ಲಾಕ್‌ಡೌನ್‌ ಮಧ್ಯೆಯೂ ಮದ್ಯ ಮಾರಾಟ: ಎರಡು ಬಾರ್‌ ಲೈಸನ್ಸ್‌ ರದ್ದು

By Kannadaprabha News  |  First Published Apr 26, 2020, 10:27 AM IST

ಅಬಕಾರಿ ದಾಳಿ ವೇಳೆ ಬಾಟಲಿಗಳ ಬಾಕ್ಸ್‌ ಸ್ಟಾಕ್‌ ವ್ಯತ್ಯಾಸ ಹಿನ್ನೆಲೆ ಕ್ರಮ|ಮದ್ಯ ಮಾರಾಟ ಸ್ಥಗಿತವಿದ್ದರೂ ಅಕ್ರಮ ಮದ್ಯ ಮಾರಾಟದ ಆರೋಪ| ಕಳ್ಳಭಟ್ಟಿ ವ್ಯವಹಾರದಲ್ಲಿ ಲಕ್ಷಾಂತರ ರುಪಾಯಿ​ಗಳ ವ್ಯವಹಾರ|


ಬಾಗಲಕೋಟೆ(ಏ.26): ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಾರಾಟವಾಗುತ್ತಿದ್ದ ಕಳ್ಳಭಟ್ಟಿ ಹಾಗೂ ಲೈಸನ್ಸ್‌ ಹೊಂದಿದ ಮದ್ಯ ಮಾರಾಟಗಾರರಿಂದಲೇ ಅಕ್ರಮವಾಗಿ ಮದ್ಯ ಮಾರಾಟ ಪ್ರಕರಣಗಳಿಂದ ಎಚ್ಚೆತ್ತುಕೊಂಡಿರುವ ಅಬಕಾರಿ ಇಲಾಖೆ ಕೊನೆಗೂ ​ಅಕ್ರಮ ಮಾರಾಟಗಾರರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದು ಎರಡು ಬಾರ್‌ಗಳ ಲೈಸನ್ಸ್‌ ಅಮಾನತು ಮಾಡಿ ಶನಿವಾರ ಅಬಕಾರಿ ಇಲಾಖೆ ಆದೇಶ ಹೊರಡಿಸಿದೆ.

ಲಾಕ್‌ಡೌನ್‌ ನಡುವೆ ಅಕ್ರಮ ಮದ್ಯ ಮಾರಾಟ ಮಾಡಿದ ಆರೋಪದ ಮೇಲೆ ಬಾಗಲಕೋಟೆ ನಗರದ ಮೂನ್‌ಲೈಟ್‌ ಬಾರ್‌, ಹಾಗೂ ಡ್ರೈವಿನ್‌ ಬಾರ್‌ ಅಂಗಡಿಗಳನ್ನು ಅಮಾನತು ಮಾಡಿ ಅಬಕಾರಿ ಇಲಾಖೆ ಶನಿವಾರ ಆದೇಶ ಹೊರಡಿಸಿದೆ.

Latest Videos

undefined

ಮೇ 3 ರವರೆಗೆ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ; ಕೇಂದ್ರ ಸ್ಪಷ್ಟನೆ

ಮಾರಾಟ ಸ್ಥಗಿತದ ಆದೇಶವಿದ್ದರೂ ಕದ್ದುಮುಚ್ಚಿ ಮೂನ್‌ಲೈಟ್‌ ಬಾರ್‌ನಲ್ಲಿ 35 ಬಾಕ್ಸ್‌, ಡ್ರೈವಿನ್‌ ಬಾರ್‌ನಲ್ಲಿ 25 ಬಾಕ್ಸ್‌ ಮದ್ಯದ ಬಾಟಲಿಗಳ ವ್ಯತ್ಯಾಸ ಸ್ಟಾಕ್‌ ಪರಿಶೀಲನೆ ಸಂದರ್ಭದಲ್ಲಿ ಕಂಡು ಬಂದಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳ್ಳಭಟ್ಟಿ ಅಡ್ಡೆ ಮೇಲೆ ದಾಳಿ:

ಅಬಕಾರಿ ಇಲಾಖೆಯ ಅಧಿಕಾರಿಗಳು ಬಾಗಲಕೋಟೆ ತಾಲೂಕಿನ ಮುಚಖಂಡಿ ಎಲ್‌ಟಿ 1ರಲ್ಲಿರುವ ಕಳ್ಳಭಟ್ಟಿ ಅಡ್ಡೆ ಮೇಲೆ ದಾಳಿ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. 58 ಲೀಟರ್‌ ಕಳ್ಳಭಟ್ಟಿ, 500 ಲೀಟರ್‌ ಬೆಲ್ಲದ ಕೊಳೆಯನ್ನು ನಾಶ ಮಾಡಲಾಗಿದ್ದು ಕಳ್ಳಭಟ್ಟಿ ತಯಾರಿಸುತ್ತಿದ್ದ ಮಂಜುನಾಥ ಎಂಬುವನನ್ನು ಬಂಧಿಸಲಾಗಿದೆ. ಅಬಕಾರಿ ಹಾಗೂ ಪೊಲೀಸ್‌ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿವೆ. ಪ್ರಕರಣ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

