ಪ್ರತಿಪಕ್ಷಕ್ಕೆ ನೋಟಿಸ್‌ ಪ್ರಜಾಪ್ರಭುತ್ವ ವಿರೋಧಿ: ಆರ್‌.ವಿ.ದೇಶಪಾಂಡೆ ಆಕ್ರೋಶ

By Kannadaprabha NewsFirst Published Aug 5, 2020, 3:35 PM IST
Highlights

ಲಾಕ್‌ಡೌನ್‌ ಅವಧಿಯ ವೇಳೆಯಲ್ಲಿ ಅಗತ್ಯ ಸಿದ್ಧತೆಗೆ 3 ತಿಂಗಳ ಕಾಲಾವಕಾಶವಿತ್ತು| ಆ ವೇಳೆ ಯಾವುದೇ ಸಿದ್ಧತೆ ಮಾಡಿಕೊಳ್ಳದ ಸರ್ಕಾರ ಈಗ ಖಾಸಗಿ ಆಸ್ಪತ್ರೆ, ವೈದ್ಯಕೀಯ ಉಪಕರಣ ಖರೀದಿ ಎಂದೆಲ್ಲ ಓಡಾಡುತ್ತಿದೆ: ಆರ್‌.ವಿ. ದೇಶಪಾಂಡೆ|

ಹುಬ್ಬಳ್ಳಿ(ಆ.05):  ಕೋವಿಡ್‌ ನಿರ್ವಹಣೆಗಾಗಿ ಸರ್ಕಾರ ವೈದ್ಯಕೀಯ ಉಪಕರಣ ಖರೀದಿಸುವ ವೇಳೆ ಅವ್ಯವಹಾರ ನಡೆಸಿದೆ ಎಂದು ದೂರಿರುವ ವಿರೋಧ ಪಕ್ಷದವರಿಗೆ ಬಿಜೆಪಿ ಲೀಗಲ್‌ ನೋಟಿಸ್‌ ನೀಡುವ ಮೂಲಕ ಪ್ರಜಾಪ್ರಭುತ್ವಕ್ಕೆ ಅವಮಾನ ಎಸಗಿದೆ ಎಂದು ಮಾಜಿ ಸಚಿವ ಆರ್‌.ವಿ. ದೇಶಪಾಂಡೆ ಕಿಡಿಕಾರಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾ ತಡೆಗಟ್ಟುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇದರ ನಡುವೆ ಸೋಂಕಿತರ ಚಿಕಿತ್ಸೆಗಾಗಿ ಖರೀದಿಸಲಾದ ವೈದ್ಯಕೀಯ ಉಪಕರಣದಲ್ಲಿ ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್‌ ನಾಯಕರು ಸುದ್ದಿಗೋಷ್ಠಿ ನಡೆಸಿ ಆರೋಪಿಸಿದ್ದರು. ಇದರ ತನಿಖೆ ನಡೆದು ಸತ್ಯಾಸತ್ಯತೆ ಹೊರಬಂದು ಸರ್ಕಾರದ ತಪ್ಪಿಲ್ಲ ಎಂದು ಸಾಬೀತಾದರೆ ಅವರನ್ನು ಜನತೆ ಮೆಚ್ಚಿಕೊಳ್ಳುತ್ತಿದ್ದರು. ಆದರೆ, ವಿರೋಧ ಪಕ್ಷದವರಿಗೆ ಲೀಗಲ್‌ ನೋಟಿಸ್‌ ನೀಡುವ ಮೂಲಕ ತಪ್ಪು ಹೆಜ್ಜೆ ಇಟ್ಟಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾಡುವ ಅಪಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಪ್ರಕರಣದ ತನಿಖೆಗಾಗಿ ಹೈಕೋರ್ಟ್‌ ನ್ಯಾಯಾಧೀಶರ ಸಮಿತಿ ರಚಿಸಬೇಕು. ನಿಷ್ಪಕ್ಷಪಾತ ತನಿಖೆಗೆ ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.

ರಾಮ ಮಂದಿರಕ್ಕೆ ಶಿಲಾನ್ಯಾಸ: ಭಗವಂತನಿಗೆ ವಿಶೇಷ ಪೂಜೆ ಸಲ್ಲಿಸಿದ ಪ್ರಮೋದ್‌ ಮುತಾಲಿಕ್‌

ವಿರೋಧ ಪಕ್ಷ ಆರೋಪ ಮಾಡಿದಾಕ್ಷಣ ಸಂಕಷ್ಟದ ಸಮಯದಲ್ಲಿ ಸರ್ಕಾರಕ್ಕೆ ಸಹಕಾರ ನೀಡುತ್ತಿಲ್ಲ ಎಂಬಂತೆ ಭಾವಿಸುವುದು, ತೋರ್ಪಡಿಸುವುದು ಸರಿಯಲ್ಲ. ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕಾಂಗ್ರೆಸ್‌ ಎಂದಿಗೂ ಸರ್ಕಾರದ ಬೆನ್ನಿಗಿದೆ. ನಾವಾಗಿಯೆ ತೆರಳಿ ಸಿಎಂಗೆ ಕೊರೋನಾ ನಿರ್ವಹಣೆ ಕುರಿತು ಸಲಹೆ ನೀಡಿದ್ದೇವೆ. ಆದರೆ ಸರ್ಕಾರ ಅದನ್ನು ನಿರ್ಲಕ್ಷಿಸಿದೆ ಎಂದರು.

ಸಾಕಷ್ಟು ಜಿಲ್ಲೆಗಳಲ್ಲಿ ವೈದ್ಯೋಪಕರಣ ಖರೀದಿಯಲ್ಲಿ ಭ್ರಷ್ಟಾಚಾರ, ಅಗತ್ಯಕ್ಕಿಂತ ಹೆಚ್ಚು ಹಣ ನೀಡಿ ಖರೀದಿ ಮಾಡಿರುವ ಬಗ್ಗೆ ಪತ್ರಿಕೆಗಳು, ಮಾಧ್ಯಮ ವರದಿ ಮಾಡುತ್ತಲೆ ಇವೆ. ಇಷ್ಟೆಲ್ಲ ಆರೋಪಗಳಿದ್ದರೂ ನಾವೇ ಸರಿ ಎಂಬ ನುಣುಚಿಕೊಳ್ಳುವ ಧೋರಣೆ ಸರ್ಕಾರಕ್ಕೆ ಏಕೆ? ಉಪಕರಣ ಮಾತ್ರವಲ್ಲ, ಸರ್ಕಾರ ಲಕ್ಷಾಂತರ ಫುಡ್‌ಕಿಟ್‌ ನೀಡಿದ್ದೇವೆ ಎಂದೆಲ್ಲ ಹೇಳುತ್ತದೆ. ಆದರೆ ಸಮರ್ಪಕ ಲೆಕ್ಕವನ್ನು ಇದುವರೆಗೂ ನೀಡಿಲ್ಲ. ಹಾಗಾದರೆ ದಾನಿಗಳು ನೀಡಿದ ಕೊಡುಗೆಯೆಷ್ಟು? ಸರ್ಕಾರ ಖರ್ಚು ಮಾಡಿದ್ದೆಷ್ಟು? ಇದನ್ನೆಲ್ಲ ನೋಡಿದರೆ ಸರ್ಕಾರಕ್ಕೆ ಆದಾಯ ತೆರಿಗೆ ಅಧಿಕಾರಿಗಳನ್ನು ನೇಮಿಸಬೇಕು ಎನ್ನಿಸುತ್ತಿದೆ. ಅಧಿಕಾರಿಗಳನ್ನು ಕಡೆಗಣಿಸಿ ಶಾಸಕರ ಮೂಲಕವೇ ಏಕೆ ಪರಿಹಾರ ವಿತರಣೆ ಮಾಡಿಸಲಾಯಿತು? ಎಂಬ ಬಗ್ಗೆ ಬಿಜೆಪಿ ಉತ್ತರಿಸಲಿ ಎಂದು ಪ್ರಶ್ನಿಸಿದರು.

