ಏ.29ರಿಂದ ಎಸ್‌ಎಸ್‌ಎಲ್‌ಸಿ ಪುನರ್ ಮನನ ತರಗತಿ ಪ್ರಾರಂಭವಾಗಲಿದೆ ಎಂದು ಪ್ರಾಥಮಿಕ, ಪ್ರೌಢಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‌ಕುಮಾರ್ ತಿಳಿಸಿದ್ದಾರೆ.
ಚಾಮರಾಜನಗರ(ಏ.26): ಚಂದನ ವಾಹಿನಿಯಲ್ಲಿ ಏ.29ರಿಂದ ಎಸ್‌ಎಸ್‌ಎಲ್‌ಸಿ ಪುನರ್ ಮನನ ತರಗತಿ ಪ್ರಾರಂಭವಾಗಲಿದೆ ಎಂದು ಪ್ರಾಥಮಿಕ, ಪ್ರೌಢಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‌ಕುಮಾರ್ ತಿಳಿಸಿದ್ದಾರೆ.
ತಾಲೂಕಿನ ಸಂತೇಮರಹಳ್ಳಿ ಹೋಬಳಿ ಕೇಂದ್ರದಲ್ಲಿ ಕೂಲಿ ಕಾರ್ಮಿಕರಿಗೆ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿದಿನ ಮುಕ್ಕಾಲು ಗಂಟೆ ಕಾಲ ಮೊದಲು ಗಣಿತ ಮತ್ತು ವಿಜ್ಞಾನ ವಿಷಯದ ಪಾಠ ನಡೆಸಲಾಗುವುದು. ನಂತರ ಸಮಾಜ ವಿಜ್ಞಾನ, ನಂತರ ಕನ್ನಡ ಮತ್ತು ಇಂಗ್ಲಿಷ್ ವಿಷಯಗಳ ಪುನರ್ ಮನನ ತರಗತಿ ನಡೆಯಲಿದೆ ಎಂದರು.
ಕಿಟ್ ದುರುಪಯೋಗ: ಕಾಂಗ್ರೆಸ್ ಅನಿರ್ದಿಷ್ಟಾವಧಿ ಧರಣಿ ಎಚ್ಚರಿಕೆ
ಪುನರ್ ಮನನ ತರಗತಿಯಲ್ಲಿ ಮೊದಲ 16 ದಿನ ಗಣಿತ ಮತ್ತು ವಿಜ್ಞಾನ ವಿಷಯದ ಬಗ್ಗೆ ಪಾಠ ಮಾಡಲಾಗುವುದು. 17ನೇ ದಿನ ಗಣಿತ ಮತ್ತು ವಿಜ್ಞಾನ ವಿಷಯದ ಮಾದರಿ ಪ್ರಶ್ನೆ ಪತ್ರಿಕೆ ಕುರಿತು ಮಾಹಿತಿ ನೀಡಲಿದ್ದಾರೆ. ಆದಾದ ಮೇಲೆ 6 ದಿನ ಸಮಾಜವಿಜ್ಞಾನ ವಿಷಯದ ಬಗ್ಗೆ ಪಾಠ ಮಾಡಿ ಏಳನೇ ದಿನಕ್ಕೆ ಸಮಾಜ ವಿಜ್ಞಾನ ವಿಷಯದ ಮಾದರಿ ಪ್ರಶ್ನೆ ಪತ್ರಿಕೆ ಕುರಿತು ಮಾಹಿತಿ ನೀಡಲಿದ್ದಾರೆ. ಆದಾದ ನಂತರ 6 ದಿನ ಕನ್ನಡ ಮತ್ತು ಇಂಗ್ಲಿಷ್ ಭಾಷೆ ವಿಷಯದ ಬಗ್ಗೆ ಪಾಠ ಮಾಡಿ ಏಳನೇ ದಿನಕ್ಕೆ ಮಾದರಿ ಪ್ರಶ್ನೆ ಪತ್ರಿಕೆ ಕುರಿತು ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.
