ಚಿಕ್ಕಮಗಳೂರಲ್ಲಿ ಮಳೆಗಾಗಿ ಕಪ್ಪೆಗಳಿಗೆ ಮದುವೆ, ಮೆರವಣಿಗೆ: ಸಾಮೂಹಿಕ ಬಾಡೂಟ

Published : Oct 12, 2026, 08:49 AM IST
frog-wedding

ಸಾರಾಂಶ

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ನಿಲೇಗೌಡನ ಕೊಪ್ಪಲು ಗ್ರಾಮದಲ್ಲಿ ಮಳೆಗಾಗಿ ಕಪ್ಪೆಗಳಿಗೆ ಸಂಪ್ರದಾಯಬದ್ಧವಾಗಿ ಮದುವೆ ಮಾಡಿಸಲಾಗಿದೆ. ಈ ವಿಶಿಷ್ಟ ಆಚರಣೆಯಲ್ಲಿ ಕಪ್ಪೆಗಳಿಗೆ ಪೂಜೆ ಸಲ್ಲಿಸಿ, ಮೆರವಣಿಗೆ ನಡೆಸಿ, ಗ್ರಾಮಸ್ಥರೆಲ್ಲರೂ ಸೇರಿ ನಾಟಿ ಕೋಳಿ ಬಾಡೂಟ ಸವಿದಿದ್ದಾರೆ.

ಚಿಕ್ಕಮಗಳೂರು (ಅ.12): ಜಿಲ್ಲೆಯಾದ್ಯಂತ ಪ್ರಸಕ್ತ ಸಾಲಿನಲ್ಲಿ ಬರದ ಛಾಯೆ ತೀವ್ರವಾಗಿ ಆವರಿಸುತ್ತಿರುವ ಹಿನ್ನೆಲೆಯಲ್ಲಿ, ಮಳೆರಾಯನ ಕೃಪೆಗಾಗಿ ಗ್ರಾಮಸ್ಥರೆಲ್ಲರೂ ಸೇರಿ ಕಪ್ಪೆಗಳಿಗೆ ಸಂಪ್ರದಾಯಬದ್ಧವಾಗಿ ಮದುವೆ ಮಾಡಿಸಿ, ಊರಲ್ಲಿ ಮೆರವಣಿಗೆ ನಡೆಸಿ ಬಳಿಕ ಭರ್ಜರಿ ಸಾಮೂಹಿಕ ಬಾಡೂಟ ಸವಿದ ಅಪರೂಪದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ನಿಲೇಗೌಡನ ಕೊಪ್ಪಲು ಗ್ರಾಮದಲ್ಲಿ ಭಾನುವಾರ (ಅ.11) ನಡೆದಿದೆ. ಗ್ರಾಮದ ಶ್ರೀ ಸೇವಾಲಾಲ್ ಸಮಿತಿಯ ನೇತೃತ್ವದಲ್ಲಿ ನಡೆದ ಈ ವಿಶಿಷ್ಟ ಆಚರಣೆಯಲ್ಲಿ ಒಟ್ಟು ಮೂರು ಕಪ್ಪೆಗಳನ್ನು ಬಳಸಿಕೊಳ್ಳಲಾಗಿತ್ತು. ಗ್ರಾಮದ ಗ್ರಾಮದೇವತೆ ಶ್ರೀ ಕರಿಯಮ್ಮದೇವಿ ದೇವಸ್ಥಾನದ ಆವರಣದಲ್ಲಿ ಕಪ್ಪೆಗಳನ್ನು ಇರಿಸಿ, ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಲಾಯಿತು.

ಕೆಂಚರಾಯ ನಾಮಕರಣ ಹಾಗೂ ವಿವಾಹ ಮಹೋತ್ಸವ

ದೇವಸ್ಥಾನದ ಆವರಣದಲ್ಲಿ ತಂದಿದ್ದ ಮೂರು ಕಪ್ಪೆಗಳ ಪೈಕಿ ಒಂದನ್ನು 'ಗಂಡು ಕಪ್ಪೆ' (ವರ) ಹಾಗೂ ಮತ್ತೊಂದನ್ನು 'ಹೆಣ್ಣು ಕಪ್ಪೆ' (ವಧು) ಎಂದು ಪರಿಭಾವಿಸಿ, ಮಂಗಲವಾದ್ಯಗಳೊಂದಿಗೆ ಸಂಪ್ರದಾಯಬದ್ಧವಾಗಿ ವಿವಾಹ ನೆರವೇರಿಸಲಾಯಿತು. ವಿಶೇಷವೆಂದರೆ, ತಂದಿದ್ದ ಮೂರನೇ ಕಪ್ಪೆಯನ್ನು ಸ್ವತಃ ಮಳೆರಾಯನ ರೂಪವೆಂದೇ ಭಾವಿಸಿದ ಗ್ರಾಮಸ್ಥರು, ಅದಕ್ಕೆ 'ಕೆಂಚರಾಯ' ಎಂದು ಸಾಂಪ್ರದಾಯಿಕವಾಗಿ ನಾಮಕರಣ ಮಾಡಿದರು. ವಿವಾಹದ ಬಳಿಕ ಕಪ್ಪೆಗಳನ್ನು ಅಲಂಕೃತ ಮಾಡಿ ಇಡೀ ಗ್ರಾಮದ ಬೀದಿಗಳಲ್ಲಿ ಸಡಗರದಿಂದ ಮೆರವಣಿಗೆ ಮಾಡಲಾಯಿತು.

