'ಜನತೆಗೆ ಅಪಮಾನ ಮಾಡಿದ ಬಿಜೆಪಿಗೆ ಕಾರ್ಯಕರ್ತರೇ ಸಿಗ್ತಿಲ್ಲ'

By Kannadaprabha News  |  First Published Mar 31, 2021, 3:42 PM IST

ಬಿಜೆಪಿಗೆ ಪರಕೀಯ ಕಾರ್ಯಕರ್ತರೇ ಗತಿ| ಬಿಜೆಪಿಯಿಂದ ಟಿಕೆಟ್‌ ಮಾರಾಟ| ಬಿಜೆಪಿಯು ಟಿಕೆಟ್‌ ವಿಚಾರದಲ್ಲಿ ಕೇವಲ 20 ತಿಂಗಳ ಮಾನದಂಡ ಅನುಸರಿಸಿ ನೀಡಿರುವುದು ಬೇಸರ: ಮಲ್ಲಿಕಾರ್ಜುನ್‌ ಖೂಬಾ ಕಣ್ಣೀರು| 


ಬಸವಕಲ್ಯಾಣ(ಮಾ.31): ಪರ ಜಿಲ್ಲೆಯವರಿಗೆ ಟಿಕೆಟ್‌ ನೀಡುವ ಮೂಲಕ ಬಸವಕಲ್ಯಾಣ ಜನತೆಗೆ ಅಪಮಾನ ಮಾಡಿರುವ ಬಿಜೆಪಿಗೆ ಇದೀಗ ಸ್ಥಳೀಯ ಕಾರ್ಯಕರ್ತರೇ ಸಿಗುತ್ತಿಲ್ಲ. ಹೀಗಾಗಿ ಕಲಬುರಗಿ, ಕಮಲಾಪೂರ, ಭಾಲ್ಕಿ ಹಾಗೂ ಆಳಂದದಿಂದ ಜನರನ್ನು ಕರೆ ತಂದಿದ್ದಾರೆ ಎಂದು ಬಿಜೆಪಿಯಿಂದ ಬಂಡಾಯವೆದ್ದು ಸ್ವತಂತ್ರ ಅಭ್ಯರ್ಥಿ ಮಾಜಿ ಶಾಸಕ ಮಲ್ಲಿಕಾರ್ಜುನ್‌ ಖೂಬಾ ವ್ಯಂಗ್ಯವಾಡಿದ್ದಾರೆ.

ನಗರದ ಅಕ್ಕಮಹಾದೇವಿ ಆವರಣದಲ್ಲಿ ಸ್ವಾಭಿಮಾನಿ ಬಳಗ ಬಸವಕಲ್ಯಾಣ ವತಿಯಿಂದ ಆಯೋಜಿಸಿದ್ದ ‘ನಮ್ಮ ಊರು ನಮಗೆ ಬೇಕು ನಮ್ಮ ಅಭ್ಯರ್ಥಿ’ ಜನತಾ ಅದಾಲತ್‌ ಸಮಾವೇಶದಲ್ಲಿ ಮಾತನಾಡಿ, ಬಿಜೆಪಿ ಹೈಕಮಾಂಡ್‌ನಲ್ಲಿ ಟಿಕೆಟ್‌ ನೀಡುವ ವೇಳೆ ಎಡವಟ್ಟಾಗಿದೆ ಎಂದು ಸ್ವತಃ ವಸತಿ ಸಚಿವ ಸೋಮಣ್ಣ ಅವರೇ ನನಗೆ ಹೇಳಿದ್ದಾರೆ. ಹೀಗಾಗಿ ಬಿಜೆಪಿ ಟಿಕೆಟ್‌ ಮಾರಾಟವಾಗಿದ್ದು ಪಕ್ಕಾ ಎಂದರು.