ಆಕಾಶವಾಣಿ, ಯೂಟ್ಯೂಬ್‌ನಲ್ಲೂ ಲಭ್ಯ
ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಪುನರ್ ಮನನ ತರಗತಿಗಳು ಆಕಾಶವಾಣಿಯಲ್ಲಿ ಪ್ರಸಾರ ಮಾಡಲಾಗುತ್ತದೆ. ಶಿಕ್ಷಣ ಇಲಾಖೆ ಯೂಟ್ಯೂಬ್‌ನಲ್ಲೂ ಹಾಕಲಿದ್ದು, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಚಂದನ ವಾಹಿನಿ ಜೊತೆಗೆ ಆಕಾಶವಾಣಿ ಮತ್ತು ಯೂಟ್ಯೂಬ್‌ನಲ್ಲಿ ಪುನರ್ ಮನನ ತರಗತಿಗಳು ಸಿಗಲಿದೆ ಎಂದರು.
ಪರೀಕ್ಷೆ ಬಗ್ಗೆ ಗೊಂದಲವಿಲ್ಲ
ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುವ ಬಗ್ಗೆ ಯಾವುದೇ ಗೊಂದಲವಿಲ್ಲ. ಕೆಲವರು ಗೊಂದಲ ಸೃಷ್ಟಿಮಾಡುತ್ತಿದ್ದಾರೆ. ಮಕ್ಕಳಲ್ಲೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬಗ್ಗೆ ಗೊಂದಲವಿಲ್ಲ. ತಂದೆ ತಾಯಿಗಳಲ್ಲಿ ಸ್ವಲ್ಪ ಆತಂಕವಿದೆ. ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹಿಂದೆ ನಿಗದಿಯಾದಂತೆ ಮಾ. 27ರಂದು ಪ್ರಾರಂಭವಾಗಿ ಏ. 9ಕ್ಕೆ ಮುಗಿಯಬೇಕಿತ್ತು. ಕೊರೋನಾದಿಂದಾಗಿ ನಡೆದಿಲ್ಲ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬಗ್ಗೆ ಮೇ 3ರಂದು ಲಾಕ್‌ಡೌನ್ ತೆಗೆದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುವುದು. ಈಗ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಿಂತ ಕೊರೋನಾ ಪರೀಕ್ಷೆ ದೊಡ್ಡದು ಎಂದರು.
ಒತ್ತಡ ಹಾಕಿ ಶುಲ್ಕ ವಸೂಲಿ ಸಲ್ಲ
ಯಾವುದೇ ಶಿಕ್ಷಣ ಸಂಸ್ಥೆಗಳು ಮಕ್ಕಳ ದಾಖಲಾತಿ ಪ್ರಾರಂಭಿಸಿ ಶುಲ್ಕ ವಸೂಲಿ ಮಾಡುವಂತಿಲ್ಲ ಎಂದು ಸರ್ಕಾರದಿಂದ ಆದೇಶ ಹೊರಡಿಸಿದ್ದರಿಂದ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಿಗೆ ವೇತನ ಸಿಗುತ್ತಿರಲಿಲ್ಲ. ಈ ಬಗ್ಗೆ ಶಿಕ್ಷಕರ ಸಂಘದಿಂದ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದ್ದರಿಂದ ಶಿಕ್ಷಣ ಸಂಸ್ಥೆಗಳಿಗೆ ಶುಲ್ಕ ತೆಗೆದುಕೊಳ್ಳಲು ಅವಕಾಶವಿದೆ. ಆದರೆ ಒತ್ತಡ ಹಾಕಿ ಶುಲ್ಕ ವಸೂಲಿ ಮಾಡುವಂತಿಲ್ಲ. ಪೋಷಕರು ಶುಲ್ಕ ನೀಡಲು ಬಂದಾಗ ತೆಗೆದುಕೊಳ್ಳಲು ಅವಕಾಶವಿದೆ ಎಂದು ಸಚಿವರು ಹೇಳಿದರು. ಈ ಸಂದರ್ಭದಲ್ಲಿ ಶಾಸಕ ಎನ್. ಮಹೇಶ್ ಇದ್ದರು.