'ವಾಮಮಾರ್ಗದಿಂದ ಅಧಿಕಾರ ಹಿಡಿದ ಬಿಜೆಪಿ ಸರ್ಕಾರ ಹೆಚ್ಚು ದಿನ ಮುಂದುವರಿಯುವುದಿಲ್ಲ'

By Kannadaprabha NewsFirst Published Nov 1, 2020, 11:56 AM IST
Highlights

ದೌರ್ಜನ್ಯ, ಬೆದರಿಕೆ ತಂತ್ರದ ಮೂಲಕ ಬಿಜೆಪಿ ಅಧಿಕಾರಕ್ಕೇರುತ್ತಿದೆ. ಇದರಿಂದ ಜನತೆ ಬೇಸತ್ತಿದ್ದು, ಶಿರಾ, ಆರ್‌.ಆರ್‌. ನಗರ, ಪಶ್ಚಿಮ ಪದವೀಧರ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲ್ಲಲಿದೆ. ಬಿಜೆಪಿ ದುರಾಡಳಿತ ನೋಡಿ ಜನರಿಗೆ ಸಾಕಾಗಿದೆ. ಮುಂಬರುವ ಚುನಾವಣೆಗಳಲ್ಲಿ ಆ ಪಕ್ಷಕ್ಕೆ ಮತದಾರರು ಪಾಠ ಕಲಿಸಲಿದ್ದಾರೆ:ಕೋಳಿವಾಡ 

ಹಾವೇರಿ(ನ.01): ವಾಮಮಾರ್ಗದಿಂದ ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ಸರ್ಕಾರ ಹೆಚ್ಚು ದಿನ ಮುಂದುವರಿಯುವುದಿಲ್ಲ ಎಂದು ವಿಧಾನಸಭೆ ಮಾಜಿ ಸ್ಪೀಕರ್‌ ಕೆ.ಬಿ. ಕೋಳಿವಾಡ ಹೇಳಿದ್ದಾರೆ. 

ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಶಾಸಕರಿಗೆ ಆಸೆ-ಆಮಿಷ ತೋರಿಸಿ ವಾಮಮಾರ್ಗದ ಮೂಲಕ ಬಿಜೆಪಿ ಅಧಿಕಾರಕ್ಕೇರಿದೆ. ದೌರ್ಜನ್ಯ, ಬೆದರಿಕೆ ತಂತ್ರದ ಮೂಲಕ ಬಿಜೆಪಿ ಅಧಿಕಾರಕ್ಕೇರುತ್ತಿದೆ. ಇದರಿಂದ ಜನತೆ ಬೇಸತ್ತಿದ್ದು, ಶಿರಾ, ಆರ್‌.ಆರ್‌. ನಗರ, ಪಶ್ಚಿಮ ಪದವೀಧರ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲ್ಲಲಿದೆ. ಬಿಜೆಪಿ ದುರಾಡಳಿತ ನೋಡಿ ಜನರಿಗೆ ಸಾಕಾಗಿದೆ. ಮುಂಬರುವ ಚುನಾವಣೆಗಳಲ್ಲಿ ಆ ಪಕ್ಷಕ್ಕೆ ಮತದಾರರು ಪಾಠ ಕಲಿಸಲಿದ್ದಾರೆ ಎಂದರು.
ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಎಲ್ಲ ರಂಗಗಳಲ್ಲೂ ವಿಫಲವಾಗಿದೆ. ಕೊರೋನಾ ಮಹಾಮಾರಿ ದೇಶದಲ್ಲಿ ಇಷ್ಟುಹೆಚ್ಚಲು ಬಿಜೆಪಿಯೇ ಕಾರಣ. ಅಮೆರಿಕ ಅಧ್ಯಕ್ಷರನ್ನು ಸ್ವಾಗತಿಸಲು, ಮಧ್ಯಪ್ರದೇಶ ರಾಜ್ಯದ ಅಧಿಕಾರಕ್ಕೇರುವ ಬಗ್ಗೆ ಬಿಜೆಪಿ ನಾಯಕರು ಯೋಚಿಸಿದರು. ಆಗಲೇ ಆರಂಭದಲ್ಲೇ ಕಟ್ಟುನಿಟ್ಟಾಗಿ ಸೋಂಕು ಹರಡದಂತೆ ಕ್ರಮ ಕೈಗೊಂಡಿದ್ದರೆ ಇಂದು ಇಷ್ಟೊಂದು ಅನಾಹುತ ಸಂಭವಿಸುತ್ತಿರಲಿಲ್ಲ. ಬಿಜೆಪಿ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆರೋಪಿಸಿದರು.

