ಉತ್ತರ ಕನ್ನಡಕ್ಕೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ: ಸಿಎಂ ಮುಂದೆ ಷರತ್ತುಗಳನ್ನಿಟ್ಟ ಹೋರಾಟಗಾರರು

By Govindaraj S  |  First Published Sep 25, 2022, 1:00 AM IST

ಜಿಲ್ಲೆಯಲ್ಲಿ ಹಲವು ದಶಕಗಳಿಂದ ಬೇಡಿಕೆಯಲ್ಲಿದ್ದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕೊನೆಗೂ ತಾತ್ವಿಕ ಭರವಸೆ ದೊರಕಿದೆ. ಜಿಲ್ಲೆಯ ಶಾಸಕರು ಹಾಗೂ ಸಚಿವರು ಶತಪ್ರಯತ್ನಗಳನ್ನು ನಡೆಸಿ ಸಿಎಂ‌ ಹಾಗೂ ಆರೋಗ್ಯ ಸಚಿವರ ಜತೆ ಸಭೆ ನಡೆಸಿ ಗ್ರೀನ್ ಸಿಗ್ನಲ್ ಪಡೆದುಕೊಂಡಿದ್ದಾರೆ.


ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರ ಕನ್ನಡ (ಸೆ.25): ಜಿಲ್ಲೆಯಲ್ಲಿ ಹಲವು ದಶಕಗಳಿಂದ ಬೇಡಿಕೆಯಲ್ಲಿದ್ದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕೊನೆಗೂ ತಾತ್ವಿಕ ಭರವಸೆ ದೊರಕಿದೆ. ಜಿಲ್ಲೆಯ ಶಾಸಕರು ಹಾಗೂ ಸಚಿವರು ಶತಪ್ರಯತ್ನಗಳನ್ನು ನಡೆಸಿ ಸಿಎಂ‌ ಹಾಗೂ ಆರೋಗ್ಯ ಸಚಿವರ ಜತೆ ಸಭೆ ನಡೆಸಿ ಗ್ರೀನ್ ಸಿಗ್ನಲ್ ಪಡೆದುಕೊಂಡಿದ್ದಾರೆ. ಅಲ್ಲದೇ, ಜಿಲ್ಲೆಗೆ ಭೇಟಿ ನೀಡುವ ಭರವಸೆ ಕೂಡಾ ನೀಡಿದ್ದಾರೆ.‌ ಆದರೆ, ಇದರಿಂದ ಸಮಾಧಾನಗೊಳ್ಳದ ಉತ್ತರ ಕನ್ನಡ ಜಿಲ್ಲೆಯ ಜನರು, ಸಿಎಂ ಹಾಗೂ ಆರೋಗ್ಯ ಸಚಿವರು ಜಿಲ್ಲೆಗೆ ಭೇಟಿ ನೀಡಬೇಕೆಂದರೆ ಕೆಲವು ಷರತ್ತುಗಳನ್ನು ಮುಂದಿಟ್ಟಿದ್ದಾರೆ. ಈ ಷರತ್ತು ಪಾಲಿಸದಿದ್ದಲ್ಲಿ ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ. ಈ‌ ಕುರಿತ ಒಂದು ಸ್ಟೋರಿ ಇಲ್ಲಿದೆ. 

