ಶಿವಮೊಗ್ಗ (ಮೇ.09) : ಕೋವಿಡ್ ಬಾಧಿತರಿಗೆ ಸಕಾಲದಲ್ಲಿ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಅಮೃತ್‌ನೋನಿ ವ್ಯಾಲ್ಯೂ ಸೋಶಿಯಲ್ ವೆಲ್ಫೇರ್ ಟ್ರಸ್ಟ್ ಶಿವಮೊಗ್ಗ ಜನತೆಗೆ ಉಚಿತವಾಗಿ ಆಂಬ್ಯುಲೆನ್ಸ್ ಸೇವೆ ಒದಗಿಸಿಕೊಟ್ಟಿದೆ.
ಶನಿವಾರ ನಗರದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಆಂಬ್ಯುಲೆನ್ಸ್ ಸೇವೆಗೆ ಹಸಿರು ನಿಶಾನೆ ತೋರಿಸಿದರು. ಅಗತ್ಯವಿದ್ದವರಿಗೆ ಉಚಿತ ಸೇವೆ ನೀಡಲು ಸುಸಜ್ಜಿತ ಆಂಬ್ಯುಲೆನ್ಸ್ ಅನ್ನು ಸೇವಾ ಭಾರತಿ ಮತ್ತು ಕೋವಿಡ್ ಸುರಕ್ಷಾ ಪಡೆಯ ಸೇವಾ ಕೇಂದ್ರಕ್ಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ ಕೋವಿಡ್-19 ಹಲವಾರು ರೀತಿಯಲ್ಲಿ ಸಂಕಷ್ಟತಂದೊಡ್ಡಿದೆ. ಸೋಂಕು ತಡೆಗೆ ಸರ್ಕಾರ ಶತ ಪ್ರಯತ್ನ ನಡೆಸುತ್ತಿದ್ದು, ಈ ಸಂದರ್ಭದಲ್ಲಿ ಸಂಘ ಸಂಸ್ಥೆಗಳು ಸಹಕಾರ ನೀಡಬೇಕು, ಸೇವಾ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಕೋರಿದರು.
ಸಹ್ಯಾದ್ರಿ ನೋನಿ ಚಹಾ ತಂತ್ರಜ್ಞಾನ ಹಸ್ತಾಂತರಕ್ಕೆ ಸಿಎಂ ಚಾಲನೆ ..
ಅಮೃತ್ ನೋನಿ ಉತ್ಪನ್ನಗಳ ತಯಾರಿಕಾ ಸಂಸ್ಥೆ ವ್ಯಾಲ್ಯೂ ಪ್ರಾಡಕ್ಟ್ ಸಾಮಾಜಿಕ ಕಳಕಳಿ ನಿಜಕ್ಕೂ ಶ್ಲಾಘನೀಯ. ಸಮಾಜ ಸೇವೆ ಮಾಡಬೇಕು ಎಂಬ ಉದ್ದೇಶದಿಂದ ಸಂಸ್ಥೆಯ ಮುಖ್ಯಸ್ಥ ಶ್ರೀನಿವಾಸಮೂರ್ತಿ ಅವರು ಕೋವಿಡ್ ರೋಗಿಗಳಿಗೆ ನೆರವಾಗಲು ಉಚಿತವಾಗಿ ಆಂಬ್ಯುಲೆನ್ಸ್ ಸೇವೆ ಕಲ್ಪಿಸಿಕೊಟ್ಟಿದ್ದಾರೆ. ಇದು ಪ್ರತಿಯೊಬ್ಬರಿಗೂ ಮಾದರಿ ಕಾರ್ಯ ಎಂದರು.
ರಾಜ್ಯ ಸಣ್ಣ ಕೈಗಾರಿಕಾ ನಿಗಮದ ಉಪಾಧ್ಯಕ್ಷ ಎಸ್.ದತ್ತಾತ್ರಿ ಮಾತನಾಡಿ, ಅಮೃತ್ ನೋನಿ ಉತ್ಪನ್ನ ಇಂದು ಹಲವಾರು ರಾಜ್ಯಗಳಲ್ಲಿ ಹೆಸರು ವಾಸಿಯಾಗಿದೆ. ಇದೀಗ ಆರೋಗ್ಯ ಸೇವೆಗಾಗಿ ಟ್ರಸ್ಟ್ ರೂಪಿಸಿ ಆ ಮೂಲಕ ವ್ಯಾಲ್ಯೂ ಪ್ರಾಡಕ್ಟ್ ಸಂಸ್ಥೆಯ ಸಂಸ್ಥಾಪಕರಾದ ಶ್ರೀನಿವಾಸ್‌ಮೂರ್ತಿ ಅವರು ಅನೇಕ ರೀತಿಯಲ್ಲಿ ಸಹಕಾರ ನೀಡುತ್ತಿರುವುದು ಪ್ರತಿಯೊಬ್ಬರಿಗೂ ಮಾದರಿ ಕಾರ್ಯ ಎಂದರು.
ಅನಾರೋಗ್ಯ ದೂರಾಗಿಸಲು ವಿಶೇಷ ಗುಣದ ನೋನಿ ಚಹಾ ಸಂಶೋಧನೆ .
ಆರ್‌ಎಸ್‌ಎಸ್ ಪ್ರಮುಖ ಪಟ್ಟಾಭಿರಾಮ್ ಮಾತನಾಡಿ, ಕೋವಿಡ್ ಸಂಕಷ್ಟಸಂದರ್ಭದಲ್ಲಿ ರೋಗಿಗಳಿಗೆ ಸೇವೆ ನೀಡುವ ಉದ್ದೇಶದಿಂದ ಉಚಿತವಾಗಿ ಆಂಬ್ಯುಲೆನ್ಸ್ ನೀಡಿರುವುದು ಪುಣ್ಯದ ಕಾರ್ಯ. ಅಮೃತ್ ನೋನಿ ತಯಾರಿಕಾ ಸಂಸ್ಥೆಯವರ ಸೇವಾ ಕಾರ್ಯ ಸಂಜೀವಿನಿ ರೂಪದಲ್ಲಿ ರೋಗಿಗಳಿಗೆ ಅಮೃತವಾಗಲಿ ಎಂದು ಆಶಿಸಿದರು.
ಅಗತ್ಯವಿದ್ದವರು 8073649340, 7411863538, 7411095973 ಗೆ ಕರೆ ಮಾಡಿ ಆಂಬ್ಯುಲೆನ್ಸ್ ಸೇವೆ ಪಡೆದುಕೊಳ್ಳಬಹುದಾಗಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona