ರಮೇಶ್‌ ಬಾಬು ರಾಜೀನಾಮೆ ಬಗ್ಗೆ ನಾನು ಮಾತನಾಡೋದಿಲ್ಲ: ದೇವೇಗೌಡ

By Suvarna NewsFirst Published Mar 7, 2020, 2:42 PM IST
Highlights

ಜೆಡಿಎಸ್ ಕಾರ್ಯಕರ್ತರ‌ ತರಬೇತಿ ಕಾರ್ಯಾಗಾರಕ್ಕೆ ಚಾಲನೆ| ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಎರಡು ದಿನಗಳ ತರಬೇತಿ ಕಾರ್ಯಾಗಾರ| ಕಾರ್ಯಕರ್ತರಿಂದಲೇ ಕಾರ್ಯಾಗಾರ ಉದ್ಘಾಟನೆ| ಸಸಿಗೆ ನೀರು ಹಾಕುವ ಮೂಲಕ ಕಾರ್ಯಕರ್ತರಿಂದಲೇ ಕಾರ್ಯಾಗಾರ ಉದ್ಘಾಟನೆ| 

ಹುಬ್ಬಳ್ಳಿ(ಮಾ.07): ರಮೇಶ್‌ ಬಾಬು ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವ ಬಗ್ಗೆ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ. ರಾಜೀನಾಮೆ ಕೊಟ್ಟಿರುವುದಾಗಿ ಅವರೇ ಹೇಳಿಕೊಂಡಿದ್ದಾರೆ. ಪಕ್ಷೇತರವಾಗಿ ಸ್ಪರ್ಧಿಸುತ್ತಾರೋ, ಅಥವಾ ಯಾವುದಾದ್ರು ಪಕ್ಷಕ್ಕೆ ಸೇರುತ್ತಾರೋ ಅವರಿಗೆ ಬಿಟ್ಟ ವಿಷಯವಾಗಿದೆ. ಅದರ ಬಗ್ಗೆ ನಾನು ಚಕಾರ ಎತ್ತಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್. ಡಿ. ದೇವೇಗೌಡ ಹೇಳಿದ್ದಾರೆ. 

ಶನಿವಾರ ನಗರದ ಗೋಕುಲ ರಸ್ತೆಯ ವಾಸವಿ ಮಹಲ್‌ನಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಧಾನಿ ಮೋದಿಯವರ ಆಡಳಿತದಲ್ಲಿ ಆರ್‌ಬಿಐನ್ನು ಅಸ್ಥಿರಗೊಳಿಸಲಾಗಿದೆ. ಆರ್‌ಬಿಐ ಸ್ವಾಯತ್ತ ಸಂಸ್ಥೆಯಾದ್ರೂ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡಿದೆ. ಹಿಂದಿನ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಕೇಂದ್ರಕ್ಕೆ ಆಸ್ಪದ ನೀಡಿರಲಿಲ್ಲ. ಕೆಲವೊಬ್ಬರಿಗೆ ಅರ್ಹತೆ ಇಲ್ಲದಿದ್ದರೂ ಸಾಲ ನೀಡಿ ಬ್ಯಾಂಕ್ ದುರ್ಬಳಕೆ ಮಾಡಿದ್ದರು‌. ಹೀಗಾಗಿಯೇ ಇಂದು ಬ್ಯಾಂಕ್‌ಗಳು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿವೆ ಎಂದು ಹೇಳಿದ್ದಾರೆ. 

ನೋಟ್ ಬಂದಿಯ ಸಮಯದಲ್ಲಿ ಹಲವಾರು ಅಕ್ರಮಗಳು ನಡೆದವು‌. ಕೆಲವೊಂದು ಉದ್ಯಮಿಗಳಿಗೆ ಅವರ ಆಸ್ತಿಗಿಂತ ಹೆಚ್ಚಿನ ಸಾಲವನ್ನು ಬ್ಯಾಂಕ್‌ಗಳು ನೀಡಿವೆ. ಹೀಗಾಗಿ ಕೆಲವೊಂದಿಷ್ಟು ಹಣಕಾಸು ಸಲಹೆಗಾರರು ರಾಜೀನಾಮೆ ನೀಡಿ ಹೋಗಿದ್ದಾರೆ. ಯುಪಿಎ ಇದ್ದಾಗ ಹಾಗೂ ಈಗಿನ ಸರ್ಕಾರ ಬಹಳಷ್ಟು ಅನರ್ಹರಿಗೆ ಸಾಲ ಕೊಟ್ಟಿವೆ. ಇದರಿಂದ ಬ್ಯಾಂಕ್‌ಗಳು ದಿವಾಳಿಯಾಗಿವೆ ಎಂದು ಹೇಳಿದ್ದಾರೆ.

ನಗರದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ನೇತೃತ್ವದಲ್ಲಿ ಎರಡು ದಿನ ಕಾರ್ಯಾಗಾರ ನಡೆಯಲಿದೆ. ಈ ಕಾರ್ಯಾಗಾರದಲ್ಲಿ ಮುಂಬೈ ಕರ್ನಾಟಕ ಭಾಗದ ಏಳು ಜಿಲ್ಲೆಗಳ ಜೆಡಿಎಸ್ ಕಾರ್ಯಕರ್ತರು ಭಾಗಿಯಾಗಿದ್ದಾರೆ. ಉತ್ತರ ಕರ್ನಾಟಕದಲ್ಲಿ ಪಕ್ಷ ಬಲವರ್ದನೆ, ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. 

ಕಾರ್ಯಾಗಾರದಲ್ಲಿ ಎರಡು ಪುಸ್ತಕಗಳನ್ನ ಬಿಡುಗಡೆ ಮಾಡಲಾಗಿದೆ. ಉತ್ತರ ಕರ್ನಾಟಕಕ್ಕೆ ದೇವೇಗೌಡರ ಕೊಡುಗೆ ಹಾಗೂ ಖ್ಯಾತ ಸಾಹಿತಿ ದೇವನೂರು ಮಹಾದೇವ ರಚಿಸಿರುವ 'ಈಗ ಭಾರತ ಮಾತನಾಡುತ್ತಿದೆ' ಪುಸ್ತಕಗಳನ್ನ ಲೋಕಾರ್ಪಣೆಗೊಳಿಸಲಾಗಿದೆ. ಈ ಎರಡು ಪುಸ್ತಕಗಳನ್ನ ಬಸವರಾಜ ಹೊರಟ್ಟಿ ಬಿಡುಗಡೆಗೊಳಿಸಿದ್ದಾರೆ.
 

click me!