ಮಾವಿನಮರದಲ್ಲಿ ಅಕಾಲಿಕವಾಗಿ ಅರಳಿದ ಹೂವು; ಇದು ಗೌರಿಫಲ ಅಂತೆ? ಇದು ಯಾವುದರ ಸಂಕೇತ?

Published : Oct 12, 2026, 08:09 AM IST
Mango

ಸಾರಾಂಶ

ಮಾವಿನ ಮರದಲ್ಲಿ ಅಕಾಲಿಕವಾಗಿ ಹೂವು ಅರಳಿದೆ. ಆದರೆ, ಹವಾಮಾನದಲ್ಲಿನ ಏರುಪೇರು ಹಾಗೂ ತಾಪಮಾನದ ವ್ಯತ್ಯಾಸವೇ ಇದಕ್ಕೆ ಕಾರಣ ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ. ಇದು ಪ್ರಕೃತಿಯ ವಿಸ್ಮಯ ಮತ್ತು ಮಾನವನ ನಂಬಿಕೆಗಳ ನಡುವಿನ ನಂಟಿಗೆ ಸಾಕ್ಷಿಯಾಗಿದೆ.

ಬಾಗಲಕೋಟೆ: ಸಾಮಾನ್ಯವಾಗಿ ವಸಂತಕಾಲದಲ್ಲಿ ಮಾವಿನ ಮರಗಳು ಹೂಬಿಟ್ಟು ಕಂಗೊಳಿಸುವುದು ಸಹಜ. ಇದು ಪ್ರಕೃತಿಯ ಸಹಜ ವಿದ್ಯಮಾನವೆಂದು ಪರಿಗಣಿಸಿದರೆ, ಹಿರಿಯರು ಮಾತ್ರ ಇದನ್ನು ಸಂಪ್ರದಾಯ ಮತ್ತು ಧಾರ್ಮಿಕ ನಂಬಿಕೆಯೊಂದಿಗೆ ಬೆಸೆದು ಗೌರಿ ಫಲ ಎಂದು ಕರೆಯುತ್ತಾರೆ.

ಪ್ರಕೃತಿಯ ಬದಲಾವಣೆ

ನಗರದ ಹಿರಿಯ ಜೀವಿ ಗೌರವ್ವ ದಾನಪ್ಪಗೋಳ ಅವರ ಪ್ರಕಾರ, ಸೀಗೆ ಹಾಗೂ ಗೌರಿ ಹುಣ್ಣಿಮೆಯ ಆಸುಪಾಸಿನಲ್ಲಿ ಮಾವಿನ ಮರದಲ್ಲಿ ಅಕಾಲಿಕವಾಗಿ ಹೂವು ಅರಳಿ, ಸಣ್ಣ ಸಣ್ಣ ಕಾಯಿಗಳು ಕಾಣಿಸಿಕೊಳ್ಳುವುದು ಅಪರೂಪದ ಸಂಗತಿಯೇನಲ್ಲ. ಗ್ರಾಮೀಣ ಬದುಕಿನಲ್ಲಿ ಇಂತಹ ಪ್ರಕೃತಿಯ ಬದಲಾವಣೆಗಳಿಗೆ ವಿಶೇಷ ಮಹತ್ವವಿದ್ದು, ಅವುಗಳನ್ನು ಹಿರಿಯರ ಅನುಭವದ ಆಧಾರದ ಮೇಲೆ ಅರ್ಥೈಸುವ ಪದ್ಧತಿ ಇಂದಿಗೂ ಇದೆ.

ಪ್ರಕೃತಿಯ ಶುಭಸಂಕೇತ

ಸನಾತನ ಸಂಪ್ರದಾಯದಲ್ಲಿ ಗೌರಿ ಹುಣ್ಣಿಮೆಗೆ ವಿಶೇಷ ಧಾರ್ಮಿಕ ಮಹತ್ವವಿದೆ. ಈ ಪವಿತ್ರ ಸಮಯದಲ್ಲಿ ಮಾವಿನ ಮರದಲ್ಲಿ ಹೂವು ಅಥವಾ ಕಾಯಿ ಕಾಣಿಸಿಕೊಂಡರೆ, ಅದನ್ನು ಪ್ರಕೃತಿಯ ಶುಭಸಂಕೇತವೆಂದು ಭಾವಿಸುವವರಿದ್ದಾರೆ. ಹೀಗಾಗಿ, ಈ ವಿದ್ಯಮಾನಕ್ಕೆ ಸ್ಥಳೀಯರು ಗೌರಿ ಫಲ ಎಂಬ ಹೆಸರಿನಿಂದ ಭಕ್ತಿಭಾವದ ನಂಟು ಕಲ್ಪಿಸುತ್ತಾರೆ.

