Chikkamagaluru: ರಸ್ತೆ, ಸೇತುವೆ ದುರಸ್ತಿ ಮಾಡದ್ದಕ್ಕೆ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ

By Sathish Kumar KH  |  First Published Dec 20, 2022, 1:28 PM IST

ಮನವಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಪಕ್ಷದ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ
2019ರಲ್ಲಿ ಸುರಿದ ಮಳೆಗೆ ಕೊಪ್ಪ ತಾಲೂಕಿನ ಹಾಡುಗಾರು ಗ್ರಾಮದಲ್ಲಿ ಹಾಳಾದ ರಸ್ತೆ, ಸೇತುವೆ ದುರಸ್ಥಿಗೆ  ಆಗ್ರಹ
ಚುನಾವಣಾ ಬಹಿಷ್ಕಾರದ ಸಂದೇಶಕ್ಕೆ ಸ್ಪಂದಿಸದ ಹಿನ್ನಲೆಯಲ್ಲಿ ರಾಜೀನಾಮೆ ಸಲ್ಲಿಕೆ


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಡಿ.20): ಮನವಿ ಮೇಲೆ ಮನವಿ ಮಾಡಿದರೂ ಕೂಡ ಸ್ಪಂದಿಸದ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರಹಾಕಿರೋ ಹಳ್ಳಿಗರು ಮುಂಬರುವ ವಿಧಾನಸಭಾ ಚುನಾವಣೆ ಬೈಕಾಟ್ ಮಾಡಿದ್ದಾರೆ. 2019ರಲ್ಲಿ ಸುರಿದ ಭಾರೀ ಮಳೆಗೆ ಹಾಳಾದ ರಸ್ತೆ-ಸೇತುವೆ ದುರಸ್ಥಿ ಕಾರ್ಯ ಇಂದಿಗೂ ನಡೆದಿಲ್ಲ. ಇದರಿಂದ ಬೇಸತ್ತ ಬಿಜೆಪಿ-ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರು ಪಕ್ಷಕ್ಕೆ ರಾಜೀನಾಮೆ ನೀಡುವ ಬೆದರಿಕೆ ನೀಡಿ, ಸರ್ಕಾರಕ್ಕೆ ಚುನಾವಣೆ ಬಹಿಷ್ಕಾರದ ಸಂದೇಶ ರವಾನಿಸಿದ್ದರು. ಆದರೂ ಕೂಡ ಯಾರೂ ಸ್ಪಂದಿಸದ ಹಿನ್ನೆಲೆ ಎಲ್ಲಾ ರಾಜಕೀಯ ಪಕ್ಷದ ಕಾರ್ಯಕರ್ತರು ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿ, ಚುನಾವಣೆ ಬಹಿಷ್ಕರಿಸಿದ್ದಾರೆ.

Tap to resize

Latest Videos

ಕಾಫಿನಾಡು ಚಿಕ್ಕಮಗಳೂರಲ್ಲಿ 2019ರಿಂದ ಇಲ್ಲಿವರೆಗೂ ಯಾವ ಪ್ರಮಾಣದಲ್ಲಿ ಮಳೆ ಸುರಿದಿದೆ ಎಂದು ಎಲ್ಲರಿಗೂ ಗೊತ್ತೆ ಇದೆ. ಆದ್ರೆ, 2019ರ ಮಳೆಯಿಂದ ಹಾಳಾದ ರಸ್ತೆ-ಸೇತುವೆಗಳೂ ಇಂದಿಗೂ ದುರಸ್ಥಿ ಆಗಿಲ್ಲ ಅನ್ನೋದೆ ದುರಂತ. ಹಾಗಾಗಿ, ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಜಯಪುರ ಹೋಬಳಿಯ ಹಾಡುಗಾರು ಗ್ರಾಮದ ಜನ ಅಲ್ಲಿಂದ ಇಲ್ಲಿವರೆಗೂ ಸರ್ಕಾರ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೆ, ಸ್ಥಳಕ್ಕೆ ಹೋಗುವ ಜನಪ್ರತಿನಿಧಿಗಳು, ಅಧಿಕಾರಿಗಳು ಹಳ್ಳಿಗರ ಮೂಗಿಗೆ ತುಪ್ಪಾ ಸವರಿದ್ದೇ ಹೆಚ್ಚಾಗಿದೆ.

Chikkamagaluru: ಸ್ಮಶಾನದ ಮಂಜೂರು ಜಾಗ ಒತ್ತುವರಿ ಆರೋಪ, ಮೂಡಿಗೆರೆ ತಾಲೂಕು ಕಛೇರಿ ಮುಂದೆ ಧರಣಿ ಸತ್ಯಾಗ್ರಹ

