ಸಚಿವ ಶ್ರೀರಾಮುಲುಗಾಗಿ 1 ಗಂಟೆ ಕಾದ ಮಾಜಿ ಸ್ವೀಕರ್

By Kannadaprabha NewsFirst Published Feb 16, 2020, 3:08 PM IST
Highlights

ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಿಂದ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೊರನಡೆದ ಘಟನೆ ಕೋಲಾರದಲ್ಲಿ ನಡೆದಿದೆ. ಆರೋಗ್ಯ ಸಚಿವ ಶ್ರೀರಾಮುಲು ಹಾಗು ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್‌ಗಾಗಿ ಒಂದು ಗಂಟೆ ಕಾದ ನಂತರ ರಮೇಶ್ ಕುಮಾರ್ ಹೊರ ನಡೆದಿದ್ದಾರೆ.

ಕೋಲಾರ(ಫೆ.16): ನಗರದಲ್ಲಿ ಶನಿವಾರ ಉದ್ಘಾಟನೆಗೊಂಡ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮಕ್ಕೆ ಪ್ರಮುಖವಾಗಿ ಶಾಸಕರಾದ ರಮೇಶ್‌ ಕುಮಾರ್‌ ಹಾಗು ಶ್ರೀನಿವಾಸಗೌಡರ ಗೈರು ಹಾಜರಿ ಎದ್ದು ಕಾಣುತ್ತಿತ್ತು.

ಆಸ್ಪತ್ರೆ ಉದ್ಘಾಟನೆಗೆ ಮೊದಲಿನಿಂದಲೂ ಒಂದಲ್ಲ ವಿಘ್ನಗಳು ಆಗಿ ಮೂರು ನಾಲ್ಕು ಸಾರಿ ಮುಂದೂಡಲಾಗಿತ್ತು. ಶನಿವಾರ ರಾಹುಕಾಲ ನೋಡಿ ಉದ್ಘಾಟನಾ ಸಮಯವನ್ನು ನಿಗದಿಪಡಿಸಲಾಗಿತ್ತಾದರೂ ಹಲವು ಗೊಂದಲಗಳ ಮಧ್ಯೆ ಸುಮಾರು ಎರಡುವರೆ ತಾಸು ತಡವಾಗಿ ಆರಂಭವಾಯಿತು. ಒಲ್ಲದ ಮನಸ್ಸಿನಿಂದಲೇ ಸಮಯಕ್ಕೆ ಸರಿಯಾಗಿ ಆಗಮಿಸಿದ್ದ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಸುಮಾರು ಒಂದು ಗಂಟೆಗಳ ಕಾಲ ಕಾದು ಕುಳಿತಿದ್ದರು.

ಬೇರೆ ಕಾರ್ಯಕ್ರಮಕ್ಕೆ ತೆರಳಿದ ರಮೇಶ್‌ಕುಮಾರ್‌

ಆದರೂ ಆರೋಗ್ಯ ಸಚಿವ ಶ್ರೀರಾಮುಲು ಹಾಗು ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್‌ ಆಗಮಿಸಲಿಲ್ಲ. ಮಧ್ಯಾಹ್ನ 12 ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮ ಗಂಟೆ 2 ಆದರೂ ಆರಂಭಿಸಲಿಲ್ಲ ಇದರಿಂದ ಬೇಸತ್ತ ರಮೇಶ್‌ ಕುಮಾರ್‌ ಮತ್ತೆ ಬರುತ್ತೇನೆ ಎಂದು ಸಬೂಬು ಹೇಳಿ ಅಲ್ಲಿಂದ ಮತ್ತೊಂದು ಕಾರ್ಯಕ್ರಮಕ್ಕೆ ತೆರಳಿದರು.