ರಾಗಿ ಮುದ್ದೆ, ಕೋಳಿ ಸಾಂಬಾರ್ ಬಾಡೂಟ

ಕಪ್ಪೆಗಳ ಮದುವೆಯ ಶುಭ ಸಂದರ್ಭದಲ್ಲಿ ಇಡೀ ಗ್ರಾಮಸ್ಥರಿಗೆ ಬೃಹತ್ ಬಾಡೂಟ ಏರ್ಪಡಿಸಲಾಗಿತ್ತು. ಇದಕ್ಕಾಗಿ ಬರೋಬ್ಬರಿ 200 ರಾಗಿ ಮುದ್ದೆಗಳನ್ನು ಹಾಗೂ ಸುಮಾರು 40 ರಿಂದ 50 ನಾಟಿ ಕೋಳಿಗಳನ್ನು ಬಳಸಿ ಚಿಕನ್ ಸಾಂಬಾರ್ ಸಿದ್ಧಪಡಿಸಲಾಗಿತ್ತು. ಕಪ್ಪೆಗಳ ಮದುವೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಗ್ರಾಮಸ್ಥರು, ಮಹಿಳೆಯರು ಹಾಗೂ ಮಕ್ಕಳು ಒಂದೆಡೆ ಸೇರಿ ಸಾಮೂಹಿಕವಾಗಿ ಬಾಡೂಟ ಸವಿದು ಮಳೆಗಾಗಿ ಪ್ರಾರ್ಥಿಸಿದರು.

ಭಾರತೀಯ ಗ್ರಾಮೀಣ ಸಂಸ್ಕೃತಿ ಹಾಗೂ ಜಾನಪದ ನಂಬಿಕೆಗಳಲ್ಲಿ ಮಳೆ ಬಾರದಿದ್ದಾಗ ಕಪ್ಪೆಗಳ ಮದುವೆ ಮಾಡಿಸುವುದು ಶತಮಾನಗಳಿಂದಲೂ ನಡೆದುಬಂದಿರುವ ನಂಬಿಕೆ. ಕಪ್ಪೆಗಳನ್ನು ಜಲಚರ ಹಾಗೂ ಮಳೆಯ ಸಂಕೇತವೆಂದು ಜಾನಪದದಲ್ಲಿ ಪರಿಗಣಿಸಲಾಗುತ್ತದೆ. ಕಪ್ಪೆಗಳು ಗಟ್ಟಿಯಾಗಿ ಶಬ್ದ ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆಯಿದೆ. ಕಪ್ಪೆಗಳಿಗೆ ಮದುವೆ ಮಾಡಿಸುವುದರಿಂದ ವರುಣ ದೇವ ಹಾಗೂ ಇಂದ್ರ ದೇವ ಪ್ರಸನ್ನರಾಗಿ ತಕ್ಷಣವೇ ಧರೆಗೆ ಮಳೆ ತರುತ್ತಾರೆ ಎಂಬುದು ಗ್ರಾಮೀಣ ಭಾರತದ ಆಳವಾದ ನಂಬಿಕೆ ಎನ್ನಲಾಗುತ್ತದೆ.

PREV
Read more Articles on
click me!

Recommended Stories

ಭವಿಷ್ಯದಲ್ಲಿ ಬ್ಲಿಂಕಿಟ್ ರೀತಿ ಕೆಲವೇ ನಿಮಿಷದಲ್ಲಿ ಗುಂಡಿ ದುರಸ್ತಿ: ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್
ಮಾವಿನಮರದಲ್ಲಿ ಅಕಾಲಿಕವಾಗಿ ಅರಳಿದ ಹೂವು; ಇದು ಗೌರಿಫಲ ಅಂತೆ? ಇದು ಯಾವುದರ ಸಂಕೇತ?