ಚುನಾವಣಾ ಬಹಿಷ್ಕಾರ ಸಂದೇಶ: ಹಾಗಾಗಿ, ಕಳೆದ 15 ದಿನಗಳ ಹಿಂದೆ ಚುಣಾವಣೆ ಬಹಿಷ್ಕಾರದ ಸಂದೇಶ ರವಾನಿಸಿ ರಾಜಕೀಯ ಪಕ್ಷಗಳ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆಯೊಡ್ಡಿದ್ದರು. ಆದರೂ, ಸರ್ಕಾರವಾಗಲಿ, ಜನಪ್ರತಿನಿಧಿಯಾಗಲಿ ಈವರೆಗೂ ಅವರ ನೋವು-ಕೂಗಿಗೆ ಸ್ಪಂದಿಸಿಲ್ಲ. ಇಂದು ಹಾಡುಗಾರ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಐದಾರು ಹಳ್ಳಿಯ ಜನ ಈ ಬಾರಿಯೂ ಚುನಾವಣೆಯನ್ನ ಬಹಿಷ್ಕರಿಸಿಯೇ ಸಿದ್ಧ ಎಂದು ಸಂದೇಶವನ್ನ ಮತ್ತೊಮ್ಮೆ ಹೇಳಿ ಚುನಾವಣೆ ಬಹಿಷ್ಕರಿಸಿದ್ದಾರೆ. ಗ್ರಾಮದ ಮುಂದೆಯೇ ಜನರು ಬ್ಯಾನರ್ ಹಾಕಿದ್ದಾರೆ. 

ಜನಪ್ರತಿನಿಧಿಗಳ ಗಮನಕ್ಕೂ ತಂದ್ರೂ ಪ್ರಯೋಜನವಿಲ್ಲ : ಹಾಡುಗಾರ ಗ್ರಾಮದ ಮಕ್ಕಳು ಶಾಲಾ-ಕಾಲೇಜಿಗೆ ಬರಬೇಕಂದರೆ ಜಯಪುರ ಹೋಬಳಿ ಕೇಂದ್ರಕ್ಕೆ ಬರಬೇಕು. ಕೂಲಿಕಾರ್ಮಿಕರೇ ಹೆಚ್ಚಿರುವ ಇಲ್ಲಿ ಮಕ್ಕಳನ್ನ ನಿತ್ಯ ಶಾಲಾ-ಕಾಲೇಜಿಗೆ ಬಂದು ಬಿಟ್ಟು ಹೋಗುವುದು ಅಸಾಧ್ಯ. ಮಕ್ಕಳೇ ಬಂದು ಹೋಗುತ್ತಾರೆ. ಹೀಗಿರುವಾಗ ರಸ್ತೆ-ಸೇತುವೆಗಳು ಮುರಿದು ಬಿದ್ದಿರುವುದರಿಂದ ಹೆತ್ತವರಿಗೆ ಮಕ್ಕಳ ಬಗ್ಗೆ ಆತಂಕ. ಹಾಗಾಗಿ, ಇಲ್ಲಿನ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಗಮನಕ್ಕೂ ತಂದಿದ್ದರೂ ಆದರೆ ಶಾಸಕರು ಕೂಡ ಯಾವುದೇ ರೀತಿ ಸ್ಪಂದಿಸಲಿಲ್ಲ. ಅಧಿಕಾರಿಗಳಿಗೆ ಹತ್ತಾರು ಬಾರಿ ಮನವಿ ಮಾಡಿದರೂ ನೋ ಯೂಸ್. ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್ ಗಮನಕ್ಕೂ ತಂದಿದ್ದರು.

Chikkamagaluru: ಅಸ್ಸಾಂ ವಲಸಿಗರಿಂದ ಕಾಫಿತೋಟದ ಮಾಲೀಕನ ಮೇಲೆ ಹಲ್ಲೆಗೆ ಯತ್ನ

ರಾಜಿನಾಮೆ ಸಲ್ಲಿಸಿ ಫಲಕ ಹಾಕಿದ ಸದಸ್ಯರು: ರಸ್ತೆ-ಸೇತುವೆಗೆ ಯಾರೂ ಸ್ಪಂದಿಸಿದ ಹಿನ್ನೆಲೆ ಬಿಜೆಪಿ-ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರು ಕೂಡ ತಮ್ಮ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿ ಊರಿನ ಹೆಬ್ಬಾಗಿಲಿನಲ್ಲೇ ರಾಜೀನಾಮೆಯ ನಾಮಫಲಕ ಹಾಕಿದ್ದಾರೆ. ಒಟ್ಟಾರೆ, ಮೂಲಭೂತ ಸೌಕರ್ಯಗಾಗಿ ಮುಂಬರೋ ವಿಧಾನಸಭಾ ಚುನಾವಣೆಯನ್ನ ಬಹಿಷ್ಕರಿಸಿದ ರಾಜ್ಯದ ಮೊದಲ ಹಳ್ಳಿ ಕಾಫಿನಾಡು ಹಾಡುಗಾರ ಗ್ರಾಮವಾಗಿದೆ. ಮೂಲಭೂತ ಸೌಲಭ್ಯ ಕಲ್ಪಿಸುವುದು ಸರ್ಕಾರದ ಆಧ್ಯ ಕರ್ತವ್ಯ. ಅದನ್ನ ಹೋರಾಟ ಮಾಡಿ ಮಾಡಿಸಿಕೊಳ್ಳುವ ಅನಿವಾರ್ಯತೆ ಬಂದಿರುವುದು ಮತ್ತೊಂದು ದುರಂತವೇ ಸರಿ.

click me!