ದೇಶದಲ್ಲೇ ಮೊದಲ ಬಾರಿಗೆ ಮಲ್ಲೇಶ್ವರಂನಲ್ಲಿ ಡಿಜಿಟಲ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ
ಡಿಜಿಟಲ್ ಆರೋಗ್ಯ ಕೇಂದ್ರದಲ್ಲಿ ದಿನ 24 ಗಂಟೆ ವೈದ್ಯರ ಸೇವೆ ಲಭ್ಯ
ನಗರ ಪ್ರಾಥಮಿಕ ಆರೋಗ್ಯ ಕೆಂದ್ರದಲ್ಲಿ ಎಲ್ಲ ಚಿಕಿತ್ಸೆಯೂ ಉಚಿತ
ವರದಿ: ವಿದ್ಯಾಶ್ರೀ, ಏಷ್ಯಾನೆಟ್ ಸುವರ್ಣನ್ಯೂಸ್
ಬೆಂಗಳೂರು (ಡಿ.20): ಆರೋಗ್ಯವೇ ಭಾಗ್ಯ ಅನ್ನೋ ಮಾತಿದೆ. ಅದಕ್ಕೆ ತಕ್ಕಂತೆ ಸಚಿವ ಡಾ.ಸಿ ಅಶ್ವಥ್ ನಾರಾಯಣ್ ಅಭಿವೃದ್ದಿಯ ಹರಿಕಾರರಾಗಿದ್ದಾರೆ. ಇದೇ ನಿಟ್ಟಿನಲ್ಲಿ ಭಾರತದಲ್ಲೇ ಮೊದಲ ಬಾರಿಗೆ ಅತ್ಯಾಧುನಿಕವಾಗಿ ನವೀಕರಿಸಲಾದ ನಗರ ಆರೋಗ್ಯ ಕೇಂದ್ರ ಸ್ಥಾಪಿಸುವ ಮೂಲಕ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಜನತೆಗೆ ಗುಡ್ ನ್ಯೂಸ್ ನೀಡಿದ್ದಾರೆ.
ಮಲ್ಲೇಶ್ವರಂ ಕ್ಷೇತ್ರದ ಮತ್ತಿಕೆರೆಯ ನೇತಾಜಿ ವೃತದ ಬಳಿ ಅತ್ಯಾಧುನಿಕವಾಗಿ ನವೀಕರಿಸಲಾದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಡಿಸೆಂಬರ್ 19 ರಂದು ಉದ್ಘಾಟನೆಗೊಂಡಿದೆ. ಈ ನಗರ ಆರೋಗ್ಯ ಕೇಂದ್ರವನ್ನು ಕೇಂದ್ರ ರೈಲ್ವೆ ಮತ್ತು ಐಟಿ ಸಚಿವ ಶ್ರೀ ಅಶ್ವಿನಿ ವೈಷ್ಣವರವರು ಉದ್ಘಾಟಿಸಿದರು. ಈ ವೇಳೆ ಕೇಂದ್ರ ಸಚಿವರಿಗೆ ಮಲ್ಲೇಶ್ವರಂ ಕ್ಷೇತ್ರದ ಶಾಸಕರೂ ಆಗಿರುವ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಸಾಥ್ ನೀಡಿದರು.
undefined
ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನ ಉದ್ಘಾಟಿಸಿದ ಬಳಿಕ ಮಾಧ್ಯಮಗಳಿಗೆ ಸಚಿವ ಡಾ.ಸಿ.ಅಶ್ವಥ್ ನಾರಾಯಣ್ ಮಾತನಾಡಿ, ಮತ್ತಿಕೆರೆಯ ನೇತಾಜಿ ನಗರದಲ್ಲಿ ಸ್ಥಾಪನೆಯಾಗಿರುವ ಆರೋಗ್ಯ ಕೇಂದ್ರ ದೇಶಕ್ಕೆ ಮಾದರಿಯಾಗಲಿದೆ. ಅಂತರಾಷ್ಟ್ರೀಯ ದರ್ಜೆಯ ಅತ್ಯಾಧುನಿಕ ಆರೋಗ್ಯ ಕೇಂದ್ರವನ್ನ ಇಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ ಅವರು ಉದ್ಘಾಟಿಸಿದ್ದಾರೆ. ಇದು ಬಿಬಿಎಂಪಿ ಕಡೆಯಿಂದ ಆರೋಗ್ಯ ಇಲಾಖೆಯಲ್ಲಿ ಆಗುತ್ತಿರುವ ಉನ್ನತಿಕರಣ ಆಗಿದೆ. ನಮ್ಮ ಜನಕ್ಕೆ ಉತ್ತಮವಾದ ಆರೋಗ್ಯ ಸಿಗಬೇಕು. ಆದ್ದರಿಂದ ವರ್ಚುವಲ್ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲಾಗಿದೆ ಎಂದರು.
ಮತ್ತಿಕೆರೆ ನೇತಾಜಿ ವೃತ್ತದಲ್ಲಿ ಅತ್ಯಾಧುನಿಕ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ
ದಿನದ 24 ಗಂಟೆಗಳ ಕಾಲ ವರ್ಚುವಲ್ ಸೇವೆ : ಮೊದಲ ಹಂತದಲ್ಲಿ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಭಾರತದಲ್ಲೇ ಮೊದಲ ಬಾರಿಗೆ ಪ್ರಾಥಮಿಕ ಹಂತದಲ್ಲಿ ನಾಗ್ ಬ್ಲಾಕ್, ಗಾಂಧಿಗ್ರಾಮ, ನೇತಾಜಿಸರ್ಕಲ್ (ಮತ್ತಿಕೆರೆ), ಸುಬೇಧರ್ ಪಾಳ್ಯ, ಪ್ಯಾಲೇಸ್ ಗುಟ್ಟಳ್ಳಿ ಸೇರಿ ಒಟ್ಟು ನಾಲ್ಕು ಡಿಜಿಟಲ್ ನಗರ ಆರೋಗ್ಯ ಕೇಂದ್ರ ಸ್ಥಾಪನೆ ಮಾಡಲಾಗಿದೆ. ದಿನದ 24 ಗಂಟೆಗಳ ಕಾಲ ವರ್ಚುವಲ್ ಮೂಲಕ ಜನರಿಗೆ ಚಿಕಿತ್ಸೆ ದೊರೆಯಲಿದೆ. ಬರೋಬ್ಬರಿ 18 ಕೋಟಿ ವೆಚ್ಚದಲ್ಲಿ ವರ್ಚುವಲ್ ಪ್ರಾಥಮಿಕ ಕೇಂದ್ರ ಸ್ಥಾಪಿಸಲಾಗಿದೆ. ಇಲ್ಲಿ ಎಕ್ಸ್ ರೆ, ಕಣ್ಣಿನ ಪರೀಕ್ಷೆ, ಹಲ್ಲಿನ ಪರೀಕ್ಷೆ, ಫಿಸಿಯೋ ಥೆರಪಿ, 220 ಲ್ಯಾಬ್ ಟೆಸ್ಟ್, ಮಾತ್ರೆ ಸೇರಿದಂತೆ ಎಲ್ಲ ಚಿಕಿತ್ಸೆಯು ಉಚಿತವಾಗಿ ದೊರೆಯಲಿದೆ.
ಸಪ್ತಗಿರಿ ಕಾಲೇಜಿನಿಂದ ವೈದ್ಯರ ನಿಯೋಜನೆ: ಇನ್ನು ಸಪ್ತಗಿರಿ ಕಾಲೇಜಿನಿಂದ ಪ್ರತಿನಿತ್ಯ 4 ಡಾಕ್ಟರ್ ಗಳನ್ನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳಿಹಿಸಲಾಗುತ್ತದೆ. ಈ ವೈದ್ಯರು ಮೂರು ಪಾಳಿ ಆಧಾರದಲ್ಲಿ ಕೆಲಸ ಮಾಡಲಿದ್ದಾರೆ. ಇವರಿಗೆ ಸರ್ಕಾರದಿಂದ ಯಾವುದೇ ವೇತನವನ್ನು ನೀಡುವಿಲ್ಲ. ಈ ಹಿಂದೆ ಬಿಬಿಎಂಪಿಯಲ್ಲಿ ಒಬ್ಬ ಡಾಕ್ಟರ್ ಕೊಟ್ಟರೆ ಹೆಚ್ಚಿತ್ತು. ಆದರೆ, ಈಗ ಎಲ್ಲ ಸೌಲಭ್ಯಗಳನ್ನ ನಮಗೆ ನೀಡಿದ್ದಾರೆ. ಇದಕ್ಕಾಗಿ ಬಿಬಿಎಂಪಿಗೆ ನಾನು ಅಭಿನಂದಿಸುತ್ತೇನೆ ಎಂದು ತಿಳಿಸಿದರು.
ಕಮಾಂಡಿಂಗ್ ಸೆಂಟರ್ ಮೂಲಕ ಮಾಹಿತಿ ರವಾನೆ: ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಧುಮೇಹ, ರಕ್ತದ ಒತ್ತಡ, ಚರ್ಮದ ಕಾಯಿಲೆ, ಬೆನ್ನುನೋವು ಮುಂತಾದ ಕಾಯಿಲೆಗಳಿಗೆ ಸಮರ್ಪಕ ಚಿಕಿತ್ಸೆ ದೊರೆಯಲಿದೆ. ಇಲ್ಲಿ ಚಿಕಿತ್ಸೆ ದೊರೆಯದೆ ಇರುವಂತಹ ಕಾಯಿಲೆಗಳ ಮಾಹಿತಿಯನ್ನು ಕಮಾಂಡೋ ಸೆಂಟರ್ ಮೂಲಕ ನಮ್ಮೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಮಿಂಟೋ ಕಣ್ಣಾಸ್ಪತ್ರೆ ಮುಂತಾದ ಕಡೆಗಳಿಗೆ ಕ್ಷಿಪ್ರ ಗತಿಯಲ್ಲಿ ರವಾನಿಸಿ, ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದರು.