ದೇವರಾಯನದುರ್ಗದಲ್ಲಿ ಚಿರತೆ ಪುನರ್ವಸತಿ ಕೇಂದ್ರ?

By Kannadaprabha NewsFirst Published Nov 19, 2020, 9:26 AM IST
Highlights

ತುಮಕೂರಿನ ದೇವರಾಯನದುರ್ಗ ಅರಣ್ಯದಲ್ಲಿ ಚಿರತೆಗಳ ಪುನರ್ವಸತಿ ಕೇಂದ್ರ ಸ್ಥಾಪಿಸುವ ಸಂಬಂಧ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಗಿದ್ದು ವನ್ಯಜೀವಿ ತಜ್ಞರ ಜೊತೆ ಈಗಾಗಲೇ ಒಂದು ಸುತ್ತಿನ ಮಾತುಕತೆ ಕೂಡ ನಡೆದಿದೆ.

ತುಮಕೂರು (ನ.19): ಬೆಂಗಳೂರಿನ ಬನ್ನೇರುಘಟ್ಟ, ಶಿವಮೊಗ್ಗ, ಮೈಸೂರು ಬಳಿಕ ತುಮಕೂರಿನಲ್ಲಿ ಚಿರತೆಗಳ ಪುನರ್ವಸತಿ ಕೇಂದ್ರ ಆರಂಭಿಸಲು ಚಿಂತನೆ ನಡೆದಿದೆ.

ತುಮಕೂರಿನ ದೇವರಾಯನದುರ್ಗ ಅರಣ್ಯದಲ್ಲಿ ಚಿರತೆಗಳ ಪುನರ್ವಸತಿ ಕೇಂದ್ರ ಸ್ಥಾಪಿಸುವ ಸಂಬಂಧ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಗಿದ್ದು ವನ್ಯಜೀವಿ ತಜ್ಞರ ಜೊತೆ ಈಗಾಗಲೇ ಒಂದು ಸುತ್ತಿನ ಮಾತುಕತೆ ಕೂಡ ನಡೆದಿದೆ.

ಈ ಹಿಂದೆ ತುಮಕೂರು ವಿವಿ ಸ್ಥಾಪನೆ ಸಂಬಂಧ ದೇವರಾಯನದುರ್ಗ ಅರಣ್ಯದಲ್ಲಿ 72 ಎಕರೆ ಜಾಗ ನೀಡಲಾಗಿತ್ತು. ಆ ಜಾಗ ಸದ್ಯ ವಿವಿ ಬಳಿಯೇ ಇದ್ದು ಆ ಜಾಗವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲು ಕೋರಿಕೊಳ್ಳಲು ತೀರ್ಮಾನಿಸಲಾಗಿದೆ. ಹೀಗಾಗಿ ಆ 72 ಎಕರೆ ಪ್ರದೇಶದಲ್ಲಿ ಚಿರತೆಗಳ ಪುನರ್ವಸತಿ ಕೇಂದ್ರ ಆರಂಭಿಸಲು ಚಿಂತನೆ ನಡೆದಿದೆ.

ತುಮಕೂರು ಜಿಲ್ಲೆಯ ಬಹುತೇಕ ಎಲ್ಲಾ ತಾಲೂಕುಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಅಲ್ಲದೇ ಚಿರತೆಗಳ ಸಂತತಿ ಕೂಡ ಹೆಚ್ಚಾಗಿದೆ. ಚಿರತೆಗಳ ಗಣತಿ ಮಾಡದೇ ಇದ್ದರೂ ಕೂಡ ಚಿರತೆಗಳ ಆವಾಸಸ್ಥಾನವೂ ಅಲ್ಲಲ್ಲಿ ಪತ್ತೆಯಾಗುತ್ತಿರುವುದರಿಂದ ಇದರ ಸಂಖ್ಯೆ ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ.

ತುಮಕೂರು ಜಿಲ್ಲೆಯಲ್ಲಿ ಹಲವು ಕಡೆ ಚಿರತೆಗಳು ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿದೆ. ಆದರೆ ತುಮಕೂರು, ಗುಬ್ಬಿ ಹಾಗೂ ಕುಣಿಗಲ್‌ ತಾಲೂಕಿನಲ್ಲಿ ಐದು ಮಂದಿ ಮನುಷ್ಯರ ರಕ್ತವನ್ನು ಚಿರತೆಗಳ ಹೀರಿದ್ದು ನರಹಂತಕ ಚಿರತೆಗಳಾಗಿ ಮಾರ್ಪಟ್ಟಿವೆ. ಯಾವುದು ನರಹಂತಕ ಚಿರತೆ ಎಂಬುದು ಗೊತ್ತಾಗುವುದು ಕಷ್ಟಸಾಧ್ಯವಾಗಿರುವುದರಿಂದ ನಿಜವಾದ ನರಹಂತಕ ಚಿರತೆಯನ್ನು ಹಿಡಿಯಲು ಸಾಧ್ಯವಾಗುತ್ತಿಲ್ಲ.

ಒಂದು ವೇಳೆ ದೇವರಾಯನದುರ್ಗ ಅರಣ್ಯ ವ್ಯಾಪ್ತಿಯಲ್ಲಿ ಚಿರತೆಗಳ ಪುನರ್ವಸತಿ ಕೇಂದ್ರ ಆರಂಭಿಸಿದರೆ ಸೆರೆ ಸಿಕ್ಕ ಚಿರತೆಗಳಿಗೆ ಡಿಎನ್‌ಎ ಪರೀಕ್ಷೆ ಮಾಡಿ ಸೆರೆ ಸಿಕ್ಕ ಚಿರತೆ ನರಹಂತಕ ಹೌದೇ, ಅಲ್ಲವೇ ಎಂಬುದು ನಿಖರವಾಗಿ ಗೊತ್ತಾಗುತ್ತದೆ. ಒಂದು ವೇಳೆ ಅದು ನರಹಂತಕವಾಗದಿದ್ದರೆ ಅದನ್ನು ಮತ್ತೆ ಮೂಲ ಆವಾಸ ಸ್ಥಾನಕ್ಕೆ ಬಿಡಬಹುದಾಗಿದೆ.