Latest Videos

undefined

ವೇದಿಕೆ ಮೇಲೆ ಕಣ್ಣೀರು:

ಈ ಹಿಂದೆ ನನ್ನ ತಂದೆಯನ್ನು ಸ್ವತಂತ್ರ ಅಭ್ಯರ್ಥಿಯಾಗಿ ಗೆಲ್ಲಿಸಿ ವಿಧಾಸಭೆಗೆ ಕಳುಹಿಸಿದ್ದೀರಿ. ಆದರೆ ನಾನು ದೊಡ್ಡ ಪಕ್ಷಕ್ಕೆ ನಂಬಿದ್ದಕ್ಕೆ ಅನ್ಯಾಯವಾಗಿದೆ. ನನಗೆ ಅಣ್ಣ ತಮ್ಮ ಯಾರೂ ಇಲ್ಲ. ನೀವೇ ಎಲ್ಲ. ನಾನೊಬ್ಬ ಪರದೇಶಿ ಪುತ್ರ. ನೀವು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿದ್ದೇನೆ ಎಂದು ಕೇಳುತ್ತ ಕಣ್ಣೀರಿಟ್ಟರು. ಅದಕ್ಕೆ ನೆರೆದ ಯುವ ಸಮೂಹ ನೀವು ಮುಂದೆ ಹೋಗಿ ಎಂದು ಹುರಿದುಂಬಿಸಿದರು.

'ಬಿಜೆಪಿಯವರು ದುಷ್ಟರು, ಡೋಂಗಿಗಳು, ಜನರ ದಾರಿ ತಪ್ಪಿಸುವುದೇ ಅವರ ಕೆಲಸ: ಸಿದ್ದು

ಅಭಿಮಾನಿ ದೇಣಿಗೆ:

ಮಾಜಿ ಶಾಸಕ ಮಲ್ಲಿಕಾರ್ಜುನ್‌ ಖೂಬಾ ಈಗಾಗಲೇ ಬಿಜೆಪಿಗಾಗಿ ಸಾಕಷ್ಟು ಹಣ ವ್ಯರ್ಥ ಮಾಡಿದ್ದಾರೆ. ಹೀಗಾಗಿ ಅವರಲ್ಲಿ ಹಣ ಇಲ್ಲ ಎಂದು ಅಭಿಮಾನಿ ಎಸ್‌ಪಿ ಸೋಲಪೂರೆ ಅವರು 51 ಸಾವಿರ ರು. ದೇಣಿಗೆ ನೀಡುವುದಾಗಿ ಘೋಷಿಸಿದರು. ಯುವ ಮುಖಂಡ ಶಿವುಕುಮಾರ ಬಿರಾದಾರ ಮಾತನಾಡಿ, ಬಿಜೆಪಿಯು ಟಿಕೆಟ್‌ ವಿಚಾರದಲ್ಲಿ ಕೇವಲ 20 ತಿಂಗಳ ಮಾನದಂಡ ಅನುಸರಿಸಿ ನೀಡಿರುವುದು ಬೇಸರವಾಗಿದೆ ಎಂದರು.

ಸುಮಲತಾ ರೀತಿ ಗೆಲುವು ಸಾಧಿಸೋಣ:

ಯುವ ಮುಖಂಡರಾದ ಡಾ. ಪೃಥ್ವಿರಾಜ ಬಿರಾದಾರ ಮಾತನಾಡಿ, ಇದು ನಮ್ಮ ಬಸವಕಲ್ಯಾಣ ಮರ್ಯಾದೆ ಪ್ರಶ್ನೆ. ಹೀಗಾಗಿ ಈಗಿರುವ ಹುಮ್ಮಸ್ಸು ಏ.17ರವರೆಗೆ ಇರಲಿ. ಮಂಡ್ಯದ ಸುಮಲತಾ ರೀತಿ ಗೆಲುವು ಸಾಧಿಸಿ, ಇದೇ ವೇದಿಕೆ ಮೇಲೆ ಮೇ 3ರಂದು ವಿಜಯೋತ್ಸವ ಆಚರಿಸೋಣ ಎಂದರು.

ಅಕ್ಕಮಹಾದೇವಿ ಕಾಲೇಜು ಆವರಣದಿಂದ ಡಾ. ಅಂಬೇಡ್ಕರ ವೃತ್ತದವರೆಗೆ ಬೃಹತ್‌ ಪದಾಯಾತ್ರೆ ನಡೆಸಲಾಯಿತು. ಸಾವಿರಾರು ಜನರು ಭಾಗಿಯಾಗಿದ್ದರು. ನಂತರ ತಹಸೀಲ್‌ ಕಚೇರಿಗೆ ತೆರೆಳಿದ ಖೂಬಾ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
 

click me!