ಬಳಿಕ ನಡೆದ ಸಮಾರಂಭದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ರಮೇಶ್‌ ಕುಮಾರ್‌ ಹಾಕಿದ ಶ್ರಮದ ಬಗ್ಗೆ ಅಪ್ಪಿತಪ್ಪಿಯೂ ಅವರ ಹೆಸರನ್ನು ಯಾರೂ ಪ್ರಸ್ತಾಪಿಸಲಿಲ್ಲ. ಶಾಸಕ ಕೆ.ಶ್ರೀನಿವಾಸಗೌಡರೂ ಸಚಿವರುಗಳಿಗಾಗಿ ಪ್ರವಾಸಿ ಮಂದಿರದಲ್ಲಿ ಕೂತು ಅವರು ಸಕಾಲಕ್ಕೆ ಬಾರದೆ ಇದ್ದುದ್ದರಿಂದ ಬೆಂಗಳೂರಿಗೆ ತೆರಳಿದರು.

ಮಂಜೂರು ಮಾಡಿದ್ದು ರಮೇಶ್‌ಕುಮಾರ್‌

ನಗರದಲ್ಲಿ ನಿರ್ಮಾಣ ಆಗಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಮಾಜಿ ಆರೋಗ್ಯ ಸಚಿವರೂ ಆಗಿರುವ ರಮೇಶ್‌ ಕುಮಾರ್‌ ಕಾರಣ. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಅವರು ಹಿಂದೆ ಆಸ್ಪತ್ರೆಯನ್ನು ಮಂಜೂರು ಮಾಡಿಸಿದ್ದರು. ಆದರೆ ನವೆಂಬರ್‌ 18 ರಂದು ಆಸ್ಪತ್ರೆ ಉದ್ಘಾಟನೆ ಮಾಡಬೇಕು ಎಂದು ರಮೇಶ್‌ ಕುಮಾರ್‌ ಹೇಳಿದ್ದಾಗ ಆಗ ತಾನೇ ಜಿಲ್ಲಾ ಉಸ್ತುವಾರಿ ಸಚಿವರು ಅದಕ್ಕೆ ತಕರಾರು ತೆಗೆದಿದ್ದರು, ಇದರಿಂದಾಗಿ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು, ಜ.18ಕ್ಕೆ ನಿಗದಿಯಾಗಿದ್ದಗಲೂ ಶಾಸಕ ಶ್ರೀನಿವಾಸಗೌಡರು ನಾನು ಊರಲ್ಲಿ ಇರುವುದಿಲ್ಲ ಎಂದು ಉಸ್ತುವಾರಿ ಸಚಿವ ನಾಗೇಶ್‌ ಅವರಿಗೆ ಹೇಳಿ ಮುಂದೂಡಿದ್ದರು.

ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಮಾತ್ರ

ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿಧಾನಪರಿಷತ್‌ ಮಾಜಿ ಸದಸ್ಯರಾದ ವಿ.ಆರ್‌.ಸುದರ್ಶನ್‌ ಅವರೂ ಉದ್ಘಾಟನೆಗೆ ಮೊದಲೇ ಹೊರಟು ಹೋದರು. ಇನ್ನು ಶಾಸಕ ಕೆ.ವೈ.ನಂಜೇಗೌಡರು ಮಧ್ಯದಲ್ಲಿ ಎದ್ದು ಹೋದರು. ವೇದಿಕೆಯಲ್ಲಿ ಬಿಜೆಪಿ ಮುಖಂಡರೇ ಕುರ್ಚಿಗಳನ್ನು ಅಲಂಕರಿಸಿದ್ದು ಕೆಲವರಲ್ಲಿ ಅಸಮಧಾನ ಮೂಡಿಸಿತು. ಈ ಎಲ್ಲ ಬೆಳವಣಿಗೆಯಿಂದ ಇಡೀ ಕಾರ್ಯಕ್ರಮದಲ್ಲಿ ಗೊಂದಲಮಯವಾಗಿ ಕಂಡು ಬಂತು.

ಫೆಬ್ರವರಿ 16ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!