರ ಮುಂದಿನ 3-4 ತಿಂಗಳು ಕಾಮಗಾರಿಯ ರೂಪುರೇಷೆ ತಯಾರಿಸಿದ ಬಳಿಕ ಕಾಮಗಾರಿ ಆರಂಭವಾಗಲಿದೆ. ಕಾಮಗಾರಿ ಮುಕ್ತಾಯದ ಬಳಿಕ 8 ವರ್ಷಗಳ ಕಾಲ ಗುತ್ತಿಗೆ ಕಂಪೆನಿಯೇ ನಿರ್ವಹಣೆ ನೋಡಿಕೊಳ್ಳಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದ್ದಾರೆ.

Tap to resize

Latest Videos

ಮಂಗಳೂರು: ವಿದ್ಯಾರ್ಥಿನಿ ಕಲಿಕೆಗೆ ತಂದೆಯಿಂದ ಆಕ್ಷೇಪ

ಈ ಯೋಜನೆಯಲ್ಲಿ ವಿವಿಧ ಬಡಾವಣೆಗಳಲ್ಲಿ ಮೇಲ್ಮಟ್ಟದ ಜಲ ಸಂಗ್ರಹಾಗಾರಗಳು, ಹೆಚ್ಚುವರಿ 2 ನೆಲ ಮಟ್ಟದ ಜಲ ಸಂಗ್ರಹಾಗಾರಗಳ ನಿರ್ಮಾಣ, ಹೆಚ್ಚುವರಿ 8 ಬೂಸ್ಟಿಂಗ್‌ ಪಂಪ್‌ಹೌಸ್‌ಗಳ ನಿರ್ಮಾಣ, ಹಾಲಿ ಇರುವ ಪಣಂಬೂರು ಹಾಗೂ ಬೆಂದೂರಿನಲ್ಲಿರುವ ಫಿಲ್ಟರೇಶನ್‌ ಘಟಕಗಳ ಬದಲು ರಾಮಲಕಟ್ಟೆಯಲ್ಲಿನ ಶುದ್ಧೀಕರಣಗಾರದ ಬಳಿ ಹೊಸದಾಗಿ ಫಿಲ್ಟರೇಶನ್‌ ಘಟಕಗಳನ್ನು ನಿರ್ಮಿಸುವುದು, ಹೊಸದಾಗಿ ನಿರ್ಮಿಸಲು ಉದ್ದೇಶಿಸಿರುವ 20 ಜಲ ಸಂಗ್ರಹಾಗಾರಕ್ಕೆ ಹಾಗೂ ಈಗಿರುವ ಕೆಲವು ಕೊಳವೆ ಮಾರ್ಗದ ಸಾಮರ್ಥ್ಯ ಕುಂಠಿತವಾಗಿರುವುದರಿಂದ ಸುಮಾರು 65 ಕಿ.ಮೀ. ಕೊಳವೆ ಮಾರ್ಗವನ್ನು ಬದಲಿಸುವುದು ಹಾಗೂ ಹೊಸ ಕೊಳವೆ ಮಾರ್ಗಗಳನ್ನು ಅಳವಡಿಸುವುದು, ಹೆಚ್ಚುವರಿ 1388 ಎಒ ಉದ್ದದ ವಿತರಣಾ ಜಾಲವನ್ನು ಅಳವಡಿಸುವುದು, ಪ್ರತಿ ಮನೆ ಸಂಪರ್ಕಕ್ಕೆ ಹೊಸ ಕ್ಲಾಸ್‌ ಬಿ ಮಲ್ಟಿಜೆಟ್‌ ವಾಟರ್‌ ಮೀಟರ್‌ ಅಳವಡಿಸುವುದು, ತುಂಬೆ ನೀರು ಶುದ್ಧೀಕರಣ ಘಟಕದಿಂದ ಎಲ್ಲ ಜಲ ಸಂಗ್ರಹಗಾರದವರೆಗೆ ಗಣಕೀಕರಣಗೊಳಿಸಿ ಎಸ್‌ಸಿಎಡಿಎ ತಂತ್ರಜ್ಞಾನ ಅಳವಡಿಸುವುದು ಇತ್ಯಾದಿ ಕಾಮಗಾರಿಗಳು ಸೇರಿವೆ ಎಂದು ಕಾಮತ್‌ ವಿವರಿಸಿದ್ದಾರೆ.