ವೈಜ್ಞಾನಿಕವಾಗಿ ನೋಡುವುದಾದರೆ, ಹವಾಮಾನದಲ್ಲಿನ ಏರುಪೇರು, ರಾತ್ರಿ ಮತ್ತು ಹಗಲಿನ ತಾಪಮಾನದಲ್ಲಿನ ವ್ಯತ್ಯಾಸ, ಮಣ್ಣಿನ ತೇವಾಂಶ ಹಾಗೂ ಮರದ ಬೆಳವಣಿಗೆಯ ಹಂತಗಳು ಮಾವಿನ ಮರದ ಹೂಬಿಡುವಿಕೆಯ ಮೇಲೆ ಪರಿಣಾಮ ಬೀರಬಹುದು. ಇಂತಹ ಕಾರಣಗಳಿಂದ ಕೆಲವು ಮರಗಳಲ್ಲಿ ಸಾಮಾನ್ಯ ಕಾಲಕ್ಕಿಂತ ಮುಂಚಿತವಾಗಿ ಹೂವು ಅರಳುವ ಸಾಧ್ಯತೆಯಿದೆ ಎನ್ನುತ್ತಾರೆ ಬಾಗಲಕೋಟೆ ತೋಟಗಾರಿಕೆ ಇಲಾಖೇಯ ವಿಜ್ಞಾನಿ ಡಿ.ಸತೀಶ.

ಗ್ರಾಮೀಣ ಸಂಸ್ಕೃತಿ

ಆದರೆ, ಪ್ರಕೃತಿಯ ವಿದ್ಯಮಾನಗಳಿಗೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಅರ್ಥ ನೀಡುವುದು ನಮ್ಮ ಸಂಪ್ರದಾಯದ ವೈಶಿಷ್ಟ್ಯವಾಗಿದೆ. ಆಧುನಿಕತೆಯ ಭರಾಟೆಯಲ್ಲಿ ಹಿರಿಯರ ಅನುಭವದ ಮಾತುಗಳು ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ, ಇಂತಹ ನಂಬಿಕೆಗಳು ಗ್ರಾಮೀಣ ಸಂಸ್ಕೃತಿಯ ನೆನಪನ್ನು ಮರುಕಳಿಸುತ್ತವೆ ಎಂದರು.

ಮಾವಿನ ಮರದಲ್ಲಿ ಕಾಣಿಸಿಕೊಂಡಿರುವ ಅಕಾಲಿಕ ಹೂವು ಮುಂದಿನ ದಿನಗಳಲ್ಲಿ ಕಾಯಿಯಾಗಿ ಬೆಳೆಯುತ್ತದೆಯೇ ಎಂಬ ಕುತೂಹಲ ಒಂದೆಡೆಯಾದರೆ, ಸ್ಥಳೀಯರು ಅದನ್ನು ಗೌರಿ ಫಲವೆಂದು ಭಕ್ತಿಯಿಂದ ಕಾಣುತ್ತಿರುವುದು ಮತ್ತೊಂದೆಡೆ ವಿಶೇಷವಾಗಿದೆ. ಪ್ರಕೃತಿಯ ವಿಸ್ಮಯ ಮತ್ತು ಮಾನವನ ನಂಬಿಕೆಗಳ ನಡುವಿನ ನಂಟಿಗೆ ಈ ವಿದ್ಯಮಾನ ಸಾಕ್ಷಿಯಾಗಿದೆ.

ಇದನ್ನೂ ಓದಿ: ಕೇಣಿ ಹಳ್ಳದ ನೀರಿನಲ್ಲಿ ಸಮುದ್ರದ ಕೊಕ್ಕರಾ ಮೀನುಗಳ ಸುಗ್ಗಿ; ಗಾಳಕ್ಕೆ ರಾಶಿ ರಾಶಿ ಜಲಚರ

PREV
Read more Articles on
click me!

Recommended Stories

ಮದುವೆ ನಂತರದ ಬೀಗರ ಊಟ ನಿಷೇಧಿಸಲು ಗ್ರಾಮಸ್ಥರಿಂದ ಒಮ್ಮತದ ನಿರ್ಧಾರ; ಮಹತ್ವದ ಹೆಜ್ಜೆ
ಶಿವಮೊಗ್ಗ, ಮಲೆನಾಡು ಭಾಗದ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ಸಂಸದ ರಾಘವೇಂದ್ರ