ಅಧಿಕಾರಕ್ಕೇರಲು ಯತ್ನಿಸಿದ್ದ ಬಿಜೆಪಿ:

ಹಾವೇರಿ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಸಂದರ್ಭದಲ್ಲಿ ನಮ್ಮ ಸದಸ್ಯರ ಮೇಲೆ ಸುಳ್ಳು ಕೇಸ್‌ ಹಾಕಿಸಿ ಅಧಿಕಾರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ಪ್ರಯತ್ನಿಸಿತ್ತು. ಇಲ್ಲಿಯ ನಗರಸಭೆ ಚುನಾವಣೆ ಆತಂಕದ ಪರಿಸ್ಥಿತಿ ಸೃಷ್ಟಿಯಾಗಿತ್ತು. ಆದರೆ, ಪಕ್ಷದ ಸದಸ್ಯರು ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನಗರಸಭೆ ಕಾಂಗ್ರೆಸ್‌ ಸದಸ್ಯರ ಮೇಲೆ ಖೊಟ್ಟಿಅಟ್ರಾಸಿಟಿ ಕೇಸ್‌ ಹಾಕಿಸಿ ಒಳಗೆ ಹಾಕಿಸಲು ಬಿಜೆಪಿ ಸಿದ್ಧವಾಗಿತ್ತು. ಆದರೆ, ಕಾನೂನು ಅಡಿಯಲ್ಲಿ ಹಾಗಾಗದಂತೆ ನೋಡಿಕೊಂಡೆವು. ಜಿಲ್ಲಾ ಪಂಚಾಯಿತಿಯಲ್ಲೂ ಕಾಂಗ್ರೆಸ್‌ ಅಧಿಕಾರವಿದೆ. ಇನ್ನು ಮುಂದೆ ಬಿಜೆಪಿಯ ಸುಳ್ಳು ಭರವಸೆಗಳನ್ನು ಜನತೆ ನಂಬುವುದಿಲ್ಲ. ಮುಂದಿನ ದಿನಗಳಲ್ಲಿ ಬರುವ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್‌ ಗೆಲ್ಲಲಿದೆ ಎಂದು ಅವರು ಕೋಳಿವಾಡ ಹೇಳಿದರು.

ನಾಮಪತ್ರ ವಾಪಸ್ ಪಡೆದು ಚುನಾವಣಾ ಅಖಾಡದಿಂದ ಹಿಂದೆ ಸರಿದ ಬಿಜೆಪಿ ಅಭ್ಯರ್ಥಿ

ಮಾಜಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ಸಂಖ್ಯಾಬಲ ಇಲ್ಲದಿದ್ದರೂ ವಾಮಮಾರ್ಗದ ಮೂಲಕ ಅಧಿಕಾರಕ್ಕೇರುವ ಹೊಸ ರೀತಿಯ ಪ್ರಯತ್ನ ಇಲ್ಲಿಂದಲೇ ಆರಂಭವಾಗುವುದಿತ್ತು. ಆದರೆ, ನಾವು ಅದಕ್ಕೆ ಅವಕಾಶ ಕೊಡದ್ದರಿಂದ ನಗರಸಭೆಯಲ್ಲಿ ಕಾಂಗ್ರೆಸ್‌ ಅಧಿಕಾರ ಹಿಡಿದಿದೆ. ಈ ಹಿಂದೆ ಬ್ಯಾಡಗಿಯಲ್ಲಿ ಮತ್ತು ಈಗ ಹಾವೇರಿ ಕ್ಷೇತ್ರದಲ್ಲಿ ವಿರೋಧಿಗಳನ್ನು ಹಣಿಯಲು ಅಟ್ರಾಸಿಟಿ ಕೇಸ್‌ ಹಾಕಿಸುವ ಕೆಲಸ ಈಗಿನ ಸ್ಥಳೀಯ ಶಾಸಕರಿಂದ ಆಗುತ್ತಿದೆ ಎಂದು ಆರೋಪಿಸಿದರು.

ಮಾಜಿ ಸಚಿವ ಬಸವರಾಜ ಶಿವಣ್ಣನವರ, ನಮ್ಮ ಸದಸ್ಯರ ಮೇಲೆ ರಾಜಕೀಯ ಪ್ರೇರಿತ ದೂರು ದಾಖಲಿಸಿರುವುದು ಅಧಿಕಾರಿಗಳಿಗೂ ಗೊತ್ತಾಗಿದೆ. ಆದ್ದರಿಂದ ನಮ್ಮ ಮನವಿಗೆ ಸ್ಪಂದಿಸಿ ನಗರಸಭೆ ಚುನಾವಣೆಯಲ್ಲಿ ಭಾಗವಹಿಸಲು ಅವಕಾಶ ಕೊಟ್ಟಿದ್ದಾರೆ. ಇನ್ನು ಮುಂದೆ ನೂತನ ಅಧ್ಯಕ್ಷರು ಅಭಿವೃದ್ಧಿ ಕಡೆಗೆ ಗಮನ ಹರಿಸಲಿದ್ದಾರೆ ಎಂದು ಹೇಳಿದರು.

ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ, ಜಿಪಂ ಅಧ್ಯಕ್ಷ ಏಕನಾಥ ಬಾನುವಳ್ಳಿ, ನಗರಸಭೆ ನೂತನ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಜಿಪಂ ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ಡಾ. ಸಂಜಯ ಡಾಂಗೆ ಇತರರು ಇದ್ದರು.
 

click me!