ಅನರ್ಹರು ಪಡಿತರ ಕಾರ್ಡ್‌ ಹಿಂದಿರುಗಿಸಿ : ಡಿಸಿ ಆದೇಶ

By Kannadaprabha News  |  First Published Mar 31, 2021, 3:03 PM IST

ಹಲವರು ಅಕ್ರಮವಾಗಿ ಪಡಿತರ ಚೀಟಿ  ಹೊಂದಿದ್ದು ತಕ್ಷಣವೇ ಹಿಂದಿರುಗಿಸಬೇಕು. ಇಲ್ಲವಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಖಡಕ್  ಆದೇಶ ನೀಡಿದ್ದಾರೆ. 


 ಶಿವಮೊಗ್ಗ (ಮಾ.31): ಜಿಲ್ಲೆಯಲ್ಲಿ ಕೆಲವು ಅನರ್ಹ ಕುಟುಂಬಗಳ ಸದಸ್ಯರು ಅಂತ್ಯೋದಯ ಅನ್ನ ಮತ್ತು ಆದ್ಯತಾ ಪಡಿತರ ಚೀಟಿ ಹೊಂದಿದ್ದಾರೆ. ಅಂಥ ಪಡಿತರ ಚೀಟಿದಾರರಿಗೆ ಕೂಡಲೇ ಪಡಿತರ ಚೀಟಿ ಹಿಂದಿರುಗಿಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ಖಡಕ್‌ ಸೂಚನೆ ನೀಡಿದ್ದಾರೆ.

ವೇತನವನ್ನು ಗಣನೆಗೆ ತೆಗೆದುಕೊಳ್ಳದೇ ಎಲ್ಲ ಕಾಯಂ ನೌಕರರು, ಸರ್ಕಾರದ ಅಥವಾ ಸರ್ಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಮಂಡಳಿಗಳು, ನಿಗಮಗಳು, ಸ್ವಾಯತ್ತ ಸಂಸ್ಥೆಗಳು ಇತ್ಯಾದಿ ಒಳಗೊಂಡಂತೆ ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್‌, ವೃತ್ತಿ ತೆರಿಗೆ ಪಾವತಿಸುವ ಎಲ್ಲ ಕುಟುಂಬಗಳು, ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್‌ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಅಥವಾ ಗ್ರಾಮೀಣ ಪ್ರದೇಶವನ್ನು ಹೊರತುಪಡಿಸಿ ನಗರ ಪ್ರದೇಶಗಳಲ್ಲಿ 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು, ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಟ್ರ್ಯಾಕ್ಟರ್‌, ಮ್ಯಾಕ್ಸಿಕ್ಯಾಬ್‌, ಟ್ಯಾಕ್ಸಿ ಮುಂತಾದ ಒಂದು ವಾಣಿಜ್ಯ ವಾಹನವನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ 4 ಚಕ್ರಗಳ ವಾಹನಗಳನ್ನು ಹೊಂದಿರುವ ಎಲ್ಲ ಕುಟುಂಬಗಳು ಹಾಗೂ ಕುಟುಂಬದ ವಾರ್ಷಿಕ ಆದಾಯವು .1.20 ಲಕ್ಷಗಳಿಗಿಂತಲೂ ಹೆಚ್ಚು ಇರುವ ಕುಟುಂಬಗಳ ಸದಸ್ಯರು ಪಡಿತರ ಕಾರ್ಡ್‌ ಪಡೆಯಲು ಅರ್ಹರಿರುವುದಿಲ್ಲ ಎಂದು ತಿಳಿಸಿದ್ದಾರೆ.

Tap to resize

Latest Videos

ಬಿಪಿಎಲ್ ಕಾರ್ಡ್ : ಮತ್ತೊಂದು ಹೊಸ ನಿಯಮ ಗಮನಿಸಿ ...

2011ರ ಜನಗಣತಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 4,06,816 ಕುಟುಂಬಗಳು ದಾಖಲಾಗಿದ್ದು, 2021ರ ಮಾಚ್‌ರ್‍ ಮಾಹೆಯವರೆಗೆ ಜಿಲ್ಲೆಯಲ್ಲಿ 37,537 ಅಂತ್ಯೋದಯ ಅನ್ನ, 3,56588 ಆದ್ಯತಾ ಕುಟುಂಬಗಳು ಸೇರಿ ಒಟ್ಟು 394125 ಕುಟುಂಬಗಳಿಗೆ ಆದ್ಯತಾ (ಬಿಪಿಎಲ್‌) ಪಡಿತರ ಚೀಟಿ ಮತ್ತು 92653 ಕುಟುಂಬಗಳಿಗೆ ಆದ್ಯತೇತರ (ಎಪಿಎಲ್‌) ಪಡಿತರ ಚೀಟಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಆರ್ಥಿಕವಾಗಿ ಸಬಲರು ಮತ್ತು ಇತರ ಅನರ್ಹರು ಹೊಂದಿರುವ ಅಂತ್ಯೋದಯ ಅನ್ನ ಮತ್ತು ಆದ್ಯತಾ (ಬಿಪಿಎಲ್‌) ಪಡಿತರ ಚೀಟಿಗಳನ್ನು ಹಿಂದಿರುಗಿಸಲು ಪದೇಪದೇ ಮನವಿ ಮಾಡಲಾಗಿದೆ. ಮನವಿಗೆ ಸ್ಪಂದಿಸಿ ಆದ್ಯತಾ ಪಡಿತರ ಚೀಟಿಗಳನ್ನು ಹಿಂದಿರುಗಿಸಿ ಆದ್ಯತೇತರ ಪಡಿತರ ಚೀಟಿ ಪಡೆದಿದ್ದಾರೆ ಎಂದಿದ್ದಾರೆ.

ಸರ್ಕಾರ ನಿಗದಿಪಡಿಸಿರುವ ಮಾನದಂಡಗಳಿಗೆ ವಿರುದ್ಧವಾಗಿ ಆದ್ಯತಾ (ಬಿಪಿಎಲ್‌) ಪಡಿತರ ಚೀಟಿ ಹೊಂದಿರುವವರು ತಕ್ಷಣವೇ ತಾಲೂಕಿನ ತಹಸೀಲ್ದಾರರಿಗೆ ಒಪ್ಪಿಸಿ, ಆದ್ಯತೇತರ (ಎಪಿಎಲ್‌) ಪಡಿತರ ಚೀಟಿ ಪಡೆಯುವಂತೆ ಸೂಚಿಸಲಾಗಿದೆ. ತಪ್ಪಿದಲ್ಲಿ ಅಕ್ರಮ ಪಡಿತರ ಚೀಟಿ ಹೊಂದಿರುವವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ -1955 ಮತ್ತು ಕರ್ನಾಟಕ ಅನಧಿಕೃತ ಪಡಿತರ ಚೀಟಿ ಹೊಂದುವುದರ ತಡೆ ಆದೇಶ ಹಾಗೂ ಭಾರತೀಯ ದಂಡಸಂಹಿತೆ ಅನ್ವಯ ಕ್ರಮ ಜರುಗಿಸಲಾಗುವುದು. ಹಾಗೂ ಹಂಚಿಕೆ ಪಡೆದ ಆಹಾರ ಧಾನ್ಯಗಳ ಮಾರುಕಟ್ಟೆಮೌಲ್ಯವನ್ನು ವಸೂಲು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

click me!