ನಿಜವಾಗಲೂ ಜನಪರ ಕಾಳಜಿ ಇರುವ ಸರ್ಕಾರವಾಗಿದ್ದರೆ ಹಿಂದುಳಿದ ತಾಲೂಕಾದ ಕೂಡ್ಲಿಗಿಯನ್ನು ನೂತನ ವಿಜಯನಗರ ಜಿಲ್ಲಾ ಪಟ್ಟಿಯಲ್ಲಿ ಸೇರಿಸುತ್ತದೆ. ಇಲ್ಲವಾದಲ್ಲಿ ಈಗಿನ ಸರ್ಕಾರ ಹಾಗೂ ಶಾಸಕರು ಜನರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ: ಬೊಮ್ಮಣ್ಣ
ಕೂಡ್ಲಿಗಿ(ನ.21): ನೂತನ ವಿಜಯನಗರ ಜಿಲ್ಲೆ ರಚನೆಗೆ ರಾಜ್ಯ ಸಚಿವ ಸಂಪುಟ ತಾತ್ವಿಕ ಒಪ್ಪಿಗೆ ನೀಡಿದ್ದು, ಈ ನೂತನ ಜಿಲ್ಲೆಗೆ ಹಿಂದುಳಿದ ತಾಲೂಕು ಕೂಡ್ಲಿಗಿ ಸೇರ್ಪಡೆಯಾಗಿರದಿದ್ದಲ್ಲಿ ಮುಂದಿನ ಜನರ ಆಕ್ರೋಶದ ಹೋರಾಟದಲ್ಲಿ ಮುಂದಾಗುವ ಅನಾಹುತಕ್ಕೆ ಈಗಿನ ಸರ್ಕಾರ ಹಾಗೂ ಕ್ಷೇತ್ರದ ಶಾಸಕರೇ ಮುಖ್ಯ ಹೊಣೆಗಾರರಾಗುತ್ತಾರೆ ಎಂದು ಕೂಡ್ಲಿಗಿ ಕ್ಷೇತ್ರದ ಮಾಜಿ ಶಾಸಕ ಹಾಗೂ ಜೆಡಿಎಸ್ ಬಳ್ಳಾರಿ ಜಿಲ್ಲಾಧ್ಯಕ್ಷ ಎನ್.ಟಿ. ಬೊಮ್ಮಣ್ಣ ಹೇಳಿದ್ದಾರೆ.
ಅವರು ಶುಕ್ರವಾರ ‘ಕನ್ನಡಪ್ರಭ’ದೊಂದಿಗೆ ಮಾತನಾಡಿ, ಹೊಸ ಜಿಲ್ಲೆ ರಚನೆ ಕೇವಲ ರಾಜಕೀಯ ಪ್ರೇರಿತವಾಗಿರದೆ ಜನರ ಹಿತ ಕಾಪಾಡುವಲ್ಲಿ ಮುಂದಾಗಿರಬೇಕು. ಅಲ್ಲದೆ ಹಿಂದುಳಿದ ಕೂಡ್ಲಿಗಿ ತಾಲೂಕು ನೂತನ ವಿಜಯನಗರ ಜಿಲ್ಲೆಗೆ ಕೇವಲ 44 ಕಿಮೀ ಇದ್ದು ಬಳ್ಳಾರಿಗೆ ಹೋಗಲು ಇಲ್ಲಿನ ಜನತೆ 80 ಕಿಮೀ ಕ್ರಮಿಸಬೇಕಾಗಿದೆ. ಆರ್ಥಿಕವಾಗಿ ಹಿಂದುಳಿದ ತಾಲೂಕಿನ ಬಡ ಜನತೆ ವಿಜಯನಗರ ಜಿಲ್ಲಾ ಕೇಂದ್ರಕ್ಕೆ ವ್ಯಾಪಾರ ವಹಿವಾಟಿಗೂ ಹೊಸಪೇಟೆಗೆ ಹೋಗಿ ಬರಲು ಹತ್ತಿರವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ-50 ಇರುವುದರಿಂದ ಸಂಚಾರ ವ್ಯವಸ್ಥೆಗೂ ಅನುಕೂಲವಿದೆ. ಆದರೆ ಬಳ್ಳಾರಿಯಿಂದ ಕೂಡ್ಲಿಗಿಗೆ ಬರಲು ಸಂಚಾರ ವ್ಯವಸ್ಥೆ ಸರಿಯಿಲ್ಲದೆ ಜನರು ಪರದಾಡಬೇಕಾಗುತ್ತದೆ. ನಿಜವಾಗಲೂ ಜನಪರ ಕಾಳಜಿ ಇರುವ ಸರ್ಕಾರವಾಗಿದ್ದರೆ ಹಿಂದುಳಿದ ತಾಲೂಕಾದ ಕೂಡ್ಲಿಗಿಯನ್ನು ನೂತನ ವಿಜಯನಗರ ಜಿಲ್ಲಾ ಪಟ್ಟಿಯಲ್ಲಿ ಸೇರಿಸುತ್ತದೆ. ಇಲ್ಲವಾದಲ್ಲಿ ಈಗಿನ ಸರ್ಕಾರ ಹಾಗೂ ಶಾಸಕರು ಜನರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಮತ್ತು ಇವರೇ ಹೊಣೆಗಾರರಾಗಬೇಕಾಗುತ್ತದೆ ಎಂದು ಎನ್.ಟಿ. ಬೊಮ್ಮಣ್ಣ ಎಚ್ಚರಿಸಿದ್ದಾರೆ.
