ಕೇಂದ್ರದ ಯೋಜನೆ ಜನರಿಗೆ ತಲುಪಿಸುವಲ್ಲಿ ಅಂಚೆ ಇಲಾಖೆ ಪಾತ್ರ ಮಹತ್ವದ್ದು: ಡಿವಿಎಸ್‌

By Kannadaprabha News  |  First Published Sep 25, 2022, 6:30 AM IST

ಬಡ ಹಾಗೂ ಮಧ್ಯಮ ವರ್ಗದ ಕುಟುಂಬದ ಹೆಣ್ಣು ಮಕ್ಕಳ ಶಿಕ್ಷಣ, ಉದ್ಯೋಗ ಹಾಗೂ ಭವಿಷ್ಯದ ದೃಷ್ಟಿಯಿಂದ ಅಂಚೆ ಇಲಾಖೆ ಸುಕನ್ಯಾ ಸಮೃದ್ಧಿ ಎಂಬ ಅತ್ಯುತ್ತಮ ಯೋಜನೆ ರೂಪಿಸಿದೆ ಎಂದ ಡಿ.ವಿ.ಸದಾನಂದಗೌಡ 


ಬೆಂಗಳೂರು(ಸೆ.25): ಕೇಂದ್ರ ಸರ್ಕಾರದ ಯೋಜನೆಗಳಾದ ‘ಆಯುಷ್ಮಾನ್‌ ಭಾರತ’, ‘ಸುಕನ್ಯಾ ಸಮೃದ್ಧಿ’ ಯೋಜನೆ ಸೇರಿದಂತೆ ವಿವಿಧ ಯೋಜನೆಗಳನ್ನು ಫಲಾನುಭವಿಗಳ ಮನೆಗಳಿಗೆ ತಲುಪಿಸುವಲ್ಲಿ ಅಂಚೆ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಯ ಪಾತ್ರ ಮಹತ್ವದಾಗಿದೆ ಎಂದು ಕೇಂದ್ರ ಮಾಜಿ ಸಚಿವ ಡಿ.ವಿ.ಸದಾನಂದಗೌಡ ಅಭಿಪ್ರಾಯಪಟ್ಟರು. ಪೀಣ್ಯ ಕೈಗಾರಿಕೆ ಪ್ರದೇಶದ ‘ರೋಟರಿ ಬೆಂಗಳೂರು’ ಉದ್ಯೋಗ ಕೇಂದ್ರದಲ್ಲಿ ಶನಿವಾರ ಅಂಚೆ ಇಲಾಖೆ ಆಯೋಜಿಸಿದ್ದ ‘ಸುಕನ್ಯಾ ಸಮೃದ್ಧಿ ಮಹೋತ್ಸವ-2022’ ಉದ್ಘಾಟಿಸಿ ಮಾತನಾಡಿದ ಅವರು, ಬಡ ಹಾಗೂ ಮಧ್ಯಮ ವರ್ಗದ ಕುಟುಂಬದ ಹೆಣ್ಣು ಮಕ್ಕಳ ಶಿಕ್ಷಣ, ಉದ್ಯೋಗ ಹಾಗೂ ಭವಿಷ್ಯದ ದೃಷ್ಟಿಯಿಂದ ಅಂಚೆ ಇಲಾಖೆ ಸುಕನ್ಯಾ ಸಮೃದ್ಧಿ ಎಂಬ ಅತ್ಯುತ್ತಮ ಯೋಜನೆ ರೂಪಿಸಿದೆ ಎಂದು ಹೇಳಿದರು.

ಹೆಣ್ಣು ಮಕ್ಕಳು, ಮಹಿಳೆಯರಿಗೆ ನರೇಂದ್ರ ಮೋದಿ ಅವರ ಸರ್ಕಾರ ವಿಶೇಷ ಆದ್ಯತೆ ನೀಡಿದೆ. ಈ ಹಿಂದಿನ ಸರ್ಕಾರಗಳ ವಿವಿಧ ಯೋಜನೆಗಳು ಕೇವಲ ಘೋಷಣೆಯಾಗಿ ಉಳಿದಿವೆ. ಆದರೆ, ಪ್ರಧಾನಿ ಮೋದಿ ಅವರು ತಾವು ಘೋಷಿಸಿದ ಪ್ರತಿಯೊಂದು ಯೋಜನೆಗಳನ್ನು ಜನರಿಗೆ ತಲುಪಿದರೆ ಮಾತ್ರ ಅದಕ್ಕೆ ಯಶಸ್ಸು ಎಂದು ಭಾವಿಸಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

Tap to resize

Latest Videos

ಆರೆಸ್ಸೆಸ್‌ ಕಂಡರೆ ಎಲ್ಲರಿಗೂ ಭಯ: ಸದಾನಂದಗೌಡ ಮಾತಿಗೆ ಸಿದ್ದು ತಿರುಗೇಟು!

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಆರ್‌.ಮಂಜುನಾಥ್‌ ಮಾತನಾಡಿ, ‘ಬೇಟಿ ಬಚಾವೋ, ಬೇಟಿ ಪಡಾವೋ’ ಅಭಿಯಾನದ ಅಂಗವಾಗಿ 2015ರಲ್ಲಿ ಕೇಂದ್ರ ಸರ್ಕಾರ ಆರಂಭಿಸಿರುವ ಸುಕನ್ಯಾ ಸಮೃದ್ಧಿ ಯೋಜನೆ ಅನುಷ್ಠಾನದಲ್ಲಿ ದೇಶದಲ್ಲಿ ಕರ್ನಾಟಕ 11ನೇ ಸ್ಥಾನದಲ್ಲಿದೆ. ರಾಜ್ಯದ ಐದು ನಗರದಲ್ಲಿ ಸುಕನ್ಯಾ ಸಮೃದ್ಧಿ ಮಹೋತ್ಸವ ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಈ ವೇಳೆ ರೋಟರಿ ಬೆಂಗಳೂರು ಉದ್ಯೋಗ ಸಂಸ್ಥೆಯು 500 ಬಡ ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಯೋಜನೆಯ ಆರಂಭಿಕ ಠೇವಣಿ ಮೊತ್ತವನ್ನು ಕೊಡುಗೆಯಾಗಿ ನೀಡಲಿದೆ ಎಂದು ರೋಟರಿ ಬೆಂಗಳೂರು ಉದ್ಯೋಗ ಅಧ್ಯಕ್ಷ ರೋಟರಿಯನ್‌ ಪಿ.ಜೈಶಂಕರ್‌ ಘೋಷಿಸಿದರು.

ಅಂಚೆ ಇಲಾಖೆ ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್‌ ಮಾಸ್ಟರ್‌ ಜನರಲ್‌ ಎಸ್‌.ರಾಜೇಂದ್ರ ಕುಮಾರ್‌ ಮಾತನಾಡಿದರು. ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಎಚ್‌.ಮಂಜುನಾಥ, ಉಪಾಧ್ಯಕ್ಷ ಎಂ.ಎಚ್‌.ಆರಿಫ್‌, ಬೆಂಗಳೂರು ವಲಯದ ಪೋಸ್ಟ್‌ ಮಾಸ್ಟರ್‌ ಜನರಲ್‌ ಎಲ್‌.ಕೆ.ದಾಸ್‌, ಡಾ. ಪ್ರಿಯದರ್ಶಿನಿ ಉಪಸ್ಥಿತರಿದ್ದರು.
 

click me!