ಪ್ರಜಾಪ್ರಭುತ್ವದ ಈ ದೇಶದಲ್ಲಿನ ಚುನಾವಣೆಯಲ್ಲಿ ಜನರ ತೀರ್ಪಾಗಬೇಕು ಹೊರತು ಮಷಿನ್‌ಗಳ ತೀರ್ಪು ಆಗಬಾರದು. ನಾನು ಈ ದೇಶದ ಪ್ರಜೆಯಾಗಿ ಇವಿಎಂಗಳ ಮೇಲೆ ಸಂಶಯ ವ್ಯಕ್ತಪಡಿಸುತ್ತಿರುವೆ| ಇವಿಎಂ ಬಗ್ಗೆ ಮಾಜಿ ಸಚಿವ ಶಿವರಾಜ್ ತಂಗಡಗಿ ಅನುಮಾನ|
ಕಾರಟಗಿ(ನ.19): ಜಿಲ್ಲಾ ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಘ- ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತಿದ್ದರೆ, ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದು, ಇದೆಲ್ಲ ಇವಿಎಂನ ಕರಾಮತ್ತು ಎಂದು ಮಾಜಿ ಸಚಿವ ಹಾಗೂ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ್ ತಂಗಡಗಿ ಮತ್ತೊಮ್ಮೆ ಇವಿಎಂ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.
ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳಲ್ಲಿಯೂ ಸ್ಥಳೀಯವಾಗಿ ಕಾಂಗ್ರೆಸ್ ಮತ್ತು ಆಯಾ ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳು ಗೆಲ್ಲುತ್ತಾರೆ. ಆದರೆ, ವಿಧಾನಸಭೆ ಮುಖ್ಯವಾಗಿ ಲೋಕಸಭೆ ಚುನಾವಣೆಯಲ್ಲಿ ಮಾತ್ರ ಇದು ವಿರುದ್ಧವಾಗುತ್ತಿದ್ದು, ಈ ಅನುಮಾನಕ್ಕೆ ಇವಿಎಂಗಳೇ ಮುಖ್ಯಕಾರಣ. ಪ್ರಜಾಪ್ರಭುತ್ವದ ಈ ದೇಶದಲ್ಲಿನ ಚುನಾವಣೆಯಲ್ಲಿ ಜನರ ತೀರ್ಪಾಗಬೇಕು ಹೊರತು ಮಷಿನ್‌ಗಳ ತೀರ್ಪು ಆಗಬಾರದು. ನಾನು ಈ ದೇಶದ ಪ್ರಜೆಯಾಗಿ ಇವಿಎಂಗಳ ಮೇಲೆ ಸಂಶಯ ವ್ಯಕ್ತಪಡಿಸುತ್ತಿರುವೆ ಎಂದರು.
ಗಂಗಾವತಿ ವೈದ್ಯರ ಸಾಧನೆ: ಅನ್ನನಾಳದಲ್ಲಿ ಕ್ಯಾನ್ಸರ್, ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ
ಕೇಂದ್ರ ಸರ್ಕಾರ ಬ್ಯಾಲೆಟ್ ಪೇಪರ್‌ಗಳ ಮೇಲೆ ಚುನಾವಣೆ ಮಾಡಲಿ. ಪ್ರಧಾನಿ ಮೋದಿ ಬ್ಯಾಲೆಟ್ ಪೇಪರ್ ಮೇಲೆ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು. ರಾಜ್ಯದಲ್ಲಿ ಬರುವ ಮಸ್ಕಿ ಮತ್ತು ಬಸವಕಲ್ಯಾಣ ಚುನಾವಣೆಯಲ್ಲಿ ಇವಿಎಂ ಇಲ್ಲದೇ ಬಿಜೆಪಿ ಗೆಲ್ಲಲಿ. ಸಿಎಂ ಪುತ್ರ ವಿಜಯೇಂದ್ರ ಅವರ ಬಳಿ ಹಣ ಮತ್ತು ಅಧಿಕಾರವಿದೆ. ಹಾಗಾಗಿ ಗೆಲ್ತಾರೆ. ಬರುವ ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಉಪಚುನಾವಣೆಯಲ್ಲಿ ವಿಜಯೇಂದ್ರ ಅವರು ಬ್ಯಾಲೆಟ್ ಪೇಪರ್ ಚುನಾವಣೆಯಲ್ಲಿ ಗೆದ್ದು, ಅವರು ಚಾಣಕ್ಯ ಎಂದು ತೋರಿಸಲಿ ಎಂದು ಶಿವರಾಜ್ ತಂಗಡಗಿ ಸವಾಲು ಹಾಕಿದರು.