'ಹಂಪಿಯಿಲ್ಲದೆ ಬಳ್ಳಾರಿ ಜಿಲ್ಲೆ ಕಲ್ಪಿಸಿಕೊಳ್ಳಲು ಹೇಗೆ ಸಾಧ್ಯ?'
ವಿಜಯನಗರ ಜಿಲ್ಲೆಗೆ ಕೂಡ್ಲಿಗಿ ಸೇರಿಸಲು ಒತ್ತಾಯ
ಕೂಡ್ಲಿಗಿ ತಾಲೂಕನ್ನು ನೂತನವಾಗಿ ರಚನೆಯಾಗುವ ವಿಜಯನಗರ ಜಿಲ್ಲೆಗೆ ಸೇರ್ಪಡೆ ಮಾಡಬೇಕು. ಈ ಕುರಿತು ತಾಲೂಕಿನ ಜನಪ್ರತಿನಿಧಿಗಳು, ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ಸಿಂಗ್ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅವರು ಇಚ್ಛಾಶಕ್ತಿ ತೋರಿಸಬೇಕು. ಮೂಲಕ ಈ ತಾಲೂಕಿನ ಜನತೆಗೆ ನ್ಯಾಯ ಒದಗಿಸಬೇಕು ಎಂದು ಕೂಡ್ಲಿಗಿ ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆಸಮಿತಿ ಮಾಜಿ ಅಧ್ಯಕ್ಷ ಜರ್ಮಲಿ ಶಶಿಧರ ಒತ್ತಾಯಿಸಿದ್ದಾರೆ.
ಅವರು ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದ್ದು, ಕೂಡ್ಲಿಗಿ ತಾಲೂಕು ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು, ಇಲ್ಲಿಯ ಜನತೆ ಬಳ್ಳಾರಿಗೆ ಹೋಗಲು ದಿನಗಟ್ಟಲೇ ಕಾಲವಕಾಶ ಬೇಕು. ಆದರೆ ವಿಜಯನಗರ ಜಿಲ್ಲೆಗೆ ಸೇರ್ಪಡೆಯಾದಲ್ಲಿ ಗಂಟೆಯೊಳಗೆ ಹೊಸಪೇಟೆ ತಲುಪಲು ರಾಷ್ಟ್ರೀಯ ಹೆದ್ದಾರಿ ಅನುಕೂಲವಾಗಿದೆ. ಭೌಗೋಳಿಕವಾಗಿ ಹೊಸಪೇಟೆ ಹಾಗೂ ಕೂಡ್ಲಿಗಿ ಬಹಳ ಹತ್ತಿರವಾಗಿದ್ದು ನೂರು ಕಿಲೋಮೀಟರ್ ದೂರದ ಬಳ್ಳಾರಿಗೆ ಹೋಗುವುದು ಕಷ್ಟ. ರಾತ್ರಿಯಾದರೆ ಸಾರಿಗೆ ಸಂಪರ್ಕ ಸಹ ಇಲ್ಲ. ಹೀಗಾಗಿ ಕೂಡ್ಲಿಗಿಯನ್ನು ವಿಜಯನಗರ ಜಿಲ್ಲೆಗೆ ಸೇರ್ಪಡೆ ಮಾಡಲೇಬೇಕು. ಇಲ್ಲವಾದಲ್ಲಿ ತಾಲೂಕಿನ ಜನತೆ ನಿರಂತರವಾಗಿ ಹೋರಾಟದ ಹಾದಿ ತುಳಿಯಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.