ಲಾಕ್‌ಡೌನ್‌ ಅವಧಿಯ ವೇಳೆಯಲ್ಲಿ ಅಗತ್ಯ ಸಿದ್ಧತೆಗೆ 3 ತಿಂಗಳ ಕಾಲಾವಕಾಶವಿತ್ತು. ಆ ವೇಳೆ ಯಾವುದೇ ಸಿದ್ಧತೆ ಮಾಡಿಕೊಳ್ಳದ ಸರ್ಕಾರ ಈಗ ಖಾಸಗಿ ಆಸ್ಪತ್ರೆ, ವೈದ್ಯಕೀಯ ಉಪಕರಣ ಖರೀದಿ ಎಂದೆಲ್ಲ ಓಡಾಡುತ್ತಿದೆ. ರೈಲ್ವೆಯಲ್ಲಿ ಮಾಡಿಕೊಳ್ಳಲಾದ ಬೆಡ್‌ಗಳನ್ನು ಏಕೆ ಬಳಸಿಲ್ಲ? ಕೊರೋನಾ ಸೋಂಕಿತರ ನಿರ್ವಹಣೆಯಲ್ಲೂ ಎಡವಿದ್ದು ಏಕೆ? ಕೊರೋನಾ ನೆಪದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಇತರ ರೋಗಿಗಳಿಗೂ ಚಿಕಿತ್ಸೆ ದೊರೆಯದಂತ ಪರಿಸ್ಥಿತಿ ನಿರ್ಮಾಣಕ್ಕೆ ಸರ್ಕಾರವೆ ಕಾರಣವಲ್ಲವೆ ಎಂದು ಪ್ರಶ್ನಿಸಿದರು.

ಕಳೆದ ವಾರದವರೆಗೂ ದಿನಕ್ಕೆ ಕೇವಲ ಕೊರೋನಾ 14-15 ಸಾವಿರ ಟೆಸ್ಟ್‌ಗಳನ್ನು ಮಾಡಿಸಲಾಗುತ್ತಿತ್ತು. ಈಗ ದಿನಕ್ಕೆ ಸರಿಸುಮಾರು 25 ಸಾವಿರ ಪರೀಕ್ಷೆ ಮಾಡಿಸುತ್ತಿದೆ. ಒಂದು ಸಂದರ್ಭದಲ್ಲಿ ದೇಶಕ್ಕೆ ಹೋಲಿಸಿದರೆ ರಾಜ್ಯದ ಕೊರೋನಾ ಪೀಡಿತರ ಸಂಖ್ಯೆ ತೀರಾ ಕಡಿಮೆಯಿತ್ತು. ಪ್ರಸ್ತುತ ದೇಶದಲ್ಲಿ ಮೊದಲ, ಎರಡನೇ ಸ್ಥಾನಕ್ಕೆ ಬರುತ್ತಿದೆ. ಮೇ ಅಂತ್ಯಕ್ಕೆ 2922 ಇದ್ದ ರಾಜ್ಯದ ಒಟ್ಟು ಪ್ರಕರಣ ಆ. 3ರ ಹೊತ್ತಿಗೆ 1,39,571 ರಷ್ಟಾಗಿದೆ. ಇದರೊಂದಿಗೆ ಗುಣಮುಖರ ಗ್ರಾಫ್‌ ಇಳಿಮುಖವಾಗುತ್ತಿದೆ. ಆರಂಭದಲ್ಲಿ ಸೂಕ್ತ ಕ್ರಮ ಕೈಗೊಳ್ಳದ ಪರಿಣಾಮ ಜನತೆ ಸಂಕಷ್ಟಕ್ಕೀಡಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಅವರು ಕೆಪಿಸಿಸಿ ಹೊರತಂದ ಕೊರೋನಾದಲ್ಲೂ ಭ್ರಷ್ಟಾಚಾರ ಬಿಜೆಪಿ ಸಂಸ್ಕಾರ ಪುಸ್ತಕವನ್ನು ಬಿಡುಗಡೆ ಮಾಡಿದರು. ಸುದ್ದಿಗೋಷ್ಠಿಯಲ್ಲಿ ವಿಪ ಸದಸ್ಯ ಶ್ರೀನಿವಾಸ ಮಾನೆ, ನಾಗರಾಜ ಛಬ್ಬಿ, ಶಾಸಕಿ ಕುಸುಮಾವತಿ ಶಿವಳ್ಳಿ, ಕಾಂಗ್ರೆಸ್‌ ಗ್ರಾಮೀಣ ಜಿಲ್ಲಾಧ್ಯಕ್ಷ ಅನೀಲಕುಮಾರ ಪಾಟೀಲ್‌, ನಗರ ಅಧ್ಯಕ್ಷ ಅಲ್ತಾಫ್‌ ಹಳ್ಳೂರ ಸೇರಿ ಇತರರಿದ್ದರು.
 

click me!