* ಇದೇ ಪರಿಸ್ಥಿತಿ ಮುಂದುವರಿದರೆ ಆಕ್ಸಿಜನ್ ಕೊರತೆ ಸಾಧ್ಯತೆ
* ಕಂಗೆಟ್ಟಿರುವ ಜಿಲ್ಲಾಡಳಿತ
* ಕಡಿಮೆಯಾಗುತ್ತಿರುವ ಬೆಡ್ ಹಾಗೂ ಆಕ್ಸಿಜನ್
ಹುಬ್ಬಳ್ಳಿ(ಮೇ.09): ಇಷ್ಟು ದಿನ ಬೆಂಗಳೂರು ಸೇರಿದಂತೆ ದೊಡ್ಡ ದೊಡ್ಡ ನಗರಗಳಲ್ಲಿ ಕಂಡುಬರುತ್ತಿದ್ದ ಬೆಡ್ ಸಮಸ್ಯೆ ಈಗ ವಾಣಿಜ್ಯನಗರಿ ಹುಬ್ಬಳ್ಳಿಗೂ ಕಾಲಿಟ್ಟಿದೆ. ಎಷ್ಟೇ ಬೆಡ್ ವ್ಯವಸ್ಥೆ ಮಾಡಿದರೂ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ, ಬೆಡ್ ಹಾಗೂ ಆಕ್ಸಿಜನ್ ಕಡಿಮೆಯಾಗುತ್ತಿದೆ. ಇದು ಜಿಲ್ಲಾಡಳಿತವನ್ನು ಕಂಗೆಡಿಸಿದೆ.
ಹೌದು ಕಳೆದ ಏಪ್ರಿಲ್‌ನಿಂದ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಸಾಗಿದೆ. ಕಿಮ್ಸ್‌ನ ಶೇ. 80ರಷ್ಟು ಬೆಡ್, ಜಿಲ್ಲಾಸ್ಪತ್ರೆಯ ಶೇ. 90ರಷ್ಟು ಬೆಡ್‌ಗಳೆಲ್ಲ ಕೋವಿಡ್ ಸೋಂಕಿತರಿಗಾಗಿ ಮೀಸಲಿಟ್ಟರೂ ಕಡಿಮೆ ಬೀಳುತ್ತಿವೆ. ಇದರಿಂದಾಗಿ ಜಿಲ್ಲೆಯಲ್ಲಿ ಯಾವುದೇ ಸೋಂಕಿತರು ತೆರಳಿದರೂ ಬೆಡ್ ಇಲ್ಲ ಎಂಬ ಮಾತು ಎಲ್ಲ ಆಸ್ಪತ್ರೆಗಳಿಂದ ಕೇಳಿ ಬರುತ್ತಿದೆ.
undefined
ಹುಬ್ಬಳ್ಳಿಯಲ್ಲಿ ಹೊರಜಿಲ್ಲೆಯ ಸೋಂಕಿತರೇ ಜಾಸ್ತಿ..!
ಎಷ್ಟು ಬೆಡ್:
ಜಿಲ್ಲೆಯಲ್ಲಿ ಕಿಮ್ಸ್, ಜಿಲ್ಲಾಸ್ಪತ್ರೆ ಸೇರಿದಂತೆ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಬರೋಬ್ಬರಿ 2963 ಬೆಡ್‌ಗಳನ್ನು ಸೋಂಕಿತರಿಗಾಗಿ ಮೀಸಲಿಡಲಾಗಿತ್ತು. ಅವುಗಳ ಪೈಕಿ 2031 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಆಕ್ಸಿಜನ್ ಬೆಡ್‌ಗಳ ಸಂಖ್ಯೆ 1675 ಇವೆ. ಇವುಗಳ ಪೈಕಿ ಖಾಲಿ ಉಳಿದಿರುವುದು ಬರೀ 254 ಮಾತ್ರ. ಇನ್ನು 183 ವೆಂಟಿಲೇಟರ್ ಬೆಡ್‌ಗಳ ಪೈಕಿ ಖಾಲಿ ಉಳಿದಿರುವುದು ಬರೀ 9. 360 ಐಸಿಯು ಬೆಡ್‌ಗಳ ಪೈಕಿ 5 ಬೆಡ್‌ಗಳು ಮಾತ್ರ ಉಳಿದಿವೆ. ಎಲ್ಲವೂ ಈಗಾಗಲೇ ಭರ್ತಿಯಾಗಿವೆ. ಇನ್ನೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ 2031 ಜನರ ಪೈಕಿ 1618 ಜನರು ಧಾರವಾಡ ಜಿಲ್ಲೆಯವರಾದರೆ, ಉಳಿದ 413 ಜನ ಹೊರ ಜಿಲ್ಲೆಗೆ ಸೇರಿದವರಿದ್ದಾರೆ. ಈಗ ಉಳಿದಿರುವ 932 ಬೆಡ್‌ಗಳು ಸಹ ಹುಬ್ಬಳ್ಳಿ-ಧಾರವಾಡದಲ್ಲಿಲ್ಲ. ತಾಲೂಕು ಆಸ್ಪತ್ರೆಗಳಲ್ಲಿನ ಬೆಡ್‌ಗಳು ಖಾಲಿಯಿವೆ. ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಬೆಡ್‌ಗಳೆಲ್ಲ ಬಹುತೇಕ ಪೂರ್ಣವಾಗಿವೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
ಜನತೆ ಎಚ್ಚೆತ್ತುಕೊಳ್ಳಿ:
ಇಷ್ಟೆಲ್ಲ ಕೊರೋನಾ ಹಬ್ಬುತ್ತಿದ್ದರೂ ಜನತೆ ಮಾತ್ರ ಈ ಕೊರೋನಾ ಬಗ್ಗೆ ಜಾಗೃತಿಯೇ ಆಗುತ್ತಿಲ್ಲ. ಈಗಲೂ ಬೇಕಾಬಿಟ್ಟಿಯಾಗಿ ಓಡಾಡಿಕೊಂಡಿದ್ದಾರೆ. ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಕಂಡಿದ್ದೇವೋ ಇಲ್ಲವೋ ಎಂಬಂತೆ ಪ್ರತಿನಿತ್ಯ ಮುಗಿಬಿದ್ದು ಖರೀದಿ ಮಾಡುತ್ತಾರೆ. ಮಾಸ್ಕ್‌ನ್ನು ಸರಿಯಾಗಿ ಧರಿಸಿರುವುದಿಲ್ಲ. ಸಾಮಾಜಿಕ ಅಂತರವೂ ಕಾಣಸಿಗಲ್ಲ. ಆದಕಾರಣ ಅತ್ತ ಬೆಡ್‌ಗಳನ್ನು ಎಷ್ಟೇ ಹೆಚ್ಚಿಸಿದರೂ ಬೆಡ್ ಹಾಗೂ ಆಕ್ಸಿಜನ್ ಕೊರತೆ ನಿತ್ಯ ನಿರಂತರವಾಗುತ್ತಿದೆ. ಆದಕಾರಣ ಸ್ವಲ್ಪ ದಿನ ಮಾತ್ರ ಜನತೆ ಅನಗತ್ಯವಾಗಿ ಹೊರಹೋಗದೇ ಮನೆಯಲ್ಲೇ ಉಳಿದರೆ ಈ ಸೋಂಕನ್ನು ಬುಡಸಮೇತವಾಗಿ ಕಿತ್ತುಹಾಕಬಹುದಾಗಿದೆ. ಇದನ್ನು ಎಲ್ಲರೂ ಅರಿತುಕೊಳ್ಳಲಿ ಎಂಬುದು ವೈದ್ಯರು,
ಅಧಿಕಾರಿಗಳ ಸಲಹೆ.
ಒಟ್ಟಿನಲ್ಲಿ ಕೊರೋನಾ ಎರಡನೆಯ ಅಲೆ ಆಡಳಿತ ಯಂತ್ರವನ್ನು ಕಂಗೆಡಿಸಿರುವುದಂತೂ ಸತ್ಯ. ಇನ್ನಾದರೂ ಜನತೆ ಎಚ್ಚೆತ್ತುಕೊಂಡು ಎಚ್ಚರಿಕೆ ವಹಿಸಿದರೆ ಅವರಿಗೂ ಉತ್ತಮ, ಆಡಳಿತ ಯಂತ್ರಕ್ಕೂ ಉತ್ತಮ ಎಂಬ ಅಭಿಪ್ರಾಯ ಪ್ರಜ್ಞಾವಂತರದ್ದು.
ಹೌದು ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿನ ಬೆಡ್‌ಗಳು ಬಹುತೇಕ ಪೂರ್ಣವಾಗಿವೆ. ಜಿಲ್ಲಾಡಳಿತದಿಂದ ನಿಭಾಯಿಸಲು ಹಗಲಿರುಳು ಶ್ರಮಿಸಲಾಗುತ್ತಿದೆ. ಜನತೆಯೂ ಸಾಥ್ ಕೊಡಬೇಕು. ಅನಗತ್ಯವಾಗಿ ಹೊರಗೆ ಓಡಾಡಬಾರದು ಎಂದು ಉಪವಿಭಾಗಾಧಿಕಾರಿ ಬೆಡ್‌ಗಳ ನಿರ್ವಹಣೆಯ ನೋಡಲ್ ಅಧಿಕಾರಿ ಡಾ. ಗೋಪಾಲಕೃಷ್ಣ ತಿಳಿಸಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona