ಗಂಡನ ಕೊಲೆ ಮಾಡಿಸಿದ ಹೆಂಡತಿ ಹಾಗೂ ಆಕೆಗೆ ಸಹಕರಿಸಿದ ಆರೋಪಿಗೆ ಜೀವಾವಧಿ ಶಿಕ್ಷೆ| ಹನುಮಂತಗೌಡನು ಕೊಲೆಯಾದ ಶ್ರೀಶೈಲ ಗಾಣಿಗೇರ ಬಳಿ ಸಾಲ ಪಡೆದುಕೊಂಡಿದ್ದ| ಶ್ರೀಶೈಲನ ಹೆಂಡತಿ ಜತೆಗೆ ಸಲಿಗೆ ಬೆಳೆಸಿಕೊಂಡು ಅನೈತಿಕ ಸಂಬಂಧ ಹೊಂದಿದ್ದನು| ಸವಿತಾ ಆರೋಪಿಗೆ ತನ್ನ ಗಂಡನನ್ನು ಕೊಲೆಗೈದು ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದ್ದಳು|
ರಾಣಿಬೆನ್ನೂರು[ಡಿ.14]: ಗಂಡನ ಕೊಲೆ ಮಾಡಿಸಿದ ಹೆಂಡತಿ ಹಾಗೂ ಆಕೆಗೆ ಸಹಕರಿಸಿದ ಆರೋಪಿಗೆ ಶುಕ್ರವಾರ ಇಲ್ಲಿನ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆ ಕೆ.ಎಸ್. ಜ್ಯೋತಿಶ್ರೀ ದಂಡ ಮತ್ತು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಹಿರೇಕೆರೂರ ತಾಲೂಕಿನ ಮಾವಿನತೋಪ ಗ್ರಾಮದ ಹನುಮಂತಗೌಡ ರುದ್ರಗೌಡ ಬಸನಗೌಡರ ಹಾಗೂ ಸವಿತಾ ಶ್ರೀಶೈಲ ಗಾಣಿಗೇರ ಉರ್ಫ್ ಜ್ಯೋತಿ ಶಿಕ್ಷೆಗೊಳಗಾದ ಅಪರಾಧಿಗಳಾಗಿದ್ದಾರೆ.
ಆರೋಪಿ ಹನುಮಂತಗೌಡನು ಕೊಲೆಯಾದ ಶ್ರೀಶೈಲ ಗಾಣಿಗೇರ ಬಳಿ ಸಾಲ ಪಡೆದುಕೊಂಡಿದ್ದು, ಆಗಾಗ ಅವರ ಮನೆಗೆ ಹೋಗಿ ಬಂದು ಮಾಡುತ್ತಿದ್ದನು. ಈ ವೇಳೆ ಶ್ರೀಶೈಲನ ಹೆಂಡತಿ ಜತೆಗೆ ಸಲಿಗೆ ಬೆಳೆಸಿಕೊಂಡು ಅನೈತಿಕ ಸಂಬಂಧ ಹೊಂದಿದ್ದನು. ತಾನು ನೀಡಿದ ಸಾಲದ ಹಣಕ್ಕಾಗಿ ಮೃತನು ಹನುಮಂತಗೌಡನನ್ನು ಪೀಡಿಸುತ್ತಿದ್ದನು. ಆಗ ಸವಿತಾ ಆರೋಪಿಗೆ ತನ್ನ ಗಂಡನನ್ನು ಕೊಲೆಗೈದು ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದ್ದಳು. ಇದರಿಂದ ಪ್ರೇರಿತನಾದ ಆರೋಪಿಯು 19-05- 2016 ರಂದು ಶ್ರೀಶೈಲನನ್ನು ತನ್ನ ಬೈಕ್ ಮೇಲೆ ಕರೆದುಕೊಂಡು ರಾಣಿಬೆನ್ನೂರ ತಾಲೂಕು ದಂಡಗಿಹಳ್ಳಿ ಗ್ರಾಮದ ನೇಶ್ವಿ ರಸ್ತೆಯ ಬಳಿಯಿರುವ ಬಸವೇಶ್ವರ ದೇವಸ್ಥಾನದ ಬಳಿ ಕಟ್ಟಿಗೆ ತಲೆಗೆ ಹೊಡೆದು ಕೊಲೆಗೈದಿದ್ದನು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಪ್ರಕರಣ ಕುರಿತು ಮೃತನ ಸಹೋದರ ಬಸವರಾಜ ಗಾಣಿಗೇರ ಉರ್ಫ್ ಜ್ಯೋತಿ ರಾಣಿಬೆನ್ನೂರ ತಾಲೂಕು ಹಲಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ರಾಣಿಬೆನ್ನೂರ ಗ್ರಾಮೀಣ ಸಿಪಿಐ ಜೆ.ಲೋಕೇಶ ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಆರೋಪಿಗಳ ವಿರುದ್ಧ ಮಾಡಲಾದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಹನಮಂತಗೌಡ ರುದ್ರಗೌಡ ಬಸನಗೌಡರಗೆ 3.05 ಲಕ್ಷ ಹಾಗೂ ಸವಿತಾ ಶ್ರೀಶೈಲ ಗಾಣಿಗೇರಗೆ 3 ಸಾವಿರ ದಂಡ ಹಾಗೂ ಇಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಿದ್ದು,ದಂಡದ ಹಣದ ಪೈಕಿ ಮೃತನ ಮಗಳಿಗೆ 3 ಲಕ್ಷ ಪರಿಹಾರ ನೀಡಿ ಅದನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಠೇವಣಿ ಇಡುವಂತೆ ಆದೇಶಿಸಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಸದಾನಂದ ಶಿರೂರ ವಾದ ಮಂಡಿಸಿದ್ದರು.