ಬಿಜೆಪಿ ಮುಖಂಡರಾದ ನಿತಿನ್‌ ಕುಮಾರ್‌, ಪ್ರೇಮಾನಂದ ಶೆಟ್ಟಿ, ರವಿಶಂಕರ ಮಿಜಾರು, ಸಂಜಯ ಪ್ರಭು, ವಸಂತ ಪೂಜಾರಿ ಇದ್ದರು.

9 ಕೆರೆಗಳ ಅಭಿವೃದ್ಧಿ

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 12.50 ಕೋಟಿ ರು. ವೆಚ್ಚದಲ್ಲಿ ಒಟ್ಟು 9 ಕೆರೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಅವುಗಳಲ್ಲಿ 2 ಕೆರೆಗಳನ್ನು ಪ್ರವಾಸಿ ತಾಣವಾಗಿ ಮಾಡುವ ಉದ್ದೇಶವಿದೆ. ನಗರಾಭಿವೃದ್ಧಿ ಪ್ರಾಧಿಕಾರದಿಂದ 3.65 ಕೋಟಿ ರು. ಈಗಾಗಲೇ ಬಿಡುಗಡೆಯಾಗಿದೆ. ಕದ್ರಿ ಕೈ ಬಟ್ಟಲು ಕೆರೆ ಅಭಿವೃದ್ಧಿಗೆ 90 ಲಕ್ಷ ರು., ಜೋಗಿಮಠ ಕೆರೆ ಅಭಿವೃದ್ಧಿಗೆ 80 ಲಕ್ಷ ರು., ಕುಲಶೇಖರ ಕೆರೆಗೆ 70 ಲಕ್ಷ ರು., ಜಪ್ಪಿನಮೊಗರು ಕಂರ್ಬಿಸ್ಥಾನ ಶ್ರೀ ವೈದ್ಯನಾಥ ದೇವಳದ ಕೆರೆ ಅಭಿವೃದ್ಧಿಗೆ 25 ಲಕ್ಷ ರು., ಜಲ್ಲಿಗುಡ್ಡ ಕೆರೆಗೆ 65 ಲಕ್ಷ ರು., ಕುದ್ರೋಳಿ ನಡುಪಳ್ಳಿ ಜುಮ್ಮಾ ಮಸೀದಿ ವಠಾರದ ಕೆರೆಗೆ 25 ಲಕ್ಷ ರು., ಬಜಾಲ್‌ ಕುಂದೋಡಿ ಕೆರೆ ಅಭಿವೃದ್ಧಿಗೆ 10 ಲಕ್ಷ ರು. ಮೀಸಲಿರಿಸಲಾಗಿದೆ. ಪ್ರಸ್ತುತ ಟೆಂಡರ್‌ ಪ್ರಕ್ರಿಯೆಯಲ್ಲಿದ್ದು, ಶೀಘ್ರ ಕಾಮಗಾರಿ ಆರಂಭವಾಗಲಿದೆ ಎಂದಿದ್ದಾರೆ.

ಉಡುಪಿ: ದೌರ್ಜನ್ಯಕ್ಕೊಳಗಾದ ಮಹಿಳೆಯರಿಗಾಗಿ 'ಸಖಿ'

ಬೈರಾಡಿಕೆರೆ ಅಭಿವೃದ್ಧಿಗೆ 1.30 ಕೋಟಿ ರು. ಬಿಡುಗಡೆಯಾಗಿ ಕಾಮಗಾರಿ ಚಾಲನೆಯಲ್ಲಿದೆ. ಇನ್ನೂ 70 ಲಕ್ಷ ರು. ಹೆಚ್ಚುವರಿಯಾಗಿ ಅಗತ್ಯವಿರುವುದರಿಂದ ಅದನ್ನು ಮೂಡಾದಿಂದಲೇ ನೀಡುವಂತೆ ಪ್ರಯತ್ನ ನಡೆಸಲಾಗುತ್ತಿದೆ. ಜತೆಗೆ ಗುಜ್ಜರಕೆರೆ ಅಭಿವೃದ್ಧಿಗೆ ಸ್ಮಾರ್ಟ್‌ಸಿಟಿ ಯೋಜನೆಯಡಿ 4 ಕೋಟಿ ರು.ಗೆ ಅನುಮೋದನೆ ದೊರೆತಿದೆ ಎಂದು ಕಾಮತ್‌ ತಿಳಿಸಿದ್ದಾರೆ.

click me!