ಬಾಗಲಕೋಟೆ: ಮಹಾಮಾರಿ ಕೊರೋನಾ ವಿರುದ್ಧ ಹೋರಾಡಿದ ನಾಲ್ವರು ಡಿಸ್ಚಾರ್ಜ್‌

By Kannadaprabha NewsFirst Published Apr 26, 2020, 10:53 AM IST
Highlights

ಕೋವಿ​ಡ್‌-19 ಆಸ್ಪ​ತ್ರೆ​ಯಿಂದ ಬಿಡು​ಗ​ಡೆ ಇತ​ರ​ರಲ್ಲಿ ಮೂಡಿದ ಆಶಾ​ಭಾ​ವ| ಒಂದೇ ಕುಟುಂಬದ ಮೂವರು ಹಾಗೂ ಗುಜರಾತ್‌ನಿಂದ ಧರ್ಮ ಪ್ರಚಾರಕ್ಕೆ ಬಂದಿದ್ದ ಓರ್ವ ವ್ಯಕ್ತಿ ಬಿಡುಗಡೆ| ಮನೆಯಲ್ಲಿ 14 ದಿನಗಳ ಕ್ವಾರಂಟೈನ್‌ಗೆ ತೆರಳಿದ ಬಿಡುಗಡೆಯಾದವರು|

ಬಾಗಲಕೋಟೆ(ಏ.26): ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಗುಣಮುಖದ ಸರಣಿ ಮುಂದುವರೆದಿದ್ದು ಶನಿವಾರ 4 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಕೋವಿಡ್‌-19 ಆಸ್ಪತ್ರೆಯಿಂದ ಬಿಡುಗಡೆಯಾಗುವ ಮೂಲಕ ಇತರರಲ್ಲಿ ಆತ್ಮವಿಶ್ವಾಸ ಮೂಡಿಸಿದ್ದಾರೆ.

ಒಂದೇ ಕುಟುಂಬದ ಮೂವರು ಹಾಗೂ ಗುಜರಾತ್‌ನಿಂದ ಧರ್ಮ ಪ್ರಚಾರಕ್ಕೆ ಬಂದಿದ್ದ ಓರ್ವ ವ್ಯಕ್ತಿಯಲ್ಲಿ ಕಾಣಿಸಿಕೊಂಡಿದ್ದ ಕೊರೋನಾ ಸೋಂಕಿಗೆ ಬಾಗಲಕೋಟೆಯ ಕೋವಿಡ್‌ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ಪರಿಣಾಮ ಇಂದು ಎಲ್ಲರೂ ಗುಣಮುಖರಾಗಿ ಮನೆಯಲ್ಲಿ 14 ದಿನಗಳ ಕ್ವಾರಂಟೈನ್‌ಗೆ ತೆರಳಿದ್ದಾರೆ.

ಲಾಕ್‌ಡೌನ್‌ ಮಧ್ಯೆಯೂ ಮದ್ಯ ಮಾರಾಟ: ಎರಡು ಬಾರ್‌ ಲೈಸನ್ಸ್‌ ರದ್ದು

ಭಾವಪೂರ್ಣ ಬೀಳ್ಕೊಡುಗೆ:

4 ವರ್ಷದ ಪುಟ್ಟ ಮಗು, 10 ವರ್ಷದ ಸಹೋದರ ಸಂಬಂ​ಧಿ ಮಗುವಿನ ಜೊತೆ 26 ವರ್ಷದ ತಾಯಿಗೆ ಕಾಣಿಸಿಕೊಂಡ ಕೊರೋನಾ ಸೋಂಕಿನಿಂದ ತತ್ತರಿಸಿದ್ದ ಕುಟುಂಬ ಇದೀಗ ನಿರಾಳವಾಗಿದೆ. 75ರ ವೃದ್ಧ​ನಿಂದ ಕಾಣಿಸಿಕೊಂಡ ಮೂವರಲ್ಲಿನ ಸೋಂಕು ಬಾಗಲಕೋಟೆಯ ಸದ್ಯದ ಕಂಟೈನ್ಮೆಂಟ್‌ ವಲಯ ಅಕ್ಷರ​ಶಹಃ ತತ್ತರಗೊಂಡಿತ್ತು. ತಾಯಿ ಮಗು ಸೇರಿದಂತೆ ಮೂವರನ್ನು ಕಳೆದ 18 ದಿನಗಳಿಂದ ಕೋವಿಡ್‌-19 ಆಸ್ಪತ್ರೆಯ ಸಿಬ್ಬಂದಿ ಮಾಡಿದ ಆರೈಕೆಗೆ ಇಂದು ಫಲ ನೀಡಿತು. ಎರಡು ಬಾರಿ ತಪಾಸಣೆಗೊಳಪಟ್ಟ ನಂತರ ಯಾವುದೇ ಸೋಂಕು ಇರದ ಹಿನ್ನಲೆಯಲ್ಲಿ ಜಿಲ್ಲಾಸ್ಪತ್ರೆ ಸಿಬ್ಬಂದಿ ಇಂದು ಇವರನ್ನು ಬಿಡುಗಡೆಗೊಳಿಸಿದರು.