ಕಳೆದ ಒಂದು ತಿಂಗಳಿನಿಂದ ಸರ್ಕಾರ ಮದ್ಯ ಮಾರಾಟ ಸ್ಥಗಿತಗೊಂಡಿದ್ದರಿಂದ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಿರಂತರವಾಗಿ ಮಾರಾಟ ಹಾಗೂ ಉತ್ಪಾದನೆಯಾಗುತ್ತಿದ್ದ ಕಳ್ಳಭಟ್ಟಿಸಾರಾಯಿ ಅಡ್ಡೆಗಳ ಮೇಲೆ ಅಬಕಾರಿ ಇಲಾಖೆ ದಾಳಿ ಆರಂಭಿಸಿದ್ದು ಕಳೆದ ವಾರದಿಂದ ಈಚೆ ಕಳ್ಳಭಟ್ಟಿ ತಯಾರಿಸುವವರ ವಿರುದ್ಧ ಕ್ರಮ ಆರಂಭಿಸಿದ್ದು ಕೆಲವು ಅಡ್ಡೆಗಳ ಮೇಲೆ ದಾಳಿ ಮಾಡಿದ್ದಾರೆ.

ಸರ್ಕಾರದ ಕಟ್ಟುನಿಟ್ಟಿನ ಕ್ರಮದ ಪರಿಣಾಮ ಜಿಲ್ಲೆಯಲ್ಲಿನ ಎಲ್ಲ ಬಗೆಯ ಅಬಕಾರಿ ಲೈಸನ್ಸ್‌ ಹೊಂದಿದ ಮದ್ಯ ವ್ಯಾಪಾರಿಗಳು ತಮ್ಮ ಮಾರಾಟವನ್ನು ಸ್ಥಗಿತಗೊಳಿಸಿ ತಿಂಗಳು ಗತಿಸಿದೆ. ಇದರ ಪರಿಣಾಮ ಪ್ರತಿನಿತ್ಯ ಮದ್ಯಕ್ಕೆ ಅವಲಂಬಿತವಾದ ಜನ ಅನಿವಾರ್ಯವಾಗಿ ಕಳ್ಳಭಟ್ಟಿ ಸಾರಾಯಿಗೆ ಮೊರೆ ಹೋಗಿದ್ದರಿಂದ ಬಾಗಲಕೋಟೆ ನಗರ ಸೇರಿದಂತೆ ಜಿಲ್ಲೆಯ 25ಕ್ಕೂ ಹೆಚ್ಚು ಗ್ರಾಮೀಣ ಪ್ರದೇಶದಲ್ಲಿನ ತಾಂಡಾಗಳಲ್ಲಿ ನಡೆಯುತ್ತಿರುವ ಎಗ್ಗಿಲ್ಲದ ಸಾರಾಯಿ ಮಾರಾಟ ಹಾಗೂ ಪ್ರತಿನಿತ್ಯ ತಯಾರಿಸುವ ಕಳ್ಳಭಟ್ಟಿಸೇವನೆಯಿಂದ ಸಾರಾಯಿ ದಾಸರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದೆ.

ಪ್ರತಿನಿತ್ಯ ಕಳ್ಳಭಟ್ಟಿ ವ್ಯವಹಾರದಲ್ಲಿ ಲಕ್ಷಾಂತರ ರುಪಾಯಿ​ಗಳ ವ್ಯವಹಾರ ಒಂದೊಂದು ಗ್ರಾಮದಲ್ಲಿ ನಡೆಯುತ್ತಿದ್ದರೂ ಸಂಬಂಧಿಸಿದ ಅಬಕಾರಿ ಇಲಾಖೆ ಮಾತ್ರ ನೆಪ ಮಾತ್ರದ ದಾಳಿ ನಡೆಸಿ ತನ್ನ ಕರ್ತವ್ಯ ಪ್ರಜ್ಞೆಯನ್ನು ಮರೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಇನ್ನಾದರೂ ವ್ಯವಸ್ಥಿತ ದಾಳಿ ನಡೆಸಿ ಆಗುತ್ತಿರುವ ಅವ್ಯವಹಾರವನ್ನು ತಪ್ಪಿಸುವ ಅನಿವಾರ್ಯತೆ ಇದೆ.
 

click me!