ಗಂಗಾವತಿ: ನಿಲ್ಲದ ಚಿರತೆ ದಾಳಿ, ಆತಂಕದಲ್ಲಿ ಗ್ರಾಮಸ್ಥರು..! ..

ಇದಲ್ಲದೆ ತನ್ನ ತಂದೆ, ತಾಯಿಯಿಂದ ಬೇರ್ಪಟ್ಟಚಿರತೆಗಳು ಬೇಲಿ ಪಕ್ಕದಲ್ಲಿ ಸಾಕಷ್ಟುಸಿಕ್ಕ ಉದಾಹರಣೆಯುಂಟು. ಅಂತಹ ಮರಿಗಳನ್ನು ಸಂರಕ್ಷಿಸುವ ಕೆಲಸ ಮಾಡಲು ಈ ಪುನರ್ವಸತಿ ಕೇಂದ್ರ ಅಗತ್ಯವಾಗಿದೆ ಎಂಬುದು ವನ್ಯಜೀವಿ ತಜ್ಞರ ಆಂಬೋಣವಾಗಿದೆ. ಮುಖ್ಯವಾಗಿ ಗಾಯಗೊಂಡಿರುವ ಚಿರತೆಗಳು ಸಲೀಸಾಗಿ ಮನುಷ್ಯನ ಮೇಲೆ ದಾಳಿ ಮಾಡುವ ಸಾಧ್ಯತೆ ಇರುವುದರಿಂದ ಅಂತಹವನ್ನು ಈ ಪುನರ್ವಸತಿ ಕೇಂದ್ರದಲ್ಲಿಟ್ಟು ಆರೈಕೆ ಮಾಡುವ ಉದ್ದೇಶವನ್ನು ಈ ಕೇಂದ್ರ ಹೊಂದಲಿದೆ. ಕುರುಚಲು ಕಾಡು ಇರುವ ಜಿಲ್ಲೆಯಲ್ಲಿ ಸಾಕಷ್ಟುಚಿರತೆಗಳು ಇರುವುದರಿಂದ ಇಲ್ಲೇ ಆರೈಕೆ ಮಾಡಲು ಈ ಪುನರ್ವಸತಿ ಕೇಂದ್ರ ಸಹಕಾರಿಯಾಗಲಿದೆ.

ಈ ಸಂಬಂಧ ವನ್ಯಜೀವಿ ತಜ್ಞರು ದೇವರಾಯನದುರ್ಗದಲ್ಲಿ ಚಿರತೆಗಳ ಪುನರ್ವಸತಿ ಕೇಂದ್ರ ಆರಂಭಿಸುವ ಸಂಬಂಧ ಶಾಸಕ ಜ್ಯೋತಿ ಗಣೇಶ್‌ ಅವರಿಗೆ ಮನವಿ ಮಾಡಿದ್ದು ಕೂಡಲೇ ಸಮಗ್ರ ವರದಿ ತಯಾರಿಸುವಂತೆ ಮನವಿ ಮಾಡಿದ್ದಾರೆ. ಈ ಹಿಂದೆ ಕೂಡ ಕೇಂದ್ರ ಆರಂಭಿಸುವ ಸಂಬಂಧ ಚರ್ಚೆ ನಡೆದಿತ್ತು. ಈಗ ವನ್ಯಜೀವಿ ತಜ್ಞರು ವರದಿ ಕೊಟ್ಟಕೂಡಲೇ ಅರಣ್ಯ ಸಚಿವರ ಜೊತೆ ಚರ್ಚಿಸಿ ಮಂಜೂರು ಮಾಡಿಕೊಡುವ ಇರಾದೆಯನ್ನು ಸ್ಥಳೀಯ ಶಾಸಕರು ಹೊಂದಿದ್ದಾರೆ.

ಸದ್ಯ ದೇವರಾಯನದುರ್ಗ ಅರಣ್ಯದಲ್ಲಿ ಈ ಹಿಂದೆ ವಿವಿಗೆ ಮೀಸಲಾಗಿದ್ದ ಜಾಗ ವಿವಿ ಹೆಸರಿನಲ್ಲೇ ಇದೆ. ತಮಗೆ ಜಾಗ ಹಸ್ತಾಂತರಿಸುವಂತೆ ಡಿಎಫ್‌ಓ ಗಳು ಮನವಿ ಮಾಡಿದ್ದಾರೆ. ಸ್ಥಳೀಯ ಶಾಸಕರು ಜಾಗವನ್ನು ಪುನಃ ಅರಣ್ಯ ಇಲಾಖೆಗೆ ಜಾಗ ಹಸ್ತಾಂತರ ಮಾಡುವ ಸಂಬಂಧ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ. ಒಟ್ಟಾರೆಯಾಗಿ ದೇವರಾಯನದುರ್ಗ ಅರಣ್ಯದಲ್ಲಿ ಚಿರತೆಗಳ ಪುನರ್ವಸತಿ ಕೇಂದ್ರ ಆರಂಭಿಸಲು ಸದ್ದಿಲ್ಲದೆ ಸಿದ್ಧತೆ ನಡೆದಿದೆ.

click me!