200 ಯೂನಿಟ್ ಉಚಿತ ವಿದ್ಯುತ್ ಗ್ಯಾರಂಟಿ’ ಘೋಷಣೆ ಮಾಡಿರುವ ಕಾಂಗ್ರೆಸ್ ಈ ಚುನಾವಣೆಯಲ್ಲಿ ಸ್ಪಷ್ಟಬಹುಮತ ಪಡೆದು ಗೆದ್ದ ಬೆನ್ನಲ್ಲೇ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ವಿದ್ಯುತ್ ಬಿಲ್ ಕಟ್ಟಲು ನಾಗರಿಕರು ಹಿಂದೇಟು ಹಾಕುತ್ತಿದ್ದಾರೆ. ಆದರೆ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಮೆಸ್ಕಾಂ ವ್ಯಾಪ್ತಿಯ ನಾಲ್ಕು ಜಿಲ್ಲೆಗಳಲ್ಲಿ ಇಂತಹ ವಿದ್ಯಮಾನಗಳು ಹೆಚ್ಚಾಗಿ ನಡೆಯುತ್ತಿಲ್ಲ
ಸಂದೀಪ್ ವಾಗ್ಲೆ
ಮಂಗಳೂರು (ಮೇ.19) 200 ಯೂನಿಟ್ ಉಚಿತ ವಿದ್ಯುತ್ ಗ್ಯಾರಂಟಿ’ ಘೋಷಣೆ ಮಾಡಿರುವ ಕಾಂಗ್ರೆಸ್ ಈ ಚುನಾವಣೆಯಲ್ಲಿ ಸ್ಪಷ್ಟಬಹುಮತ ಪಡೆದು ಗೆದ್ದ ಬೆನ್ನಲ್ಲೇ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ವಿದ್ಯುತ್ ಬಿಲ್ ಕಟ್ಟಲು ನಾಗರಿಕರು ಹಿಂದೇಟು ಹಾಕುತ್ತಿದ್ದಾರೆ. ಆದರೆ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಮೆಸ್ಕಾಂ ವ್ಯಾಪ್ತಿಯ ನಾಲ್ಕು ಜಿಲ್ಲೆಗಳಲ್ಲಿ ಇಂತಹ ವಿದ್ಯಮಾನಗಳು ಹೆಚ್ಚಾಗಿ ನಡೆಯುತ್ತಿಲ್ಲ. ಮೊದಲಿನಂತೆಯೇ ಸಾಮಾನ್ಯ ರೀತಿಯಲ್ಲಿ ಜನರು ವಿದ್ಯುತ್ ಬಿಲ್ ಕಟ್ಟುತ್ತಿದ್ದಾರೆ.
ದಕ್ಷಿಣ ಕನ್ನಡ(Dakshina kannada) ಜಿಲ್ಲೆಯಲ್ಲಿ ಭಾಗ್ಯಜ್ಯೋತಿ(Bhagya jyoti), ಕುಟೀರ ಜ್ಯೋತಿ ಯೋಜನೆ(Kuteera jyoti scheme)ಯ ಮನೆಗಳನ್ನು ಹೊರತುಪಡಿಸಿ ಒಟ್ಟು 6,24,663 ಗೃಹಬಳಕೆ ಸಂಪರ್ಕಗಳಿಂದ ಮಾಚ್‌ರ್ ತಿಂಗಳಲ್ಲಿ ಒಟ್ಟು 64.8 ಮಿಲಿಯನ್ ಯೂನಿಟ್ ವಿದ್ಯುತ್ ಬಳಕೆಯಾಗಿತ್ತು. ಮೆಸ್ಕಾಂ(Mescom)ಗೆ ಮಾಚ್‌ರ್‍ನಲ್ಲಿ ಬರಬೇಕಾದ ವಿದ್ಯುತ್ ಶುಲ್ಕದ ಬೇಡಿಕೆ 52.79 ಕೋಟಿ ರು. ಇದ್ದರೂ ಹಿಂದಿನ ತಿಂಗಳ ಬಾಕಿ ಮೊತ್ತ ಇತ್ಯಾದಿ ಸೇರಿ 60.04 ಕೋಟಿ ರು. ಸಂಗ್ರಹವಾಗಿತ್ತು. ಅದೇ ರೀತಿ ಉಡುಪಿಯಲ್ಲಿ 3,55,740 ಗೃಹ ಬಳಕೆ ಸಂಪರ್ಕಗಳಿಂದ ಮಾಚ್‌ರ್‍ನಲ್ಲಿ 26.23 ಕೋಟಿ ರು. ಶುಲ್ಕ ಸಂಗ್ರಹದ ಗುರಿ ಇದ್ದರೂ 28.84 ಕೋಟಿ ರು. ಸಂಗ್ರಹವಾಗಿದೆ.