ಪುಟ್ಟ ಮಗುವಿನ ಕೈಯಲ್ಲಿ ಚಿತ್ರ ಬಿಡಿಸುವ ಸಾಮಗ್ರಿಗಳನ್ನು ಹಾಗೂ ತಾಯಿಯ ಕೈಯಲ್ಲಿ ಹೂವಿನ ಗಿಡ ನೀಡುವ ಮೂಲಕ ಬೀಳ್ಕೊಟ್ಟ ಜಿಪಂ ಸಿಇಒ ಗಂಗೂಬಾಯಿ ಮಾನಕರ, ಕೋವಿಡ್‌ ಆಸ್ಪತ್ರೆಯ ಮುಖ್ಯಸ್ಥ ಡಾ. ಪ್ರಕಾಶ ಬಿರಾದಾರ, ನೋಡಲ್‌ ಅಧಿ​ಕಾರಿ ಡಾ. ಚಂದ್ರಕಾಂತ ಜವಳಿ ನೇತೃತ್ವದ ತಂಡ ಭಾವಪೂರ್ಣವಾಗಿ ಚಪ್ಪಾಳೆ ತಟ್ಟಿ ಬೀಳ್ಕೊಟ್ಟಿತ್ತು.

ಇನ್ನೊಬ್ಬ ಸೋಂಕಿತ ಗುಜರಾತನಿಂದ ಬಾಗಲಕೋಟೆ ಜಿಲ್ಲೆ ಮುಧೋಳಕ್ಕೆ ಬಂದಿದ್ದ ವ್ಯಕ್ತಿ ಸಹ ಸೋಂಕಿತನಾಗಿದ್ದರಿಂದ ಅವನು ಸಹ ಸಂಪೂರ್ಣವಾಗಿ ಗುಣಮುಖರಾಗಿದ್ದ ಕಾರಣ ಕೋವಿಡ್‌ ಆಸ್ಪತ್ರೆಯಿಂದ ಪ್ರಮಾಣ ಪತ್ರ ನೀಡಿ ಬೀಳ್ಕೊಡಲಾಯಿತು.

ಕೃತಜ್ಞತೆ:

ಸೋಂಕಿನಿಂದ ಗುಣಮುಖರಾದ ನಾಲ್ವರಲ್ಲಿಯೂ ಜಿಲ್ಲಾ ಕೋವಿಡ್‌ ಆಸ್ಪತ್ರೆ ಸಿಬ್ಬಂದಿ ನೀಡಿದ ಚಿಕಿತ್ಸೆ, ಮಾಡಿದ ಉಪಚಾರ, ನೀಡಿದ ಸಲಹೆಯನ್ನು ಮುಕ್ತವಾಗಿ ಸ್ಮರಿಸಿದರಲ್ಲದೆ ಸೋಂಕಿನ ಭೀತಿಯಿಂದ ಹೊರಗೆ ಬರಲು ಮಾಡಿದ ಸಹಾಯವನ್ನು ನೆನೆದು ಭಾವುಕರಾದರು.

ಕೋವಿಡ್‌ ಆಸ್ಪತ್ರೆ ಸಿಬ್ಬಂದಿಗಳ ನಿರಂತರ ಸೇವೆಯನ್ನು ನೆನೆದರಲ್ಲದೆ ಎಲ್ಲ ಬಗೆಯ ಚಿಕಿತ್ಸೆಯ ಸೌಲಭ್ಯ ಹೊಂದಿರುವ ಸರ್ಕಾರದ ಆಸ್ಪತ್ರೆಗಳ ಕುರಿತು ಅಭಿಮಾನ ವ್ಯಕ್ತಪಡಿಸಿದರು. ಒಟ್ಟಾರೆ ಬಾಗಲಕೋಟೆ ಜಿಲ್ಲೆಯಲ್ಲಿನ ಸೋಂಕಿತರ ಗುಣಮುಖವಾಗುವ ಪ್ರಕರಣಗಳು ಹೆಚ್ಚಾಗಿರುವುದರಿಂದ ಜಿಲ್ಲೆಯ ಜನರಲ್ಲಿ ಆತ್ಮವಿಶ್ವಾಸ ಮತ್ತಷ್ಟುಹೆಚ್ಚಾಗುತ್ತಿದೆ.

ಗುಜರಾತ ಮೂಲದ ವ್ಯಕ್ತಿ ಜಿಲ್ಲೆಯ ಮುಧೋಳ ಪಟ್ಟಣದಲ್ಲಿ ಧರ್ಮ ಪ್ರಚಾರಕ್ಕೆಂದು ಬಂದು ಅಲ್ಲಿನ ಮದರಸಾದಲ್ಲಿ ಇದ್ದ ಸಮಯದಲ್ಲಿ ಕಾಣಿಸಿಕೊಂಡ ಕೊರೋನಾ ಸೋಂಕಿಗೆ ಚಿಕಿತ್ಸೆಗೆಂದು ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯು ಇಂದು ಗುಣಮುಖನಾಗಿ ಬಿಡುಗಡೆ ಹೊಂದುವ ಸಮಯದಲ್ಲಿ ಅವರನ್ನು ಕರೆದೊಯ್ಯಲು ಯಾರು ಬಾರದ ಹಿನ್ನಲೆಯಲ್ಲಿ ಜಿಲ್ಲಾಡಳಿತ ಗುಣಮುಖವಾದ ವ್ಯಕ್ತಿಯನ್ನು ಜಿಲ್ಲಾ ಅಲ್ಪ ಸಂಖ್ಯಾತ ವಸತಿ ನಿಲಯದಲ್ಲಿ 14 ದಿನಗಳ ಕ್ವಾರಂಟೈನಗೆ ಇಡಲು ನಿರ್ಧರಿಸಿದರು. ಹೀಗಾಗಿ ಕೋವಿಡ್‌ ಆಸ್ಪತ್ರೆಯಿಂದ ನೇರವಾಗಿ ವಸತಿ ನಿಲಯಕ್ಕೆ ಕಳಿಸಿಕೊಡಲಾಯಿತು.
 

click me!