Tap to resize

Latest Videos

ಹೌದು! ಉತ್ತರಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಬೇಡಿಕೆ ದಶಕಗಳಿಂದಲೂ ಕೇಳಿ ಬರುತ್ತಿತ್ತು. ಕಾರವಾರ- ಅಂಕೋಲಾ ಶಾಸಕಿ ರೂಪಾಲಿ‌ ನಾಯ್ಕ್ ಕೂಡಾ ಹಿಂದಿನ ಸರಕಾರದಿಂದ ಈವರೆಗೆ ಒಟ್ಟು 24 ಬಾರಿ ಮನವಿ ಸಲ್ಲಿಸಿ ಆಸ್ಪತ್ರೆಯ ಬೇಡಿಕೆಯನ್ನು ಈಡೇರಿಸುವಂತೆ ಕೋರಿಕೊಂಡಿದ್ದರು. ಆದರೆ, ಮೂರು ಬಾರಿ ಆರ್ಥಿಕ ಇಲಾಖೆ ಆಸ್ಪತ್ರೆ ನಿರ್ಮಾಣದ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು. ಇಷ್ಟಾದರೂ ಸಿಎಂ ಬಸವರಾಜ ಬೊಮ್ಮಾಯಿ ಮಾತ್ರ ತಾತ್ವಿಕ ಭರವಸೆ ನೀಡಿದ್ದರು. ನಂತರ ಸದನದಲ್ಲೂ ಈ ಬಗ್ಗೆ ಭಾರೀ ಚರ್ಚೆಯಾದ ಬಳಿಕ ಉಸ್ತುವಾರಿ ಸಚಿವ ಕೋಟಾ‌ ಶ್ರೀನಿವಾಸ ಪೂಜಾರಿಯವರ ನೇತೃತ್ವದಲ್ಲಿ ಜಿಲ್ಲೆಯ ಶಾಸಕರ ನಿಯೋಗ ಆರೋಗ್ಯ ಸಚಿವ ಡಾ. ಕೆ.‌ಸುಧಾಕರ್  ಅವರನ್ನು ಭೇಟಿಯಾಗಿ ಅವರಿಂದಲೂ ತಾತ್ವಿಕ‌ ಭರವಸೆಯೊಂದಿಗಿನ ಗ್ರೀನ್ ಸಿಗ್ನಲ್ ಜತೆ ಹಿಂತಿರುಗಿತ್ತು. 

Uttara Kannada: ಪರಿಶಿಷ್ಟ ಪಂಗಡದ ಬೇಡಿಕೆ: ಹೋರಾಟಕ್ಕೆ ಅಣಿಯಾದ ಕುಣಬಿ ಸಮುದಾಯ

ಇದಕ್ಕೆ ಪ್ರತಿಯಾಗಿ ಆರೋಗ್ಯ ಸಚಿವರು ಕೂಡಾ ಸಿಎಂ ಜತೆ ತಾನು ಕೂಡಾ‌ ಜಿಲ್ಲೆಗೆ ಭೇಟಿ ನೀಡಿ ಘೋಷಣೆ ಮಾಡುವುದಾಗಿ ತಿಳಿಸಿದ್ದರು. ಆದರೆ, ಉತ್ತರಕನ್ನಡ ಜಿಲ್ಲೆಯ ಜನರು ಇದರಿಂದ ಸಂಪೂರ್ಣ ಖುಷಿಯಾಗಿಲ್ಲ. ಬದಲಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಬಜೆಟ್ ಘೋಷಿಸಿ- ಶಂಕು ಸ್ಥಾಪನೆ ಮಾಡುವುದಾದ್ರೆ ಮಾತ್ರ ಸಿಎಂ, ಆರೋಗ್ಯ ಸಚಿವರು ಬರಲಿ. ಕೇವಲ ಭರವಸೆ ನೀಡಲು ಜಿಲ್ಲೆಗೆ ಬರೋದಾದ್ರೆ ಮುಂದಿನ ಚುನಾವಣೆ ಬ್ಯಾನ್ ಮಾಡೋದಾಗಿ ಎಚ್ಚರಿಕೆ ನೀಡಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಸೀಬರ್ಡ್, ಕೈಗಾ ಅಣುಸ್ಥಾವರ, ವಿವಿಧ ಡ್ಯಾಂಗಳಿಗಾಗಿ ಸಾಕಷ್ಟು ಜಾಗವನ್ನು ತ್ಯಾಗ ಮಾಡಿದೆ. ಕೇಂದ್ರ ಹಾಗೂ ರಾಜ್ಯದ ಇಷ್ಟೊಂದು ಬೃಹತ್ ಯೋಜನೆಗಳಿದ್ದರೂ ಈ ಬೃಹತ್ ಜಿಲ್ಲೆಯಲ್ಲಿ ಒಂದೇ ಒಂದು ಉತ್ತಮ ಆಸ್ಪತ್ರೆಯಿಲ್ಲ. 

ಪ್ರತೀ ಬಾರಿಯೂ ಜಿಲ್ಲೆಯ ಜನರು ತುರ್ತು ಚಿಕಿತ್ಸೆಗಾಗಿ ಮಂಗಳೂರು, ಉಡುಪಿ, ಶಿವಮೊಗ್ಗ, ಹುಬ್ಬಳ್ಳಿ ಹಾಗೂ ಗೋವಾವನ್ನು ಅವಲಂಭಿಸಬೇಕಿತ್ತು. ಈ ಕಾರಣದಿಂದ ಜನರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಿಕೊಡಿ ಎಂದು ಪ್ರತೀ ಬಾರಿ ಬೇಡಿಕೆಯಿರಿಸುತ್ತಿದ್ದರು.‌ ಈ ಹಿನ್ನೆಲೆ ಜಿಲ್ಲೆಯಲ್ಲಿ ಸಾಕಷ್ಟು ಹೋರಾಟಗಳು ನಡೆದಿವೆ. ಉಡುಪಿಯ ಶಿರೂರಿನಲ್ಲಿ ಹೊನ್ನಾವರದ ನಾಲ್ವರು ಮೃತಪಟ್ಟ ಪ್ರಕರಣದ ಬಳಿಕ ಟ್ವಿಟ್ಟರ್ ಅಭಿಯಾನ, ಪ್ರತಿಭಟನೆ, ದೇಶದ ಪ್ರಧಾನಿಗೆ ರಕ್ತ ಪತ್ರ ಮುಂತಾದ ಹೋರಾಟಗಳು ಕೂಡಾ ನಡೆದಿತ್ತು. ಭಟ್ಕಳದ ಮುಟ್ಟಳ್ಳಿಯಲ್ಲಿ ಗುಡ್ಡ ಕುಸಿತವಾಗಿ ನಾಲ್ವರು ಮೃತಪಟ್ಟ ಬಳಿಕವಂತೂ ಜಿಲ್ಲೆಗೆ ಭೇಟಿ ನೀಡಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಸೂಕ್ತ ಮಾಹಿತಿ ಪಡೆದುಕೊಂಡ ಬಳಿಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಘೋಷಿಸುವುದಾಗಿ ತಿಳಿಸಿದ್ದರು.

ಉತ್ತರ ಕನ್ನಡಕ್ಕೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಸರ್ಕಾರ ಬದ್ಧ: ಸುಧಾಕರ್‌

ಆದರೆ ಸಾಕಷ್ಟು ದಿನಗಳಾದ್ರೂ ಯಾವುದೇ ಘೋಷಣೆಗಳಾಗಿರಲಿಲ್ಲ. ಕೊನೆಗೂ ಸಿಎಂ‌ ಹಾಗೂ ಆರೋಗ್ಯ ಸಚಿವರು ತಾತ್ವಿಕ ಒಪ್ಪಿಗೆ ನೀಡಿದ ಬಳಿಕ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ, ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಅಧಿಕಾರಿಗಳು ಹಾಗೂ ಜಿಲ್ಲೆಯ ಆರೋಗ್ಯ ಅಧಿಕಾರಿಗಳು ಕುಮಟಾಕ್ಕೆ ಭೇಟಿ ನೀಡಿ ಅಲ್ಲಿನ ಮೂರು ನಾಲ್ಕು ಪ್ರದೇಶಗಳನ್ನು ವೀಕ್ಷಿಸಿ ಸರಕಾರಕ್ಕೆ ವರದಿ ಸಲ್ಲಿಸಿದ್ರು. ಆದರೆ, ಭರವಸೆ ಬಿಟ್ಟು ಮುಂದಿನ ಯಾವ ಕ್ರಮವನ್ನೂ ಸರಕಾರ ತಿಳಿಸದ ಕಾರಣ ಎಲ್ಲಾ ತಯಾರಿಗಳೊಂದಿಗೇ ಸಿಎಂ ಹಾಗೂ ಆರೋಗ್ಯ ಸಚಿವರು ಜಿಲ್ಲೆಗೆ ಭೇಟಿ ನೀಡಲಿ ಎಂದು ಒತ್ತಾಯಿಸಿದ್ದಾರೆ. ಒಟ್ಟಿನಲ್ಲಿ ಜನಪ್ರತಿನಿಧಿಗಳ ಭರವಸೆ ಕೇವಲ ಭರವಸೆಗೆ ಮಾತ್ರ ಸೀಮಿತವಾಗಬಾರದು ಎಂಬ ನಿಟ್ಟಿನಲ್ಲಿ ಜಿಲ್ಲೆಯ ಜನರು ಎಚ್ಚೆತ್ತುಕೊಂಡಿದ್ದಾರೆ. ಜನರ ಈ ಒತ್ತಡದಿಂದಾದ್ರೂ ಸಿಎಂ ಹಾಗೂ ಆರೋಗ್ಯ ಸಚಿವರು ಪೂರ್ಣ ತಯಾರಿಯೊಂದಿಗೆ ಜಿಲ್ಲೆಗೆ ಭೇಟಿ ನೀಡಬೇಕಿದೆ.

click me!