ಎಮ್ಮೆಲ್ಲೆ ಬಸನಗೌಡ ಹೇಳ್ಯಾರಾ, ಕರೆಂಟ್ ಬಿಲ್ ಕಟ್ಟಂಗಿಲ್ಲ, ಏನ್ಮಾಡ್ತಿರಾ ಮಾಡ್ಕೊಳ್ಳಿ
ಏಪ್ರಿಲ್ ತಿಂಗಳಲ್ಲಿ ದ.ಕ. ಜಿಲ್ಲೆಯಲ್ಲಿ 6,27,552 ಗೃಹ ಬಳಕೆ ಸಂಪರ್ಕಗಳಲ್ಲಿ 77.57 ಮಿಲಿಯನ್ ಯೂನಿಟ್ ವಿದ್ಯುತ್ ಬಳಕೆಯಾಗಿದೆ. ಮೆಸ್ಕಾಂಗೆ ಸಂದಾಯವಾಗಬೇಕಾದ ಒಟ್ಟು ಶುಲ್ಕದ ಬೇಡಿಕೆ 67.26 ಕೋಟಿ ರು. ಆಗಿದ್ದು, 55.36 ಕೋಟಿ ರು. ಸಂಗ್ರಹವಾಗಿದೆ. ಉಡುಪಿ ಜಿಲ್ಲೆಯಲ್ಲಿ ಏಪ್ರಿಲ್‌ನಲ್ಲಿ 3,56,725 ಗೃಹ ಬಳಕೆ ಸಂಪರ್ಕಗಳಲ್ಲಿ 40.10 ಮಿ.ಯೂನಿಟ್ ವಿದ್ಯುತ್ ಬಳಕೆಯಾಗಿದೆ. ಒಟ್ಟು 34.34 ಕೋಟಿ ರು. ಶುಲ್ಕ ಸಂಗ್ರಹದ ತಿಂಗಳ ಬೇಡಿಕೆಯಲ್ಲಿ 29.81 ಕೋಟಿ ರು. ಮೆಸ್ಕಾಂಗೆ ಸಂದಾಯವಾಗಿದೆ. ಏಪ್ರಿಲ್ ತಿಂಗಳ ಬಿಲ್ ಶುಲ್ಕ ಕಟ್ಟಲು ಸಾರ್ವಜನಿಕರಿಗೆ ಇನ್ನೂ ಸಮಯಾವಕಾಶ ಇರುವುದರಿಂದ ಸಾಮಾನ್ಯ ರೀತಿಯಲ್ಲೇ ಶುಲ್ಕ ಸಂಗ್ರಹದ ನಿರೀಕ್ಷೆ ಇದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಸಾಮಾನ್ಯವಾಗಿ ಪ್ರತಿ ತಿಂಗಳ ವಿದ್ಯುತ್ ಬಿಲ್‌ನ್ನು ಮುಂದಿನ ತಿಂಗಳ 1ರಿಂದ 15ನೇ ದಿನಾಂಕದವರೆಗೆ ಸಾರ್ವಜನಿಕರಿಗೆ ನೀಡಲಾಗುತ್ತದೆ. ಬಿಲ್ ಜನರೇಟ್ ಆದ ಬಳಿಕ ಶುಲ್ಕ ಕಟ್ಟಲು 15 ದಿನಗಳ ಕಾಲಾವಕಾಶ ಇರುತ್ತದೆ. ಅದರಂತೆ ಏಪ್ರಿಲ್ ತಿಂಗಳ ವಿದ್ಯುತ್ ಬಿಲ್ ಪಾವತಿಗೆ ಇನ್ನೂ ಕೆಲವು ದಿನಗಳ ಕಾಲಾವಕಾಶವಿದೆ.
ತೀರ ಸಮಸ್ಯೆ ಆಗಿಲ್ಲ: ‘‘ಮೆಸ್ಕಾಂ ವ್ಯಾಪ್ತಿಯ ಕೆಲವೊಂದು ಕಡೆಗಳಲ್ಲಿ ಜನರು ಉಚಿತ ಯೋಜನೆ ಇರುವುದರಿಂದ ಈಗಲೇ ವಿದ್ಯುತ್ ಬಿಲ್ ಕಟ್ಟಬೇಕೇ ಎಂದು ವಿಚಾರಿಸುತ್ತಿದ್ದಾರೆ. ಮೆಸ್ಕಾಂ ಸಿಬ್ಬಂದಿ ತಿಳಿಹೇಳಿದ ಬಳಿಕ ಶುಲ್ಕ ಕಟ್ಟುತ್ತಿದ್ದಾರೆ. ಆದರೆ ಬಿಲ್ ಕಟ್ಟುವುದೇ ಇಲ್ಲ ಎಂದು ಹಠ ಹಿಡಿದ ವಿದ್ಯಮಾನಗಳು, ತೀರ ಸಮಸ್ಯೆ ಎನಿಸುವ ಘಟನೆಗಳು ಕಂಡುಬರುತ್ತಿಲ್ಲ’’ ಎಂದು ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ನಮ್ಮೋಣಿಗೆ ಯಾಕ್ ಬಂದ್ರಿ ? ನಾವು ಕರೆಂಟ್ ಬಿಲ್ ಕಟ್ಟಲ್ಲಂದ್ರೆ ಕಟ್ಟಲ್ಲ : ಜನ ಪಟ್ಟು!
‘200 ಯೂನಿಟ್ ಉಚಿತ ವಿದ್ಯುತ್’ ಘೋಷಣೆ ಜಾರಿಯಾಗಬೇಕಾದರೆ ಮೊದಲು ಸರ್ಕಾರ ರಚನೆಯಾಗಬೇಕು. ಅದರ ಬಳಿಕ ಸರ್ಕಾರ ಈ ಯೋಜನೆಯನ್ನು ಅಧಿಕೃತವಾಗಿ ಘೋಷಣೆ ಮಾಡಬೇಕು. ಯಾವ ತಿಂಗಳಿನಿಂದ ವಿದ್ಯುತ್ ಉಚಿತ ಎನ್ನುವುದನ್ನೂ ತಿಳಿಸಬೇಕು. ನಂತರವೇ ಅದು ಜಾರಿಯಾಗುವುದು. ಅಲ್ಲಿಯವರೆಗೆ ಸಾರ್ವಜನಿಕರು ವಿದ್ಯುತ್ ಬಿಲ್ ಕಟ್ಟಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.